ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಒಪ್ಪಂದದ ಹಿಂದೆ ಬಿಜೆಪಿ ದೂರಾಲೋಚನೆ

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಶ್ರೀನಗರ (ಕಾಶ್ಮೀರ): ಮುಸ್ಲಿಮರ ಪ್ರಾಬಲ್ಯವಿರುವ ಕಾಶ್ಮೀರದಲ್ಲೂ ಮತದಾರರನ್ನು ‘ಮೋಡಿ’ ಮಾಡಲು ಪ್ರಧಾನಿ ನರೇಂದ್ರ ಮೋದಿ  ಪ್ರಯತ್ನಿ­ಸು­ತ್ತಿದ್ದಾರೆ. ‘ನನಗೊಂದು ಅವಕಾಶ ಕೊಡಿ; ಕಾಶ್ಮೀರವನ್ನು ಬದಲಾಯಿಸಿ ತೋರಿಸುತ್ತೇನೆ’ ಎಂದು ಕೇಳುತ್ತಿದ್ದಾರೆ.

ಇದರಿಂದ ಬಿಜೆಪಿಗೆ ಎಷ್ಟರ ಮಟ್ಟಿಗೆ ಲಾಭವಾಗಲಿದೆ ಎಂದು ಖಚಿತವಾಗಿ ಹೇಳುವುದು ಕಷ್ಟ. ಆದರೆ, ಪ್ರತ್ಯಕ್ಷವಾಗಿ ಸಾಧ್ಯವಾಗದಿದ್ದರೆ, ಪರೋಕ್ಷ­ವಾಗಿ­ಯಾದರೂ ಕಣಿವೆಯೊಳಗೆ ನುಸುಳ­ಬೇಕೆಂದು ಬಿಜೆಪಿ ಹಾತೊರೆಯುತ್ತಿದೆ.
ಉತ್ತರ ಕಾಶ್ಮೀರದ ನಾಯಕ, ಮಾಜಿ ಪ್ರತ್ಯೇಕತಾವಾದಿ, ಸಾಜದ್‌ ಲೋನ್‌ ನೇತೃತ್ವದ ಪೀಪಲ್‌್ಸ ಕಾನ್ಫ­ರೆನ್ಸ್ ಸೇರಿದಂತೆ ಸಣ್ಣಪುಟ್ಟ ಪಕ್ಷಗಳ ಜತೆ ಬಿಜೆಪಿ ‘ರಹಸ್ಯ ಒಪ್ಪಂದ’ ಮಾಡಿಕೊಂಡಿದೆ.

ಪೀಪಲ್‌್ಸ ಕಾನ್ಫರೆನ್ಸ್‌ 25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿ­ಗಳನ್ನು ಕಣಕ್ಕಿ­ಳಿಸಿದೆ. ಬಿಜೆಪಿ ಅನೇಕ ಕಡೆ ಲೋನ್‌ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದೆ. ಬಿಜೆಪಿಗೆ ಕಾಶ್ಮೀರದಲ್ಲಿ ಪ್ರಬಲ ನಾಯಕರ ಕೊರತೆ ಇರುವು­ದರಿಂದ ಲೋನ್‌ ನೆರಳಿನಲ್ಲಿ ಅದು ಹೆಜ್ಜೆ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.

ಖಾನ್‌ ಸಾಹಿಬ್‌ ಕ್ಷೇತ್ರದ ಶಾಸಕ ಹಕೀಂ ಮಹಮದ್‌ ಯಾಸಿನ್‌, ಗುಲ್ಮಾರ್ಗ್‌ ಶಾಸಕ ಗುಲಾಂ ಹಸನ್‌ ಮೀರ್‌ ಅವರ ಜತೆಗೂ ಬಿಜೆಪಿ ಮಾತು­ಕತೆ ನಡೆಸಿದೆ. ಈ ಕ್ಷೇತ್ರಗಳಲ್ಲೂ ಅದರ ಅಭ್ಯರ್ಥಿಗಳು ಕಣದಲ್ಲಿಲ್ಲ. ಯಾಸಿನ್‌, ಮೀರ್‌ ಮತ್ತು ಕುಲ್ಗಾಂ ಶಾಸಕ ಯೂಸುಫ್‌ ಮಹಮದ್‌ ಜತೆಗೂಡಿ ‘ಪ್ರಜಾಸತ್ತಾತ್ಮಕ ವೇದಿಕೆ’ ರಚಿಸಿದ್ದಾರೆ.  ಸರ್ಕಾರ ರಚನೆಗೆ ಬೆರಳೆಣಿಕೆ ಸ್ಥಾನಗಳು ಕಡಿಮೆಯಾದರೆ, ಇವರೆಲ್ಲರ ಬೆಂಬಲ ಪಡೆ­ಯುವ ಆಲೋಚನೆ ಬಿಜೆಪಿ ಹೊಂದಿದೆ.

ವಿಧಾನಸಭೆಗೆ ಪುನರಾಯ್ಕೆ ಬಯಸಿರುವ ಯಾಸಿನ್‌ ಮತ್ತು ಮೀರ್‌ ಅವರು ಗೆಲ್ಲಬಹುದೆಂಬ ನಿರೀಕ್ಷೆ ಬಿಜೆಪಿ ಪಾಳೆಯದಲ್ಲಿದೆ. ಬಿಜೆಪಿ ಸಣ್ಣಪುಟ್ಟ ಪಕ್ಷಗಳನ್ನು ಬೆಂಬಲಿಸುತ್ತಿರುವುದರ ಹಿಂದೆ ಉಳಿದ ಪಕ್ಷಗಳ ಮತಗಳನ್ನು ಒಡೆಯುವ ತಂತ್ರವೂ ಇದ್ದಿರಬಹುದು.

ಉತ್ತರ ಕಾಶ್ಮೀರದ ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಲೋನ್‌ ಜನಪ್ರಿಯ ನಾಯಕ. ‘ಆಜಾದಿ ಕಾಶ್ಮೀರ ಚಳವಳಿಯಲ್ಲಿ ಸಕ್ರಿಯರಾಗಿದ್ದ ಲೋನ್‌, ಕೆಲವು ವರ್ಷಗಳ ಹಿಂದೆ ಹೊರಬಂದಿದ್ದಾರೆ. 2009ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಮೂರನೇ ಸ್ಥಾನ ಪಡೆದಿದ್ದಾರೆ. ಅವರು ಹೋದ ಕಡೆಗಳಲ್ಲಿ ಜನ ಕಿಕ್ಕಿರಿಯು­ತ್ತಾರೆ. ಅವರಿಗಿರುವ ಜನ ಬೆಂಬಲ ಕಂಡೇ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ. ಮೋದಿ ಅವರೇ ಖುದ್ದು ಲೋನ್‌ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿದ್ದಾರೆ.

ಬಿಜೆಪಿ ಜತೆ ಪೀಪಲ್‌್ಸ ಕಾನ್ಫರೆನ್ಸ್ ನಾಯಕ ಕೈಜೋಡಿಸುತ್ತಿರುವ ಕುರಿತು ಹಂದ್ವಾರದ ಜನರಿಗೆ ಕಿಂಚಿತ್ತೂ ಬೇಸರ­ವಿಲ್ಲ. ‘ಅವರು ಏನೇ ಮಾಡಿದರೂ ಹಿಂದುಮುಂದು ನೋಡದೆ ಬೆಂಬಲಿ­ಸುತ್ತೇವೆ. ಕುಪ್ವಾರಕ್ಕೆ ಅದರಲ್ಲೂ ಹಂದ್ವಾರಕ್ಕೆ ಬಹಳಷ್ಟು ಕೆಲಸಗಳನ್ನು ಲೋನ್‌ ಮಾಡುತ್ತಾರೆ’ ಎನ್ನುವ ವಿಶ್ವಾಸ ಹಂದ್ವಾರದ ಅಬ್ದುಲ್‌ ರಶೀದ್‌ ಮತ್ತು ಮಹಮದ್‌ ಅಬ್ದುಲ್ಲಾ ಅವರಿಗಿದೆ.

ಐದು ವರ್ಷಗಳಲ್ಲಿ ಲೋನ್‌ ಕುಪ್ವಾರ, ಬಾರಾಮುಲ್ಲಾ ಜಿಲ್ಲೆಗಳ ಹಳ್ಳಿ, ಹಳ್ಳಿಗಳನ್ನು ಸುತ್ತಿದ್ದಾರೆ. ಪಕ್ಷದ ಸಂಘಟನೆಗೆ ಪ್ರಯತ್ನಿಸಿದ್ದಾರೆ. ಯುವ ನಾಯಕರಾದ ಲೋನ್‌ ಯುವಕರನ್ನು ಬೆಂಬಲ ಗಳಿಸಿದ್ದಾರೆ. ಉತ್ತರ ಕಾಶ್ಮೀರದ ಕನಿಷ್ಠ ಐದು ಕ್ಷೇತ್ರಗಳಲ್ಲಿ ಲೋನ್‌ ಪಕ್ಷದ ಅಭ್ಯರ್ಥಿಗಳು ಪ್ರಬಲ ಪೈಪೋಟಿ ಕೊಡಬಹುದು ಎನ್ನುವ ವಾತಾವರಣ ಸೃಷ್ಟಿಯಾಗಿದೆ.

ಮನೆಯಲ್ಲೇ ಅಪಸ್ವರ: ಸಾಜದ್‌ ಲೋನ್‌, ಹುರಿಯತ್‌ ಕಾನ್ಫರೆನ್‌್ಸ ನಾಯಕ ಅಬ್ದುಲ್‌ ಘನಿ ಲೋನ್‌ ಅವರ ಪುತ್ರ. ಅಬ್ದುಲ್‌ ಘನಿ ಅವರ ಇನ್ನೊಬ್ಬ ಪುತ್ರ ಬಿಲಾಲ್‌ ಘನಿ ಲೋನ್‌ ಈಗಲೂ ಹುರಿಯತ್‌ ಸಕ್ರಿಯ ಮುಖಂಡ. ಸಾಜದ್‌ ಬಿಜೆಪಿ ಜತೆ ಕೈಜೋಡಿಸಿರುವ ಕುರಿತು ಅವರ ಮನೆ­ಯೊಳಗೇ ವಿರೋಧವಿದೆ. ಹುರಿಯತ್‌ ಮುಖಂಡ ಸಯ್ಯದ್‌ ಗಿಲಾನಿ ಅವರ ವಿರೋಧವನ್ನು ಕಟ್ಟಿಕೊಂಡಿದ್ದಾರೆ.

ಆಜಾದಿ ಕಾಶ್ಮೀರಕ್ಕಾಗಿ ಹೋರಾಡುತ್ತಿರುವ ಪ್ರತ್ಯೇಕತಾವಾದಿ ಸಂಘಟನೆಗಳು ಒಗ್ಗೂಡಿ ಕಟ್ಟಿಕೊಂಡಿರುವ ಹುರಿಯತ್‌  ಕಾಶ್ಮೀರ­ದಲ್ಲಿ ಮತದಾನ ಬಹಿಷ್ಕಾರಕ್ಕೆ ಕರೆ ಕೊಟ್ಟಿದೆ. ಎಲ್ಲ ಸಂಘಟನೆಗಳು ಒಟ್ಟು­ಗೂ­­ಡು­ವುದರ ಹಿಂದೆ ಅಬ್ದುಲ್‌ ಘನಿ ಲೋನ್‌ ಮಹತ್ವದ ಪಾತ್ರವಿತ್ತು. ವಿಪರ್ಯಾ­ಸವೆಂದರೆ ಪ್ರತ್ಯೇಕತಾವಾದಿ­ಗಳಿಂದಲೇ ಅವರು ಹತ್ಯೆಗೊಳಗಾಗಿದ್ದು. ಆಜಾದಿ ಚಳವಳಿ ದಿಕ್ಕು ಬದಲಾಗಬೇಕು ಎಂದು ಅಬ್ದುಲ್‌ ಘನಿ ಪ್ರತಿಪಾದಿಸಿದ್ದು ಪ್ರಾಣಕ್ಕೆ ಮುಳುವಾಯಿತು ಎನ್ನುವ ಮಾತು ಸಾಮಾನ್ಯವಾಗಿ ಕೇಳಿಬರುತ್ತದೆ.

ಅಬ್ದುಲ್‌ ಘನಿ ಪ್ರತ್ಯೇಕತಾ ಚಳವಳಿಯಲ್ಲಿ ಭಾಗವಹಿಸುವುದಕ್ಕೆ ಮೊದಲು ಮೂರು ಸಲ ಹಂದ್ವಾರ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾ­ಗಿದ್ದರು. ಕುಪ್ವಾರ ಜಿಲ್ಲೆಯಲ್ಲಿ ಈಗಲೂ  ಅವರ ಪ್ರಭಾವವಿದೆ. ಸಾಜದ್‌ ತಮ್ಮ ಜನಪ್ರಿಯತೆ ಜತೆಗೆ ತಂದೆಯ ಪ್ರಭಾವವನ್ನು ಬಳಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ರಾಜಕೀಯ ಪ್ರಯೋಗ ಯಶಸ್ವಿ­ಯಾದರೆ ಕಾಶ್ಮೀರದಲ್ಲೂ ಕಾಲೂರಲು ಅದಕ್ಕೆ ಅವಕಾಶ ಸಿಕ್ಕಿದಂತಾಗುತ್ತದೆ.

ಬಿಜೆಪಿ ಒಳಸುಳಿ ಅರ್ಥ ಮಾಡಿ­ಕೊಂಡಿರುವ ಹುರಿಯತ್‌ ಮತದಾನ ಬಹಿಷ್ಕಾರ ಕರೆಯನ್ನು ಕಟ್ಟುನಿಟ್ಟಾಗಿ ಜನರ ಮೇಲೆ ಹೇರುತ್ತಿಲ್ಲ ಎಂದು ಉತ್ತರ ಕಾಶ್ಮೀರದ ಮತದಾರರು ಅಭಿ­ಪ್ರಾ­ಯಪಡುತ್ತಾರೆ. ಬಹಿಷ್ಕಾರ ಕರೆಯಿಂದ ಬಿಜೆಪಿಗೆ ಲಾಭವಾಗ­ಬಹುದು ಎನ್ನುವ ಆತಂಕವೂ ಹುರಿಯತ್‌ ನಾಯಕರಿಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT