ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವಿಗೆ ಹೈಕೋರ್ಟ್‌ ನಿರ್ದೇಶನ

ದೀವಟಗಿ ರಾಮನಹಳ್ಳಿಯ ಎರಡೂವರೆ ಎಕರೆ ಪ್ರದೇಶ
Last Updated 1 ಸೆಪ್ಟೆಂಬರ್ 2014, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಂಗೇರಿ ಹೋಬಳಿಯ ದೀವಟಗಿ ರಾಮನ­ಹಳ್ಳಿಯಲ್ಲಿ ಒತ್ತುವರಿ ಆಗಿರುವ ಎರಡೂವರೆ ಎಕರೆ ಜಾಗವನ್ನು ತೆರವುಗೊಳಿಸಿ ಅಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಿ’ ಎಂದು ಹೈಕೋರ್ಟ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಿರ್ದೇಶಿಸಿದೆ.

ನ್ಯಾಯಮೂರ್ತಿ ಎನ್.ಕುಮಾರ್ ಹಾಗೂ ನ್ಯಾ. ಬಿ.ವಿ.­ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯ­ಪೀಠವು ಸೋಮವಾರ ಈ ಸಂಬಂಧದ ವಿಚಾರಣೆ ಮುಂದುವರಿಸಿತು. ‘ಘನ ತ್ಯಾಜ್ಯ ವಿಲೇವಾರಿಗಾಗಿ ನಗರದ ವಿವಿಧೆಡೆ ಸ್ಥಾಪಿಸಲು ಉದ್ದೇಶಿಸಿರುವ 9 ಘಟಕಗಳನ್ನು ಶೀಘ್ರವೇ ಆರಂಭಿಸಬೇಕು. ಈ ಸಂಬಂಧ ವಿವರ­ಗಳನ್ನು ಮುಂದಿನ ವಿಚಾರಣೆ ವೇಳೆಗೆ ಸಲ್ಲಿಸಬೇಕು’ ಎಂದು ಪೀಠವು ಕಟ್ಟುನಿಟ್ಟಿನ ಸೂಚನೆ ನೀಡಿತು.

ಇದೇ ವೇಳೆ ಬಿಬಿಎಂಪಿ ಕೈಗೊಂಡಿರುವ ಕ್ರಮಗಳನ್ನು ಬಿಬಿಎಂಪಿ ವಿಶೇಷಾಧಿಕಾರಿ ದರ್ಪಣ ಜೈನ್ ನ್ಯಾಯಪೀಠಕ್ಕೆ ವಿವರಿಸಿದರು.
‘ನಗರದ ಘನತ್ಯಾಜ್ಯ ವಿಲೇವಾರಿಗಾಗಿ ಈಗಾಗಲೇ ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ. ೯ ಕಸ ವಿಲೇವಾರಿ ಘಟಕಗಳನ್ನು ಆರಂಭಿಸಲು ಕ್ರಮ ಜರುಗಿಸಲಾಗಿದೆ. ರಾಜ್ಯ ಸರ್ಕಾರವು  ಇದಕ್ಕಾಗಿ ನಿಗದಿಪಡಿಸಿರುವ ₨ ೨೭೦ ಕೋಟಿ ಪೈಕಿ ₨ ೧೫೦ ಕೋಟಿ ಬಿಡುಗಡೆ ಮಾಡಿದೆ’ ಎಂದು  ಹೇಳಿದರು.

‘ತಿಪ್ಪಗೊಂಡನಹಳ್ಳಿ ಮತ್ತು ಲಿಂಗದಹಳ್ಳಿ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಎರಡು ಘಟಕಗಳಿಗೆ  ಪರಿಸರ ಮಾಲಿನ್ಯ ಮಂಡಳಿ ಈತನಕ ಅನುಮತಿ ನೀಡಿಲ್ಲ. ದೀವಟಗಿ ರಾಮನಹಳ್ಳಿಯಲ್ಲಿ ಬಿಬಿಎಂಪಿಗೆ ಸೇರಿದ ಸುಮಾರು ಎರಡೂವರೆ ಎಕರೆ ಜಾಗವಿದ್ದು ಇಲ್ಲಿ ಒಂದು ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಆದರೆ ಈ ಸ್ಥಳವನ್ನು ಅತಿಕ್ರಮಿಸಲಾಗಿದೆ. ಅಧಿಕಾರಿಗಳು ಇದನ್ನು ತೆರವುಗೊಳಿಸಲು ಮುಂದಾ­ದರೆ ಅಲ್ಲಿನ ನಿವಾಸಿಗಳಿಂದ ಪ್ರತಿರೋಧ ವ್ಯಕ್ತವಾ­ಗುತ್ತಿದೆ’ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಮಂಡೂರಿನಲ್ಲಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಸ ಹಾಕು­ವಂತಿಲ್ಲ. ಮಂಡೂರಿನಲ್ಲಿ ಕಸ ಸುರಿಯುವುದನ್ನು ಕೊನೆಗಾಣಿಸಲು ನೀಡಿರುವ ಗಡುವಿಗೆ ಇನ್ನು ಕೇವಲ ೯೦ ದಿನಗಳಷ್ಟೇ ಬಾಕಿ ಉಳಿದಿವೆ. ಹೀಗಾಗಿ ಇನ್ನು ಮುಂದೆ ಬೆಂಗಳೂರಿನಲ್ಲಿ ಕಸವನ್ನು  ವಿಲೇವಾರಿ ಮಾಡಲು ಸಂಸ್ಕರಣಾ ಘಟಕಗಳನ್ನೇ ಅವಲಂಬಿಸ ಬೇಕು’ ಎಂದು ನಿರ್ದೇಶಿಸಿತು.

‘ದೀವಟಗಿ ರಾಮನಹಳ್ಳಿಯಲ್ಲಿನ ಎರಡೂವರೆ ಎಕರೆ ಜಾಗವನ್ನು ಬಿಡಿಎ ಜೊತೆಗೂಡಿ ತೆರವು­ಗೊಳಿಸಬೇಕು. ಇದಕ್ಕಾಗಿ ಪೊಲೀಸ್ ಇಲಾಖೆಯು ಅಗತ್ಯ ಸಹಕಾರ ನೀಡಬೇಕು. ಲಿಂಗದಹಳ್ಳಿ ಘಟಕವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನುಮತಿ ನೀಡಬೇಕು’ ಎಂದು ಪರಿಸರ ಮಂಡಳಿಗೆ ನ್ಯಾಯಪೀಠವು ನಿರ್ದೇಶಿಸಿತು.

‘ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೀವಟಗಿ ರಾಮನಹಳ್ಳಿ ವ್ಯಾಪ್ತಿಯ ವಾರ್ಡ್ ಕಚೇರಿಗಳಲ್ಲಿ ಆರೋಗ್ಯ ಅಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ನೋಟಿಸ್‌ ಬೋರ್ಡ್‌ನಲ್ಲಿ ಪ್ರದರ್ಶಿ­ಸಬೇಕು. ಅಂತೆಯೇ ವಿಭಾಗೀಯ ಅಧಿಕಾರಿಗಳ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್  ವಿಳಾಸವನ್ನೂ   ಪ್ರದರ್ಶಿಸಬೇಕು. ಈ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ದೊರೆಯುವಂತೆ ಸಭೆಗಳನ್ನು ನಡೆಸುವಂತೆ ನೋಡಿಕೊಳ್ಳಬೇಕು’ ಎಂದು ಪೀಠವು ಸೂಚಿಸಿತು. ಬಿಬಿಎಂಪಿ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತಂತೆ ಕವಿತಾ ಶಂಕರ್‌ ಹಾಗೂ ಇತರರು ಈ  ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT