ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ವಿನ್ಯಾಸಕ್ಕೆ ಮರದ ನೆಲಹಾಸು

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸುಂದರವಾದ ಮನೆಯೊಂದರ ನಿರ್ಮಾಣ  ತಾರಸಿಯ ಕೆಲಸದೊಂದಿಗೆ ಅರ್ಧಾಂಶದಷ್ಟು ಮುಗಿದಿದೆ. ಇಷ್ಟರವರೆಗೂ ವೆಚ್ಚವಾಗಿದ್ದಕ್ಕಿಂತ ತುಸು ಹೆಚ್ಚೇ ಹಣ ಮುಂದಿನ ಕೆಲಸಗಳಾದ ನೆಲದ ಹೊದಿಕೆ, ಮರಗೆಲಸ, ವಿದ್ಯುತ್‌ ವೈರಿಂಗ್‌, ನೀರು ಸರಬರಾಜು ನಲ್ಲಿ ಜೋಡಣೆ, ಗಾರೆ, ಸುಣ್ಣ, ಬಣ್ಣಗಳಿಗೆ ಖರ್ಚಾಗುತ್ತದೆ.

ಈಗ ಎದುರಾಗಿರುವ ಪ್ರಶ್ನೆ ಏನೆಂದರೆ ಮನೆಯ ಒಳಾವರಣದಲ್ಲಿ ಯಾವ ಬಗೆಯ ನೆಲಹಾಸು ಹಾಕಿಸುವುದು? ಗೆಳೆಯರು ಒಬ್ಬೊಬ್ಬರೂ ಒಂದೊಂದು ಸಲಹೆ ಕೊಡುತ್ತಾರೆ. ಆದರೆ, ನಿರ್ಧರಿಸುವುದು ತುಸು ಕಷ್ಟದ ಕೆಲಸವೇ ಆಗಿದೆ.

ಸೆರಾಮಿಕ್ ಟೈಲ್ಸ್, ಅಮೃತಶಿಲೆ, ಗ್ರಾನೈಟ್, ಸಾರ್ಡ್, ಮ್ಯಾಲಕೈಟ್, ವಿಟ್ರಿಫೈಡ್‌.... ಹೀಗೆ ಹಲವು ಬಗೆಯ ನೆಲಹಾಸುಗಳನ್ನು ಹಜಾರ, ಕೊಠಡಿಗಳ ನೆಲಕ್ಕೆ ಹೊದಿಸಬಹುದು.

ಎರೆಮಣ್ಣಿನಿಂದ ಅಚ್ಚುಹಾಕಿ ಬೇಯಿಸಿ ತಯಾರಿಸಿದ, ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಾಗಿ ಇರುವ ನೆಲಹಾಸುಗಳೂ ಕೆಲವರಿಗೆ ಸೂಕ್ತ ಅನಿಸುತ್ತವೆ.

ಇವೆಲ್ಲವನ್ನೂ ಹಿಂದಿಕ್ಕುವಂತೆ ಈಗ ಮರದ ಹಲಗೆಗಳಿಂದ ತಯಾರಿಸಿದ ನೆಲಹಾಸುಗಳು (ಟೈಲ್ಸ್) ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶಿಸಿವೆ. ಇದರ ವೈವಿಧ್ಯಮಯ ರೇಖಾ ವಿನ್ಯಾಸ, ಬಗೆಬಗೆ ಬಣ್ಣ, ಸುಂದರವಾದ ಅಲಂಕಾರಿಕ ನಮೂನೆಗಳು ಗಮನ ಸೆಳೆಯುವಂತಿವೆ.

ನಿಜವಾಗಿಯೂ ಈ ನೆಲಹಾಸು ಮರದ್ದೇ? ಎಂದು ಮೂಗಿನ ಮೇಲೆ ಅಚ್ಚರಿಯಿಂದ ಬೆರಳಿಸುವಷ್ಟರ ಮಟ್ಟದಲ್ಲಿ ಭ್ರಮೆ ಮೂಡಿಸುವಂತಹ ನಮೂನೆಗಳ ಟೈಲ್ಸ್‌ಗಳು ಮಾರುಕಟ್ಟೆಯಲ್ಲಿವೆ.

ಸೆರಾಮಿಕ್‌ ನೆಲಹಾಸುಗಳಲ್ಲಿ ಡಿಜಿಟಲ್ ಇಮೇಜಿಂಗ್, ಇಂಕ್‌ಜೆಟ್ ಮುದ್ರಣದಿಂದ ಮೂಡಿಸಿದ ವಿನ್ಯಾಸಗಳು ಮನೆಗೆ ಸಂಪೂರ್ಣವಾಗಿ ಹೊಸ ನೋಟ ನೀಡುತ್ತವೆ.

ಇಂತಹ ವಿಶಿಷ್ಟ ನೆಲಹಾಸುಗಳನ್ನು ಚೀನಾ ಮಾರುಕಟ್ಟೆಗೆ ಬಿಟ್ಟಿದೆ. ವಿವಿಧ ದೇಶಗಳೂ ಮರದ ಟೈಲ್ಸ್ ತಯಾರಿಕೆಯಲ್ಲಿ ತೊಡಗಿವೆ. ಅಟ್ಲಾಂಟಾದಲ್ಲಿ ಓಕ್, ಎನಿಗ್ಮಾ ಅಥವಾ ಅಕ್ರೋಡ್ ಎಂಬ ಬಲಿಷ್ಠ ಮರಗಳಿಂದ ಒಂದು ಅಥವಾ ಮೂರು ಮೀಟರ್ ಉದ್ದ, ೩೩ ಮಿಲಿಮೀಟರ್ ದಪ್ಪವಿರುವ ಹಲಗೆಗಳನ್ನು ಯಂತ್ರದಿಂದ ಕತ್ತರಿಸಿ, ಅದನ್ನು ಕನ್ನಡಿಯ ಹಾಗೆ ನುಣ್ಣಗೆ ಹೊಳೆಯುವಂತೆ ಮಾಡುತ್ತಾರೆ.

ಗೆದ್ದಲು ನಿರೋಧಕವಾದ ತೈಲದಲ್ಲಿ ಮರವನ್ನು ಸಂಸ್ಕರಣಗೊಳಿಸಿದ ಬಳಿಕ ಸೀಸದ ಅಂಶವಿರದ ಬಣ್ಣಗಳನ್ನು ಬಳಸಿ ಗ್ರಾಫಿಕ್ ವಿನ್ಯಾಸ ಬಿಡಿಸುತ್ತಾರೆ. ಕೆಳಗೆ ಎಂಟು ಇಂಚು ದಪ್ಪವಾಗಿ ಕಾಂಕ್ರೀಟ್ ಹರಡಿ ಪ್ಲೈವುಡ್ ಹಲಗೆಗಳನ್ನು ಹಾಸಿ ಅದರ ಮೇಲಿಂದ ಕಾಂಕ್ರೀಟ್ ಗಾರೆ ಲೇಪಿಸಿ ಮರದ ಟೈಲ್ಸ್‌ಗಳನ್ನು ಜೋಡಿಸಲಾಗುವುದು. ಅಳವಡಿಸಿ ಒಂದು ವಾರದ ತನಕ ಮರ ಅಲ್ಪಾಂಶ ತೂಕವನ್ನು ಕಳೆದುಕೊಂಡರೂ ಬಿರುಕುಗಳಾಗಲೀ ಇನ್ನಿತರ ಕೊರತೆಗಳಾಗಲೀ ಗೋಚರಿಸದು. ನೂರಕ್ಕಿಂತ ಅಧಿಕ ವರ್ಷಗಳವರೆಗೂ ಈ ನೆಲಹಾಸು ಮುಕ್ಕಾಗದು ಎಂಬ ಆಶ್ವಾಸನೆ ನೀಡುತ್ತಾರೆ ತಜ್ಞರು.

ಒಂದು ಮರದ ಟೈಲ್ಸ್ ಜೋಡಿಸಿ ಅದರ ಪಕ್ಕಕ್ಕೆ ಸೆರಾಮಿಕ್ ಟೈಲ್ಸ್... ಇದೇ ಪ್ರಕಾರವಾಗಿ ಜೋಡಿಸುವ ಕ್ರಮವನ್ನೂ ಅನುಸರಿಸಬಹುದು. ಕಲ್ಪನೆಗೆ, ಪ್ರಯೋಗಕ್ಕೆ ಈ ಬಗೆಯ ನೆಲಹಾಸುಗಳಲ್ಲಿ ಅವಕಾಶವಿದೆ.

ಕೇವಲ ಮರದ ಟೈಲ್ಸ್‌ ಬಳಸಿಯೇ ರಂಗೋಲಿ ಚಿತ್ತಾರದ ರೀತಿಯ ಒಳಾಂಗಣ ವಿನ್ಯಾಸ ರಚಿಸಬಹುದಾಗಿದೆ. ಮರದಲ್ಲಿರುವ ಸಹಜವಾದ ಉಂಗುರ ಗೆರೆಗಳು ಸೆರಾಮಿಕ್‌ನ ಆಕರ್ಷಣೆಗಿಂತಲೂ ಹೆಚ್ಚು ಸುಂದರ, ವೈವಿಧ್ಯಮಯ ಎನಿಸಿದರೆ ಅಚ್ಚರಿ ಇಲ್ಲ.
ಮರದ ಟೈಲ್ಸ್ ನಿರ್ವಹಣೆ ಕಷ್ಟವಿಲ್ಲ. ಸ್ವಚ್ಛಗೊಳಿಸುವುದೂ ಸುಲಭ.

ಕೊಠಡಿ ಮತ್ತು ಊಟದ ಕೋಣೆ ಪರಿಕಲ್ಪನೆಯನ್ನೇ ಬದಲಾಯಿಸಬಲ್ಲ ವಿನ್ಯಾಸಗಳೂ ಮರದ ನೆಲಹಾಸುಗಳಿಂದ ಸಾಧ್ಯ. ಆದರೆ, ನೀರು ಚೆಲ್ಲಾಡುವ ಅಡುಗೆ ಮನೆ ಮತ್ತು ಸ್ನಾನಗೃಹದಲ್ಲಿ ಈ ನೆಲಹಾಸುಗಳ ಬಳಕೆ ಸಾಧ್ಯವಿಲ್ಲ.

ಅಗತ್ಯವೆನಿಸಿದಾಗ ತೆಳುವಾಗಿ ಪಾಲಿಷ್‌ ಸಹ ಮಾಡಿಸಬಹುದು. ಆಗ ಹೊಸ ಹೊಳಪು ಬಂದಂತಾಗಿ ಹೆಚ್ಚು ಮಿನುಗುಟ್ಟುತ್ತದೆ.
ಋತುಗಳಿಗೆ ಅನುಸಾರವಾಗಿ ಈ ಮರದ ನೆಲಹಾಸು ಇರುವ ಜಾಗವು ಬೆಚ್ಚನೆಯ ಮತ್ತು ತಂಪು ರೀತಿಯ ಅನುಭವವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT