ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಂಪಿಕ್ಸ್ ವೇಗದ ಜೊತೆಗೆ ಚಿತ್ರಪಟದ ಬಿರುಸು ನಡಿಗೆ

ಕಪ್ಪು–ಬಿಳುಪು ಹಾಗೂ ಬಣ್ಣದಿಂದ 0 ಮತ್ತು 1ರವರೆಗೆ...
Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

ನನ್ನ ಒಲಿಂಪಿಕ್ಸ್ ಛಾಯಾಗ್ರಹಣ ಆರಂಭವಾದದ್ದು ‘1988ರ ಸೋಲ್ ಒಲಿಂಪಿಕ್ಸ್‌’ನಿಂದ. ಆ ಹೊತ್ತಿಗೆ ಬಣ್ಣದ ಚಿತ್ರಗಳ ಸಾಧ್ಯತೆ ಅನಾವರಣಗೊಂಡಿತ್ತು. ಆದರೆ ಕಪ್ಪು ಬಿಳುಪಿನ ಪ್ರಾಬಲ್ಯವಿತ್ತು. ಆ ಕಾಲಕ್ಕೆ ಭಾರತದಲ್ಲಿ ಲಭ್ಯವಿದ್ದ ಅತ್ಯುತ್ತಮ ಫಿಲ್ಮ್ ಮತ್ತು ಉಪಕರಣಗಳನ್ನು ನಾನು ಬಳಸುತ್ತಿದ್ದೆ.

ಕ್ರೀಡಾ ಛಾಯಾಗ್ರಹಣದಲ್ಲಿ ತಕ್ಕಮಟ್ಟಿಗಿನ ಪರಿಣತಿಯೂ ನನಗಿತ್ತು. ಆದರೆ ಸೋಲ್‌ನಲ್ಲಿ ಕ್ರೀಡಾಕೂಟ ನಡೆಯುವ ಸ್ಥಳಕ್ಕೆ ತಲುಪಿದಾಗ ನನ್ನ ಮಿತಿಗಳ ಅರಿವಾಯಿತು.ಅದಕ್ಕಿಂತ ಹೆಚ್ಚಾಗಿ ಆ ಕಾಲದ ಛಾಯಾಗ್ರಹಣದ ತಾಂತ್ರಿಕತೆಯಿಂದ ಭಾರತವೆಷ್ಟು ದೂರದಲ್ಲಿದೆ ಎಂಬುದೂ ಅರ್ಥವಾಯಿತು.

ಆ ಕಾಲಕ್ಕೆ ಭಾರತದಲ್ಲಿ ಲಭ್ಯವಿದ್ದ ಅತ್ಯುತ್ತಮ ಫಿಲ್ಮ್ ಎಂದರೆ ‘400 ಎಎಸ್ಎ’ ಸಾಮರ್ಥ್ಯದ್ದು ಮಾತ್ರ. ಒಲಿಂಪಿಕ್ಸ್‌ನ ಛಾಯಾಗ್ರಾಹಕರ ಅಗತ್ಯಗಳ ಪ್ರಾಯೋಜಕತ್ವ ವಹಿಸಿದ್ದುದು ಪ್ರಖ್ಯಾತ ಫಿಲ್ಮ್ ತಯಾರಕ ಸಂಸ್ಥೆ ‘ಕೊಡಾಕ್’. ಅದು ತನ್ನ ಅತ್ಯುತ್ತಮ ಉತ್ಪನ್ನಗಳ ಸರಣಿಯನ್ನೇ ಅಲ್ಲಿ ಛಾಯಾಗ್ರಾಹಕರ ಬಳಕೆಗೆ ಉಚಿತವಾಗಿ ಒದಗಿಸುತ್ತಿತ್ತು.

ನಾನು ಅಲ್ಲಿಯತನಕ ನೋಡದೇ ಇದ್ದಷ್ಟು ಸಂವೇದನಾಶೀಲ ಫಿಲ್ಮ್‌ಗಳ ಸರಣಿ ಅಲ್ಲಿತ್ತು. ಇಲ್ಲಿ ನಾವು ಬಳಸುತ್ತಿದ್ದದ್ದು ಮೆಕ್ಯಾನಿಕಲ್ ಕ್ಯಾಮೆರಾಗಳು. ಅದರೊಳಗೆ ಎಲೆಕ್ಟ್ರಾನಿಕ್ ಸೌಕರ್ಯಗಳು ಇರುತ್ತಿದ್ದವಾದರೂ ಅದು ಅಲ್ಪ ಸ್ವಲ್ಪ ಮಾತ್ರ. ಅಭಿವೃದ್ಧಿ ಹೊಂದಿದ ದೇಶಗಳಿಂದ ಬಂದಿದ್ದ ಛಾಯಾಗ್ರಾಹಕರ ಬಳಿ ನಮ್ಮಲ್ಲಿ ಇದ್ದುದಕ್ಕಿಂತ ತಾಂತ್ರಿಕತೆಯಲ್ಲಿ ಬಹುಪಾಲು ಮುಂದಿದ್ದ ಉಪಕರಣಗಳಿದ್ದವು.

ಬೆಂಗಳೂರಿನಿಂದ ಹೊರಗೆ ನಡೆಯುವ ಕ್ರೀಡಾಕೂಟಗಳ ಚಿತ್ರ ತೆಗೆದು ಕಳುಹಿಸುವುದಕ್ಕೆ ನಮ್ಮಲ್ಲೊಂದಷ್ಟು ಉಪಕರಣಗಳಿದ್ದವು. ಅವುಗಳಲ್ಲಿ ಮುಖ್ಯವಾದುದು ‘ಪೋರ್ಟಬಲ್ ಎನ್‌ಲಾರ್ಜರ್’. ಆ ಕಾಲದ ಛಾಯಾಗ್ರಾಹಕರು ತಮ್ಮ ಹೊಟೇಲು ಕೋಣೆಯ ಬಾತ್‌ರೂಮ್‌ಗಳ ಕಿಟಕಿಗೆ ಕರಿಯ ಕಾಗದ ಅಂಟಿಸಿ ಡಾರ್ಕ್ ರೂಮ್ ಮಾಡಿಕೊಳ್ಳುತ್ತಿದ್ದರು.

ಕ್ರೀಡಾಕೂಟದ ಚಿತ್ರ ತೆಗೆದು ಹೊಟೇಲಿಗೆ ಹಿಂದಿರುಗಿ ‘ಡಾರ್ಕ್ ಬಾತ್ ರೂಮ್’ನಲ್ಲಿ ಫಿಲ್ಮ್ ಸಂಸ್ಕರಿಸಿ ಮುದ್ರಿಸಿ ಕಳುಹಿಸುತ್ತಿದ್ದರು. ಒಲಿಂಪಿಕ್ಸ್‌ನಲ್ಲೂ ಹೆಚ್ಚು ಕಡಿಮೆ ಇದೇ ಪ್ರಕ್ರಿಯೆ ಅಲ್ಪ ಸ್ವಲ್ಪ ಸುಧಾರಿತ ಮಾದರಿಯಲ್ಲಿರಬಹುದು ಎಂಬ ಊಹೆ ನನ್ನದಾಗಿತ್ತು. ಹಾಗಾಗಿಯೇ ಕ್ರೀಡಾಕೂಟದ ಚಿತ್ರಗಳನ್ನು ತೆಗೆಯಲು ಅವಶ್ಯವಿರುವಷ್ಟು ಫಿಲ್ಮ್ ಖರೀದಿಸಿದ್ದೆ. ಫಿಲ್ಮ್ ಸಂಸ್ಕರಣೆಗೆ, ಚಿತ್ರವನ್ನು ಮುದ್ರಿಸುವುದಕ್ಕೆ ಅಗತ್ಯವಿರುವ ಉಪಕರಣಗಳನ್ನೆಲ್ಲಾ ಒಂದು ದೊಡ್ಡ ಸೂಟ್‌ಕೇಸ್‌ನಲ್ಲಿ ಹೊತ್ತುಕೊಂಡು ಹೋಗಿದ್ದೆ.

ಆದರೆ ಒಲಿಂಪಿಕ್ಸ್‌ನಲ್ಲಿ ಛಾಯಾಗ್ರಾಹಕರಿಗೆ ಇಂಥ ಯಾವುದೇ ಜಂಜಾಟಗಳಿಲ್ಲದಂಥ ವ್ಯವಸ್ಥೆಯನ್ನು ‘ಕೊಡಾಕ್’ ಮಾಡಿರುತ್ತಿತ್ತು. ವಿಶ್ವದ ಅತ್ಯುತ್ತಮ ಫಿಲ್ಮ್ ಸಂಸ್ಕರಣಾ ಸೇವೆ, ಅತ್ಯುತ್ತಮ ಫಿಲ್ಮ್‌ಗಳು, ಅತ್ಯುತ್ತಮ ಮುದ್ರಣ ವ್ಯವಸ್ಥೆ ಅಲ್ಲಿತ್ತು. ನಾವು ಬಳಸಿದಷ್ಟೂ ಫಿಲ್ಮ್‌ಗೆ ಪ್ರತಿಯಾಗಿ ನಮ್ಮ ಆಯ್ಕೆಯ ಫಿಲ್ಮ್‌ಗಳು ಕೊಡಾಕ್‌ನಿಂದ ಉಚಿತವಾಗಿಯೇ ದೊರೆಯುತ್ತಿದ್ದವು. 

ಇದೆಲ್ಲದರ ಜೊತೆಗೆ ಒಲಿಂಪಿಕ್ಸ್ ಮಾಧ್ಯಮ ಕೇಂದ್ರದ ಕೊರಿಯರ್ ಸೇವೆಯಂತೂ ಅದ್ಭುತ. ಒಂದೊಂದು ಕ್ರೀಡೆ ನಗರದ ಒಂದೊಂದು ಭಾಗದಲ್ಲಿ ನಡೆಯುತ್ತಿರುತ್ತದೆ. ಅಲ್ಲಲ್ಲಿ ತೆಗೆದ ಚಿತ್ರಗಳನ್ನು ಅಲ್ಲಿಂದಲೇ ತಕ್ಷಣ ಸಂಸ್ಕರಣೆಗೆ ಕಳುಹಿಸುವುದಕ್ಕೆ ಈ ವ್ಯವಸ್ಥೆ. ಎಲ್ಲ ಛಾಯಾಗ್ರಾಹಕರ ಬಳಿಯೂ ಅವರ ಹೆಸರು ಮತ್ತು ನೋಂದಣಿ ಸಂಖ್ಯೆ ಇರುವ ಲಕೋಟೆಗಳಿರುತ್ತಿದ್ದವು. ಅವುಗಳಲ್ಲಿ ಫಿಲ್ಮ್ ರೋಲ್ ಹಾಕಿ ಕೊಟ್ಟರೆ ನಾವು ಕೂಟಗಳನ್ನು ಮುಗಿಸಿ ಮಾಧ್ಯಮ ಕೇಂದ್ರಕ್ಕೆ ಹಿಂದಿರುಗುವ ಹೊತ್ತಿಗೆ ಸಂಸ್ಕರಣೆಗೊಂಡು ಸಿದ್ಧವಾಗಿರುತ್ತಿದ್ದವು.

ದಿನದ ಎಲ್ಲಾ ಸ್ಪರ್ಧೆಗಳು ಮುಗಿದು ಮಾಧ್ಯಮ ಕೇಂದ್ರ ತಲುಪುವ ಹೊತ್ತಿಗೆ ಹೃದಯಬಡಿತ ಹೆಚ್ಚಿರುತ್ತಿತ್ತು. ಆತಂಕದಲ್ಲೇ ಸಂಸ್ಕರಿತ ಫಿಲ್ಮ್‌ನ ಲಕೋಟೆ ತೆರೆಯುತ್ತಿದ್ದೆ. ಫಿಲ್ಮ್ ಕ್ಯಾಮೆರಾಗಳಲ್ಲಿ ಛಾಯಾಗ್ರಹಣ ಮಾಡಿದವರಿಗೆಲ್ಲಾ ಈ ಆತಂಕದ ಪರಿಚಯವಿರುತ್ತದೆ. ಒಂದೊಂದೇ ಫ್ರೇಮ್‌ಗಳನ್ನು ಪರಿಶೀಲಿಸುತ್ತಾ ಹೋದಂತೆ ಖುಷಿ, ಬೇಸರ, ದುಃಖ, ನಿರಾಶೆಗಳು ಆಯಾ ಫ್ರೇಮ್‌ಗಳಲ್ಲಿ ಕಾಣುವ ಚಿತ್ರಕ್ಕೆ ಅನುಗುಣವಾಗಿ ನನ್ನನ್ನು ಆವರಿಸಿಕೊಳ್ಳುತ್ತಿದ್ದವು.

ಇದರ ಹಿಂದೆಯೇ ಉತ್ತಮ ಚಿತ್ರಗಳನ್ನು ಪ್ಲಾಸ್ಟಿಕ್‌ನ ಕ್ಲಿಪ್ ಹಾಕಿ ಗುರುತು ಮಾಡಿಟ್ಟುಕೊಂಡು ಪ್ರಿಂಟ್ ತೆಗೆಯಲು ಡಾರ್ಕ್ ರೂಮ್‌ಗೆ ಓಡುವ ಧಾವಂತ. ಅಲ್ಲಿದ್ದದ್ದು ದೊಡ್ಡ ದೊಡ್ಡ ಡಾರ್ಕ್ ರೂಮ್‌ಗಳು. ಹದಿನೈದಕ್ಕೂ ಹೆಚ್ಚು ಎನ್‌ಲಾರ್ಜರ್‌ಗಳು ಅಲ್ಲಿದ್ದವು. ಆದರೆ ಮುದ್ರಿಸುವ ತಂತ್ರ ಮಾತ್ರ ಸಂಪೂರ್ಣ ಭಿನ್ನ. ಅಲ್ಲಿಯತನಕ ಟ್ರೇಗಳಲ್ಲಿ ಬ್ರೊಮೈಡ್ ಸಂಸ್ಕರಿಸುತ್ತಿದ್ದ ನನಗೆ ಇದು ಹೊಸತಾಗಿತ್ತು.

‘ಆರ್.ಸಿ. ಪೇಪರ್’ ಎಂದು ಕರೆಯುತ್ತಿದ್ದ ಉತ್ತಮ ಗುಣಮಟ್ಟದ ಕಾಗದದಲ್ಲಿ ನಾವು ಎಕ್ಸ್‌ಪೋಸ್ ಮಾಡುತ್ತಿದ್ದ ಚಿತ್ರಗಳು ಆಟೋಮ್ಯಾಟಿಕ್ ಸಂಸ್ಕರಣೆಗೆ ಒಳಪಟ್ಟು ದೊರೆಯುತ್ತಿದ್ದವು. ಈ ಹೊತ್ತಿಗೆ ಛಾಯಾಗ್ರಹಣದ ಪ್ರಕ್ರಿಯೆಯೇನೋ ಮುಗಿಯುತ್ತಿತ್ತು. ಆದರೆ ಆ ಕ್ಷಣವೇ ಆರಂಭವಾಗುತ್ತಿದ್ದದ್ದು ಚಿತ್ರಗಳನ್ನು ರವಾನಿಸುವ ಗಡಿಬಿಡಿ.

ದೂರವಾಣಿಯಲ್ಲಿ ಅಂತರರಾಷ್ಟ್ರೀಯ ಕರೆ ಮಾಡಿ ಬೆಂಗಳೂರು ಕಚೇರಿಯಲ್ಲಿರುವ ‘ಫೋಟೊಫ್ಯಾಕ್ಸ್’ ಜೊತೆಗೆ ಸಂಪರ್ಕ ಸಾಧಿಸಬೇಕಾಗಿತ್ತು. ಆಮೇಲೆ ಒಂದೊಂದು ಫೋಟೊ ರವಾನೆಗಾಗಿ ಸುಮಾರು ಏಳರಿಂದ ಒಂಬತ್ತು ನಿಮಿಷ ಕಾಯಬೇಕಾಗಿತ್ತು. ಈ ಮಧ್ಯೆ ಸಂಪರ್ಕ ಕಡಿತಗೊಂಡರೆ ಮತ್ತೆ ಎಲ್ಲವನ್ನೂ ಮೊದಲಿನಿಂದ ಆರಂಭಿಸಬೇಕಾದ ಕಷ್ಟ. ಐದಾರು ಫೋಟೊಗಳು ಕಚೇರಿ ತಲುಪಿಸುವುದಕ್ಕೆ ಸುಮಾರು ಒಂದೂವರೆ ಗಂಟೆ ಸಮಯ ಹಿಡಿಯುತ್ತಿತ್ತು.

‘ಸೋಲ್ ಒಲಿಂಪಿಕ್ಸ್‌’ನಲ್ಲಿ ನಾನು ತೆಗೆದ ಚಿತ್ರಗಳೆಲ್ಲವೂ ಮರುದಿನವೇ ಮುದ್ರಣಗೊಳ್ಳುತ್ತಿದ್ದವು ಎನ್ನುವುದು ನನಗೊಂದು ಬಗೆಯ ಸಂತೋಷ ತಂದುಕೊಡುತ್ತಿತ್ತು.‘ಸೋಲ್ ಒಲಿಂಪಿಕ್ಸ್’ ಕ್ರೀಡಾಕೂಟ ಮುಗಿದಾಗ ನಾನಿಲ್ಲಿಂದ ಖರೀದಿಸಿ ಕೊಂಡೊಯ್ದ ಫಿಲ್ಮ್‌ ಬಹುಪಾಲು ಬಳಕೆಯಾಗದೆ ಉಳಿದಿತ್ತು. ಅವುಗಳ ಜೊತೆಗೆ ಛಾಯಾಗ್ರಹಣ ಕ್ಷೇತ್ರದ ಅತ್ಯಾಧುನಿಕ ಬೆಳವಣಿಗೆಗಳ ಮಾಹಿತಿಯೊಂದಿಗೆ ನಾನು ಭಾರತಕ್ಕೆ ಹಿಂದಿರುಗಿದೆ. ಈ ಅರಿವಿನಲ್ಲಿ ಕೊಡಾಕ್‌ನ ಕಾಣಿಕೆ ದೊಡ್ಡದು.

ಪ್ರತಿಯೊಂದು ಸ್ಪರ್ಧೆ ನಡೆಯುವ ಸ್ಥಳದ ಬೆಳಕಿನ ವ್ಯವಸ್ಥೆಯನ್ನು ಅವರು ಅಧ್ಯಯನ ಮಾಡಿ, ಯಾವ ವೇಗದ ಫಿಲ್ಮ್‌ನಲ್ಲಿ ಶೂಟ್ ಮಾಡಬೇಕೆಂಬ ಮಾಹಿತಿ ನೀಡುತ್ತಿದ್ದರು.ಸಂಸ್ಕರಣೆಯ ಸಂದರ್ಭದಲ್ಲಿ ಚಿತ್ರಗಳನ್ನು ಹೇಗೆ ಉತ್ತಮಪಡಿಸಬಹುದು ಎಂಬುದಕ್ಕೆ ಅವರು ಒದಗಿಸುತ್ತಿದ್ದ ತಾಂತ್ರಿಕ ಮಾಹಿತಿಯಂತೂ ಅನನ್ಯ. ಇದನ್ನು ‘ಪುಶ್ ಪ್ರೊಸೆಸಿಂಗ್’ ಎಂದು ಕರೆಯುತ್ತಾರೆ. ಹಿಂದಿರುಗಿ ಬಂದು ವಿವರಿಸಿದರೆ ಇಲ್ಲಿನ ಅನೇಕ ಹಿರಿಯ ಛಾಯಾಗ್ರಾಹಕರು ‘ಇದು ಹೇಗೆ ಸಾಧ್ಯ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ನನ್ನ ಚಿತ್ರಗಳನ್ನು ನೋಡಿದ ಮೇಲಷ್ಟೇ ಅವರಿಗಿದರಲ್ಲಿ ನಂಬಿಕೆ ಬಂದದ್ದು.

‘ಪುಶ್‌ ಪ್ರೊಸೆಸಿಂಗ್’ ಎಂದರೆ, ಉದಾಹರಣೆಗೆ 400 ಎಎಸ್ಎ ವೇಗದ ಫಿಲ್ಮ್ ಬಳಸುತ್ತಿದ್ದೇವೆ ಎಂದುಕೊಳ್ಳೋಣ. ಇದರ ಸಂಸ್ಕರಣೆಯಲ್ಲಿ ಸಂವೇದನೆಯನ್ನು ದುಪ್ಪಟ್ಟುಗೊಳಿಸಲು ಸಾಧ್ಯವಿದೆ. ಎರಡು ಸ್ಟಾಪ್ ಪುಶ್ ಎಂದರೆ, ಫಿಲ್ಮ್‌ನ ಸಂವೇದನೆಯ ವೇಗ ದುಪ್ಪಟ್ಟಾಗುತ್ತದೆ. ಆಗ ಕ್ಯಾಮೆರಾದ ಶಟರ್ ಸ್ಪೀಡ್ ದುಪ್ಪಟ್ಟು ಮಾಡಬಹುದು. ಬಹಳ ವೇಗದ ಚಲನೆಗಳಿರುವ ಆಟಗಳ ಚಿತ್ರ ತೆಗೆಯಲು ಇದು ಅನುಕೂಲ. ಹೀಗೆ ತೆಗೆದ ಚಿತ್ರಗಳನ್ನು ವಿಶೇಷ ರೀತಿಯಲ್ಲಿ ಸಂಸ್ಕರಿಸಬೇಕಾಗುತ್ತದೆ.ಕೊಡಾಕ್‌ನ ಬಳಿ ಇದ್ದ ತಂತ್ರಜ್ಞಾನ ಇದನ್ನು ಸಾಧ್ಯ ಮಾಡಿತ್ತು. ನಾನೂ ಈ ತಂತ್ರವನ್ನು ಬಳಸಲಾರಂಭಿಸಿದೆ.   

ಒಲಿಂಪಿಕ್ಸ್ ಛಾಯಾಗ್ರಹಣ ಎಂದರೆ ವಿಶ್ವದ ಪ್ರಸಿದ್ಧ ಛಾಯಾಗ್ರಹಣ ಪರಿಣತರೆಲ್ಲಾ ಸೇರುವ ಸ್ಥಳದಲ್ಲಿ ಕೆಲಸ ಮಾಡುವುದು ಎಂದರ್ಥ. ನಾನು ‘ಟೈಮ್–ಲೈಫ್’ ಬಳಗದ ಪ್ರಖ್ಯಾತ ಕ್ರೀಡಾ ಛಾಯಾಗ್ರಾಹಕ ನೀಲ್ ಲೀಫರ್‌ ಭುಜಕ್ಕೆ ಭುಜ ಸೇರಿಸಿ ಕೆಲಸ ಮಾಡಲು ಸಾಧ್ಯವಾಗಿದ್ದು ಒಲಿಂಪಿಕ್ಸ್ ಛಾಯಾಗ್ರಹಣದಿಂದ. ಹಾಗೆಯೇ ನಮಗಿಂತ ಕಡಿಮೆ ತಿಳಿವಳಿಕೆ ಇರುವವರೂ ಇರುತ್ತಾರೆ. ಆಫ್ರಿಕಾದ ಕೆಲ ದೇಶಗಳಿಂದ ಬರುವ ಛಾಯಾಗ್ರಾಹಕರ ಪರಿಸ್ಥಿತಿ ನಮಗಿಂತ ಕೆಟ್ಟದಾಗಿರುತ್ತದೆ.

ಸ್ಪರ್ಧೆಯಿಂದ ಸ್ಪರ್ಧೆಗೆ ತಂತ್ರವನ್ನು ಬದಲಾಯಿಸಿಕೊಳ್ಳುವ ಛಾಯಾಗ್ರಹಣದ ಲಹರಿ ನನಗೂ ಒಂದು ರೀತಿಯ ಸಂತೋಷ ಕೊಡುತ್ತಿತ್ತು. ಈ ಹೊತ್ತಿಗಾಗಲೇ ಒಂದು ಒಲಿಂಪಿಕ್ಸ್‌ನ ಅನುಭವ ಇದ್ದುದರಿಂದ ಹಿಂದಿಗಿಂತಲೂ ಹೆಚ್ಚು ಆತ್ಮವಿಶ್ವಾಸದೊಂದಿಗೆ 1992ರಲ್ಲಿ ಬಾರ್ಸಿಲೋನಾಕ್ಕೆ ಹೋದೆ. ಅಲ್ಲಿ ಮತ್ತಷ್ಟು ಆಶ್ಚರ್ಯಗಳು ಕಾದಿದ್ದವು.

ಆ ಹೊತ್ತಿಗಾಗಲೇ ಬಣ್ಣದ ಚಿತ್ರಗಳು ವ್ಯಾಪಕವಾಗುತ್ತಿದ್ದವು. ಆದರೆ ಭಾರತದ ಪತ್ರಿಕೆಗಳಿನ್ನೂ ಬಣ್ಣದ ಮುದ್ರಣವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರಲಿಲ್ಲ. ಆಗ ಕಲರ್ ಫಿಲ್ಮ್ ಬಳಸಿ ಫೋಟೊ ತೆಗೆದರೂ ಅದನ್ನು ಕಪ್ಪುಬಿಳುಪಿನಲ್ಲಿ ಮುದ್ರಿಸಬಹುದಾದ ಫಿಲ್ಟರ್‌ಗಳು ಮತ್ತು ಪೇಪರ್‌ಗಳು ಲಭ್ಯವಿದ್ದವು. ಈ ಅರಿವಿನೊಂದಿಗೆ ಬಾರ್ಸಿಲೋನಾಕ್ಕೆ ಹೋಗಿದ್ದ ನಾನು ಹಿಂದಿನ ಸಾರಿಯಂತೆಯೇ ಬೇಸ್ತುಬಿದ್ದೆ. ಅಲ್ಲಿ ಚಿತ್ರಗಳನ್ನು ಮುದ್ರಿಸುವುದಕ್ಕೆ ಎನ್‌ಲಾರ್ಜರ್‌ಗಳೇ ಇರಲಿಲ್ಲ.

ಅದರ ಬದಲಿಗೆ ಅಲ್ಲಿದ್ದದ್ದು ಡಿಜಿಟಲ್ ಪ್ರಿಂಟರ್‌ಗಳು. ಫಿಲ್ಮ್‌ಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ತೆರೆಯಲ್ಲಿ ನೋಡಿ ಅದನ್ನು ಮುದ್ರಣ ಯಂತ್ರಕ್ಕೆ ಕಳುಹಿಸುತ್ತಿದ್ದರು. ನಾನೂ ಕಲರ್ ಫಿಲ್ಮ್‌ನಲ್ಲೇ ಶೂಟ್ ಮಾಡಲು ತೀರ್ಮಾನಿಸಿದ್ದೆ, ಆದರೆ ನನಗೆ ಮುದ್ರಿತ ಚಿತ್ರಗಳು ಕಪ್ಪು ಬಿಳುಪಿನಲ್ಲೇ ಬೇಕಿತ್ತು. ಏಕೆಂದರೆ ನನ್ನಲ್ಲಿದ್ದ ಫೋಟೊ ಕಳುಹಿಸುವ ಉಪಕರಣ ಸೋಲ್‌ನಲ್ಲಿ ಇದ್ದಂತೆಯೇ ಇತ್ತು. ಅದರಲ್ಲಿ ಕಪ್ಪು ಬಿಳುಪು ಚಿತ್ರಗಳನ್ನಷ್ಟೇ ಕಳುಹಿಸಬಹುದಿತ್ತು. ಆದರೆ ಕೊಡಾಕ್ ಆ ಹೊತ್ತಿಗೆ ಬಣ್ಣ ಬಳಿದುಕೊಂಡಿತ್ತು.

ಕೊಡಾಕ್‌ನ ತಜ್ಞರದ್ದು ಬಹಳ ದೊಡ್ಡ ಮನಸ್ಸು. ಅವರು ಬಹಳ ಕಷ್ಟಪಟ್ಟು ನನಗಾಗಿ ಕಪ್ಪುಬಿಳುಪು ಪ್ರಿಂಟ್ ಕೊಡುವ ವ್ಯವಸ್ಥೆ ಮಾಡಿದರು. ನನ್ನ ಫೋಟೋಗಳನ್ನು ಮುದ್ರಿಸುವಾಗ ಕಾರ್ಟ್ರಿಜ್ ಬದಲಾಯಿಸಿ ಪ್ರಿಂಟ್ ಮಾಡಿ ಕೊಡುತ್ತಿದ್ದರು. ಆ ಕಾಲದ ದೊಡ್ಡ ಸಮಸ್ಯೆ ಎಂದರೆ ಈಗಿನಂತೆ ಮಾಹಿತಿ ದೊರೆಯುತ್ತಿರಲಿಲ್ಲ. ಆಗ ನಮಗೆ ಭಾರತದಲ್ಲಿ ದೊರೆಯುತ್ತಿದ್ದುದು ಛಾಯಾಗ್ರಹಣಕ್ಕೆ ಸಂಬಂಧಿಸಿದ ನಿಯತಕಾಲಿಕಗಳು ಮಾತ್ರ.

ಅವುಗಳು ಬಂದು ತಲುಪುವಾಗಲೇ ಸಾಕಷ್ಟು ತಡವಾಗಿರುತ್ತಿತ್ತು. ಈಗ ಮಾಹಿತಿಯ ಹರಿವಿಗೇನೂ ತೊಂದರೆ ಇಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಉಪಕರಣಗಳನ್ನು ಖರೀದಿಸುವುದಕ್ಕೆ ಹಿಂದಿನಂತೆ ಗ್ರೇ ಮಾರ್ಕೆಟ್, ಬ್ಲಾಕ್ ಮಾರ್ಕೆಟ್‌ಗಳನ್ನೇ ಅವಲಂಬಿಸಬೇಕಾಗಿಲ್ಲ.

1996ರಲ್ಲಿ ‘ಅಟ್ಲಾಂಟ ಒಲಿಂಪಿಕ್ಸ್’ ಹೊತ್ತಿಗೆ ನಾನು ಹಳೆಯ ಅನುಭವಗಳಿಂದ ಸಾಕಷ್ಟು ಪಾಠ ಕಲಿತಿದ್ದೆ. ಆ ಹೊತ್ತಿಗಾಗಲೇ ಆರ್ಥಿಕ ಉದಾರೀಕರಣ ಪ್ರಕ್ರಿಯೆಯೂ ಆರಂಭವಾಗಿದ್ದರಿಂದ ಮಾಹಿತಿಯ ಹರಿವಿನ ಜೊತೆಗೆ ಉಪಕರಣಗಳ ಲಭ್ಯತೆಯೂ ಮೊದಲಿಗಿಂತ ಸುಲಭವಾಗಿತ್ತು. ಈ ಹೊತ್ತಿಗೆ ಮುದ್ರಿತ ಫೋಟೋಗಳನ್ನು ಕಳುಹಿಸುವ ವಿಧಾನ ಇಲ್ಲವಾಗಿತ್ತು. ಆದರೆ ಫಿಲ್ಮ್ ಇನ್ನೂ ಉಳಿದುಕೊಂಡಿತ್ತು.

ನೆಗೆಟಿವ್ ಸ್ಕ್ಯಾನ್ ಮಾಡುವ ಉಪಕರಣಗಳು ಬಂದಿದ್ದವು. ನನ್ನಲ್ಲೂ ಒಂದು ನಿಕಾನ್ ಕಂಪೆನಿಯ ನೆಗೆಟಿವ್ ಸ್ಕ್ಯಾನರ್ ಇತ್ತು. ಅದೊಂದು ಕಲರ್ ಫೈಲ್ ಆಗಿ ದೊರೆಯುತ್ತಿತ್ತು. ಅದನ್ನು ದೂರವಾಣಿ ಲೈನ್‌ನಲ್ಲೇ ಫೈಲ್ ಟ್ರಾನ್ಸ್‌ಫರ್ ಪ್ರೊಟೊಕಾಲ್ ಬಳಸಿ ಕಳುಹಿಸುತ್ತಿದ್ದೆ. ಇದು ಮುಂದೆ ‘ಸಿಡ್ನಿ ಒಲಿಂಪಿಕ್ಸ್‌’ನಲ್ಲೂ (2000) ಮುಂದುವರಿಯಿತು. ಈ ಹೊತ್ತಿಗಾಗಲೇ ಡಿಜಿಟಲ್ ಕ್ಯಾಮೆರಾಗಳು ಬಂದಿದ್ದವಾದರೂ ವೃತ್ತಿಪರರಿನ್ನೂ ಅದನ್ನು ವ್ಯಾಪಕವಾಗಿ ಬಳಸುತ್ತಿರಲಿಲ್ಲ. ‘ಸಿಡ್ನಿ ಒಲಿಂಪಿಕ್ಸ್’ ನೆಗೆಟಿವ್ ಸ್ಕ್ಯಾನರ್‌ನಲ್ಲೇ ಮುಗಿಯಿತು.

2004ರಲ್ಲಿ ನಡೆದ ‘ಅಥೆನ್ಸ್ ಒಲಿಂಪಿಕ್ಸ್‌’ನಲ್ಲಿ ಮೊದಲ ಬಾರಿಗೆ ನಾನು ಡಿಜಿಟಲ್ ಕ್ಯಾಮೆರಾ ಬಳಸಿದೆ. ಅಲ್ಲಿಂದ ಮುಂದಕ್ಕೆ ಡಿಜಿಟಲ್ ಕ್ಯಾಮೆರಾಗಳೇ. ಆದರೆ ಸಹಸ್ರಮಾನದ ಒಲಿಂಪಿಕ್ಸ್ ತನಕ ಛಾಯಾಗ್ರಹಣದಲ್ಲಿ ಇದ್ದ ಸಸ್ಪೆನ್ಸ್ ಇಲ್ಲವಾಯಿತು. ಸಂಸ್ಕರಿತ ನೆಗೆಟಿವ್‌ಗಳನ್ನು ನೋಡುವಾಗ ಆಗುತ್ತಿದ್ದ ಖುಷಿ, ಬೇಸರ, ನಿರಾಶೆ, ದುಃಖದ ಮಿಶ್ರಭಾವದ ಅನುಭವ ಎಂದೆಂದಿಗೂ ಇಲ್ಲವಾಗಿಬಿಟ್ಟಿತು. ಕೊಡಾಕ್ ಕಂಪೆನಿಯೂ ಮುಚ್ಚಿ ಹೋಯಿತು. ಫಿಲ್ಮ್‌ಗಳನ್ನು ಸಂಸ್ಕರಣೆಗೆ ಕಳುಹಿಸುವ ಕೊರಿಯರ್ ವ್ಯವಸ್ಥೆಯ ಅಗತ್ಯವೇ ಇಲ್ಲದಂತಾಯಿತು.

ಡಿಜಿಟಲ್ ಕ್ಯಾಮೆರಾಗಳು ನಮ್ಮ ಕೆಲಸದ ಫಲಿತಾಂಶವನ್ನು ಆ ಕ್ಷಣವೇ ನೀಡುತ್ತವೆ ಎಂಬುದೇನೋ ನಿಜ. ಫಲಿತಾಂಶ ನೋಡುತ್ತಾ ನಿಂತರೆ ಅತ್ಯುತ್ತಮ
ವಾದ ಕ್ಷಣವೊಂದನ್ನು ಕಳೆದುಕೊಳ್ಳುವ ಅಪಾಯವೂ ಇತ್ತು. ಇದು ಮತ್ತೊಂದು ಬಗೆಯ ಸವಾಲು. ಈಗ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ‘ಔಟ್ ಆಫ್ ಫೋಕಸ್’ ಆಗಿಬಿಡುವ ಸಾಧ್ಯತೆಯೇ ಇಲ್ಲದಂತೆ ಆಟೋಫೋಕಸ್ ವ್ಯವಸ್ಥೆ ಇದೆ. ಅದನ್ನು ಸರಿಯಾಗಿ ಸೆಟ್ ಮಾಡುವುದೇ ಒಂದು ಸವಾಲು. ಕ್ಯಾಮೆರಾ ಈಗ ಅತ್ಯಂತ ಸಂಕೀರ್ಣವೂ ಸೂಕ್ಷ್ಮವೂ ಆದ ಸವಲತ್ತುಗಳ ಕಂಪ್ಯೂಟರಿನಂತಾಗಿಬಿಟ್ಟಿದೆ.

ನಾನು ಒಲಿಂಪಿಕ್ಸ್ ಛಾಯಾಗ್ರಹಣ ಆರಂಭಿಸಿದಾಗ ಭಾರತೀಯ ಕ್ರೀಡಾಳುಗಳ ಸಂಖ್ಯೆ ಕಡಿಮೆ ಇರುತ್ತಿತ್ತು. ಒಂದು ರೀತಿಯಲ್ಲಿ ಭಾರತೀಯ ಛಾಯಾಗ್ರಾಹಕರ ಕೆಲಸ ಸುಲಭವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆ ಬಹಳ ವಿಸ್ತಾರಗೊಂಡಿದೆ. ಹಾಕಿಯನ್ನು ಹೊರತುಪಡಿಸಿದರೆ ಭಾರತಕ್ಕೆ ಬೇರೆ ಯಾವುದಾದರೂ ಕ್ರೀಡೆಯಲ್ಲಿ ಪದಕ ಬರಬಹುದೆಂದು ಊಹಿಸಲೂ ಸಾಧ್ಯವಿರುತ್ತಿರಲಿಲ್ಲ.

ಈಗಿನ ಪರಿಸ್ಥಿತಿ ಭಿನ್ನ. ಆಯ್ಕೆ ಬಹಳ ಸೂಕ್ಷ್ಮವಾಗಿರಬೇಕು. ‘ಅಟ್ಲಾಂಟಾ ಒಲಿಂಪಿಕ್ಸ್‌’ನಲ್ಲಿ ನಾವೆಲ್ಲಾ ಹಾಕಿ ಸ್ಪರ್ಧೆಯ ಚಿತ್ರ ತೆಗೆಯುತ್ತಿದ್ದೆವು. ನಮ್ಮ ಹಾಕಿ ತಂಡ ಸೋತಿತು. ಅಷ್ಟೇ ಅಲ್ಲ, ಕರ್ಣಂ ಮಲ್ಲೇಶ್ವರಿ ಅವರು ವೇಟ್ ಲಿಫ್ಟಿಂಗ್‌ ಪದಕ ಗಳಿಸಿದ್ದನ್ನು ಸೆರೆಹಿಡಿಯಲು ಸಾಧ್ಯವಾಗಲೇ ಇಲ್ಲ. ಒಂದು ರೀತಿಯಲ್ಲಿ ಈ ಆಯ್ಕೆ ಎಂಬುದು ಅದೃಷ್ಟದ ಆಟವೂ ಆಗಿಬಿಡುತ್ತದೆ.

ಎಲ್ಲವೂ ಸರಿಯಾಗಿದ್ದಾಗಲೂ ಅದೃಷ್ಟ ಕೈಕೊಟ್ಟು ಬಿಡಬಹುದು. ಲಾಂಗ್ ಜಂಪ್, ಜಿಮ್ನಾಸ್ಟಿಕ್ಸ್ ಮತ್ತು ಈಜಿನಂಥ ಸ್ಪರ್ಧೆಗಳ ಚಿತ್ರ ತೆಗೆಯುವುದು ಬಹಳ ಕಷ್ಟ. ಒಂದು ದಿಕ್ಕಿನಿಂದಷ್ಟೇ ಚಿತ್ರ ತೆಗೆಯಲು ಅವಕಾಶವಿರುತ್ತದೆ. ಕ್ರೀಡಾಳುಗಳು ನಮ್ಮಿಂದ ಬಹಳ ದೂರದಲ್ಲಿರುತ್ತಾರೆ. ಛಾಯಾಗ್ರಾಹಕರಿಗೆ ಮೀಸಲಿಟ್ಟಿರುವ ಸ್ಥಳವೂ ಚಿಕ್ಕದಾಗಿರುತ್ತದೆ. ನಾವು ‘ವ್ಯಾಂಟೇಜ್ ಪಾಯಿಂಟ್’ ಎಂದು ಕರೆಯಬಹುದಾದ ಸ್ಥಳ ದೊರೆಯುವುದು ಬಹಳ ಕಷ್ಟ.

ನನ್ನ ಮಟ್ಟಿಗೆ ಈಜು ಸ್ಪರ್ಧೆಯ ಛಾಯಾಗ್ರಹಣ ಬಹುದೊಡ್ಡ ಸವಾಲು. ಬೇರೆ ಎಲ್ಲಾ ಕ್ರೀಡೆಗಳಲ್ಲಿ ಕ್ರೀಡಾಳುವಿನ ಇಡೀ ದೇಹ ನಮಗೆ ಕಾಣಿಸುತ್ತಿರುತ್ತದೆ. ಆದರೆ ಈಜಿನಲ್ಲಿ ಕ್ರೀಡಾಳುವಿನ ಮುಖವಷ್ಟೇ ನೀರಿನ ಮೇಲಿರುತ್ತದೆ. ‘ಬಟರ್ ಫ್ಲೈ’ ಮತ್ತು ‘ಬ್ರೆಸ್ಟ್ ಸ್ಟ್ರೋಕ್’ ಮಾದರಿಗಳ ಚಿತ್ರ ತೆಗೆಯುವುದು ಇದ್ದುದರಲ್ಲಿ ಸುಲಭ. ‘ಫ್ರೀ ಸ್ಟೈಲ್’ ಮಾದರಿಯ ಸ್ಪರ್ಧೆಗಳಲ್ಲಿ ಮುಖದ ಅರ್ಧಭಾಗವಷ್ಟೇ ಕಾಣಿಸುತ್ತಿರುತ್ತದೆ. ಫೋಟೊ ಸಿಗಲೂ ವ್ಯಕ್ತಿ ಯಾರೆಂದು ಗುರುತಿಸಲಾಗದ ಕಷ್ಟವಿರುತ್ತದೆ. ನೀರು ಚಿಮ್ಮುತ್ತಿರುತ್ತದೆ.

ಇಲ್ಲಿ ನೀರಿನಿಂದಲೂ ಬೆಳಕು ಪ್ರತಿಫಲಿಸುತ್ತಿರುತ್ತದೆ. ಹಾಗಾಗಿ ತಾಂತ್ರಿಕವಾಗಿಯೂ ಇದು ಕಷ್ಟ. ಈ ಎಲ್ಲದರ ಮಧ್ಯೆ ಒಂದು ಒಳ್ಳೆ ಫೋಟೊ ದೊರೆತರೆ ಅದರ ಹಿಂದೆ ಪರಿಣತಿಯಷ್ಟೇ ದೊಡ್ಡ ಪಾಲು ಅದೃಷ್ಟಕ್ಕೂ ಇರುತ್ತದೆ. ಈಜಿನ ಸ್ಪರ್ಧೆಯ ಒಳ್ಳೆಯ ಚಿತ್ರ ದೊರೆತರೆ ಅದಕ್ಕಿಂತ ದೊಡ್ಡ ಸಂತೋಷ ಕೊಡುವ ಸಂಗತಿ ಮತ್ತೊಂದಿಲ್ಲ.

ಜಿಮ್ನಾಸ್ಟಿಕ್ ಛಾಯಾಗ್ರಹಣ ಮತ್ತೊಂದು ಬಗೆಯ ಸಮಸ್ಯೆ ತಂದೊಡ್ಡುತ್ತದೆ. ಫ್ಲೋರ್ ಎಕ್ಸರ್‌ಸೈಸಸ್‌ ಬಹಳ ಕಷ್ಟ. ಕ್ರೀಡಾಳು ಬರುವಾಗ ಅಲ್ಲಿರುವ ಎಲೆಕ್ಟ್ರಾನಿಕ್ ಬೋರ್ಡ್‌ನಲ್ಲಿರುವ ಮಾಹಿತಿ ಬಿಟ್ಟರೆ ಬೇರೆ ಯಾವುದೇ ಬಗೆಯಲ್ಲಿ ಆಟಗಾರ ಯಾರೆಂದು ಗುರುತಿಸುವುದು ಕಷ್ಟ. ಒಂದೇ ಒಂದು ಸಾಧ್ಯತೆ ಎಂದರೆ ಆ ಕ್ರೀಡಾಪಟುವಿನ ಬಗ್ಗೆ ನಿಮಗೆ ಮೊದಲೇ ಗೊತ್ತಿರಬೇಕು.

ಕ್ರೀಡಾಳು ತನ್ನ ಕಸರತ್ತು ಆರಂಭಿಸುವ ಮೊದಲು ಆ ಫಲಕದ ಚಿತ್ರ ತೆಗೆದುಕೊಂಡರಷ್ಟೇ ಆತ/ಆಕೆ ಯಾರೆಂಬ ಮಾಹಿತಿ ಸರಿಯಾಗಿ ಗೊತ್ತಾಗುತ್ತದೆ. ಕಸರತ್ತು ಆರಂಭವಾದ ಮೇಲೆ ಆಚೀಚೆ ನೋಡಿದರೂ ಉತ್ತಮ ಚಿತ್ರದ ಸಾಧ್ಯತೆ ತಪ್ಪುತ್ತದೆ. ಕೆಲವೊಮ್ಮೆ ಫಲಕದ ಚಿತ್ರ ತೆಗೆಯಲು ಮರೆತು ಮತ್ತೆ ಒದ್ದಾಡಿದ್ದೂ ಇದೆ. ಪೋಲ್ ವಾಲ್ಟ್ ಕ್ರೀಡಾಪಟುಗಳಿಂದ ನಾವು ತುಂಬಾ ದೂರವಿರುವುದರಿಂದ ಅದರ ಸವಾಲುಗಳೇ ಬೇರೆ. ಆದರೆ ಅತ್ಯುತ್ತಮ ಚಿತ್ರಗಳು ದೊರೆಯುವುದೇ ಇಂಥ ಸವಾಲುಗಳಿರುವ ಕ್ರೀಡೆಗಳಲ್ಲಿ ಎಂಬುದೂ ನಿಜವೇ.

ಟೇಬಲ್ ಟೆನ್ನಿಸ್‌ನಂಥ ಕ್ರೀಡೆಗಳು ಹೊರಗಿನಿಂದ ನೋಡುವವರಿಗೆ ಬಹಳ ಸುಲಭದಲ್ಲಿ ಚಿತ್ರೀಕರಣಕ್ಕೆ ಸಿಗುವ ಆಟ ಅನ್ನಿಸುತ್ತದೆ. ಆದರೆ ಅಲ್ಲಿರುವ ಬೆಳಕಿನ ವ್ಯವಸ್ಥೆ ಬಹುದೊಡ್ಡ ಸವಾಲೊಡ್ಡುತ್ತದೆ. ಕ್ರೀಡಾಳುಗಳ ವೇಗ ಮತ್ತೊಂದು ಸವಾಲು. ಇದು ಬಾಕ್ಸಿಂಗ್ ಚಿತ್ರೀಕರಣದಲ್ಲೂ ಎದುರಾಗುವ ಸವಾಲು.

ಇವುಗಳನ್ನೆಲ್ಲಾ ಎದುರಿಸುವುದಕ್ಕೆ ತಂತ್ರಜ್ಞಾನ ಅನೇಕ ಸವಲತ್ತುಗಳನ್ನು ಒದಗಿಸಿದೆ. ಆದರೆ ಕೊನೆಗೂ ಒಳ್ಳೆಯ ಛಾಯಾಚಿತ್ರ ದೊರೆಯುವುದು ಛಾಯಾಗ್ರಾಹಕನ ಸಮಯ ಪ್ರಜ್ಞೆಯಿಂದ ಮಾತ್ರ. ಒಲಿಂಪಿಕ್ಸ್‌ನಂಥ ಕ್ರೀಡಾಕೂಟಗಳಲ್ಲಿ ಭಿನ್ನ ಬಗೆಯ ಆಟಗಳಿರುತ್ತವೆ.

ಒಂದೊಂದೂ ವಿಶಿಷ್ಟವೇ. ಅವುಗಳ ಛಾಯಾಗ್ರಹಣ ಮಾಡುವುದಕ್ಕೆ ಬೇಕಿರುವ ತಂತ್ರವೂ ಭಿನ್ನ. ನನಗೀಗ ಏಳು ಒಲಿಂಪಿಕ್ಸ್‌ಗಳ ಅನುಭವವಿದೆ ಎಂಬುದೇನೋ ನಿಜ. ಆದರೆ ಪ್ರತೀ ಬಾರಿಯೂ ಒಲಿಂಪಿಕ್ಸ್‌ ನನ್ನ ಮಿತಿಗಳನ್ನು ನನಗೇ ತೋರಿಸಿಕೊಟ್ಟಿದೆ. ಹಾಗಾಗಿ ಈ ಒಲಿಂಪಿಕ್ಸ್ ಕೂಡ ಒಂದು ಸವಾಲು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT