ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಹೊಕ್ಕು ನೋಡಿದರೆ...

Last Updated 14 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಿಕೊಂಡ ಮೇಲೆ ಇಂಗ್ಲಿಷ್‌ ಮಾಧ್ಯಮದ ಕಲಿಕೆ ಅನಿವಾರ್ಯ. ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಕಲಿಕೆಗೆ ಅನುಮತಿ– ಅವಕಾಶ ಇದೆಯೇ? ಬಹುತೇಕ ಶಾಲೆಗಳು ಅನುಮತಿ ಪಡೆದು­ಕೊಂಡಿರುವುದು ಒಂದು ಉದ್ದೇಶಕ್ಕೆ, ಶಾಲೆ ನಡೆಸುತ್ತಿರುವುದು ಇನ್ನೊಂದು ಉದ್ದೇಶಕ್ಕೆ.

ಗುಣಮಟ್ಟದ ಶಿಕ್ಷಕರ ಕೊರತೆಯೂ ಸಾಕಷ್ಟಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ ಶಿಕ್ಷಕರು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುತ್ತಾರೆ. ಶಿಕ್ಷಕರಿಗೆ ಫಿಲಾಸಫಿ ಆಫ್‌ ಎಜುಕೇಷನ್‌ನ ಗಂಧಗಾಳಿ ಇರುವುದಿಲ್ಲ. ಇನ್ನು ಹೊಸ ಪಠ್ಯಕ್ರಮದ ಒಂದು ಭಾಗವಾದ ಸಿಸಿಇ ಬಗ್ಗೆ, ವಿಷಯ ಪರಿಕಲ್ಪನೆ (subject concept) ಬಗ್ಗೆ ಮಾಹಿತಿಯಂತೂ ದೂರದ ಮಾತು.

ಹಾಗಾದರೆ ಇಂತಹ ಅನರ್ಹ ಶಿಕ್ಷಕರು ನಮ್ಮ ಶಾಲೆಗಳಲ್ಲಿ ಯಾಕಿದ್ದಾರೆ? ಉತ್ತರ ತುಂಬಾ ಸರಳ. ಖಾಸಗಿ ಶಾಲೆಗಳು ಅತಿ ಹೆಚ್ಚೆಂದರೆ ` 3 ಸಾವಿರ ಸಂಬಳ ನೀಡುತ್ತವೆ. ಕೆಲವು ಶಾಲೆಗಳಲ್ಲಿ ಮುಖ್ಯ ಗುರುಗಳ ಸಂಬಳವೇ ` 6,000–7,000.  ಇಂತಹ ವ್ಯವಸ್ಥೆಯಲ್ಲಿ ಕಲಿಯುವ ಮಗು ಸಹಜವಾಗಿಯೇ ಓದಿನಲ್ಲಿ ಹಿಂದೆ ಉಳಿಯುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾಗಿ ಓದಿನ ಬಗ್ಗೆ ಭಯ ಮೂಡಿಸಿಕೊಳ್ಳುತ್ತದೆ. ತಂದೆ–ತಾಯಿ ಮೇಲೆ ರೇಗಾಡುವುದು, ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಮನೆಬಿಟ್ಟು ಹೋಗು­ವುದು, ಅಶ್ಲೀಲ ವಿಡಿಯೊ, ಇಂಟರ್‌ನೆಟ್‌ ವೀಕ್ಷಿಸುವುದು... ಹೀಗೆ ಪಟ್ಟಿ ಬೆಳೆಯುತ್ತದೆ.

ಶಾಲೆಗೆ ಅನುಮತಿ ಕೊಡುವಾಗಿನಿಂದ ಹಿಡಿದು ಪ್ರತಿ ಹಂತದಲ್ಲೂ ಇಲಾಖೆ ಅಧಿಕಾರಿಗಳು ಆಡಳಿತ ಮಂಡಳಿಯವರ ಪುಡಿಗಾಸಿಗೆ ಕೈಯೊಡ್ಡದೆ,  ಒತ್ತಡರಹಿತವಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಪ್ರತಿ  ಶಾಲೆಯೂ ‘ಜ್ಞಾನದೇಗುಲ’ ಆಗಲು ಸಾಧ್ಯ ಅಲ್ಲವೇ?

–ಮುಕುಂದ ಮೈಗೂರ, ಅಧ್ಯಕ್ಷರು, ‘ಕ್ರಿಯಾಶೀಲ ಗೆಳೆಯರು’, ಧಾರವಾಡ

ಮುಗ್ಧರಿಂದ ಹೆಚ್ಚು ಸುಲಿಗೆ

ಮುಗ್ಧರು ಹೆಚ್ಚಿನ ಸಂಖ್ಯೆಯಲ್ಲಿರುವ, ಜಾಗೃತಿ ಕಡಿಮೆ ಇರುವ ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳ ಸುಲಿಗೆ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಹೈದರಾಬಾದ್‌ ಕರ್ನಾಟಕ ಇದಕ್ಕೆ ಹೊರತಾಗಿಲ್ಲ.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಸಕ್ಕರೆ ಕಾರ್ಖಾನೆ ಮಾಲೀಕರ ಲಾಬಿ ಇದೆ. ಸಕ್ಕರೆ ಕಾರ್ಖಾನೆಗಳು ರೈತಾಪಿ ವರ್ಗವನ್ನು ಹತೋಟಿಯಲ್ಲಿ ಇಟ್ಟುಕೊಂಡಿವೆ. ಅದೇ ರೀತಿ, ಕರ್ನಾಟಕದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಇದೆ. ದೊಡ್ಡದೊಡ್ಡ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಸರ್ಕಾರದಲ್ಲಿದ್ದಾರೆ. ಹೀಗಾಗಿ ರಾಜಕೀಯದಲ್ಲಿದ್ದವರೇ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಇದನ್ನು ಬದಲಾಯಿಸುವುದು ತುಂಬಾ ಕಷ್ಟ. ಎಲ್ಲ ಕಡೆಗೂ ಖಾಸಗೀಕರಣದ ದೊಡ್ಡ ಪ್ರವಾಹವೇ ಹರಿಯುತ್ತಿದೆ.

ಮಠಮಾನ್ಯಗಳು ಲಾಭದ ಸಂಸ್ಥೆಗಳಾಗಿ ಮಾರ್ಪಟ್ಟಿವೆ. ಹೆಚ್ಚು ವೃತ್ತಿಪರ ಕಾಲೇಜು­ಗಳನ್ನು ನಡೆಸುವ ಸ್ವಾಮೀಜಿಯು ‘ದೊಡ್ಡ ಸ್ವಾಮೀಜಿ’ ಎಂದು ಕರೆಸಿಕೊಳ್ಳುತ್ತಿದ್ದಾರೆ. ಪ್ರಾಥಮಿಕ, ಪ್ರೌಢಶಾಲೆ ನಡೆಸುವ ಸ್ವಾಮೀಜಿಗಳು ‘ಸಣ್ಣ ಸ್ವಾಮೀಜಿ’ ಗಳಾಗಿದ್ದಾರೆ. ಶಿಕ್ಷಣ ಸಂಸ್ಥೆಗಳು ಸ್ವಾಮೀಜಿಗಳ ಧಾರ್ಮಿಕ, ಸಾಮಾಜಿಕ ಸ್ಥಾನಮಾನ ನಿರ್ಧರಿಸುತ್ತಿವೆ.

ನಿಯಮ ಪಾಲಿಸದಿರುವುದು ಖಾಸಗಿಯವರಿಗೆ ದೊಡ್ಡ ವಿಷಯವೇ ಅಲ್ಲ. ಸರ್ಕಾರ ಬಯಸಿದಷ್ಟು ದಂಡ ಕಟ್ಟಿ ಮತ್ತೊಂದು, ಮಗದೊಂದು ಶಾಲೆ, ಕಾಲೇಜಿಗೆ ಅನು­ಮತಿ ಪಡೆಯುತ್ತಾರೆ. ಕಾನೂನು ಮಾಡಿದ ಮಾತ್ರಕ್ಕೆ ಸಮಸ್ಯೆ ಪರಿಹಾರವಾಗುತ್ತದೆ ಎನ್ನುವಂತಿಲ್ಲ. ಸರ್ಕಾರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರೇ ಇರುವುದರಿಂದ ‘ತಾವೇ ನಿಂತುಕೊಂಡ ಗಿಡದ ಟೊಂಗೆಯನ್ನು ಕಡಿದು’ ಬೀಳಿಸುವಷ್ಟು ಹುಚ್ಚರಲ್ಲ ಅವರು.  ಜನರಿಗೆ ನಿಜವಾದ ಸೇವೆ ಒದಗಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುವುದೊಂದೇ ಪರಿಹಾರ.

–ಪ್ರೊ. ಆರ್‌.ಕೆ.ಹುಡಗಿ, ‘ಸಮುದಾಯ’ ರಾಜ್ಯ ಘಟಕದ ಅಧ್ಯಕ್ಷರು, ಕಲಬುರ್ಗಿ

ಮಾಧ್ಯಮ ಪ್ರದರ್ಶಿಸಿ

ಶಾಲೆಗಳು ಯಾವ ಮಾಧ್ಯಮ­ದಲ್ಲಿ ಬೋಧಿಸಲು ಅನುಮತಿ ಪಡೆದುಕೊಂಡಿವೆ ಎಂಬುದನ್ನು ಪ್ರವೇಶ ದ್ವಾರದಲ್ಲೇ ಪ್ರದರ್ಶಿಸಬೇಕು. ಇದರಿಂದ ಮಕ್ಕಳಿಗೆ ಪ್ರವೇಶ ಪಡೆಯುವಾಗ ಪೋಷಕರಿಗೆ  ನೆರವಾ­ಗುತ್ತದೆ. ಆಗ ಅಂತಹ  ಶಾಲೆಗಳಿಂದ ಮೋಸ ಹೋಗುವ ಭಯ ಅಥವಾ ಆತಂಕ ಅವರಿಗೆ ಇರುವುದಿಲ್ಲ. ಪದವಿ ಕಾಲೇಜುಗಳ ಮಾದರಿಯಲ್ಲಿ ಎಲ್ಲ ಶಾಲೆಗಳನ್ನೂ ಪ್ರತಿ ವರ್ಷ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಶಾಲಾ ತನಿಖಾ ಸಮಿತಿ ವತಿಯಿಂದ  ತಪಾಸಣೆ ಮಾಡಿಸಬೇಕು.
–ಆರ್‌.ಕುಮಾರ್‌, ಆರ್‌ಟಿಇ ಕಾರ್ಯಕರ್ತರು, ಕುಣಿಗಲ್‌

ತಮ್ಮದೇ ನಿಯಮ

ಶಿಕ್ಷಣ ಕಾಯ್ದೆ–1983ನ್ನು ಯಾವ ಶಿಕ್ಷಣ ಸಂಸ್ಥೆಯೂ  ಪಾಲಿಸುತ್ತಿಲ್ಲ. ಪ್ರವೇಶ ಪ್ರಕ್ರಿಯೆ­ಯಲ್ಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿವೆ.
ತಾವೇ ರೂಪಿಸಿಕೊಂಡ ನಿಯಮದಡಿ ಶಿಕ್ಷಣ ನೀಡುತ್ತಿವೆ. ಅವುಗಳ ವಿರುದ್ಧ ಕ್ರಮ ಕೈಗೊಂಡು ಸೂಕ್ತ  ಲಗಾಮು ಹಾಕಬೇಕಾದ  ಸರ್ಕಾರ ಮೌನ ವಹಿಸಿದೆ. ವಂತಿಗೆ ಕೊಟ್ಟವರಿಗೆ ಮಾತ್ರ ಪ್ರವೇಶ ಖಚಿತ, ಉಳಿದವರಿಗೆ ಖಾತ್ರಿ ಇಲ್ಲ. ಇದರಲ್ಲಿ ಗುಟ್ಟೇನೂ ಇಲ್ಲ, ಇದು ಎಲ್ಲರಿಗೂ ಗೊತ್ತಿರುವ ವಿಚಾರ.

ಶೇಖ್‌ ಶೆಫಿ ಅಹ್ಮದ್‌,  ಮಾಹಿತಿ ಹಕ್ಕು ಕಾರ್ಯಕರ್ತರು, ಕಲಬುರ್ಗಿ

ಐ.ಡಿ ಕಾರ್ಡ್‌ ನೀಡಿ
ಶಾಲೆಗಳಿಗೆ ಮಾನ್ಯತೆ ನೀಡುವಾಗಲೇ ಮೂಲಸೌಲಭ್ಯ ಇರುವುದನ್ನು ಖಚಿತ ಪಡಿ­ಸಿಕೊಳ್ಳಬೇಕು.  ಅದು ಬಿಟ್ಟು, ಶಾಲೆ ಆರಂಭ­ವಾದ ಮೇಲೆ ಮುಚ್ಚಲು ಮುಂದಾ­ದರೆ ಪೋಷಕರಿಂದ ಪ್ರತಿ­ರೋಧ ವ್ಯಕ್ತವಾಗುತ್ತದೆ. ನಿಯಮ ಪಾಲಿ­ಸದ ಶಾಲೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಶಾಲೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನೋಡಿದರೆ ತುಂಬಾ ದುಃಖವಾಗುತ್ತದೆ. ಪೋಷಕ­ರಿಗೆ ಐ.ಡಿ ಕಾರ್ಡ್‌ ನೀಡಿ, ಅವರು ಬೇಕೆಂದಾಗ ಮುಕ್ತವಾಗಿ ಶಾಲೆಗಳ ಒಳ ಹೋಗಿ ತಮ್ಮ ಮಕ್ಕಳನ್ನು ಭೇಟಿಯಾಗಿ ಬರಲು ಅವಕಾಶ ಮಾಡಿ ಕೊಡಬೇಕು.

ಎಂ.ಕುಮಾರ್‌, ಪೋಷಕರು, ಆನೇಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT