ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗೋಡೆಗೆ ವಾಲ್‌ಪೇಪರ್‌

Last Updated 24 ಡಿಸೆಂಬರ್ 2015, 19:52 IST
ಅಕ್ಷರ ಗಾತ್ರ

ಮನೆಯ ಗೋಡೆಯನ್ನು ಸಿಂಗರಿಸುವ ಏಕೈಕ ವಿಧಾನವೆಂದರೆ ಸುಣ್ಣ ಹಚ್ಚುವುದು ಎನ್ನುವ ಕಾಲ ಒಂದಿತ್ತು. ಹಬ್ಬ–ಹರಿದಿನ, ಮದುವೆಯಂತಹ ಸಮಾರಂಭಕ್ಕೆ ಮನೆಯ ಹೊರಗೂ–ಒಳಗೂ ಸುಣ್ಣ ಬಳಿಯುವುದೇ ಒಂದು ಸಂಭ್ರಮ ಆಗ. ನಂತರ ವಿಧವಿಧದ ಬಣ್ಣಗಳ ಪೇಂಟ್‌ ಯುಗ ಆರಂಭವಾಯಿತು. ದೊಡ್ಡ ದೊಡ್ಡ ಬಂಗಲೆಗಳಿಗೆ ಢಾಳಾದ ಪೇಂಟ್‌ ಹೊರ ನೋಟಕ್ಕೆ ಶ್ರೀಮಂತಿಕೆಯ ಕಳೆ ತುಂಬುವುದಿದೆ. ಅನಂತರ ಶುರುವಾದುದು ಪೇಂಟ್‌ ಜೊತೆ ಜೊತೆಗೇ ಹೊಂದಿಕೊಂಡು ಬೆಳೆದ ವಾಲ್‌ಪೇಪರ್‌ ಕಾಲ.

ಒಳಾಂಗಣ ವಿನ್ಯಾಸದ ಒಂದು ಬಹು ಮುಖ್ಯ ಭಾಗವಾಗಿ ವಾಲ್‌ಪೇಪರ್‌ ಸಂಸ್ಕೃತಿ ಸೇರಿಕೊಂಡಿತು. ಮೊದಲು ಮೆಟ್ರೊ ನಗರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ವಾಲ್‌ಪೇಪರ್‌, ಈಗೀಗ ಎಲ್ಲಾ ಕಡೆ ತನ್ನ ಅಸ್ತಿತ್ವ ಸಾರುತ್ತದೆ. ಆದರೆ ಕಾಲ–ಕಾಲಕ್ಕೆ ಇದರ ರೂಪ, ಆಕಾರ, ವಿನ್ಯಾಸ, ಬಣ್ಣ ಹಾಗೂ ಪ್ರಿಂಟ್‌ಗಳಲ್ಲಿ ಬಹಳ ಬೇಗ ಬದಲಾವಣೆಗಳು ಅಡಕವಾಗುತ್ತಿವೆ.

ವಾಲ್‌ಪೇಪರ್‌ ಸಂಸ್ಕೃತಿ ಚಿರಪರಿಚಿತವಾಗಿ ಒಂದು ದಶಕವಾಗಿರಬಹುದಷ್ಟೇ. ಆದರೆ ಅದು ಚಾಚಿಕೊಂಡ ಹರವು ದೊಡ್ಡದೇ. ಪ್ರಸ್ತುತ ಮಹಾನಗರಗಳ ಮನೆಗಳನ್ನಾಳುತ್ತಿರುವ ಟ್ರೆಂಡ್‌ಗಳೇನು, ಯಾವ ಕೋಣೆಗೆ ಯಾವ ವಿನ್ಯಾಸ, ಯಾವ ಬಣ್ಣ ಸೂಕ್ತ, ಅದನ್ನು ನಿರ್ವಹಿಸುವ ಬಗೆ ಹೇಗೆ ಎಂಬುದನ್ನು ಈಗ ಸುಲಭವಾಗಿ ತಿಳಿದುಕೊಳ್ಳಬಹುದು. ಎಲ್ಲಾ ನಗರಗಳಲ್ಲಿಯೂ ಈ ರೀತಿಯ ಸೇವೆ ಒದಗಿಸುವ ಕಂಪೆನಿಗಳಿವೆ. ಆನ್‌ಲೈನ್‌ನಲ್ಲಿಯೂ ಅನೇಕ ಸಂಸ್ಥೆಗಳ ವಿವರಗಳು ಸಿಗುತ್ತವೆ.

ಆಯ್ಕೆಗೆ ಮುನ್ನ
ಮೊದಲು ನಿಮಗೆ ಯಾವ ಕೋಣೆಗೆ ಯಾವ ವಿನ್ಯಾಸ ಬೇಕು ಎನ್ನುವುದು ಸ್ಪಷ್ಟವಾಗಬೇಕು. ಒಳಾಂಗಣ ವಿನ್ಯಾಸಕರ ಸಹಕಾರ ಪಡೆದು ನಿಮ್ಮಿಷ್ಟದ ವಿನ್ಯಾಸವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಹಲವಾರು ಶೈಲಿಯ ವಿನ್ಯಾಸಗಳುಂಟು ಅದರಲ್ಲಿ  ಡಮಾಸ್ಕಸ್ (ಗುಲಾಬಿಯ ನಸುಗೆಂಪು ಬಣ್ಣ), ಫ್ಲೋರಲ್‌ (ಹೂವಿನ ವಿನ್ಯಾಸದ) ಜಿಯೊಮೆಟ್ರಿಕ್, ರೆಟ್ರೋ, ಸ್ಟ್ರೈಪ್ಸ್‌ (ಪಟ್ಟಿ–ಪಟ್ಟಿಯಾದ), ಟೈಲ್ ಆಕಾರದ, ಟ್ರಯಲ್, ವಿಂಟೇಜ್ ಇತ್ಯಾದಿ ಬಗೆಗಳುಂಟು.

ನಿಮ್ಮ ಕೋಣೆ, ಅದರ ಅಗಲ, ಆಕಾರಕ್ಕೆ ತಕ್ಕಂತೆ ಸೂಕ್ತ ವಿನ್ಯಾಸವನ್ನು ಆಯ್ದುಕೊಳ್ಳಬೇಕಾಗುತ್ತದೆ. ನೀವು ಆಧುನಿಕ ಶೈಲಿಯನ್ನು ಬಯಸುವುದಾದಲ್ಲಿ ಗಾಢ ಮತ್ತು ಪ್ರಕಾಶಮಾನವಾದ ವಿನ್ಯಾಸವನ್ನು ಹುಡುಕಬೇಕು. ಶಾಂತತೆಯನ್ನು ಪ್ರೀತಿಸುವವರು ತಿಳಿ ಬಣ್ಣದ ಮತ್ತು ಸೊಗಸಾದ ಆಯ್ಕೆಗೆ ಹೋಗಬಹುದು. ಹಾಲ್‌ ಅಥವಾ ಲಿವಿಂಗ್‌ ರೂಮ್‌ಗೆ ಮನಸ್ಸನ್ನು ಪ್ರಶಾಂತವಾಗಿಡುವ ಫ್ಲೋರಲ್‌ ಅಥವಾ ಅಮೂರ್ತ ವಿನ್ಯಾಸಗಳನ್ನು ಆಯ್ಕೆ ಮಾಡುವುದು ಉತ್ತಮ.

ಇನ್ನು ಡೈನಿಂಗ್‌ ಹಾಲ್‌ಗೆ ಡಮಾಸ್ಕಸ್‌ನಂತಹ ಶ್ರೀಮಂತ ಮತ್ತು ಸೊಗಸಾದ ವಿನ್ಯಾಸಗಳು ಸೂಕ್ತ. ಹೆಚ್ಚು ಸಾಂಪ್ರದಾಯಿಕ ನೋಟದ ಡೈನಿಂಗ್‌ ರೂಮಿಗಾಗಿ ಮೇಲ್ಭಾಗದಲ್ಲಿ ಹೆಚ್ಚು ಪ್ರಬಲವಾದ ಮುದ್ರಣವಿರುವ ಪೇಪರ್‌ ಹಾಗೂ ಕೆಳಭಾಗದಲ್ಲಿ ವೇನ್‌ಸ್ಕಾಟಿಂಗ್‌ (ಹಲಗೆ ಹಾಕುವುದು) ಮೂಲಕ ಆಕರ್ಷಕ ನೋಟ ನೀಡಬಹುದು.

ಇನ್ನು ಬೆಡ್‌ರೂಮ್‌ ವಿಚಾರಕ್ಕೆ ಬರೋಣ. ಇಲ್ಲಿ ನೀವು ಇನ್ನೊಬ್ಬರನ್ನು ಇಂಪ್ರೆಸ್‌ ಮಾಡುವ ಯಾವುದೇ ಆಲೋಚನೆಗಳನ್ನು ಇಟ್ಟುಕೊಳ್ಳದೇ ಸಂಪೂರ್ಣ ನಿಮಗಾಗಿ, ನಿಮ್ಮ ಮನಸ್ಸಿಗೆ ಖುಷಿ ಕೊಡುವಂತಹ ವಿನ್ಯಾಸ ಹಾಗೂ ಶೈಲಿಗಳನ್ನು ಆಯ್ದುಕೊಳ್ಳಬಹುದು. ಮನಸ್ಸಿಗೆ ಮುದ ನೀಡುವ ಜೊತೆಗೆ ರೊಮ್ಯಾಂಟಿಕ್‌ ಭಾವಗಳನ್ನು ಹೊರಡಿಸುವ ವಿನ್ಯಾಸಗಳನ್ನೂ ನೀವಿಲ್ಲಿ ಪ್ರಯತ್ನಿಸಬಹುದು. ಅಥವಾ ಸರಳವೂ, ಆಕರ್ಷಕವೂ ಆದ ಹೂವಿನ ಚಿತ್ತಾರಗಳೂ ಇಲ್ಲಿ ಮೋಡಿ ಮಾಡುತ್ತವೆ.

ಅಡುಗೆ ಮನೆಗೆ ಬರುವುದಾದರೆ ಇಲ್ಲಿ ನೀವು ಅಗ್ಗದ, ಸುಲಭವಾಗಿ ತೊಳೆಯಬಹುದಾದ ಹಾಗೂ ಜಿಡ್ಡು ಹಿಡಿಯದ ಪ್ರಿಂಟ್‌ಗಳನ್ನು ನೋಡಬೇಕು. ಕೆಲವರು ಬಣ್ಣ–ಬಣ್ಣದ ಪ್ರಿಂಟ್‌ಗಳಿಗೆ ಹೋದರೆ, ಇನ್ನೂ ಕೆಲವರು ಕಪ್ಪು–ಬಿಳುಪು ಆಯ್ಕೆಗೆ ಮನ್ನಣೆ ಕೊಡುವುದಿದೆ.

ಇತ್ತೀಚೆಗಂತೂ ಅಮೂರ್ತ ಹಾಗೂ ಕಪ್ಪು–ಬಿಳುಪು ವಿನ್ಯಾಸದತ್ತ ಆಕರ್ಷಣೆ ಹೆಚ್ಚುತ್ತಿದೆ. ಆದರೆ ಮಕ್ಕಳ ಕೋಣೆಗೆ ಹೆಚ್ಚು ಪ್ರಕಾಶಮಾನವಾದ ಬಣ್ಣಗಳಿರುವ, ಮೂರ್ತ ಚಿತ್ರಗಳ ಪ್ರಿಂಟ್‌ಗಳೇ ಸೂಕ್ತ. 3ಡಿ ಎಫೆಕ್ಟ್‌ ಇರುವ ಪ್ರಿಂಟ್‌ಗಳು ಮಕ್ಕಳ ಮನಸ್ಸಿಗೆ ಹೆಚ್ಚು ಖುಷಿ ಕೊಡುತ್ತವೆ.

***
ನಿರ್ವಹಣೆ ಸುಲಭ
ವಾಲ್‌ಪೇಪರ್‌ ನಿರ್ವಹಣೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಸುಲಭವಾಗಿ ಸ್ವಚ್ಛಗೊಳಿಸಬಹುದಾದ ಪೇಪರ್‌ಗಳು ಸಿಗುತ್ತವೆ. ಒದ್ದೆ ಟವಲ್‌, ವಾಕ್ಯೂಮ್‌ ಕ್ಲೀನರ್‌ ಅಥವಾ ಸ್ಪಂಜ್‌ನಿಂದ ಮೃದುವಾಗಿ ಒರೆಸಿ ತೆಗೆಯಬಹುದು. ಆದರೆ ವಾಕ್ಯೂಮ್‌ ಕ್ಲೀನರ್‌ ಬಳಸುವಾಗ ಮೃದುವಾದ ಬ್ರಶ್‌ ಉಪಯೋಗಿಸುವುದನ್ನು ಮರೆಯುವಂತಿಲ್ಲ. ಒರೆಸಿದ ನಂತರ ಹೆಚ್ಚು ಹೊತ್ತು ಅದು ಹಸಿಯಾಗಿಯೇ ಉಳಿಯದಂತೆ ನೋಡಿಕೊಳ್ಳಬೇಕು.

ಕೆಲವು ವಾಲ್‌ಪೇಪರ್‌ಗಳನ್ನು ಒದ್ದೆ ಬಟ್ಟೆ ಅಥವಾ ಸ್ಪಂಜ್‌ನಿಂದ ಒರೆಸುವಂತಿರುವುದಿಲ್ಲ. ಕೇವಲ ಮೃದುವಾದ ಒಣ ಟವಲ್‌ನಿಂದ ಮಾತ್ರ ಒರೆಸಬೇಕಿರುತ್ತದೆ.

ಇನ್ನು ವಾಲ್‌ಪೇಪರ್‌ ಸ್ಟಿಕ್‌ ಮಾಡುವಲ್ಲಿಯೂ ನಿರ್ದಿಷ್ಟ ವಿಧಿ–ವಿಧಾನಗಳಿರುತ್ತವೆ. ಪೇಪರ್‌ ಅನ್ನು ಹೇಗೆಂದರೆ ಹಾಗೆ ಅಂಟಿಸುವುದರಿಂದ ಅದರ ಅಂದಗೆಡುವ ಸಾಧ್ಯತೆ ಇರುತ್ತದೆ. ಪೇಪರ್‌ ಕಟ್‌ ಮಾಡುವುದರಿಂದ ಹಿಡಿದು ಸೂಕ್ತ ರೀತಿಯಲ್ಲಿ ಗೋಡೆಗೆ ಅಂಟಿಸುವವರೆಗೆ ಮುನ್ನೆಚ್ಚರಿಕೆ ವಹಿಸಬೇಕು.
–ಅಶ್ವಿನ್‌ ಆರ್ಯ, interior & decor ಮುಖ್ಯಸ್ಥ

(ವೆಬ್‌ಸೈಟ್‌:http://interiorsdecor.in)        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT