ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವಿಗೆ ವೀರಾವೇಶ: ಅಭಿವೃದ್ಧಿಗೆ ನಿರಾಸಕ್ತಿ

ಸಾರಕ್ಕಿ ಕೆರೆ ಒತ್ತುವರಿ ತೆರವಿಗೆ ಆರು ತಿಂಗಳು, ಬಿಡಿಎ ಸುಪರ್ದಿಗೆ ವಹಿಸಿದ ಜಿಲ್ಲಾಡಳಿತ
Last Updated 7 ಫೆಬ್ರುವರಿ 2016, 19:42 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಯೊಳಗೆ ಕಳೆ ಗಿಡಗಳದ್ದೇ ಸಾಮ್ರಾಜ್ಯ, ಕೆಂಬಣ್ಣಕ್ಕೆ ತಿರುಗಿರುವ ನೀರು, ಅಲ್ಲಲ್ಲಿ ಮಾಂಸದ ತ್ಯಾಜ್ಯ, ಕಾಗದ, ಪ್ಲಾಸ್ಟಿಕ್‌ ಚಪ್ಪಲಿ ಹಾಗೂ ಕಟ್ಟಡಗಳ ಅವಶೇಷ. ಜೊತೆಗೆ ಹಂದಿಗಳ ಹೊರಳಾಟ, ಊರ ತುಂಬಾ ಸೊಳ್ಳೆ ಕಾಟ. ಈ ದೃಶ್ಯಕ್ಕೆ ಸಾಕ್ಷಿಯಾಗಿ ನಿಂತಿರುವುದು ಜೆ.ಪಿ.ನಗರದಲ್ಲಿರುವ ಐತಿಹಾಸಿಕ ಸಾರಕ್ಕಿ ಕೆರೆ. ಕೆರೆಯ ಒತ್ತುವರಿ ತೆರವಾಗಿ ಆರು ತಿಂಗಳುಗಳು ಕಳೆದಿವೆ.

ಕೆರೆಯ ಇನ್ನೂ ಅಭಿವೃದ್ಧಿ ಕಾರ್ಯ ಆರಂಭವಾಗಿಲ್ಲ. ಒತ್ತುವರಿ ತೆರವಿಗೆ ಜಿಲ್ಲಾಡಳಿತ ವೀರಾವೇಶ ತೋರಿತ್ತು. ಅಂತಹ ಉತ್ಸಾಹ ಕೆರೆ ಅಭಿವೃದ್ಧಿಗೆ ಕಂಡು ಬರುತ್ತಿಲ್ಲ. ನೆಪ ಮಾತ್ರಕ್ಕೆ ಕೆಲವು ಕಡೆಗಳಲ್ಲಿ ತಂತಿ ಬೇಲಿ ನಿರ್ಮಾಣ ಕಾರ್ಯ ನಡೆದಿದೆ.

ಹೈಕೋರ್ಟ್‌ ನಿರ್ದೇಶನದ ಪ್ರಕಾರ ನಗರ ಜಿಲ್ಲಾಡಳಿತ ಏಪ್ರಿಲ್‌ 16ರಿಂದ ಒಂದು ವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.  ₹2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಿತು. ಕೆರೆಯಂಗಳದಲ್ಲಿದ್ದ 178 ಅಕ್ರಮ ಕಟ್ಟಡಗಳು ಹಾಗೂ ಏಳು ವಸತಿ ಸಂಕೀರ್ಣಗಳ ಪೈಕಿ ಬಹುತೇಕ ಕಟ್ಟಡಗಳನ್ನು ನೆಲಸಮ ಮಾಡಲಾಯಿತು.

ಸುಮಾರು 50 ಕಟ್ಟಡಗಳನ್ನು ಭಾಗಶಃ ನೆಲಸಮಗೊಳಿಸಲಾಯಿತು. ಸುಮಾರು 10 ಕಟ್ಟಡಗಳ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಒತ್ತುವರಿ ತೆರವಿನ ಸಂದರ್ಭದಲ್ಲಿ ಅಧಿಕಾರಿಗಳು, ‘ಕೆಲವೇ ದಿನಗಳಲ್ಲಿ ಕೆರೆಯ  ಸಮಗ್ರ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ’ ಎಂದೂ ಪ್ರಕಟಿಸಿದ್ದರು. ಈವರೆಗೂ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ. ಇನ್ನೊಂದು ವರ್ಷ ಇದೇ ರೀತಿ ಬಿಟ್ಟರೆ ಕೆರೆಯಂಗಳದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಲಿವೆ ಎಂದು ಸ್ಥಳೀಯರು ಎಚ್ಚರಿಸುತ್ತಾರೆ. 

ಸಮೀಪದ ವಸತಿ ಸಮುಚ್ಚಯಗಳಿಂದ ತ್ಯಾಜ್ಯ ನೀರು ಹರಿದು ಬರುತ್ತಿದ್ದು ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದೆ.  ನೀರೆರೆದು ಜನರ ದಾಹ ತಣಿಸಬೇಕಿದ್ದ ಕೆರೆ ತನ್ನ ಒಡಲೊಳಗೆ ಕಶ್ಮಲದ ಪಿಡುಗನ್ನು ಇಟ್ಟುಕೊಂಡು ವಿಷ ಹರಡುತ್ತಿದೆ. ಎಲ್ಲೆಡೆ ಘನತ್ಯಾಜ್ಯ ತುಂಬಿದ್ದು ಜೊಂಡು ಬೆಳೆದಿರುವುದರಿಂದ ನೀರು ಇದೆ ಎಂಬುದೇ ಗೊತ್ತಾಗು­ವುದಿಲ್ಲ. ಬೆಳ್ಳಂದೂರು ಕೆರೆಯ ರೀತಿಯಲ್ಲೇ ಸಾರಕ್ಕಿ ಕೆರೆಯಲ್ಲಿ ಕಳೆದ ಕೆಲವು ತಿಂಗಳಿಂದ ನೊರೆ ಕಾಣಿಸಿಕೊಳ್ಳುತ್ತಿದೆ.
ಬಿಡಿಎ ಆಯುಕ್ತರಿಗೆ ನೋಟಿಸ್‌: ಕೆರೆ ರಕ್ಷಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂದು ಬಿಡಿಎ ಆಯುಕ್ತ ಶ್ಯಾಮ್‌ ಭಟ್‌ ಅವರಿಗೆ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದೆ.

ಕೆರೆಯ ಒತ್ತುವರಿ ತೆರವು ಮಾಡಿದ ಬಳಿಕ ತಂತಿ ಬೇಲಿ ಹಾಕಿ ರಕ್ಷಣೆ ಮಾಡ ಬೇಕು ಎಂದು ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಬಿಡಿಎ ಈ ಆದೇಶವನ್ನು ಪಾಲಿಸಿಲ್ಲ ಎಂದು ಸಾರಕ್ಕಿ ಕೆರೆ ಪ್ರದೇಶಾಭಿವೃದ್ಧಿ ಟ್ರಸ್ಟ್‌ ಹೈಕೋರ್ಟ್‌ನ ಗಮನಕ್ಕೆ ತಂದಿತ್ತು.

‘ತಂತಿ ಬೇಲಿ ಹಾಕದ ಕಾರಣ ತೆರವುಗೊಳಿಸಿದ ಪ್ರದೇಶದಲ್ಲಿ ಮತ್ತೆ ಕಟ್ಟಡಗಳು ತಲೆ ಎತ್ತುತ್ತಿವೆ. ಸಣ್ಣಪುಟ್ಟ ಪ್ರಮಾಣದಲ್ಲಿ ತೆರವುಗೊಳಿಸಿದ ಕಟ್ಟಡಗಳನ್ನು ಮರುನಿರ್ಮಿಸಲಾಗಿದೆ. ತೆರವುಗೊಳಿಸಿದ್ದ ಕಾಂಪೌಂಡನ್ನು ಮತ್ತೆ ನಿರ್ಮಿಸಲಾಗುತ್ತಿದೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ’  ಎಂದು ಟ್ರಸ್ಟ್‌ ಪರ ವಕೀಲರು ವಾದಿಸಿದ್ದರು. ಹೀಗಾಗಿ ನವೆಂಬರ್‌ 21ರಂದು ನ್ಯಾಯಾಲಯ ನೋಟಿಸ್‌ ಜಾರಿ ಮಾಡಿತ್ತು.

ಕೊಳಚೆ ನೀರಿನ ಆಗರ: ‘ಸಾರಕ್ಕಿ ಕೆರೆಗೆ ಪ್ರತಿನಿತ್ಯ ಸುಮಾರು 7–8 ಲಕ್ಷ ಲೀಟರ್‌ ಕೊಳಚೆ ನೀರು ಕೆರೆ ಸೇರುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದ ಕೊಳವೆ ಬಾವಿಗಳಲ್ಲಿಯೂ ಕೆರೆ­ಯಲ್ಲಿರುವಂಥ ಬಣ್ಣದ ನೀರು ಬರುತ್ತಿದೆ. ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಕೆರೆ ಅಂಗಳದಲ್ಲಿ ಜಲಮಂಡಳಿಯ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೆರೆಗೆ ಕೊಳಚೆ ನೀರು ಸೇರದಂತೆ ತಡೆಯಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

‘ಕೊಳವೆ ಬಾವಿಯ ನೀರು ವಾಸನೆಯಿಂದ ಕೂಡಿರುತ್ತದೆ. ಈ ಪ್ರದೇಶದ ಮಕ್ಕಳಲ್ಲಿ ವಿವಿಧ ಕಾಯಿಲೆಗಳು ಕಾಣಿಸಿ­ಕೊಳ್ಳುತ್ತಿದ್ದು, ದಿನನಿತ್ಯ ಆಸ್ಪತ್ರೆಗೆ ಅಲೆಯಬೇಕಾಗಿದೆ’ ಎಂದು ಸ್ಥಳೀಯ ನಿವಾಸಿ ಕಿರಣ್‌ ನೋವಿನಿಂದ ನುಡಿಯುತ್ತಾರೆ.

ಟ್ರಸ್ಟ್‌ ಸಲಹೆ: ಸುತ್ತಮುತ್ತಲಿನ ಕಟ್ಟಡಗಳಿಂದ ಕೆರೆಗೆ ಹರಿದು ಬರುತ್ತಿರುವ ಕೊಳಚೆ ನೀರನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಹಾಗೂ ಕಟ್ಟಡ ಅವಶೇಷಗಳನ್ನು ಕೆರೆಗೆ ಸುರಿಯುವವರ ಮೇಲೆ ದಂಡ ವಿಧಿಸಬೇಕು. ಕೆರೆಯೊಳಗೆ ನಿರ್ಮಿಸಿರುವ ಕಾಲುದಾರಿಯನ್ನು ಮುಚ್ಚಬೇಕು. ಕೆರೆ ಸುತ್ತ ಬೇಲಿ ಹಾಕಿ ಕಾವಲುಗಾರರನ್ನು ನಿಯೋಜಿಸಬೇಕು ಎಂದು ಸಾರಕ್ಕಿ ಕೆರೆ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳು ಸಲಹೆ ನೀಡುತ್ತಾರೆ.

ಈ ಹಿಂದೆಯೂ ಅಭಿವೃದ್ಧಿ ಪ್ರಯತ್ನ: ಈ ಹಿಂದೆಯೂ ಕೆರೆಯ ಅಭಿವೃದ್ಧಿಯ ಪ್ರಯತ್ನ ನಡೆದಿತ್ತು. ಆದರೆ, ಅರ್ಧದಲ್ಲೇ ಕಾಮಗಾರಿ ಕೈ ಬಿಡಲಾಗಿತ್ತು. ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಕೆರೆ ಪುನಶ್ಚೇತನ ಕಾರ್ಯ ಆರಂಭವಾಗಿತ್ತು. ಹೂಳು ತೆಗೆದು ಕಲುಷಿತ ನೀರು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿತ್ತು. ತ್ಯಾಜ್ಯ ತೆಗೆದು ಹೂಳೆತ್ತಲು ಹಾಗೂ ಬೇಲಿ ಹಾಕಲು ₹3.23 ಕೋಟಿ ಖರ್ಚು ಮಾಡಲಾಗಿತ್ತು. ಇನ್ನುಳಿದ ₹ 40 ಲಕ್ಷ ಮೊತ್ತ­ವನ್ನು ಚರಂಡಿ ವ್ಯವಸ್ಥೆಗಾಗಿ ಜಲಮಂಡಳಿ ವ್ಯಯಿಸಿತ್ತು. ಈ ಕಾರ್ಯ 2004ರಲ್ಲಿ ಕೊನೆ­ಗೊಂಡಿತ್ತು.

ಕೆರೆ ಅಭಿವೃದ್ಧಿಗೆ ಬಿಡಿಎ ಯೋಜನೆ: ಸಾರಕ್ಕಿ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ₹14 ಕೋಟಿ ಮೊತ್ತದ ಯೋಜನೆ ರೂಪಿಸಿದೆ.

‘ಅಂತರ್ಜಲ ವೃದ್ಧಿಸಿ ಕೆರೆ ಸಂರಕ್ಷಣೆ ಮಾಡುವುದು ಬಿಡಿಎ ಉದ್ದೇಶ. ಇದಕ್ಕಾಗಿ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕೆರೆಯ ಸುತ್ತ ತಂತಿ ಬೇಲಿ ನಿರ್ಮಾಣ,  ಕೆರೆ ಸುತ್ತ ನಡಿಗೆ ಪಥ, ಮಕ್ಕಳಿಗೆ ಆಟದ ಮೈದಾನ, ಕಿರು ಉದ್ಯಾನ, ಕೆರೆ ಮಧ್ಯೆ ದ್ವೀಪ ನಿರ್ಮಾಣ ಮಾಡಲಾಗುವುದು’  ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಿರ್ವಹಣೆ ಕೊರತೆಯಿಂದ ಕೆರೆ ಹಾಳಾಗಿದೆ. ಆರಂಭಿಕ ಹಂತದಲ್ಲಿ ಕೆರೆಗೆ ಬೇಲಿ ನಿರ್ಮಾಣ ಕಾರ್ಯ ಮಾಡಲಾಗುವುದು. ಕೆರೆ ನಿರ್ವಹಣೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು  ಎಂದು ಅವರು ಮಾಹಿತಿ ನೀಡಿದರು. 

‘ಈ ಹಿಂದೆ ಕೆರೆ ಅಭಿವೃದ್ಧಿಗೆ ಕೋಟಿಗಟ್ಟಲೆ ವೆಚ್ಚ ಮಾಡಲಾಗಿತ್ತು. ಆದರೆ, ಪರಿಣಾಮ ಶೂನ್ಯ. ಈ ಸಲವೂ ಬಿಡಿಎ ₹14 ಕೋಟಿಗಳ ಕ್ರಿಯಾ ಯೋಜನೆ ರೂಪಿಸಿದೆ. ಈ ಮೊತ್ತ ಸದ್ಬಳಕೆ ಆಗುತ್ತದೆ ಎಂಬ ನಂಬಿಕೆ ಇಲ್ಲ’ ಎಂದು ಇಲ್ಲಿನ ನಿವಾಸಿಗಳು ಸಂಶಯ ವ್ಯಕ್ತಪಡಿಸುತ್ತಾರೆ.

ಸದ್ಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸುಪರ್ದಿಯಲ್ಲಿ ಈ ಕೆರೆಯಿದೆ. ಕೆರೆಗಳ ಪುನಶ್ಚೇತನ ಯೋಜನೆ ಅಡಿ ಪಾಲಿಕೆಯಿಂದ ಬಿಡಿಎಗೆ ವರ್ಗಾಯಿಸ­ಲಾಗಿದೆ. ಒಳಚರಂಡಿ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲು ಜಲಮಂಡಳಿ ವತಿಯಿಂದ ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ.

ಸೊಳ್ಳೆ ಕಾಟ ವಿಪರೀತ
‘ಒತ್ತುವರಿ ತೆರವು ಮಾಡಿದ ಮಾತ್ರಕ್ಕೆ ಜಿಲ್ಲಾಡಳಿತದ ಜವಾಬ್ದಾರಿ ಮುಗಿಯುವುದಿಲ್ಲ. ಮತ್ತೆ ಒತ್ತುವರಿ ನಡೆಯದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಕಾವಲುಗಾರರನ್ನು ನೇಮಕ  ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

‘ಪುಟ್ಟೇನಹಳ್ಳಿ ಭಾಗದಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ. ಮನೆಯಲ್ಲಿ ಇರುವುದೇ ಕಷ್ಟವಾಗುತ್ತಿದೆ. ಅಧಿಕಾರಿಗಳಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ. ಅವರು ಒಂದು ದಿನ  ಇಲ್ಲಿ ನೆಲೆಸಿದರೆ ನಮ್ಮ ಕಷ್ಟ ಅರ್ಥವಾಗುತ್ತದೆ’ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

* ಹೈಕೋರ್ಟ್‌ ನಿರ್ದೇಶನದ ಪ್ರಕಾರ ಕೆರೆಯ ಒತ್ತುವರಿ ತೆರವು ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಕೆರೆ ಅಭಿವೃದ್ಧಿಪಡಿಸುವುದು ಪ್ರಾಧಿಕಾರದ ಜವಾಬ್ದಾರಿ.
–ವಿ.ಶಂಕರ್‌,  
ನಗರ ಜಿಲ್ಲಾಧಿಕಾರಿ

ಅಂಕಿ ಅಂಶ ಎಕರೆ–ಗುಂಟೆಗಳಲ್ಲಿ
82.24 ಕೆರೆಯ ಒಟ್ಟು ವಿಸ್ತೀರ್ಣ 
33 ಕೆರೆಯ ಒತ್ತುವರಿ ತೆರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT