ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒವೈಸಿಗೆ ನಿರ್ಬಂಧ ಎತ್ತಿಹಿಡಿದ ಹೈಕೋರ್ಟ್‌

ಕೋಮು ಸಾಮರಸ್ಯಕ್ಕೆ ಹಾನಿ ಭೀತಿ:ಎಐಎಂಐಎಂ ಮುಖಂಡನಿಗೆ ನಗರ ಪ್ರವೇಶ ನಿಷೇಧ
Last Updated 24 ಏಪ್ರಿಲ್ 2015, 20:02 IST
ಅಕ್ಷರ ಗಾತ್ರ

ಬೆಂಗಳೂರು: ಆಲ್‌ ಇಂಡಿಯಾ ಮಜಿಲಿಸ್‌ ಇ–ಇತ್ತೆಹಾದುಲ್‌ ಮುಸ್ಲಿಮಿನ್‌ (ಎಐಎಂಐಎಂ) ಅಧ್ಯಕ್ಷ ಹಾಗೂ ಹೈದರಾಬಾದ್‌ ಕ್ಷೇತ್ರದ ಸಂಸದ ಅಸಾದುದ್ದೀನ್‌ ಒವೈಸಿ ಬೆಂಗಳೂರು ನಗರ ಪ್ರವೇಶಿಸದಂತೆ ನಗರ ಪೊಲೀಸ್ ಕಮಿಶನರ್‌ ವಿಧಿಸಿದ್ದ ನಿರ್ಬಂಧವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಈ ಸಂಬಂಧದ ಮಧ್ಯಂತರ ಆದೇಶವನ್ನು ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ಪ್ರಕಟಿಸಿತು.

ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ ‘ಒವೈಸಿ ಹೇಳಿ ಕೇಳಿ ಕೋಮು ಪ್ರಚೋದನೆಗೆ ಹೆಸರಾದ ವ್ಯಕ್ತಿ. ಒಂದು ವೇಳೆ  ಇವರಿಗೆ ಪಕ್ಷದ ಸಮಾವೇಶದಲ್ಲಿ ಮಾತನಾಡಲು ಅವಕಾಶ ಕೊಟ್ಟರೆ ಇಲ್ಲಿನ ಕೋಮು ಸೌಹಾರ್ದತೆಗೆ  ಧಕ್ಕೆ ತರುತ್ತಾರೆ’ ಎಂದು ಪ್ರತಿಪಾದಿಸಿದರು.

‘ಒವೈಸಿ ಮಾತನಾಡುವ ವಿಷಯಗಳು ಇವರ ಪ್ರತಿಸ್ಪರ್ಧಿ ಎಂಬಂತಿರುವ ವಿಶ್ವ ಹಿಂದೂ ಪರಿಷತ್‌ನ ಮುಖಂಡ ಪ್ರವೀಣ್‌ ತೊಗಾಡಿಯಾ ಅವರಿಗೆ ಉತ್ತಮ ಆಹಾರವಾಗುತ್ತವೆ. ಇದರಿಂದ ಕೋಮು ಸಾಮರಸ್ಯಕ್ಕೆ ಹಾನಿ  ಉಂಟಾಗುತ್ತದೆ’ ಎಂದು ಪೊನ್ನಣ್ಣ ನ್ಯಾಯಪೀಠದ ಗಮನ ಸೆಳೆದರು.

‘ಭಾರತ ಜಾತ್ಯತೀತ ರಾಷ್ಟ್ರ. ಯಾವುದೇ ಕಾರಣಕ್ಕೂ ಇಲ್ಲಿನ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗಬಾರದು. ಈಗಾಗಲೇ ಅಲಹಾಬಾದಿನಲ್ಲೂ ಒವೈಸಿ ಭಾಷಣಕ್ಕೆ  ನಿರ್ಬಂಧ ವಿಧಿಸಲಾಗಿದೆ. ಇದನ್ನು ಅಲ್ಲಿನ ಸ್ಥಳೀಯ ನ್ಯಾಯಾಲಯ ಪುರಸ್ಕರಿಸಿದೆ. ಯಾವುದಾದರೂ ಅನಾಹುತ ಜರುಗಿದ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತ ಮುಂಚಿತವಾಗಿ ಕ್ರಮ ಕೈಗೊಳ್ಳುವುದು ಶ್ರೇಯಸ್ಕರ. ಆದ್ದರಿಂದ ಈ ವಿಷಯದಲ್ಲಿ ಕಮಿಷನರ್‌ ಅವರು ಕಾನೂನು ಮೀರಿ ನಡೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಒವೈಸಿ ಪರ ವಾದ ಮಂಡಿಸಿದ ಹಿರಿಯ ವಕೀಲ  ಸಜನ್‌ ಪೂವಯ್ಯ, ‘ಒವೈಸಿ ಅವರ ಬೆಂಗಳೂರು ಪ್ರವೇಶ ಮತ್ತು ಭಾಷಣಕ್ಕೆ ನಿರ್ಬಂಧ ವಿಧಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ. ಸರ್ಕಾರಕ್ಕೆ ಏನಾ ದರೂ ಅನುಮಾನಗಳಿದ್ದರೆ ಬಿಗಿ ಬಂದೋಬಸ್ತ್‌ ಮಾಡಿಕೊಳ್ಳಬೇಕು. ಅದು ಸರ್ಕಾರದ ಕರ್ತವ್ಯ’ ಎಂದು ಹೇಳಿದರು.

ಬೆಂಗಳೂರಿನ ಶಿವಾಜಿನಗರದ ಛೋಟಾ ಮೈದಾನದಲ್ಲಿ ಶನಿವಾರ (ಏ.25) ಎಐಎಂಐಎಂ ಪಕ್ಷದ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು.   ಈ ಸಮಾವೇಶದಲ್ಲಿ ಒವೈಸಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವವರಿದ್ದರು. ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯ ಮುಖಂಡರು ಅನುಮತಿ ಕೋರಿ ನಗರ ಪೊಲೀಸ್‌ ಕಮಿಷನರ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಕಮಿಷನರ್‌ ಅನುಮತಿ ನಿರಾಕರಿಸಿದ್ದರು. ಇದನ್ನು ಹೈಕೋರ್ಟ್‌ನಲ್ಲಿ  ಪ್ರಶ್ನಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT