ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಅಂದಕ್ಕೆ ಫಾಲ್ಸ್‌ ಸೀಲಿಂಗ್‌

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಪಕ್ಕದ್‌ ಮನೆಗೆ ಹೊಸಬರು ಬಂದಿದ್ದಾರೆ. ನೋಡಿದರೆ ಸಾಮಾನ್ಯದವರ ಥರ ಕಾಣಿಸ್ತಾರೆ, ಬನ್ನಿ ನೋಡಿಕೊಂಡು ಬರುವ’ ಎನ್ನುವ ಮೂವರು ಮಹಿಳೆಯರು ಮನೆಯಲ್ಲಿ ಹಾಕಿಕೊಳ್ಳುವ ಸಾಮಾನ್ಯ ಡ್ರೆಸ್‌ ಹಾಗೂ ಮೇಕಪ್‌ ಇಲ್ಲದ ಮುಖದಲ್ಲೇ ಹೋಗಿ ಆ ಮನೆಯ ಬಾಗಿಲು ಬಡಿಯುತ್ತಾರೆ. ಮನೆಯೊಳಕ್ಕೆ ಕಾಲಿಟ್ಟವರೇ ತಲೆ ಮೇಲೆತ್ತಿ ನೋಡುತ್ತಲೇ ದಿಗ್ಭ್ರಮೆಗೊಳಗಾಗುತ್ತಾರೆ. ದೊಡ್ಡದಾಗಿ ತೆರೆದುಕೊಳ್ಳುವ ಅವರ ಬಾಯಿ ಕ್ಷಣಗಳು ಕಳೆದರೂ ಮುಚ್ಚುವುದೇ ಇಲ್ಲ. ಕ್ಷಣ ಮಾತ್ರದಲ್ಲಿ ಅವರು ಹಾಕಿಕೊಂಡಿರುವ ಸಾಮಾನ್ಯ ಡ್ರೆಸ್‌ ದುಬಾರಿ ಬೆಲೆಯ ಉಡುಪಾಗಿ ಪರಿವರ್ತನೆ ಆಗಿಬಿಡುತ್ತದೆ, ಮುಖವೆಲ್ಲ ಮೇಕಪ್‌ನಿಂದ ನಳನಳಿಸುತ್ತದೆ, ಮೈಮೇಲೆ ಮಿನುಗುವ ಆಭರಣಗಳು ಅವತರಿಸುತ್ತವೆ... ಒಟ್ಟಿನಲ್ಲಿ ಸಾಮಾನ್ಯ ಮಹಿಳೆಯರು ಥಟ್ಟನೆ ‘ಮಾಡರ್ನ್’ ವನಿತೆಯರಾಗಿ ರೂ‍ಪಾಂತರ ಗೊಂಡಿರುತ್ತಾರೆ. ಗೇಲಿ ಮಾಡಲೆಂದೇ ಹೋಗಿದ್ದ ಮೂವರೂ ಮಹಿಳೆಯರಿಂದ ಆ ನೆರಮನೆಯಾಕೆಗೆ ಪ್ರಶಂಸೆಗಳ ಸುರಿಮಳೆಯೇ ಆಗುತ್ತದೆ...

ದಿನನಿತ್ಯ ಟಿ.ವಿ ಚಾನೆಲ್‌ಗಳಲ್ಲಿ ಬರುವ ಮನೆಯ ಆಲಂಕಾರಿಕ ಉಪಕರಣಗಳ ತಯಾರಿಕಾ ಕಂಪೆನಿಯೊಂದರ ಜಾಹೀರಾತು ಇದು. ಅಷ್ಟಕ್ಕೂ ಆ ಮಹಿಳೆಯರು ಹೀಗೆಲ್ಲ ಬದಲಾಗಲು ಕಾರಣವಾಗಿದ್ದುದೇ ಆ ಮನೆಯ ‘ಫಾಲ್ಸ್‌ ಸೀಲಿಂಗ್‌’ ಡಿಸೈನ್‌ನ ಬೆರಗಿನ ನೋಟ!
ಇದು ಜಾಹೀರಾತೇ ಇರಬಹುದು. ಆದರೆ ನಿಜವಾಗಿ, ಮನೆಯ ಸೌಂದರ್ಯ ಇಮ್ಮಡಿಗೊಳಿಸುವಲ್ಲಿ ಈ ‘ಫಾಲ್ಸ್‌ ಸೀಲಿಂಗ್‌’ ಪ್ರಮುಖ ಪಾತ್ರ ವಹಿಸುತ್ತದೆ. ಖರ್ಚಿಗಿಂತ ಮನೆಯ ಅಂದವೇ ಮುಖ್ಯವೆನ್ನುವವರಿಗೆ ಈ ‘ಸೀಲಿಂಗ್‌’ ವರದಾನ.

ಏನಿದು ಫಾಲ್ಸ್‌ ಸೀಲಿಂಗ್‌?
ಹಿಂದೆಲ್ಲ ಇದ್ದ ಹುಲ್ಲಿನ ಛಾವಣಿ ಜಾಗವನ್ನು ಈ ಮೊದಲು ಬಿದಿರು, ಅಡಿಕೆ ದಬ್ಬೆಗಳಿಂದ ರಕ್ಷಣೆ ಪಡೆದ ನಾಡ ಹೆಂಚು ಪಡೆದುಕೊಂಡಿತು. ವರ್ಷ ವರ್ಷವೂ ಹೊಸ ಹೊಸ ಅಡಿಕೆ ದಬ್ಬೆಗಳನ್ನು ಜೋಡಿಸುವುದು, ಒಡೆದ ಹೆಂಚುಗಳನ್ನು ತೆಗೆದು ಆ ಜಾಗದಲ್ಲಿ ಬೇರೊಂದು ಇರಿಸುವುದು ತ್ರಾಸದಾಯಕ ಕೆಲಸವಾಯಿತು. ಈ ಕಷ್ಟ ನೀಗಲು ಬಂದದ್ದು ಗಟ್ಟಿಮುಟ್ಟಾದ ಮಂಗಳೂರು ಹೆಂಚು. ಹೆಂಚು ನೋಡಿ ಬೇಜಾರಾದಾಗ ಕಾಲಕ್ರಮೇಣ ಬಂದದ್ದು ಸಿಮೆಂಟ್‌ (ಕಾಂಕ್ರೀಟ್‌) ಛಾವಣಿ. ಈ ಛಾವಣಿಗೆ ಇನ್ನಷ್ಟು ರೂಪು ನೀಡಲು ಕಾಫರ್ಡ್ ಸೀಲಿಂಗ್, ಫಿಲ್ಲರ್ಸ್‌ ಸ್ಲ್ಯಾಬ್‌... ಹೀಗೆ ಅನೇಕ ವಿಧಗಳ ಛಾವಣಿ (ಸೀಲಿಂಗ್‌) ಸಿದ್ಧಗೊಂಡವು.

ಸೌಂದರ್ಯ ಎಂದ ಮೇಲೆ ಅದರ ಜಗತ್ತು ಅಷ್ಟಕ್ಕೇ ಮುಗಿಯುವುದಿಲ್ಲವಲ್ಲ! ಆದ್ದರಿಂದ ಈ ಎಲ್ಲ ಛಾವಣಿಗೆ ಇನ್ನಷ್ಟು, ಮತ್ತಷ್ಟು ಮೆರುಗು ನೀಡಲು ಬಂದಿರುವುದೇ ‘ಫಾಲ್ಸ್‌ ಸೀಲಿಂಗ್‌’ (false ceiling)

‘ಫಾಲ್ಸ್‌ ಸೀಲಿಂಗ್‌’ ಪದವನ್ನು ಕನ್ನಡದಲ್ಲಿ ಯಥಾವತ್ತಾಗಿ ತರ್ಜುಮೆ ಮಾಡಿದರೆ ‘ನಕಲಿ ಅಥವಾ ಅಣಕು ಸೂರು’ ಎಂದಾಗುತ್ತದೆ. ಆದರೆ ಇದನ್ನು ಸಾಮಾನ್ಯವಾಗಿ ಒಳಾಂಗಣದ ‘ಅಲಂಕಾರಿಕ ಸೂರು’ ಅಥವಾ ‘ಅಲಂಕಾರಿಕ ಛಾವಣಿ’ ಎಂದೇ ಕರೆಯಲಾಗುತ್ತದೆ. ಕ್ರಾಂಕ್ರೀಟ್‌ ತಾರಸಿಿಯ ಕೆಳಭಾಗದಲ್ಲಿ ಕೃತಕವಾಗಿ ಇನ್ನೊಂದು ಛಾವಣಿ ನಿರ್ಮಿಸಿ ಮನೆಯ ಒಳಾಂಗಣದ ಸೌಂದರ್ಯ ವೃದ್ಧಿಸುವ ಈ ‘ಫಾಲ್ಸ್‌ ಸೀಲಿಂಗ್’ ಕೆಲ ವರ್ಷಗಳಿಂದ ಜನಪ್ರಿಯಗೊಳ್ಳುತ್ತಿದೆ. ಇದನ್ನು ಡ್ರಾಪ್‌ ಸೀಲಿಂಗ್‌, ಟಿ-ಬಾರ್‌ ಸೀಲಿಂಗ್‌, ಸಸ್ಪೆಂಡೆಡ್‌ ಸೀಲಿಂಗ್‌ ಎಂದೂ ಕರೆಯಲಾಗುತ್ತದೆ. ಕೇವಲ ತಾರಾ ಹೋಟೆಲ್‌ಗಳಲ್ಲಿ, ಸಿರಿವಂತರ ಬಂಗಲೆಗಳಲ್ಲಿ ತನ್ನ ಸ್ಥಾನ ಪಡೆದುಕೊಂಡಿದ್ದ ಈ ಸೀಲಿಂಗ್‌ ಈಗ ಜನಸಾಮಾನ್ಯರ ಮನೆಯ ಅಂದವನ್ನೂ ಇಮ್ಮಡಿಗೊಳಿಸುತ್ತಿದೆ. ಇದೇ ಕಾರಣಕ್ಕೆ ಹೊಸ ಹೊಸ ಬಗೆಯ, ವಿವಿಧ ವಿನ್ಯಾಸದ ಸೀಲಿಂಗ್‌ಗಳು ಪರಿಚಯವಾಗುತ್ತಿವೆ.

ವಿವಿಧ ವಿನ್ಯಾಸ
ಮರ, ಥರ್ಮಾಕೋಲ್‌, ಜಿಪ್ಸಂ‌, ಆರ್ಮ್‌ಸ್ಟ್ರಾಂಗ್‌, ಏರೋಲೈಟ್‌, ಪಿವಿಸಿ, ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮುಂತಾದವುಗಳಿಂದ ವಿವಿಧ ವಿನ್ಯಾಸದ ಫಾಲ್ಸ್‌ ಸೀಲಿಂಗ್‌ ಸಿದ್ಧಪಡಿಸಬಹುದು.

ಈ ಪೈಕಿ ಕಡಿಮೆ ಮೊತ್ತದ್ದೆಂದರೆ ಎಂದರೆ  ಅಲ್ಯುಮಿನಿಯಮ್‌ ಬಳಸಿ ಮಾಡಲಾದ ಥರ್ಮಾಕೋಲ್‌ ಫಾಲ್ಸ್‌ ಸೀಲಿಂಗ್‌. ಇದು ಚದರ ಮೀಟರ್‌ ಒಂದಕ್ಕೆ ರೂ. 20ರಿಂದ ರೂ. 26 ಲಭ್ಯವಿದೆ. ಆದರೆ ಇದು ಅಷ್ಟೊಂದು ಬಾಳಿಕೆ ಬರುವುದಿಲ್ಲ ಎನ್ನುತ್ತಾರೆ ತಜ್ಞರು.

ಹೆಚ್ಚಿನ ದುಡ್ಡು ಖರ್ಚು ಮಾಡುವ ಹಾಗಿದ್ದರೆ ಹೊರದೇಶಗಳಿಂದ ಆಮದು ಮಾಡಿಕೊಂಡಿರುವ ‘ಆರ್ಮ್‌ಸ್ಟ್ರಾಂಗ್‌’ ಸೀಲಿಂಗ್‌ ಉಪಕರಣ ಒಳ್ಳೆಯದು. ಇದು ದೀರ್ಘ ಕಾಲ ಬಾಳಿಕೆ ಬರುತ್ತದೆ. ಇದರಲ್ಲಿ ವಿವಿಧ ಮಾದರಿಯ ವಿನ್ಯಾಸಗಳೂ ಲಭ್ಯವಿವೆ.  ‘ಕ್ಯಾಲ್ಸಿಯಂ ಸಿಲಿಕೇಟ್‌’ನಿಂದ  ತಯಾರಿಸಲಾದ ಏರೋಲೈಟ್‌ ಫಾಲ್ಸ್‌ ಸೀಲಿಂಗ್‌ ಸಾಮಗ್ರಿ ತೇವಾಂಶ ಹೀರಿಕೊಳ್ಳುವ ಸಂಪೂರ್ಣ ಸಾಮರ್ಥ್ಯ ಹೊಂದಿದ್ದು, ಇದು ದಹನಶಕ್ತಿಯನ್ನೂ ಉಳ್ಳದ್ದಾಗಿದೆ. ಇದು 2/2 ಅಡಿ ಅಗಲ ಹಾಗೂ 15ಎಂಎಂ ದಪ್ಪ ಇರುವ ಅಳತೆಯಲ್ಲಿ ಚದರ ಅಡಿ ಒಂದಕ್ಕೆ ರೂ. 65ರಿಂದ ರೂ. 85ರವರೆಗೂ ಮಾರುಕಟ್ಟೆಯಲ್ಲಿ ಲಭ್ಯವಿದೆ.

ತೂಕದಲ್ಲಿ ಹಗುರ, ಉಷ್ಣ ಸಹಿಷ್ಣುತೆ, ಬೆಂಕಿ ನಿರೋಧಕ, ಧ್ವನಿ ನಿರೋಧಕ ಕೋಣೆಯನ್ನು ಇಚ್ಛಿಸುವವರು ಅಲ್ಲಿ ಜಿಪ್ಸಂನಿಂದ ತಯಾರಿಸಲಾದ ಫಾಲ್ಸ್‌ ಸೀಲಿಂಗ್‌ ಬಳಕೆ ಮಾಡಬಹುದು. ಈ ಫಾಲ್ಸ್‌ ಸೀಲಿಂಗ್‌ ಹಾಕಿದರೆ ಅಲ್ಲಿ ಸುಲಭದಲ್ಲಿ ಪೇಂಟ್‌ ಮಾಡಬಹುದು. ಇದರಲ್ಲಿ ಬಳಸುವ ಜಿಪ್ಸ್ಂ ಬೋರ್ಡ್‌ಗೆ ಚದರ ಅಡಿಗೆ ರೂ. 90ರವರೆಗೂ ಬೆಲೆ ಇದೆ.

ತಾರಸಿಯ ಅಂಚುಗಳಿಗೆ ‘ರಾಯಲ್ ಲುಕ್’  ನೀಡಬೇಕೆಂದು ಬಯಸುವವರು ‘ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌’ ಫಾಲ್ಸ್‌ ಸೀಲಿಂಗ್‌ ಬಳಕೆ ಮಾಡಬಹುದು.

ಇದನ್ನು ಡ್ರೈ ಜಿಪ್ಸಂ‌ ಬಳಸಿ ತಯಾರಿಸಲಾಗುತ್ತದೆ. ಶುದ್ಧ ಜಿಪ್ಸಂ  ಬಿಸಿ ಮಾಡಿದ ನಂತರ ಅದರಲ್ಲಿರುವ ನೀರಿನ ಅಂಶದಲ್ಲಿ ಮುಕ್ಕಾಲು ಭಾಗ ಇಂಗಿಸಲಾಗುತ್ತದೆ. ನೀರು ಎಷ್ಟು ಬೇಗ ಇದು ಹೀರಿಕೊಳ್ಳುತ್ತದೋ ಅಷ್ಟು ವೇಗದಲ್ಲಿ ಇದು ಗಟ್ಟಿಯಾಗುತ್ತದೆ.
ಇದರಲ್ಲಿ ನಾಜೂಕು ಕುಸುರಿ ಕೆಲಸ ಮಾಡಬಹುದಾಗಿದೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಮನೆಯ ತಾರಸಿಯ ಅಂಚುಗಳಿಗೆ ಬೇಕಾದಂತಹ ವಿನ್ಯಾಸ ನೀಡುವುದು. ಇದರ ಬೆಲೆ ಚದರ ಅಡಿಗೆ  ರೂ. 70ರವರೆಗೂ ಇದೆ. ವಿವಿಧ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಪಟ್ಟಿ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದರ ಬೆಲೆ ಸುಮಾರು ರೂ. 130.

ಡಿಸೈನಿಂಗ್‌ ಮಾದರಿ
ಇವೆಲ್ಲ ಫಾಲ್ಸ್‌ ಸೀಲಿಂಗ್‌ ಬಳಸುವ ಸಲಕರಣೆಗಳ ಮಾತಾದರೆ, ಇವುಗಳ ಡಿಸೈನಿಂಗ್‌ನಲ್ಲೂ ಅನೇಕ ಮಾದರಿಗಳಿವೆ. ಅವುಗಳ ಪೈಕಿ ಕೆಲವೊಂದು ಇಲ್ಲಿ ವಿವರಿಸಲಾಗಿದೆ.

ಟ್ರೇ ಸೀಲಿಂಗ್: ‘ಟ್ರೇ’ ಹೆಸರೇ ಹೇಳುವಂತೆ ಇದು ಚಹ, ಕಾಫಿ, ತಿಂಡಿಗಳನ್ನು ಸರಬರಾಜು ಮಾಡುವ ಬಟ್ಟಲು. ಈ ಬಟ್ಟಲನ್ನು ತಲೆಕೆಳಗೆ ಮಾಡಿದರೆ ಯಾವ ಆಕಾರ ಕಾಣಿಸುತ್ತದೆಯೇ ಅದೇ ಮಾದರಿಯಲ್ಲಿಯೇ ‘ಟ್ರೇ ಫಾಲ್ಸ್‌ ಸೀಲಿಂಗ್‌’ ವಿನ್ಯಾಸಗೊಳಿಸಲಾಗಿದೆ. ಮಧ್ಯಮ ಆದಾಯದವರಿಗೆ ನಿಲುಕುವ ಬೆಲೆಯಲ್ಲಿ ಇದು ಲಭ್ಯ.

ಶೆಡ್ ಸೀಲಿಂಗ್: ಇಳಿಜಾರು ಸ್ವರೂಪದಲ್ಲಿ ಸೀಲಿಂಗ್‌ಗೆ ರೂಪು ನೀಡಿರುವುದು ಹಲವೆಡೆ ಸಾಮಾನ್ಯವಾಗಿದೆ. ಈ ಸೀಲಿಂಗ್‌ ಡಿಸೈನ್‌ ಈಗ ಫಾಲ್ಸ್‌ ಸೀಲಿಂಗ್‌ ವಿನ್ಯಾಸದ ರೂಪದಲ್ಲಿ ಬದಲಾವಣೆ ಹೊಂದಿದೆ. ಒಂದು ಎತ್ತರದ ಹಾಗೂ ಇನ್ನೊಂದು ಗಿಡ್ಡ ಗೋಡೆಗಳ ಮಧ್ಯೆ ಇದನ್ನು ಛಾವಣಿ ರೂಪದಲ್ಲಿ ವಿನ್ಯಾಸಗೊಳಿಸಲಾಗುತ್ತದೆ. ಹಾಲ್‌ಗಳಲ್ಲಿ ಹಾಗೂ ಲಿವಿಂಗ್‌ ಕೋಣೆಯಲ್ಲಿ ಇದನ್ನು ವಿನ್ಯಾಸಗೊಳಿಸಿದರೆ ಉತ್ತಮ.

ಕನ್ವೆನ್ಷನಲ್ ಸೀಲಿಂಗ್: ಬೇರೆಲ್ಲ ಫಾಲ್ಸ್‌ ಸೀಲಿಂಗ್‌ಗೆ ಹೋಲಿಸಿದ್ದಲ್ಲಿ ಕಡಿಮೆ ದರದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುವ ಸೀಲಿಂಗ್‌ ಎಂದರೆ ಅದು ಕನ್ವೆನ್ಷನಲ್‌ ಸೀಲಿಂಗ್‌. 10ರಿಂದ 12 ಅಡಿ ಎತ್ತರದಿಂದ ಹಿಡಿದು ಅಧಿಕ ಎತ್ತರದ ಛಾವಣಿಯ ಕೆಳಭಾಗದಲ್ಲೂ ಇದನ್ನು ಬಳಸಬಹುದಾಗಿದೆ. ಇದರ ಮೇಲೆ ಪೇಂಟಿಂಗ್‌ ಮಾಡುವುದು ಕೂಡ ಸುಲಭವಾಗಿದ್ದು, ಹಲವು ವರ್ಷಗಳವರೆಗೂ ಬಣ್ಣಗೆಡುವುದಿಲ್ಲ ಎನ್ನುವುದು ಅನುಭವಸ್ಥರ ಮಾತು.

ಕೋವ್ ಸೀಲಿಂಗ್: ಕನ್ವೆನ್ಷನಲ್ ಹಾಗೂ ಟ್ರೇ ಫಾಲ್ಸ್‌ ಸೀಲಿಂಗ್್್ ಈ ಎರಡೂ ವಿನ್ಯಾಸಗಳನ್ನು ಒಟ್ಟಿಗೇ ಸೇರಿಸಿ ಹೊಸದಾಗಿ ರೂಪಗೊಳಿಸಿರುವ ಸೀಲಿಂಗ್‌ ಇದು. ಇದನ್ನು ಕೂಡ ವಿವಿಧ ಆಕಾರಗಳಲ್ಲಿ ವಿನ್ಯಾಸಗೊಳಿಸಬಹುದು.

ಡೋಮ್ ಸೀಲಿಂಗ್:  ಈ ವಿನ್ಯಾಸ ಪುರಾತನ ವಾಗಿದ್ದು, ಹಲವು ದೇಗುಲಗಳಲ್ಲಿನ ಛಾವಣಿ ಮೇಲೆ ಇದನ್ನು ಕಾಣಬಹುದು. ಅದೇ ಮಾದರಿಯನ್ನು ಅನುಸರಿಸಿ ಈಗ ಫಾಲ್ಸ್‌ ಸೀಲಿಂಗ್‌ ಅನ್ನೂ ಹಲವೆಡೆ ವಿನ್ಯಾಸಗೊಳಿಸಲಾಗಿದೆ.  ಅದೇ ರೀತಿ, ಮರ ಅಥವಾ ಪ್ಲೈವುಡ್ ಬಳಸಿ ಮಾಡುವ ವಿನ್ಯಾಸಕ್ಕೆ ಟಂಗ್ ಆ್ಯಂಡ್ ಗ್ರೂವ್ ಫಾಲ್ಸ್‌ ಸೀಲಿಂಗ್ ಎಂದು ಹೆಸರಿಡಲಾಗಿದೆ.

ಕ್ಯಾಥೆಡ್ರಲ್ ಸೀಲಿಂಗ್: ಹಳೆಯ ಬೇರು ಹೊಸ ಚಿಗುರು ಎನ್ನುವಂತೆ ಹಳೆಯ ವಿನ್ಯಾಸಕ್ಕೆ ಹೊಸ ಮೆರುಗು ನೀಡಿ ಅದಕ್ಕೊಂದು ನೂತನ ಹೆಸರು ಇರಿಸಲಾಗಿದೆ. ಅದೇ ಕ್ಯಾಥೆಡ್ರಲ್ ಸೀಲಿಂಗ್. ಚರ್ಚ್‌ಗಳ ಛಾವಣಿ ಮೇಲೆ ಅಳವಡಿಸಲಾಗುವ ಮಾದರಿಯನ್ನೇ ಇಲ್ಲಿ ಫಾಲ್ಸ್‌ ಸೀಲಿಂಗ್‌ ಆಗಿ ಬಳಸಲಾಗುತ್ತಿದೆ. ಇದು ಬಹು ಎತ್ತರದ ಕಟ್ಟಡಗಳಿಗೆ ಸುಂದರವಾಗಿ ಕಾಣಿಸುತ್ತದೆ.

ಇವುಗಳ ಪೈಕಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆಯ ವಿನ್ಯಾಸ ಮಾಡಿಕೊಂಡರೆ ಜಾಹೀರಾತಿನಲ್ಲಿ ತೋರಿಸುವಂತೆ ಬರುವವರೆಲ್ಲ ಬಾಯಿ ತೆರೆದು ನೋಡುವಂತಾಗುತ್ತದೆ!

‘ಮನೆ ತಂಪಾಗಲು ಉತ್ತಮ’
ಈ ರೀತಿಯ ಸೀಲಿಂಗ್‌ಗಳು ಮನೆಯನ್ನು ತಂಪಾಗಿ ಇರಿಸಲು ನೆರವಾಗುತ್ತವೆ. ಮನೆಯ ಎತ್ತರ ಅಧಿಕವಾಗಿದ್ದರೆ, ಈ ಫಾಲ್ಸ್‌ ಸೀಲಿಂಗ್‌ ಮೂಲಕ ಅಂತರ ಕಡಿಮೆ ಮಾಡಿಕೊಳ್ಳಬಹುದು. ಅಂತರ ಕಡಿಮೆ ಆಗುವ ಕಾರಣ, ವೈರಿಂಗ್‌, ಭದ್ರತಾ ಕ್ಯಾಮೆರಾ, ಲೈಟಿಂಗ್‌ ವ್ಯವಸ್ಥೆ ಇತ್ಯಾದಿಗಳನ್ನು ಸಲೀಸಾಗಿ ಮಾಡಬಹುದು. ಹವಾನಿಯಂತ್ರಿತ ಕೊಠಡಿಯಾಗಿದ್ದರೆ ಎತ್ತರ ಕಮ್ಮಿಯಾದಷ್ಟು ಎಲ್ಲೆಡೆ ಚೆನ್ನಾಗಿ ಗಾಳಿಯಾಡಲೂ ಅನುಕೂಲ ಆಗುತ್ತದೆ. ಬಚ್ಚಲು ಮನೆಯಲ್ಲಿ ಫಾಲ್ಸ್‌ ಸೀಲಿಂಗ್‌ ಮೂಲಕ ಮೇಲುಭಾಗದಲ್ಲಿ ಇರುವ ಪೈಪ್‌ ಹಾಗೂ ಇನ್ನಿತರ ಫಿಟ್ಟಿಂಗ್‌ಗಳನ್ನು ಮುಚ್ಚಲು ಅನುಕೂಲ ಆಗುತ್ತದೆ.
ಸುಧೀರ್‌ ಶೆಟ್ಟಿ, ಉದ್ಯಮಿ, ಬೆಂಗಳೂರು

‘ಮುಖಕ್ಕೆ ಮೇಕಪ್‌ ಇದ್ದಂತೆ’
ಮುಖ ಇನ್ನಷ್ಟು, ಮತ್ತಷ್ಟು ಚೆನ್ನಾಗಿ ಕಾಣಿಸಬೇಕು ಎಂದರೆ ಹೆಚ್ಚು ಹೆಚ್ಚು ಮೇಕಪ್‌ ಮಾಡಿಕೊಳ್ಳುತ್ತೇವಲ್ಲ, ಫಾಲ್ಸ್‌ ಸೀಲಿಂಗ್‌ ಕೂಡ ಅದೇ ರೀತಿಯದ್ದು. ಗ್ರಾಹಕರ ಗಮನ ಸೆಳೆಯಲು ವಾಣಿಜ್ಯದ ಉದ್ದೇಶದಿಂದ ಮಳಿಗೆಗಳಲ್ಲಿ, ಹೋಟೆಲ್‌ಗಳಲ್ಲಿ ಇದನ್ನು ಬಳಸುವುದು ಮಾಮೂಲು. ಮನೆಯ ಅಂದ ಹೆಚ್ಚಿಸಲು ‘ಪ್ರೆಸ್ಟೀಜ್‌’ ಪ್ರಶ್ನೆಗೆ ಸಿರಿವಂತರೂ ಬಳಸಬಹುದು. ಆದರೆ ಸಾಮಾನ್ಯ ಹಾಗೂ ಅಲ್ಪ ಆದಾಯದವರಿಗೆ ಇದು ಹೆಚ್ಚುವರಿ ಹೊರೆಯಾಗುವ ಸಾಧ್ಯತೆ ಇರುವ ಕಾರಣ, ಅಳವಡಿಕೆ ಕಷ್ಟವಾಗಬಹುದು, ದುಡ್ಡಿದ್ದರೆ ಖಂಡಿತ ಮಾಡಬಹುದು.
ಅರುಣ್‌ ಕುಮಾರ್‌ ಆರ್‌.ಟಿ, ಕ್ರಿಯೇಟಿವ್‌ ಕನ್ಸಲ್ಟೆಂಟ್ (ಒಳಾಂಗಣ ವಿನ್ಯಾಸಗಾರರು) ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT