ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟದ ಹಲವು ಬಗೆ

Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹವ್ಯಾಸಿ ಛಾಯಾಗ್ರಾಹಕರ ಚಿತ್ರಗಳಿಗೆ ವೇದಿಕೆಯಾಗುತ್ತಿರುವ ಗ್ಯಾಲರಿ ಕ್ರೆಸೆಂಟ್‌ನಲ್ಲಿ ಸಮೂಹ ಛಾಯಾಚಿತ್ರಗಳ ಪ್ರದರ್ಶನ ಆರಂಭಗೊಂಡಿದೆ. ಜು. 27ರಂದು ಆರಂಭವಾಗಿರುವ ‘ಇನ್‌ಸೈಟ್‌’ ಪ್ರದರ್ಶನ ಆಗಸ್ಟ್‌ 3ರವರೆಗೆ ನಡೆಯಲಿದೆ.

ಆದರ್ಶ ಭಟ್‌, ಗಣೇಶ್‌ ಹೆಗ್ಡೆ, ಪೀಯೂಷ್, ಶೈಲೇಶ್‌ ರಮೇಶ್, ಸಿದ್ಧಾಂತ್‌ ವೈದ್ಯನಾಥನ್‌ ಅವರ ಅದ್ಭುತ ಬೆಳಕಿನ ವಿನ್ಯಾಸದ ಛಾಯಾಚಿತ್ರಗಳು ನೋಡುಗನನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತಿವೆ. ರಂಗಭೂಮಿ ಕಲಾವಿದ ಆದರ್ಶ್ ಭಟ್‌ ಹವ್ಯಾಸಿ ಛಾಯಾಗ್ರಾಹಕ. ‘ನಾನು ಈಗಷ್ಟೇ ಫೊಟೋಗ್ರಫಿ ಕಲಿಯುತ್ತಿದ್ದೇನೆ. ತೆಗೆಯುವ ಪ್ರತಿ ಚಿತ್ರಗಳಲ್ಲೂ ಮನಸಿನ ಕಲ್ಪನೆಯನ್ನು ಚೌಕಟ್ಟಿನೊಳಗೆ ತರುವ ಪ್ರಯತ್ನ ಮಾಡುತ್ತೇನೆ’ ಎನ್ನುವ ಅವರ ಅಭಿರುಚಿಗೆ ಈ ಮಾತೇ ಸಾಕ್ಷಿ.

ಗಣೇಶ್‌ ಹೆಗ್ಡೆ ಅವರಿಗೆ ಒಂದನೇ ತರಗತಿಯಲ್ಲಿದ್ದಾಗ ಸ್ಪರ್ಧೆಯಲ್ಲಿ   ಬಹುಮಾನವಾಗಿ ಕ್ಯಾಮೆರಾ ಸಿಕ್ಕಿತ್ತಂತೆ. ಅಲ್ಲಿಂದ ಶುರುವಾದ ಫೋಟೋಗ್ರಫಿ ಹುಚ್ಚು ಎಂಜಿನಿಯರಿಂಗ್ ಕಲಿಯುತ್ತಿದ್ದಾಗಲೂ ಮುಂದುವರಿದಿತ್ತು. ‘ಎಂಜಿನಿಯರಿಂಗ್‌ ಓದುತ್ತಿದ್ದಾಗಲೇ ಡಿಎಸ್‌ಎಲ್‌ಆರ್‌ ಕ್ಯಾಮೆರಾ ಕೊಂಡು ಹವ್ಯಾಸ ಮುಂದುವರಿಸಿದ್ದೆ. ಇದರಿಂದ ನನ್ನನ್ನು ನಾನು ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಮುಖ್ಯವಾಗಿ ನಿಸರ್ಗವನ್ನು ನೋಡುವ ಬಗೆ, ಅದರ ಅನೇಕ ನಿಗೂಢಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಯಿತು’ ಎನ್ನುವುದು ಅವರ ಅನುಭವ ನುಡಿ.

ಕುಮಾರನ್ಸ್‌ ಕಾಲೇಜಿನ ವಿದ್ಯಾರ್ಥಿ ಪೀಯೂಷ್‌, ‘ಕ್ಯಾಮರಾ, ನನ್ನೆರಡು ಕಣ್ಣುಗಳಿದ್ದಂತೆ. ಅದರ ಮೂಲಕವೇ ಜನತ್ತನ್ನು ನೋಡುತ್ತೇನೆ. ಜಗತ್ತನ್ನು ಭಿನ್ನ ದೃಷ್ಟಿಕೋನದಿಂದ ನೋಡುವುದನ್ನು ಫೋಟೊಗ್ರಫಿ ನನಗೆ ಕಲಿಸಿದೆ’ ಎಂದು ಕಲಿಯುವ ನಿರಂತರತೆಯನ್ನು ಹೇಳಿಕೊಂಡರು.

ಶೈಲೇಶ್‌ ರಮೇಶ್‌ ಬೆಂಗಳೂರಿನವರು. ಮಾರ್ಕೆಟಿಂಗ್ ಕಂಪೆನಿಯ ಉದ್ಯೋಗಿ. ಎಲ್ಲ ಕೆಲಸಕ್ಕಿಂತ ಫೋಟೋ ತೆಗೆಯುವುದರಲ್ಲಿ ಅವರಿಗೆ ಹೆಚ್ಚು ಖುಷಿ ಸಿಕ್ಕಿದೆ.

ಸಿದ್ಧಾರ್ಥ್ ವೈದ್ಯನಾಥನ್‌ಗೆ ಫೋಟೋಗ್ರಫಿ ಹವ್ಯಾಸವೇ ಅನೇಕ ಅದ್ಭುತ ತಾಣಗಳಿಗೆ ಕರೆದೊಯ್ದಿದೆಯಂತೆ. ‘ನಾನು ಫೋಟೋ ತೆಗೆಯುವ ಹುಚ್ಚಿನಿಂದಾಗಿಯೇ ಸದಾ ಒಂದಲ್ಲ ಒಂದು ತಾಣಕ್ಕೆ ಸುತ್ತುತ್ತಿರುತ್ತೇನೆ. ಆಗ ಕ್ಯಾಮೆರಾನೇ ನನ್ನ ಸಂಗಾತಿ. ನಿಸರ್ಗದ ಸೌಂದರ್ಯವನ್ನು ಸೆರೆಹಿಡಿಯುವ ಮತ್ತು ಆ ಮೂಲಕ ನನ್ನನ್ನು ನಾನು ತೆರೆದುಕೊಳ್ಳುವುದು ಸಾಧ್ಯವಾಗಿದೆ’ ಎನ್ನುತ್ತಾರೆ.

ಪ್ರದರ್ಶನದಲ್ಲಿ ಆದರ್ಶ ಭಟ್‌ ಅವರ ಮೋಡದ ಮರೆಯಿಂದ ಇಣುಕುವ ಸೂರ್ಯನ ಬೆಳಕಿನಲ್ಲಿ ಒಣ ಎಲೆಯ ಚಿತ್ತಾರ, ಗಣೇಶ್‌ ಹೆಗ್ಡೆ ಅವರ ಮುಸ್ಸಂಜೆಯಲ್ಲಿ ಸಮುದ್ರದ ತಟದಲ್ಲಿ ಬಲೆ ಎಳೆಯುವ ಮೀನುಗಾರರ ಚಿತ್ರ, ಶೈಲೇಶ್ ಅವರ ಸಂಕ್ರಾಂತಿ ಹಬ್ಬದಲ್ಲಿ ಬೆಂಕಿ ಹಾಯುವ ಎತ್ತುಗಳ ಚಿತ್ರ, ಪೀಯೂಷ್‌ ಅವರ ಮರದ ಮರೆಯಲ್ಲಿ ಸೂರ್ಯಾಸ್ತದ ರಂಗು, ಸಿದ್ದಾರ್ಥ ಅವರ ಹುಲ್ಲಿನ ಹಿನ್ನೆಲೆಯಲ್ಲಿ ಮುಂಜಾನೆ ಸೂರ್ಯ ... ಹೀಗೆ ಬಗೆಬಗೆಯ ಅದ್ಭುತ ಕಲಾಕೃತಿಗಳಿವೆ.

ಪ್ರದರ್ಶನ ಬೆಳಿಗ್ಗೆ 11ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ. ವಿಳಾಸ: ಗ್ಯಾಲರಿ ಕ್ರೆಸೆಂಟ್‌, ನಲಪಾಡ್‌ ಹೊಟೇಲ್‌ ಬೆಂಗಳೂರು ಇಂಟರ್‌ನ್ಯಾಷನಲ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ವೃತ್ತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT