ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ ತಂಡಕ್ಕೆ ಸಚಿನ್‌ ರಾಯಭಾರಿ

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡಕ್ಕೆ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ಭಾರತ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಈ ವಿಷಯವನ್ನು ಖಚಿತಪಡಿಸಿದೆ. ಇದಕ್ಕೂ ಮೊದಲು ಬಾಲಿವುಡ್‌ ನಟ ಸಲ್ಮಾನ್‌ ಖಾನ್ ಮತ್ತು ಶೂಟರ್ ಅಭಿ ನವ್‌ ಬಿಂದ್ರಾ ಅವರನ್ನು ರಾಯಭಾರಿ ಯನ್ನಾಗಿ ಐಒಎ ಆಯ್ಕೆ ಮಾಡಿತ್ತು.

ಆರಂಭದಲ್ಲಿ ಸಲ್ಮಾನ್ ಅವರನ್ನಷ್ಟೇ ರಾಯಭಾರಿಯನ್ನಾಗಿ ಮಾಡಿದ್ದರಿಂದ ಈ ವಿಷಯ ವಿವಾದಕ್ಕೆ ಕಾರಣವಾಗಿತ್ತು.  ಮಾಜಿ ಅಥ್ಲೀಟ್‌ ಮಿಲ್ಖಾ ಸಿಂಗ್ ಮತ್ತು ಒಲಿಂಪಿಯನ್‌ ಕುಸ್ತಿ ಪಟು  ಯೋಗೇ ಶ್ವರ್ ದತ್‌ ವಿರೋಧ ವ್ಯಕ್ತಪಡಿಸಿದ್ದರು. ಒಲಿಂಪಿಕ್ಸ್‌ನಂಥ ದೊಡ್ಡ ಕೂಟಕ್ಕೆ ರಾಯಭಾರಿಯಾಗುವ ಗೌರವವನ್ನು ಕ್ರೀಡಾಪಟುಗಳಿಗೆ ನೀಡಬೇಕಿತ್ತು ಎಂದೂ ಅವರು ಹೇಳಿದ್ದರು.

ರಾಯಭಾರಿ ಆಯ್ಕೆ ವಿಷಯ ದೊಡ್ಡ ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ  ಐಒಎ ‘ರಾಯಭಾರಿಯಾಗಲು ಸಚಿನ್, ಬಿಂದ್ರಾ  ಮತ್ತು ಎ.ಆರ್‌. ರಹ ಮಾನ್ ಅವರನ್ನು ಸಂಪರ್ಕಿಸಿದ್ದೆವು. ಅವರು ಪ್ರತಿಕ್ರಿಯೆ ನೀಡಿಲ್ಲ’ ಎಂದು ಹೇಳಿತ್ತು. ಹೋದ ವಾರ ಬಿಂದ್ರಾ ಐಒಎ ನೀಡಿದ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ. ಮಂಗಳವಾರ ಸಚಿನ್ ರಾಯಭಾರಿಯಾಗಲು ಸಮ್ಮತಿಸಿದ್ದಾರೆ. 

‘ರಾಯಭಾರಿಯಾಗಲು ಸಚಿನ್ ಒಪ್ಪಿ ಕೊಂಡಿದ್ದಕ್ಕೆ ಅತೀವ ಸಂತೋಷವಾಗಿದೆ. ಅವರಿಗೆ ಧನ್ಯವಾದಗಳು’ ಎಂದು ಐಒಎ ಮಹಾ ಕಾರ್ಯದರ್ಶಿ ರಾಜೀವ್ ಮೆಹ್ತಾ ತಿಳಿಸಿದ್ದಾರೆ.

ಐಒಎ ಅಧ್ಯಕ್ಷ ಎನ್. ರಾಮ ಚಂದ್ರನ್‌  ಮತ್ತು ಮೆಹ್ತಾ ಅವರಿಗೆ ಪತ್ರ ಬರೆದಿರುವ ಸಚಿನ್‌ ಭಾರತ ತಂಡಕ್ಕೆ ರಾಯಭಾರಿಯಾಗಲು ಒಪ್ಪಿಕೊಂಡಿರುವ ವಿಷಯವನ್ನು ತಿಳಿಸಿದ್ದಾರೆ. ಜತೆಗೆ   ಬ್ರೆಜಿಲ್‌ಗೆ ತೆರಳುವ ಮೊದಲು ಭಾರತದ ಕ್ರೀಡಾಪಟುಗಳನ್ನು ಭೇಟಿಯಾಗುವು ದಾಗಿಯೂ  ಹೇಳಿದ್ದಾರೆ.

‘ರಾಯಭಾರಿಯಾಗಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವ. ಇದರಿಂದ ತುಂಬಾ ಸಂತೋಷವಾಗಿದೆ. ವಿಶ್ವದ ಶ್ರೇಷ್ಠ ಕ್ರೀಡಾ ಪಟುಗಳ ಜೊತೆ ಪಾಲ್ಗೊಳ್ಳಲು ಅವಕಾಶ ಲಭಿಸಿದೆ. ಟ್ವಿಟರ್‌ ಮತ್ತು ಫೇಸ್‌ಬುಕ್‌ ಮೂಲಕವೂ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತೇನೆ’ ಎಂದು ಸಚಿನ್‌ ಹೇಳಿದ್ದಾರೆ.

‘ದೇಶಕ್ಕಾಗಿ  24 ವರ್ಷ  ಆಡಿದ್ದೇನೆ. ದೇಶದ ಕ್ರೀಡಾಪಟುಗಳಲ್ಲಿ ಸ್ಫೂರ್ತಿ ತುಂಬಲು ಮುಂದೆಯೂ ಭಾರತದ ಪರ ‘ಬ್ಯಾಟಿಂಗ್’ ಮಾಡುತ್ತೇನೆ. ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಯಶಸ್ಸು ಸಿಗಲಿ’ ಎಂದೂ ಮಾಸ್ಟರ್‌ ಬ್ಲಾಸ್ಟರ್‌ ಹಾರೈಸಿದ್ದಾರೆ.

ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ: ‘ರಹ ಮಾನ್ ಅವರಿಗೂ ರಾಯಭಾರಿಯಾ ಗಲು ಆಹ್ವಾನ ಕೊಟ್ಟಿದ್ದೇವೆ. ಅವರಿನ್ನು ಪ್ರತಿಕ್ರಿಯೆ ಕೊಟ್ಟಿಲ್ಲ. ಇದಕ್ಕಾಗಿ ಎದುರು ನೋಡುತ್ತಿದ್ದೇವೆ’ ಎಂದು ಮೆಹ್ತಾ ಹೇಳಿದ್ದಾರೆ.

ರಾಯಭಾರಿಗಳ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಮೆಹ್ತಾ ‘ಹೆಸರಾಂತ ಕ್ರೀಡಾಪಟುಗಳು ತಮ್ಮಲ್ಲಿರುವ ವಿಚಾರಗ ಳನ್ನು ಒಲಿಂಪಿಕ್ಸ್‌ಗೆ ತೆರಳುವ ವರ ಜೊತೆ ಹಂಚಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಕ್ರೀಡಾ ಸಂಸ್ಕೃತಿ ಬೆಳಸ ಬೇಕೆಂಬುದು ನಮ್ಮ ಆಶಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT