ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿ ತೆರವು ಮಾಡಿಸಿ

5 ಎಕರೆ ಮೀರಿದ ಪ್ರಕರಣ: ಸಿ.ಎಂಗೆ ಸಿ.ಜೆ ಸಲಹೆ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐದು ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ನಿಲುವು ತಾಳುವಂತೆ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರು ಮುಖ್ಯಮಂತ್ರಿಯವರಿಗೆ ಸೂಚಿಸಿದ್ದಾರೆ  ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಸರ್ಕಾರಿ ಜಮೀನು ಒತ್ತುವರಿ ತೆರವು ಸಂಬಂಧ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರನ್ನು ಕರೆಸಿಕೊಂಡು ಮುಖ್ಯ ನ್ಯಾಯಮೂರ್ತಿಯವರು ಚರ್ಚೆ ನಡೆಸಿದ್ದಾರೆ. ಐದು ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿ ರುವವರನ್ನು ತಕ್ಷಣ ತೆರವುಗೊಳಿಸಿ. ಅದಕ್ಕಿಂತ ಕಡಿಮೆ ವಿಸ್ತೀ ರ್ಣದ ಒತ್ತುವರಿ ಮಾಡಿರುವವರ ಮೇಲೆ ಗದಾಪ್ರಹಾರ ಮಾಡಬೇಡಿ ಎಂಬ ಸೂಚನೆ ನೀಡಿದ್ದಾರೆ’ ಎಂದರು.

ಎಚ್‌.ಎಸ್‌.ದೊರೆಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿ ಅವರು ಆಗಾಗ ಧರಣಿ ಮಾಡುತ್ತಿದ್ದಾರೆ. ಒತ್ತುವರಿ ತೆರವಿನ ವಿಷಯದಲ್ಲಿ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯು­ವುದಿಲ್ಲ. ಸರ್ಕಾರದ ಆಸ್ತಿಯನ್ನು ರಕ್ಷಿಸುವ ವಿಷಯದಲ್ಲಿ ಹಿಂದೆಮುಂದೆ ನೋಡದೆ ಕ್ರಮ ಜರುಗಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ. ಎಲ್ಲ ಕಡೆಗಳಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ ಎಂದು ಹೇಳಿದರು.

ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣಿಯನ್‌ ಬಗರ್‌ ಹುಕುಂ ಸಾಗುವಳಿದಾರರನ್ನೂ ಒತ್ತುವರಿದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅನಧಿಕೃತ ಸಾಗುವಳಿ ಮಾಡು ತ್ತಿದ್ದು, ಭೂ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವವರನ್ನು ಏಕಾಏಕಿ ಒತ್ತುವರಿದಾರರು ಎಂದು ಪರಿಗಣಿಸಲಾಗದು.

ಆ ಅರ್ಜಿಗಳ ವಿಲೇವಾರಿವರೆಗೂ ಕಾಯಬೇಕು. ಬಗರ್‌ ಹುಕುಂ ಸಮಿತಿ ಅರ್ಜಿಯನ್ನು ತಿರಸ್ಕರಿಸಿದರೆ ಮಾತ್ರ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಹುದು ಎಂದರು.

ಕೆಲಸ ಆಗಿದೆ: ಕಂದಾಯ ಇಲಾಖೆಯಲ್ಲಿ ಹತ್ತಾರು ವರ್ಷ­ಗಳಿಂದ ಬಾಕಿ ಇದ್ದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಯತ್ನ ಈಗ ನಡೆಯುತ್ತಿದೆ. ಆದರೆ, ಏನೂ ಆಗುತ್ತಿಲ್ಲ ಎಂದು ಬಿಂಬಿಸುವ ಯತ್ನವೂ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪಹಣಿಗಳ ಕಂಪ್ಯೂಟರೀಕರಣ ಆಗಿ 14 ವರ್ಷ­ಗಳಾಗಿವೆ. 1.84 ಕೋಟಿ ಪಹಣಿಗಳ ಪೈಕಿ ಅರ್ಧದಷ್ಟು ಇನ್ನೂ ದೋಷಪೂರಿತವಾಗಿವೆ. ಅವುಗಳನ್ನು ಸರಿಪಡಿಸುವ ಕೆಲಸ ನಡೆದಿದೆ. 5.38 ಲಕ್ಷ ಪೋಡಿ ಪ್ರಕರಣಗಳು ಬಾಕಿ ಇವೆ. 2,673 ಭೂಮಾಪಕರನ್ನು ಪೋಡಿ ಪ್ರಕರಣಗಳ ಇತ್ಯರ್ಥಕ್ಕೆ ನಿಯೋಜಿಸಲಾಗಿದೆ’ ಎಂದು ವಿವರ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬ­ಗಳಿಗೆ ಶಾಶ್ವತ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಒಂದು ಕೋಟಿಗೂ ಹೆಚ್ಚು ಮಕ್ಕಳ ಪೋಷಕರ ಆದಾಯ ಪ್ರಮಾಣಪತ್ರಗಳನ್ನು ನೇರವಾಗಿ ಶಾಲೆಗಳಿಗೆ ತಲುಪಿಸಲಾಗಿದೆ. ಇದೆಲ್ಲವೂ ಕಂದಾಯ ಇಲಾಖೆ ಮಾಡಿದ ಕೆಲಸವಲ್ಲವೇ ಎಂದು ಪ್ರಶ್ನಿಸಿದರು.

ರಶ್ಮಿ ವಿರುದ್ಧವೂ ತನಿಖೆ
ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಅವ್ಯವಹಾರಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಮುಖ್ಯ­ಮಂತ್ರಿ­ಯವರಿಗೆ ಮನವಿ ಮಾಡಲಾಗಿದೆ. ಐಎಎಸ್‌ ಅಧಿಕಾರಿ ರಶ್ಮಿ ಕೂಡ ಸೇವಾನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆಯೂ ಇಲಾಖಾ ಮಟ್ಟ­ದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದರು.


ಸಚಿವರ ಕಾರ್ಯವೈಖರಿ ಕುರಿತು ಮುಖ್ಯಮಂತ್ರಿ­ಯವರು ವರದಿ ಕೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಚಿವರು ಏನು ಮಾಡಿದ್ದಾರೆ ಎಂಬುದರ ಬಗ್ಗೆ ಅವರಿಂದಲೇ ವರದಿ ಪಡೆಯುವ ಬದಲಿಗೆ ಇಲಾಖೆ­ಗಳಿಂದ ವರದಿ ಪಡೆಯಲಿ’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT