ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲವೆ ನಮ್ಮ ಬದುಕು...

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಪ್ರೀತಿಯ ಛಾಯೆಯೇ ಅಂಥದ್ದು.  ಅದು ಅವರಿಬ್ಬರಿಗೆ ಮಾತ್ರ ಕಾಣುವ ಗಾಢತೆ. ಕಣ್ಣು ಹಾಯಿಸಿದಷ್ಟೂ ದೂರ ತೆರೆದುಕೊಳ್ಳುವ ವಿಹಂಗಮ ದಾರಿ.  ಅದಕ್ಕೆ ಒಂದು ಪರಿಧಿ ಇಲ್ಲ, ಮಿತಿ ಇಲ್ಲ. ಒಮ್ಮೆ ಸಿನಿಕತೆ, ಮತ್ತೊಮ್ಮೆ ಧನ್ಯತೆ, ಮಗದೊಮ್ಮೆ ಗಾಢತೆ. ಹೆಜ್ಜೆ ಊರಿದಂತೆಲ್ಲ ಉರಿವ ಬೇಗೆ. ಬೇಡವೆಂದರೂ, ಬೇಕೆಂದರೂ ಹತ್ತಿರವೇ ನಿಲ್ಲುವ, ದೂರ ಸರಿಸಿದಷ್ಟೂ ಮನದಾಳದಲ್ಲಿ ನೆಲೆಯೂರುವ ಹಟ ಅದರದು.

‘ಪ್ರೀತಿ ಇಲ್ಲದ ಮೇಲೆ, ಹೂವು ಅರಳಿತು ಹೇಗೆ’ ಎಂದರು ಜಿ.ಎಸ್‌. ಶಿವರುದ್ರಪ್ಪ. ಪ್ರೀತಿ ಜಾಗತಿಕ ಸತ್ಯ ಎನ್ನುವುದು ಎಲ್ಲರಿಗೂ ಗೊತ್ತು. ಪ್ರೀತಿಯ ಜೊತೆಗಿನ ದ್ವೇಷವೂ ಅಷ್ಟೇ ಸತ್ಯವಾದುದು. ಶತಮಾನಗಳಿಂದಲೂ ಪ್ರೀತಿ ನರಳುತ್ತ, ನರಳಿಕೆಯಲ್ಲಿಯೇ ಬೆಳೆಯುತ್ತ ಬಂದಿದೆ. ಈ ಪ್ರೀತಿಗೆ ನೂರು ಮುಖ, ಸಾವಿರ ನೋಟ. ಒಬ್ಬೊಬ್ಬರ ಬಾಳಿನಲ್ಲಿ ಒಂದೊಂದು ತರಹ. ಈ ಪ್ರೀತಿಯ ಜೋಕಾಲಿ ಜೀಕಿ, ಬಾಳ ಬಂಡಿಎಳೆದು ದಡ ಸೇರುವುದೇ ಒಂದು ಧನ್ಯತೆ. ಹಾಗೆ ಸ್ನೇಹ ಸಾಗರದಾಚೆ, ಪ್ರೀತಿಯ ಗೂಡು ಕಟ್ಟಿ, ದಾಂಪತ್ಯದ ಬಂಡಿ ಎಳೆದು ದಶಕಗಳನ್ನು ಕಳೆದ ತಾರಾ ಜೋಡಿಗಳ ಅನುಭವ ಮಂಟಪ ಇಲ್ಲಿದೆ. ಸ್ನೇಹ, ಪ್ರೀತಿ ಮತ್ತು ಬಾಂಧವ್ಯದ ನಡುವಿನ ಸಣ್ಣ ಎಳೆಯನ್ನು ಬಿಚ್ಚುತ್ತ, ಪ್ರೀತಿ ಹಾಗೂ ದಾಂಪತ್ಯದ ಜವಾಬ್ದಾರಿಯುತ ನಡೆಯ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದ ಹಿರಿಯ ಜೀವಗಳ ಭಾವ ಬೆಸುಗೆ ಇದು.

‘ಬಾಂಧವ್ಯಕ್ಕೆ ಪ್ರೀತಿಯೇ ಮೂಲ’
ಪ್ರೀತಿ–ಪ್ರೇಮ–ಬಾಂಧವ್ಯ ಎನ್ನುವುದು ಒಂದು ದಿನದ ಸಂಭ್ರಮವಲ್ಲ. ಅದು ಪ್ರತಿದಿನದ ವ್ರತ. ಯಾವುದೇ ಸಂಬಂಧಕ್ಕೂ ಒಂದು ನಿರಂತರತೆ, ಬದ್ಧತೆ, ಜವಾಬ್ದಾರಿ ಇರಬೇಕು. ಅಂತಹ ಬಂಧ ಮಾತ್ರ ಚಿರಕಾಲ ಉಳಿಯುತ್ತದೆ. ಸ್ನೇಹ ಪ್ರೀತಿಯ ಮೂಲ, ಪ್ರೀತಿ ಬಾಂಧವ್ಯದ ಮೂಲ. ಪ್ರೀತಿ ಇಲ್ಲದೆ ನಾವೇನೂ ಮಾಡಲಾಗದು. ಆದರೆ ಮದುವೆ ಎನ್ನುವ ಬಾಂಧವ್ಯ ಬೆಳೆಸಬೇಕಾದರೆ ಇನ್ನೂ ಹೆಚ್ಚಿನ ಹೊಣೆಗಾರಿಕೆ ಬೇಕಾಗುತ್ತದೆ. ವಾದ–ವಿವಾದ, ವಿರಸ, ವಿರೋಧ, ಭಿನ್ನಾಭಿಪ್ರಾಯ ಎಲ್ಲವನ್ನು ದಾಟಿಯೇ ದಾಂಪತ್ಯ ಗಟ್ಟಿಗೊಳ್ಳುತ್ತ ಹೋಗುವುದು. ಆದರೆ ಏನೇ ಬಂದರೂ ದಾಂಪತ್ಯದ ಮೂಲ, ಅಂದರೆ ‘ಪ್ರೀತಿ’ ಗಟ್ಟಿಯಾಗಿರಬೇಕು. ನಮ್ಮ ದಾಂಪತ್ಯ ಮೂರು ದಶಕಗಳನ್ನು ದಾಟಿ ನಿಲ್ಲಲು ಇಂಥದ್ದೊಂದು ಗಟ್ಟಿ ಅಡಿಪಾಯವೇ ಕಾರಣ. ನಾವೂ ಸಾಕಷ್ಟು ಕಷ್ಟಗಳನ್ನು ಕಂಡಿದ್ದೇವೆ, ನೋವುಗಳನ್ನು ದಾಟಿದ್ದೇವೆ. ಆದರೆ ಮೂಲ ದೃಢವಾಗಿತ್ತು. ಬಾಂಧವ್ಯ ಗಟ್ಟಿಯಾಗುತ್ತ ಬಂದಿತು. ಇಂದಿಗೂ ಅನಂತನನ್ನು ಪಡೆದ ನಾನು ಧನ್ಯೆ ಅನ್ನಿಸಲು ಇವೇ ಕಾರಣಗಳು.
–  ಗಾಯತ್ರಿ ಅನಂತನಾಗ್‌
*

‘ಪ್ರೀತಿಗೇ ಗೆಲುವಿದೆ ಸಂಕಷ್ಟಗಳ ದಾಟಬೇಕಷ್ಟೆ’
ಪ್ರೀತಿಗೇ ಗೆಲುವಿದೆ ಎನ್ನುವುದು ಜಾಗತಿಕ ಸತ್ಯ. ಆದರೆ ನಡುವೆ ಬರುವ ಸಹಸ್ರಾರು  ಸಂಕಷ್ಟಗಳ ದಾಟಬೇಕಷ್ಟೆ. ನಾವು ಅಂತಹ ಅಡ್ಡಿ–ಆತಂಕ, ಅವಮಾನಗಳನ್ನು ದಾಟಿಕೊಂಡೇ ದಾಂಪತ್ಯದ ಸವಿಯುಂಡವರು. ಮೊದಲ ನೋಟದ ಪ್ರೀತಿ ಅಂತಾರಲ್ಲ, ಅಂಥದ್ದೇನಲ್ಲ. ಆರು ವರ್ಷದ ಸ್ನೇಹ ನಮ್ಮದು. ಪ್ರೀತಿ ಹುಟ್ಟುವ ಹೊತ್ತಿಗೆ ನಾನು ಕಮಲಾಳನ್ನು ಅರ್ಥೈಸಿಕೊಂಡಿದ್ದೆ. ಒಂದು ಸಣ್ಣ ಅಳುಕು–ಭಯದ ನಡುವೆಯೇ ಬೆಸೆದ ಪ್ರೀತಿ ಇದು. ಮಡಿ–ಮೈಲಿಗೆ ಎನ್ನುವ ಜೈನ ಸಮುದಾಯ ನಮ್ಮದು. ಅವಳು ನಾಯಕರ ಕನ್ಯೆ. ಅಜಗಜಾಂತರ ಜಾತಿಯಲ್ಲಿ, ಆದರೆ ಮನಸುಗಳ ನಡುವೆ ಅಲ್ಲ. ನಾವಿಬ್ಬರೂ ಸಾಕಷ್ಟು ಪ್ರಬುದ್ಧರೂ, ತಿಳಿವಳಿಕೆ ಉಳ್ಳವರೂ, ವಾಸ್ತವದ ಅರಿವಿರುವವರೂ ಆಗಿದ್ದೆವು. ಮುಖ್ಯವಾಗಿ ಆರ್ಥಿಕವಾಗಿಯೂ ಇಬ್ಬರೂ ಸ್ವತಂತ್ರವಾಗಿದ್ದವರು. ಯಾರ ಅವಲಂಬನೆಯೂ ಬೇಕಿರಲಿಲ್ಲ ನಮಗೆ. ‘ಆಸ್ತಿಯಲ್ಲಿ ಪಾಲಿಲ್ಲ, ಮನೆಗೆ ಪ್ರವೇಶವಿಲ್ಲ, ಆಹ್ವಾನವಿಲ್ಲ, ಆದರವಿಲ್ಲ’ ಎನ್ನುವ ಎಲ್ಲಾ ಇಲ್ಲಗಳ ನಡುವೆಯೂ ನಾವು ಸಂಸಾರದ ಬಂಡಿ ಕಟ್ಟಿ ಎಳೆಯಲು ನಿಂತೆವು. ಇಬ್ಬರ ಮನಸ್ಸೂ ಒಂದಾಗಿತ್ತು. ಪ್ರೀತಿ ಗಟ್ಟಿಯಾಗಿತ್ತು. ಅಡ್ಡ ಬಂದ ಸಂಕಷ್ಟಗಳೆಲ್ಲ ಇಂದು ಕರಗಿಹೋಗಿವೆ. ಕಮಲಾ ಏನು ಎನ್ನುವುದು ಗೊತ್ತಾದ ಮೇಲೆ ಅಮ್ಮ–ಅಪ್ಪನೂ ಮುನಿಸು ಮರೆತು ಒಂದಾದರು. ಕಮಲಾ ಅಪ್ಪ–ಅಮ್ಮನಿಗೆ ನೆಚ್ಚಿನ ಸೊಸೆಯಾದಳು. ಬದುಕು ಈಗ ನಿರಾಳ, ಪ್ರಶಾಂತ, ಸುಖಮಯವಾಗಿ ಸಾಗಿದೆ ಎನ್ನುವುದು ನಮಗೆ ನಮ್ಮ ಪ್ರೀತಿ ತಂದುಕೊಟ್ಟ ಸಾರ್ಥಕ್ಯ.
– ಹಂ.ಪ. ನಾಗರಾಜಯ್ಯ

*
‘ಜೀವನದ ಬಂಡಿ ಸಾಗಲು ಪ್ರಬುದ್ಧತೆ ಬೇಕು’

ಪ್ರೀತಿಗೆ ತನ್ನದೇ ಆದ ವ್ಯಾಖ್ಯಾನವೊಂದಿದೆ. ಅದರ ಹರಿವು ಸಿನಿಮಾ–ಸಾಹಿತ್ಯದಲ್ಲಿ ಕಂಡಷ್ಟೇ ಅಲ್ಲ, ಅದಕ್ಕಿಂತಲೂ ಭಿನ್ನವಾದುದು, ವಿಶಾಲವೂ ಆದುದು.
ಪ್ರೀತಿ ಹುಡುಗಾಟಿಕೆಯಲ್ಲಿ ಹುಟ್ಟಿಕೊಳ್ಳಬಹುದು. ಆದರೆ ಜೀವನ ಪೂರ್ತಿ ಇಬ್ಬರೂ ಕೂಡಿ ಬದುಕುವ ವಾಗ್ದಾನಕ್ಕೆ ಬರುವಾಗ ಸಾಕಷ್ಟು ಪ್ರಬುದ್ಧತೆ ಬೇಕಾಗುತ್ತದೆ. ಪ್ರೀತಿಗೆ ಎರಡು ಮನಸ್ಸುಗಳು ಬೆಸೆದರೆ ಸಾಕು. ಸಂಸಾರ ಕಟ್ಟಲು ಹೊರಟಾಗ ಎರಡು ಕುಟುಂಬಗಳನ್ನೂ ಬೆಸೆಯುವ ಕೆಲಸವಾಗಬೇಕು. ಹಿರಿಯರೂ ಅಷ್ಟೇ, ಸಣ್ಣತನವನ್ನು ಬಿಟ್ಟು ಮಕ್ಕಳ ನಿರ್ಧಾರಕ್ಕೆ, ಪ್ರೀತಿಗೆ ಬೆಲೆ ಕೊಡಬೇಕು ಎನ್ನುವುದು ನನ್ನ ವಾದ. ಎಷ್ಟೋ ಕಡೆ ಪ್ರೀತಿಸಿ, ಮದುವೆ ಆದ ತಪ್ಪಿಗೆ ಅವರು ಜೀವನವಿಡೀ ನರಳುವಂತೆ ಮಾಡುವ ಹಿರಿಯರೂ ಇದ್ದಾರೆ. ಕಂಡರಿಯದ ವ್ಯಕ್ತಿಯ ಜೊತೆ ಕೂಡಿ ಬಾಳುವುದು ಈಗ ಬಹಳ ಕಷ್ಟ. ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿಯೇ ಅರ್ಧ ಬದುಕು ಸವೆದು ಹೋಗಿರುತ್ತದೆ. ಹೀಗಿರುವಾಗ ಸ್ನೇಹದಲ್ಲಿ ಅರಿತು, ಪ್ರೀತಿಯಲ್ಲಿ ಕಲೆತು, ದಾಂಪತ್ಯಕ್ಕೆ ಅಡಿ ಇಡಲು ಹೊರಟ ಯುವ ಜೋಡಿಗಳನ್ನು ತಡೆಯಬೇಡಿ ಎನ್ನುವುದೇ ನನ್ನ ಅರಿಕೆ. ನಾನು ಮಾಳವಿಕಳನ್ನು ಮೊದಲ ಬಾರಿ ಕಂಡಾಗ ಅವಳಿಗೆ ಕೇವಲ ಒಂಬತ್ತು ವರ್ಷ. ‘ಮಾಯಾಮೃಗ’ ನಮ್ಮಿಬ್ಬರನ್ನು ಹತ್ತಿರಕ್ಕೆ ತಂದಿತು, ಸ್ನೇಹ ಬೆಳೆಸಿತು. ದಾಂಪತ್ಯಕ್ಕೆ ಕಾಲಿಡುವ ಹೊತ್ತಿಗೆ ನಾವಿಬ್ಬರೂ ಸಾಕಷ್ಟು ಅರಿತುಕೊಂಡಿದ್ದೆವು. 15 ವರ್ಷ ತುಂಬು ಜೀವನ ಸಾಗಿಸಿದ ಖುಷಿಯಲ್ಲಿ ನಮ್ಮ ಪ್ರೀತಿಯದ್ದೂ ಪಾಲಿದೆ.
– ಅವಿನಾಶ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT