ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಸ್ಸಿ ಮೋಡಿಯಲ್ಲಿ ಕುಂಚ ಓಡಾಡಿದಾಗ

ಕಲಾಪ
Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

ಎಡಗಾಲು ಹಿಂದಕ್ಕೊರಗಿ ಬಲಗೈಯಲ್ಲಿ ದೀಪ ಹಿಡಿದ ನೃತ್ಯಗಾತಿಯ ಮುಖದಲ್ಲಿಯೂ ಕತ್ತಲೆಯ ಓಡಿಸುವ ಬೆಳಕ ಪ್ರತಿಫಲನ.. ಒಂಟಿ ಕಾಲಿನ ಚಂದ ಭಂಗಿಯಲ್ಲಿ ನಿಂತವಳ ನೆರಳೊಳಗೇ ಅರಳುತ್ತಿರು­ವಂತಿದೆ ಇನ್ನೊಂದು ನೃತ್ಯಪುಷ್ಪ.. ಚಾಚಿದ ತನ್ನದೇ ಹಸ್ತಕ್ಕೆ ಒರಗಿ ಬಾಗಿದವಳ ಕಣ್ಣುಗಳು ವಶವಾದಂತಿವೆ ಯಾವುದೋ ಅವ್ಯಕ್ತ ಕರೆಗೆ.. ಬೆರಳುಗಳನ್ನೇ ನೆಚ್ಚಿ ಹಿಮ್ಮಡಿಯೆತ್ತಿದ ಪಾದಗಳು ತಮ್ಮದೇ ನೂಪುರ ನಿನಾದಕ್ಕೆ ಮರುಳಾಗಿವೆ...

ಶ್ರೀಕಲಾ ಗಂಗಿ ರೆಡ್ಡಿ ಅವರ ‘ಎ ವಾಕ್‌ ಡೌನ್‌ ಎ ವೈಂಡಿಂಗ್‌ ಪಾತ್‌’ ಚಿತ್ರಸರಣಿಯ ನೋಡುತ್ತ ಹೋದರೆ ಒಡಿಸ್ಸಿ ನೃತ್ಯದ ಭಾವ ಭಂಗಿಗಳ ಭವ್ಯ ಲೋಕವೊಂದು ತೆರೆದುಕೊಳ್ಳುತ್ತಾ ಹೋಗುತ್ತವೆ.

ಈ ಚಿತ್ರಸರಣಿ ನಗರದ ನೃತ್ಯಗ್ರಾಮದ ಸಂಗದಿಂದ ಮೂಡಿದ್ದು ಎನ್ನುವುದು ವಿಶೇಷ. ಈ ಸರಣಿ ಕಲಾಕೃತಿಗಳನ್ನು ಪ್ರದರ್ಶನ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ. ಶ್ರೀಕಲಾ ಗಂಗಿರೆಡ್ಡಿ ಆಂಧ್ರ ಮೂಲದವರಾದರೂ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದವರು. ಇದೀಗ ಪೂರ್ಣ ಪ್ರಮಾಣದಲ್ಲಿ ಕಲೆಯನ್ನೇ ತಮ್ಮ ವೃತ್ತಿಯಾಗಿಸಿಕೊಂಡಿದ್ದಾರೆ.

‘ನಾನು ಮೊದಲು ಸಾಫ್ಟ್‌ವೇರ್‌ ಉದ್ಯೋಗಿ­ಯಾಗಿದ್ದೆ. ವಾರಾಂತ್ಯದಲ್ಲಿ ಚಿತ್ರಕಲೆಯನ್ನು ಅಭ್ಯಸಿಸುತ್ತಿದ್ದೆ. ಹಾಗೆ ಕಲಿಯುತ್ತ ಕಲಿಯುತ್ತ ಇದೇ ನನ್ನ ಮನಸ್ಸಿಗೆ ಒಗ್ಗುವ ಕೆಲಸ ಎನ್ನಿಸಿತು. ಆದ್ದರಿಂದ ಸಾಫ್ಟ್‌ವೇರ್‌ ಉದ್ಯೋಗಕ್ಕೆ ರಾಜೀ ನಾಮೆ ನೀಡಿ ಕಳೆದ ಮೂರು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಕಲಾರಚನೆಯಲ್ಲಿಯೇ ತೊಡಗಿಕೊಂಡೆ’ ಎಂದು ಕಲಾರಚನೆಯಲ್ಲಿ ತೊಡ­ಗಿ­ಕೊಂಡ ಬಗ್ಗೆ ವಿವರಿಸುತ್ತಾರೆ ಶ್ರೀಕಲಾ.

ನೃತ್ಯಗ್ರಾಮದಿಂದ ದೊರೆತ ಸ್ಫೂರ್ತಿ
ಎರಡು ವರ್ಷಗಳ ಹಿಂದೆ ಶ್ರೀಕಲಾ ಒಮ್ಮೆ ಹೆಸರುಘಟ್ಟದಲ್ಲಿನ ಒಡಿಸ್ಸಿ ನೃತ್ಯ ಗುರುಕುಲಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಕಲಾವಿದರನ್ನು ನೋಡಿ ಈ ನೃತ್ಯಾನುಭವವನ್ನು ಕ್ಯಾನ್ವಾಸ್‌ ಮೇಲೆ ಯಾಕೆ ಮೂಡಿಸಬಾರದು ಎಂಬ ಆಲೋಚನೆ ಬಂತು. ಮತ್ತೆ ಮತ್ತೆ ನೃತ್ಯಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಕಲಾವಿದರ ಜತೆ ಒಡನಾಡಿದ್ದಾರೆ. ಅವರ ನೃತ್ಯ ಅಭ್ಯಾಸ­ವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಒಡಿಸ್ಸಿ ನೃತ್ಯದ ಭಾವ ಭಂಗಿಗಳನ್ನು ಕುಂಚಕ್ಕೆ ಒಗ್ಗಿಸಿಕೊಂಡಿದ್ದಾರೆ. ಅವರ ಈ ಶ್ರಮದ ಫಲವೇ ‘ಎ ವಾಕ್‌ ಡೌನ್‌ ಎ ವೈಂಡಿಂಗ್‌ ಪಾತ್‌’ ಚಿತ್ರಸರಣಿ.

‘ಎರಡು ವರ್ಷಗಳ ಹಿಂದೆ ನೃತ್ಯಗ್ರಾಮಕ್ಕೆ ಭೇಟಿ ನೀಡಿದಾಗ ಒಡಿಸ್ಸಿ ನೃತ್ಯ ನನ್ನನ್ನು ಸೆಳೆಯಿತು. ಆ ನೃತ್ಯವನ್ನೇ ಆಧರಿಸಿ ಕೃತಿಗಳ ರಚನೆಗೆ ತೊಡಗಿದೆ. ಕಲಾವಿದರ ಭಾವ–ಭಂಗಿ, ಆಂಗಿಕ ಅಭಿವ್ಯಕ್ತಿಗಳನ್ನು ಕ್ಯಾನ್ವಾಸ್‌ ಮೇಲೆ ಮೂಡಿಸಲು ಪ್ರಯತ್ನಿಸಿದೆ. ಮೂವತ್ತು ಕೃತಿಗಳಿವೆ. ಅವೆಲ್ಲವನ್ನೂ ಈಗ ಒಟ್ಟಿಗೇ ನೋಡುವುದು ಬೇರೆಯದೇ ಅನುಭವ ನೀಡುತ್ತದೆ’ ಎನ್ನುತ್ತಾರೆ ಶ್ರೀಕಲಾ.

‘ಈ ಚಿತ್ರಗಳಲ್ಲಿ ಮುಖ್ಯವಾಗಿ ನೃತ್ಯಗ್ರಾಮದ ಒಡಿಸ್ಸಿ ಕಲಾವಿದರ ನೃತ್ಯಭಂಗಿಗಳ ಮೇಲೆ ಗಮನ ಕೇಂದ್ರೀಕರಿಸಿದ್ದೇನೆ. ಹಾಗೆಯೇ ಅವರ ಭಾವ, ಮುದ್ರೆಗಳು, ಅವರ ವಸ್ತ್ರ ವಿನ್ಯಾಸ, ಆಭರಣಗಳು ಅವೆಲ್ಲವೂ ನೃತ್ಯಾನುಭವಕ್ಕೆ ಹೇಗೆ ಪೂರಕವಾಗಿ ಸ್ಪಂದಿಸುತ್ತವೆ ಎಂಬುದರ ಕುರಿತು ನನ್ನ ಕುಂಚದ ಮೂಲಕ ಕಂಡುಕೊಳ್ಳಲು ಯತ್ನಿಸಿದ್ದೇನೆ. ಕೆಲವು ಚಿತ್ರಗಳು ಪಾದಗಳ ಚಲನೆಯ ಕುರಿತಾಗಿಯೇ ಇವೆ. ಇನ್ನು ಕೆಲವು ಮುಖಭಾವೆ, ಹಸ್ತ ಮುದ್ರೆ ಹೀಗೆ ನೃತ್ಯದ ವಿವಿಧ ಆಯಾಮಗಳನ್ನು ಇಲ್ಲಿ ಶೋಧಿಸಲು ಪ್ರಯತ್ನಿಸಿದ್ದೇನೆ’ ಎಂದು ತಮ್ಮ ಕಲಾಕೃತಿಗಳ ಬಗ್ಗೆ ಹೇಳುತ್ತಾರೆ.

ಭಿನ್ನ ಮಾಧ್ಯಮಗಳು
ಈ ಕಲಾಕೃತಿಗಳನ್ನು ಶ್ರೀಕಲಾ ಭಿನ್ನ ಮಾಧ್ಯಮಗಳಲ್ಲಿ ರಚಿಸಿದ್ದಾರೆ. ಆಕ್ರಿಲಿಕ್‌, ತೈಲಚಿತ್ರ, ಇದ್ದಿಲಿನಿಂದ ಮೂಡಿಸಿರುವ ಚಿತ್ರಗಳೂ ಇಲ್ಲಿವೆ. ‘ಮಾಧ್ಯಮಗಳು ಬೇರೆ ಬೇರೆ ಆದರೂ ಈ ಎಲ್ಲ ಚಿತ್ರಗಳೂ ಬೇರೆ ದಾರಿಗಳ ಮೂಲಕ ಒಂದೇ ಉದ್ದೇಶದತ್ತ ಸಾಗುತ್ತವೆ’ ಎನ್ನುವುದು ಶ್ರೀಕಲಾ ವಿವರಣೆ.

‘ನೃತ್ಯಗಾರರ ಜಗತ್ತಿನೊಳಗೆ ಇಣುಕುವುದು ಬೇರೆಯದೇ ಅನುಭವ. ನೃತ್ಯದ ಬಗ್ಗೆ ಅವರಿಗಿರುವ ಆಸಕ್ತಿ, ಅದಕ್ಕಾಗಿ ಅವರ ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಎಲ್ಲವೂ ಗೋಚರಿಸುತ್ತದೆ. ಎಂಥದ್ದೇ ಕಷ್ಟದಲ್ಲಿದ್ದರೂ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಪ್ರಯತ್ನ ನಿಜಕ್ಕೂ ಸ್ಫೂರ್ತಿದಾಯಕ. ನನ್ನ ಈ ಕೃತಿಗಳ ಹಿಂದಿನ ಸ್ಫೂರ್ತಿಯೂ ಅವರೇ’ ಎಂದು ಅವರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಉತ್ತಮ ಜನಸ್ಪಂದನ
ತಮ್ಮ ಕಲಾಕೃತಿಗಳ ಪ್ರದರ್ಶನಕ್ಕೆ ಸಿಕ್ಕುತ್ತಿರುವ ಉತ್ತಮ ಜನಸ್ಪಂದನ ಶ್ರೀಕಲಾ ಅವರನ್ನು ಖುಷಿಗೊಳಿಸಿದೆ. ‘ಜನರು ತುಂಬಾ ಇಷ್ಟಪಟ್ಟು ಈ ಚಿತ್ರಗಳನ್ನು ನೋಡುತ್ತಿದ್ದಾರೆ. ವಿವರಗಳನ್ನು ಕೇಳಿ ಪಡೆದುಕೊಳ್ಳುತ್ತಿದ್ದಾರೆ. ಜನರ ಸ್ಪಂದನೆ ನನಗೆ ಇನ್ನಷ್ಟು ಉತ್ಸಾಹ ನೀಡಿದೆ’ ಎನ್ನುತ್ತಾರೆ.
**
ಕಲಾ ಪ್ರದರ್ಶನದ ವಿವರಗಳು
ಶ್ರೀಕಲಾ ಗಂಗಿ ರೆಡ್ಡಿ ಅವರ ‘ಎ ವಾಕ್‌ ಡೌನ್‌ ಎ ವೈಂಡಿಂಗ್‌ ಪಾತ್‌’ ಏಕವ್ಯಕ್ತಿ ಕಲಾ ಪ್ರದರ್ಶನ ನಗರದ ಕುಮಾರಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿದೆ. ಇದೇ ತಿಂಗಳು 31ರವರೆಗೆ ಈ ಪ್ರದರ್ಶನ ನಡೆಯಲಿದೆ. ಶ್ರೀಕಲಾ ಅವರ ಕಲ್ಪನೆಯಲ್ಲಿ ಅರಳಿದ ಒಡಿಸ್ಸಿ ನೃತ್ಯಲೋಕವನ್ನು ಆಸ್ವಾದಿಸಲು ಆಸಕ್ತಿಯಿದ್ದವರು ಬೆಳಿಗ್ಗೆ 11ರಿಂದ ಸಂಜೆ 7 ಗಂಟೆಯ ಒಳಗಾಗಿ ಚಿತ್ರಕಲಾ ಪರಿಷತ್ತಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT