ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ ಪ್ರವಾಸಕ್ಕಿದು ಸಕಾಲ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕಣ್ಣು ಹಾಯಿಸಿದಷ್ಟೂ ದೂರ ಕಾಣಿಸುವ ನೀಲಿ ನೀರು, ಅಂಗಾಲಿಗೆ ಕಚಗುಳಿ ಇಡುವ ಹೊಂಬಣ್ಣದ ಮರಳು, ಇವೆರಡರ ಸಂಗದಲ್ಲಿ ಬಿಸಿಲಿಗೆ ಬರಿ ಮೈಯೊಡ್ಡಿ ಬೀಚ್‌ನ ಸವಿಯನ್ನು ಆನಂದಿಸುವುದರಲ್ಲೇ ಒಂದು ವಿಶೇಷ ಸುಖವಿದೆ. ದೇಶದ 10 ಅತ್ಯುತ್ತಮ ಬೀಚ್‌ಗಳಲ್ಲಿ ನಾಲ್ಕು ಜನಪ್ರಿಯ ಬೀಚ್‌ಗಳು ಒಡಿಶಾದಲ್ಲಿವೆ. ಸರೋವರದ ಸೊಬಗನ್ನು ಪ್ರವಾಸಿಗರಿಗೆ ಮೊಗೆದು ಉಣಿಸಲು ಚಿಲ್ಕಾ ಸರೋವರವಿದೆ. ಅದ್ಭುತ ಶಿಲ್ಪಕಲೆಯ ತೊಟ್ಟಿಲು, ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಮಡಿಲಿನಂತಿರುವ ಈ ರಾಜ್ಯದಲ್ಲಿ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ಸೊಬಗು ದಂಡಿಯಾಗಿದೆ.

ಈಶಾನ್ಯ ಭಾರತದ ಕರಾವಳಿ ತೀರದಲ್ಲಿರುವ ಒಡಿಶಾ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಹಲವು ಅಚ್ಚರಿಗಳನ್ನು ಒಡಲಲ್ಲಿಟ್ಟುಕೊಂಡು ಜೀಕುವ ಒಡಿಶಾ ರಾಜ್ಯ ಈಗ ಪ್ರವಾಸಿಗರ ನೆಚ್ಚಿನ ತಾಣ. ಒಡಿಶಾ ನೃತ್ಯದ ಲಾಲಿತ್ಯದಂತೆ ಅಲ್ಲಿನ ಸ್ಥಳಗಳೂ ಅನೇಕರನ್ನು ಸೆಳೆಯುತ್ತಿವೆ. 480 ಕಿಲೋ ಮೀಟರ್‌ ಕರಾವಳಿ, ಒಟ್ಟು ವಿಸ್ತೀರ್ಣದಲ್ಲಿ ಶೇ 35 ದಟ್ಟಕಾಡು ಹೊಂದಿರುವ ಒಡಿಶಾದಲ್ಲಿ ನೋಡುವ ಸ್ಥಳಗಳು ಸಾಕಷ್ಟಿವೆ. ವಿಶ್ವದ ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾದ ಒಡಿಶಾದಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿಸಿಕೊಡಲು, ಅಲ್ಲಿನ ಪ್ರವಾಸೋದ್ಯಮ ಇಲಾಖೆಯು ಈಚೆಗೆ ನಗರದಲ್ಲಿ ರೋಡ್‌ ಷೋ ಆಯೋಜಿಸಿತ್ತು.

೨೦೧೩ರಲ್ಲಿ ಕರ್ನಾಟಕದಿಂದ ೯೮ ಸಾವಿರ ಜನರು ಒಡಿಶಾ ಪ್ರವಾಸ ಕೈಗೊಂಡಿದ್ದರು. ಈ ವರ್ಷ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ ಎನ್ನುವ ಅಲ್ಲಿನ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಕುಮಾರ್‌ ತಮರಾ, ಒಡಿಶಾ ಪ್ರವಾಸಕ್ಕೆ ಅಕ್ಟೋಬರ್‌ನಿಂದ ಮಾರ್ಚ್‌ ಸೂಕ್ತ ಸಮಯ ಎಂದರು. ನಂತರ ಒಡಿಶಾ ಪ್ರವಾಸೋದ್ಯಮ ಕುರಿತಂತೆ ಸಾಕಷ್ಟು ಮಾಹಿತಿ ನೀಡಿದರು.

‘ಕಲಾತ್ಮಕತೆಯ ನೆಲೆವೀಡಾಗಿರುವ ಒಡಿಶಾ, ವಿಶ್ವದಾದ್ಯಂತ ಇರುವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಯುನೆಸ್ಕೊ ಪಾರಂಪರಿಕ ಕಟ್ಟಡವೆನಿಸಿರುವ ಕೊನಾರ್ಕ್‌ನ ದಿ ಸನ್ ಟೆಂಪಲ್, ಪೂರಿಯಲ್ಲಿರುವ ಜಗನ್ನಾಥ ದೇವಾಲಯ, ಭುವನೇಶ್ವರದಲ್ಲಿರುವ ಚಾರ್‌ಧಾಮಗಳು ವಿಶ್ವವಿಖ್ಯಾತವಾಗಿವೆ. ಬೌದ್ಧರ ಪಾರಂಪರಿಕ ಸ್ಥಳಗಳಾದ ರತ್ನಗಿರಿ,- ಲಲಿತಗಿರಿ-, ಉದಯಗಿರಿ, -ಲಾಂಗುಡಿ ಮತ್ತು ಢೌಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುಗಳಾಗಿವೆ. ಪೂರಿ, ಚಾಂಡಿಪುರ, ಗೋಪಾಲಪುರ ಸಮುದ್ರ ತೀರಗಳು, ದೇಶದ ಎರಡನೇ ಅತಿದೊಡ್ಡ ವನ್ಯಜೀವಿ ಧಾಮ ಎನಿಸಿರುವ ಭೀತಾರ್ಕಾನಿಕ ರಾಷ್ಟ್ರೀಯ ವನ್ಯಜೀವಿಧಾಮ ಪ್ರಮುಖ ಆಕರ್ಷಣೆಯಾದರೆ, ಭುವನೇಶ್ವರದಲ್ಲಿರುವ ಖಾಂದಗಿರಿ, ಉದಯಗಿರಿಯ ಶಿಲ್ಪಕಲೆಗಳು ಜೈನರ ಪರಂಪರೆಗೆ ಕನ್ನಡಿ ಹಿಡಿಯುತ್ತವೆ. ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೆರೆ ಎನಿಸಿರುವ ಚಿಲ್ಕಾ ಮತ್ತು ರಾಮ್ಸಾರ್‌ನಲ್ಲಿ ಡಾಲ್ಫಿನ್ ಮತ್ತು ದೇಶ ವಿದೇಶಗಳ ಪಕ್ಷಿಗಳ ಕಲರವ ಪ್ರವಾಸಿಗರಿಗೆ ಮುದ ನೀಡಲಿವೆ. ಹಾಗೆಯೇ, ಇಲ್ಲಿರುವ ಒಡಿಶಾ ಬೌದ್ಧ, ಜೈನ ಮತ್ತು ಹಿಂದೂ ಧರ್ಮಗಳ ಧಾರ್ಮಿಕ ಕ್ಷೇತ್ರಗಳು ಪ್ರವಾಸಿಗರಿಗೆ ದಿವ್ಯ ಅನುಭೂತಿ ನೀಡಲಿವೆ’ ಎಂದರು ತರನೇಯಾ.

ಅಂದಹಾಗೆ, ಒಡಿಶಾದ ಪ್ರಸಿದ್ಧ ಹಬ್ಬವಾದ  ಕೊನಾರ್ಕ್ ಫೆಸ್ಟಿವಲ್ ಇದೇ ವರ್ಷದ ಕೊನೆಯಲ್ಲಿ ನಡೆಯಲಿದೆ. ಅಂತರರಾಷ್ಟ್ರೀಯ ಮರಳುಕಲೆ ಹಬ್ಬವೂ ಡಿಸೆಂಬರ್ ಮೊದಲ ವಾರದಲ್ಲಿ ಆರಂಭಗೊಳ್ಳಲಿದೆ. ಪರಬ್ ಟ್ರೈಬಲ್ ಉತ್ಸವ (ನವೆಂಬರ್ ೧೬ರಿಂದ ೧೮ರವರೆಗೆ), ಧನುಯಾತ್ರಾ ಫೆಸ್ಟಿವಲ್ (ಡಿಸೆಂಬರ್–-ಜನವರಿ), ರಾಜ–ರಾಣಿ ಮ್ಯೂಸಿಕ್ ಫೆಸ್ಟಿವಲ್ (ಜನವರಿ ೧೮ರಿಂದ ೨೦), ಮುಕ್ತೇಶ್ವರ ಡಾನ್ಸ್ ಫೆಸ್ಟಿವಲ್ (ಜನವರಿ ೧೪ರಿಂದ ೧೬ರವರೆಗೆ) ನಡೆಯಲಿವೆ ಎಂಬ ಮಾಹಿತಿಯನ್ನೂ ಅವರು ನೀಡಿದರು.

ಚಿನ್ನದ ಸೊಬಗಿರುವ ಕರಾವಳಿ ತೀರಗಳು, ಕಣ್ಮನ ಸೆಳೆಯುವ ಕೊಳಗಳು, ದಂಡಕಾರಣ್ಯಗಳು, ಅಪರೂಪದ ವನ್ಯಜೀವಿಗಳು, ಐತಿಹಾಸಿಕ ಹಿನ್ನೆಲೆ ಇರುವ ದೇವಾಲಯಗಳು, ಸ್ಮಾರಕಗಳು, ಬೌದ್ಧರ ಧಾರ್ಮಿಕ ಕ್ಷೇತ್ರಗಳು, ಕೈಮಗ್ಗ, ಕರಕುಶಲ ವಸ್ತುಗಳು, ಎಲ್ಲರೂ ಮೆಚ್ಚುವಂತಹ 62 ಬಗೆಯ ಬುಡಕಟ್ಟು ಸಮುದಾಯಗಳು, ಸೌಂದರ್ಯದ ಸೊಬಗಿನಲ್ಲಿ ಆಚರಿಸುವ ಹಬ್ಬ ಹರಿದಿನಗಳು, ಸಂಸ್ಕೃತಿ, ಕಲೆ ಸೇರಿದಂತೆ ಹಲವು ವಿಭಿನ್ನ ಬಗೆಯ ಚಟುವಟಿಕೆಗಳ ತವರೂರಾಗಿರುವ ಒಡಿಶಾಕ್ಕೆ ಪ್ರವಾಸ ಕೈಗೊಳ್ಳಲು ಇದು ಸೂಕ್ತ ಸಮಯ. ಪ್ರವಾಸ ಕೈಗೊಳ್ಳಲು ಯೋಚಿಸುತ್ತಿರುವವರು ಒಡಿಶಾಕ್ಕೆ ಭೇಟಿ ನೀಡುವ ಕುರಿತು ಈಗ ಯೋಚಿಸಬಹುದು. ಹೆಚ್ಚಿನ ಮಾಹಿತಿಗೆ: www.odishatourism.gov.in, www.panthanivas.com, www.visitorissa.org ಲಾಗ್‌ಆನ್‌ ಆಗಬಹುದು.
ಒಡಿಶಾ ರೋಡ್ ಷೋ ಸಂದರ್ಭದಲ್ಲಿ ಮಧುಲಿಕಾ ಮೊಹಾಪಾತ್ರ ಮತ್ತು ಸಂಗಡಿಗರು ಪ್ರದರ್ಶಿಸಿದ ಒಡಿಶಾ ನೃತ್ಯ ಕಾರ್ಯಕ್ರಮಕ್ಕೆ ಮೆರುಗು ತುಂಬಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT