ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಂಕಾರ ಗಾನಕ್ಕೆ ಕೇದಾರ ಸಾಥಿ...

ಯುವ ಸಹೋದರರ ಸಂಗೀತ ಯುಗಳ
Last Updated 18 ಮೇ 2016, 19:30 IST
ಅಕ್ಷರ ಗಾತ್ರ

ಮನೆತನದಿಂದ ಸಂಗೀತ ಬಳುವಳಿಯಾಗಿ ಬಂದಿದ್ದರೂ ಆಸಕ್ತಿ, ಪರಿಶ್ರಮವಿಲ್ಲದಿದ್ದರೆ ಸಂಗೀತದಲ್ಲಿ ಸಾಧನೆ ಎನ್ನುವುದು ದೂರದ ಮಾತು. ಇದಕ್ಕೆ ಉದಾಹರಣೆಯಂತಿದ್ದಾರೆ

ಈ ಸಹೋದರರು. ದೇಶ ವಿದೇಶಗಳಲ್ಲಿ ಸಂಗೀತ ಪರಂಪರೆಯ ಘಮಲು ಹರಿಸುತ್ತಿರುವ ಈ ಯುವ ಸಹೋದರರ ಸಂಗೀತ ಪಯಣದ ಹಾದಿ ಇಲ್ಲಿದೆ...
ಇದೊಂದು ಅಪರೂಪದ ಕುಟುಂಬ.

ತಂದೆ ಮಕ್ಕಳಾದಿಯಾಗಿ ಮನೆಯಲ್ಲಿ ಎಲ್ಲರೂ ಸಂಗೀತಗಾರರೇ. ಹಿಂದೂಸ್ತಾನಿ ಸಂಗೀತದ ಹಿರಿಯ ಕಲಾವಿದರಾದ ಪಂ. ನಾಗರಾಜ ಹವಾಲ್ದಾರ್‌ ಅವರು ವೇದಿಕೆಯಲ್ಲಿ ಗಾಯನಕ್ಕೆ ಕುಳಿತರೆ ಮಗ ಓಂಕಾರನಾಥ ಹವಾಲ್ದಾರರದ್ದು ಸಹ ಗಾಯನ, ಕೇದಾರನಾಥ ತಬಲಾ ಸಾಥಿ, ನಾಗರಾಜ ಹವಾಲ್ದಾರ ಅವರ ತಮ್ಮನ ಮಗ ಸಮೀರ್‌ ಹವಾಲ್ದಾರ್‌ ಹಾರ್ಮೋನಿಯಂ ಸಾಥಿ... ಹೀಗೆ ಇಡೀ ಕುಟುಂಬವೇ ಪ್ರಸ್ತುತಪಡಿಸುವ ಸಂಗೀತ ಕಾರ್ಯಕ್ರಮ ಕೇಳುಗರಿಗೆ ವಿಶಿಷ್ಟ ಅನುಭೂತಿ ಸೃಷ್ಟಿಸುತ್ತದೆ.

ಮನೆತನ ಸಂಗೀತಗಾರರದ್ದೇ ಆಗಿದ್ದಲ್ಲಿ ಮಕ್ಕಳಿಗೆ ಸಂಗೀತ  ಬಳುವಳಿಯಾಗಿಯೇ ಬರುತ್ತದೆ. ಆದರೆ ಸಂಗೀತದಲ್ಲಿ ಸಾಧನೆ, ಪರಿಶ್ರಮ, ಸತತ ಅಭ್ಯಾಸ, ನಿರಂತರ ಆಸಕ್ತಿ, ಕಲಿಯುವ ಛಲ, ತಾಳ್ಮೆ ಇಲ್ಲದೇ ಹೋದರೆ ಮನೆತನದ ಸಂಗೀತವೂ ಯಶದ ಹಾದಿ ಹಿಡಿಯುವುದು ಕಷ್ಟ.

ಸಂಗೀತದಲ್ಲಿ ಅಗಾಧ ಸಾಧನೆ, ವಿದ್ವತ್ಪೂರ್ಣ ಗಾಯನ ನೀಡುವ ಚಾಕಚಕ್ಯತೆ, ಸಂಗೀತವನ್ನೇ ತಪಸ್ಸು ಎಂದು ತಿಳಿದುಕೊಂಡು ಬಂದವರು ಪಂ. ನಾಗರಾಜ್‌ ಹವಾಲ್ದಾರ್‌. ಇವರ ಮಕ್ಕಳಿಬ್ಬರು ಇದೀಗ ಸಂಗೀತ ಲೋಕದಲ್ಲಿ ಸಾಧನೆಯ ಹಾದಿ ಹಿಡಿದು ತಮ್ಮ ಬದುಕನ್ನೂ ಸಂಗೀತಕ್ಕೇ ಸಮರ್ಪಿಸಿಕೊಂಡಿದ್ದಾರೆ.

ಓಂಕಾರನಾಥ ಹವಾಲ್ದಾರ್‌ ಹಾಗೂ ಕೇದಾರನಾಥ ಹವಾಲ್ದಾರ್‌. ಇಬ್ಬರೂ ಸಂಗೀತದ ವಿಭಿನ್ನ ಪ್ರತಿಭೆಗಳು. ಓಂಕಾರ್‌ ಗಾಯನದಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಿದ್ದರೆ, ಕೇದಾರ್‌ ತಬಲಾ ವಾದನದಲ್ಲಿ ಕೈಚಳಕ ತೋರಿಸುತ್ತಿದ್ದಾರೆ. ತಬಲಾ ಜತೆಗೆ ಆಫ್ರಿಕಾದ ವಿಶಿಷ್ಟ ಜಾನಪದ ವಾದ್ಯ ‘ಜಂಬೆ’ಯನ್ನೂ ನುಡಿಸಿ ಹೊಸದೊಂದು ಮಾಧುರ್ಯದ ಕಲಾ ಜಗತ್ತಿಗೆ ಕಾಲಿಟ್ಟಿದ್ದಾರೆ.

ಸಂಗೀತದ ಪ್ರವರ್ಧಮಾನ
ಓಂಕಾರನಾಥ್‌ ಹವಾಲ್ದಾರ್‌ ಹಿಂದೂಸ್ತಾನಿ ಸಂಗೀತದ ಆಳಅಗಲಗಳನ್ನು ಈಗಲೇ ಚೆನ್ನಾಗಿ ಅರಿತಿದ್ದಾರೆ. ದೇಶ ವಿದೇಶಗಳಲ್ಲಿ ಅನೇಕ ಕಛೇರಿಗಳನ್ನೂ ನೀಡಿದ್ದಾರೆ. ಹಲವು ಉತ್ತಮ ಸಂಗೀತ ಗುರುಗಳ ಒಡನಾಟ ಓಂಕಾರ್‌ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ತಂದೆ ಪಂ.ನಾಗರಾಜ್‌ ಹವಾಲ್ದಾರ್‌ ಅವರೇ ಓಂಕಾರ್‌ಗೆ ಮೊದಲ ಸಂಗೀತ ಗುರು. ನಾಲ್ಕು ವರ್ಷದ ಪುಟಾಣಿ ಇರುವಾಗಲೇ ಸಂಗೀತದ ‘ಸರಿಗಮಪದನಿ’ಯ ರಿಯಾಜ್‌ ಆರಂಭ.

ತಂದೆಯ ಬಳಿ ಸಂಗೀತ ಕಲಿಯುವುದರ ಜತೆಗೇ  ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಿಂದಲೂ ಸಂಗೀತದ ಮಾರ್ಗದರ್ಶನ ಪಡೆದವರು. ಕೇಳ್ಮೆಯಿಂದಲೂ ಸಾಕಷ್ಟು ಕಲಿಯಬಹುದು ಎಂಬುದು ಸತ್ಯ ಎನ್ನುವ ಪ್ರಾಮಾಣಿಕ ನುಡಿಗಳನ್ನಾಡುವ ಓಂಕಾರ್‌, ‘ಸಂಗೀತ ಕಛೇರಿ ಇರುವಾಗಲೆಲ್ಲಾ ಪಂ. ಮಾಧವಗುಡಿ ಅವರು ಬೆಂಗಳೂರಿಗೆ ನಮ್ಮ ಮನೆಗೆ ಬರೋರು.

ಅಲ್ಲದೆ ಗುರು ಪಂಚಾಕ್ಷರಿ ಮತ್ತಿಗಟ್ಟಿ ಅವರೂ ಕಛೇರಿಗಾಗಿ ಬಂದಾಗ ಮನೆಗೆ ಬರುತ್ತಿದ್ದರು. ಈ ಇಬ್ಬರು ಹಿರಿಯ ಸಂಗೀತ ವಿದ್ವಾಂಸರ ಒಡನಾಟದಿಂದ, ಅವರ ಸಂಗೀತ ಕೇಳ್ಮೆಯಿಂದ ಸಾಕಷ್ಟು ಕಲಿತೆ. ಅದಾಗಿ ಪಂ. ಇಂದೂದರ ನಿರೋಡಿ ಅವರ ಬಳಿ ಈಗ ಉನ್ನತ ಅಭ್ಯಾಸ ಮಾಡುತ್ತಿದ್ದೇನೆ’ ಎಂದು ತಮ್ಮ ಸಂಗೀತ ತಾಲೀಮಿನ ಸಂಗತಿಯನ್ನು ಬಿಚ್ಚಿಡುತ್ತಾರೆ.

‘ಕಿರಾಣಾ ಘರಾಣ ಪದ್ಧತಿ ತಂದೆಯಿಂದ ಕಲಿತೆ. ಈ ಶೈಲಿಯಲ್ಲಿ ರಾಗಗಳಾದ ಮಿಯಾಕಿ ತೋಡಿ, ಮುಲ್ತಾನಿ, ಪೂರಿಯಾ, ಭೈರವ್‌ ಮುಂತಾದ ಮನಮೋಹಕ ರಾಗಗಳನ್ನು ತಂದೆ ವಿಭಿನ್ನವಾಗಿ ಮನ ಮುಟ್ಟುವಂತೆ ಹಾಡುವುದನ್ನು ಕಲಿಸಿದರು.

ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಅವರಲ್ಲಿ ಜೈಪುರ್‌ ಅತ್ರೌಲಿ ಘರಾಣ ಹಾಗೂ ಪಂ. ಇಂದೂದರ ನಿರೋಡಿ ಅವರಲ್ಲಿ ಆಗ್ರಾ-ಗ್ವಾಲಿಯರ್ ಘರಾಣ ಪದ್ಧತಿಯಲ್ಲಿ ಹಾಡುವುದನ್ನು ಕಲಿತೆ. ಹೀಗೆ 3-4 ಘರಾಣೆಗಳ ಪರಿಚಯದ ಜತೆಗೆ ಈ ಘರಾಣೆಯ ಸೊಬಗನ್ನು ಆಸ್ವಾದಿಸುವಂತಾಗಿರುವುದು ನನ್ನ ಸೌಭಾಗ್ಯ’ ಎನ್ನುತ್ತಾರೆ ಈ ಯುವ ಗಾಯಕ.

ಕರ್ನಾಟಕದ ಎಲ್ಲ ಪ್ರಮುಖ ವೇದಿಕೆಗಳಾದ ಹಂಪಿ ಉತ್ಸವ, ಮೈಸೂರು ದಸರಾ, ಆನೆಗೊಂದಿ ಉತ್ಸವಗಳಲ್ಲಿ,  ಪುಣೆ, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ, ದೆಹಲಿಗಳಲ್ಲಿ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಆಕಾಶವಾಣಿ ಸಂಗೀತ ಸ್ಪರ್ಧೆಯ ಖಯಾಲ್‌ ಪ್ರಕಾರದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಬಹುಮಾನ (2003ರಲ್ಲಿ) ಪಡೆದಿದ್ದು, ಆಕಾಶವಾಣಿ, ದೂರದರ್ಶನ, ಖಾಸಗಿ ವಾಹಿನಿಗಳಲ್ಲಿ ಕಛೇರಿ ನೀಡಿದ್ದು ಓಂಕಾರ್‌ ಸಂಗೀತ ಪಯಣಕ್ಕೆ ಸೇರಿಕೊಂಡ ಗರಿಗಳು.

‘ಸಂಕಟ್‌ ಮೋಚನ್‌’ ಪುಳಕ!
‘ಅದು ಬನಾರಸ್‌ನ ಸಂಕಟ್‌ ಮೋಚನ್‌ ಹನುಮಾನ್‌ ಸಂಗೀತ ಮಹೋತ್ಸವ. 2000ನೇ ಇಸವಿ. ತಂದೆ ಹಾಡುಗಾರಿಕೆಗೆ ತಂಬೂರಿ ನುಡಿಸ್ತಾ ಇದ್ದೆ. ಸಂಗೀತ ಮಹೋತ್ಸವದ ಒಂದು ಭಾಗದಲ್ಲಿ ಮ್ಯಾಂಡೊಲಿನ್‌ ಶ್ರೀನಿವಾಸ್‌ ಅವರು ಬರಬೇಕಿತ್ತು. ಕಾರಣಾಂತರಗಳಿಂದ ಅವರು ಬಂದಿರಲಿಲ್ಲ.

ಆಯೋಜಕರು ಬಂದು ‘ಒಂದೂವರೆ ಗಂಟೆ ಕಾಲಾವಕಾಶ ಇದೆ. ಹಾಡುತ್ತೀಯಾ’ ಎಂದು ಕೇಳಿದರು. ರಾಗ ಮಿಯಾಕಿ ತೋಡಿ ಆಲಾಪದೊಂದಿಗೆ ಸುಮಾರು ಒಂದು ಗಂಟೆ ಕಾಲ ಹಾಡಿದೆ. ಅದಾಗಿ ಮರಾಠಿ ಭಜನ್‌ ಹಾಡಿದೆ. ಅಂಥ ಪ್ರತಿಷ್ಠಿತ ವೇದಿಕೆಯಲ್ಲಿ, ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ, ವಿದ್ವಾಂಸರ ಎದುರಿನಲ್ಲಿ ಹಾಡುವ ಅವಕಾಶ ಸಿಕ್ಕಿದ್ದು ಕೂಡ ನನ್ನ ಸೌಭಾಗ್ಯವೆಂದೇ ಹೇಳಬೇಕು’ ಎಂದು ಹೇಳುತ್ತಾರೆ ಓಂಕಾರ್‌.

ತಮ್ಮ ಬದುಕಿನಲ್ಲಿ ಬಂದೊದಗಿದ ಅತ್ಯುತ್ತಮ ಅವಕಾಶವನ್ನು, ರೋಚಕ ಅನುಭವವನ್ನು, ಅಷ್ಟೇ ರೋಮಾಂಚಕವಾಗಿ ಕಟ್ಟಿಕೊಡುತ್ತಾ, ‘ಅದು 2009ನೇ ಇಸವಿ. ಯುನೆಸ್ಕೊ ಮತ್ತು ವರ್ಲ್ಡ್‌ ಬ್ಯಾಂಕ್‌ ಪೀಸ್‌ ಮೆಷಿನ್‌ ನ್ಯೂಯಾರ್ಕ್‌ನಲ್ಲಿ ಒಂದು ಸಂಗೀತ ಕಾರ್ಯಕ್ರಮ ನಡೆಸಿತ್ತು.

ಅಲ್ಲಿ ಸಮೀರ್‌ ಚಟರ್ಜಿ ಅವರು ತಬಲಾ ನುಡಿಸಿದ್ದರು. ಪಂ. ಸಮೀರ್‌ ಅವರು ಆಫ್ಘಾನಿಸ್ತಾನದಲ್ಲಿ ಸಂಗೀತದ ಕುರಿತ ಕೆಲಸ ಮಾಡ್ತಾರೆ ಅಂತ ಗೊತ್ತಾಗಿ ‘ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ’ ಎಂದೆ. ಅವರು ಒಪ್ಪಿಕೊಂಡು ನನ್ನನ್ನೂ ಕರೆದೊಯ್ದರು.

ಒಬ್ಬರು ಪಿಯಾನೊ, ಸಮೀರ್‌ ತಬಲಾ, ನಾನು ಗಾಯನಕ್ಕೆ... ಹೀಗೆ ಮೂರು ಜನ ಸಂಗೀತದ ರಾಯಭಾರಿಗಳಾಗಿ ಆಫ್ಘಾನಿಸ್ತಾನದಲ್ಲಿ ‘ಆಫ್ಘಾನಿಸ್ತಾನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯೂಸಿಕ್‌’(ಎಎನ್‌ಐಎಂ) ನಲ್ಲಿ ಸಂಗೀತ ಪಾಠ ಮಾಡಿದೆವು. ಇದಾಗಿ ಕಾಬೂಲ್‌ ಯುನಿವರ್ಸಿಟಿಯಲ್ಲಿ ಸಂಗೀತ ಪಾಠ ಮಾಡೋದಕ್ಕೆ ಹೋಗಿದ್ದೆ. ಅಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಹಾಡಿದ್ದೇನೆ’ ಎಂದು ನೆನಪಿನ ಬುತ್ತಿಯನ್ನು ಮೊಗೆಯುತ್ತಾರೆ ಇವರು.

ತಬಲಾ ಜತೆ ‘ಜಂಬೆ’
ಯುವ ವಾದಕ ಕೇದಾರ್‌ನಾಥ್‌ ಹವಾಲ್ದಾರ್‌ ಅವನದ್ಧ ವಾದ್ಯಕ್ಕೆ ಆತುಕೊಂಡವರು. ತಬಲಾದ ಜತೆಗೆ ‘ಜಂಬೆ’ ವಾದನವನ್ನೂ ಕಲಿತು ಸಂಗೀತ ಲೋಕದಲ್ಲಿ ಹೊಸ ಪರಂಪರೆ ಹುಟ್ಟುಹಾಕುವ ಪ್ರಯತ್ನ ಮಾಡಿದವರು. ಎಳೆಯ ವಯಸ್ಸಿನಲ್ಲೇ ತಬಲಾ ನಾದಕ್ಕೆ ಮಾರುಹೋದ ಕೇದಾರ್‌, ಹಿರಿಯ ತಬಲಾ ಗುರು ಪಂ.ರಾಜಗೋಪಾಲ ಕಲ್ಲೂರಕರ್‌ ಅವರ ಬಳಿ ಸತತ ಹತ್ತು ವರ್ಷಗಳ ತಬಲಾ ಅಭ್ಯಾಸ ಮಾಡಿದವರು.

ಅದಾಗಿ ಮತ್ತೊಬ್ಬ ತಬಲಾ ವಾದಕ ಎಂ. ನಾಗೇಶ್‌ ಅವರ ಶಿಷ್ಯತ್ವ ಪಡೆದು ಅವರಿಂದಲೂ ತಬಲಾ ಕಲಿತರು. ಕಲಿಕೆ ನಿರಂತರ-ಅಭ್ಯಾಸ ಸಾರ್ವಕಾಲಿಕ ಎಂಬಂತೆ ಇದೀಗ ದೇಶದ ಹಿರಿಯ ತಬಲಾ ವಾದಕ ಕೋಲ್ಕತ್ತಾದ ಪಂ. ಸಮೀರ್‌ ಚಟರ್ಜಿ ಅವರ ಬಳಿ ತಬಲಾದ ಉನ್ನತ ಅಭ್ಯಾಸ ಮಾಡುತ್ತಿದ್ದಾರೆ.

ಆಫ್ರಿಕಾ ವಾದ್ಯ ಜೆಂಬೆ: ‘ಆಫ್ರಿಕಾದ ಬುಡಕಟ್ಟು ಜನಾಂಗದವರು ಸಂಜೆಯ ಹೊತ್ತಿನ ಮನರಂಜನೆಗಾಗಿ ಹಾಡುತ್ತಾ ನೃತ್ಯ ಮಾಡುತ್ತಾ ಈ ವಾದ್ಯವನ್ನು ನುಡಿಸುತ್ತಾರೆ. ಈ ವಾದ್ಯದಲ್ಲಿ ಪಂ. ತೌಫಿಕ್‌ ಖುರೇಷಿ ಪರಿಣತರು. ಅವರ ನುಡಿಸಾಣಿಕೆ ತಂತ್ರಗಳನ್ನು ನೋಡಿ ಪ್ರಭಾವಿತನಾದೆ.

ನಾನೂ ಈ ವಾದ್ಯನುಡಿಸುವ ಕಲೆಯನ್ನು ರೂಢಿ ಮಾಡಿಕೊಂಡೆ. ಈ ವಾದ್ಯದಲ್ಲಿ ತಬಲಾದಂತೆ ಬೆರಳು ತಂತ್ರಗಾರಿಕೆ ಇಲ್ಲ. ಇದು ಹಸ್ತವನ್ನೂ ಬಳಸಿ ನುಡಿಸುವ ವಿಶಿಷ್ಟ ವಾದ್ಯ. ಇದರ ನಾದವೂ ವಿಶಿಷ್ಟವಾದದ್ದು. ಅಲ್ಲದೆ ಜೆಂಬೆಯಲ್ಲಿ ತಬಲಾದಲ್ಲಿ ನುಡಿಸುವ ಎಲ್ಲ ಪರಿಕಲ್ಪನೆಗಳನ್ನು, ಕಾಯ್ದಾ, ಪರಟಾ, ತುಕಡಾ ಮುಕಡಾಗಳನ್ನು ನುಡಿಸಲು ಸಾಧ್ಯವಿಲ್ಲ.

ಇದರ ವಾದನ ಶೈಲಿ ಬೇರೆ ರೀತಿಯಾದದ್ದು. ಇದನ್ನು ಕಲಿಯಲು ಬಹಳ ಸಮಯ ಹಿಡಿಯುತ್ತದೆ. ಈ ವಾದ್ಯವನ್ನು ಅಮೆರಿಕದಿಂದ ತರಿಸಿದೆ’ ಎಂದು ಜೆಂಬೆ ವಾದ್ಯದ ನುಡಿಸಾಣಿಕೆ ಬಗ್ಗೆ ವಿವರ ನೀಡುತ್ತಾರೆ ಕೇದಾರ್‌ನಾಥ್‌.

‘ಅಮೆರಿಕ, ಇಂಗ್ಲೆಂಡ್‌, ಜಪಾನ್‌ ಸೇರಿದಂತೆ ಅನೇಕ ಪ್ರಮುಖ ರಾಷ್ಟ್ರಗಳಲ್ಲಿ ಸಂಗೀತ ಸಂಚಾರ ಮಾಡಿದ್ದೇನೆ. ಪಾಕಿಸ್ತಾನದ ‘ಜುನೂನ್‌’ ಟ್ರೂಪ್‌ ಜತೆಗೆ ಸೂಫಿ ರಾಕ್‌ ಬ್ಯಾಂಡ್‌ನಲ್ಲಿ ನುಡಿಸಿದ್ದು ಬಹಳ ಹೆಮ್ಮೆಯ ಸಂಗತಿ. ಅಲ್ಲದೆ ದೆಹಲಿ, ಮುಂಬೈ, ಪುಣೆ, ಹೈದರಾಬಾದ್‌, ಗೋವಾಗಳಲ್ಲಿ ಅನೇಕ ಕಛೇರಿಗಳಿಗೆ ತಬಲಾ ಸಾಥಿ ನೀಡಿದ್ದೇನೆ’ ಎನ್ನುತ್ತಾರೆ ಈ ಯುವ ವಾದಕ.

ಅಮೆರಿಕದಲ್ಲಿ ಸ್ವೀವ್‌ ಗಾರ್ನ್‌ ಅವರ ಬಾನ್ಸುರಿಗೆ, ಹಿಲಾಯತ್‌ ಖಾನ್‌ (ಉಸ್ತಾದ್‌ ವಿಲಾಯತ್‌ ಖಾನ್‌ ಅವರ ಮಗ) ಅವರಿಗೆ ಸಿತಾರ್‌ಗೆ, ಕಥಕ್‌ನ ಫ್ಲೆಮಿಂಗೊ ನೃತ್ಯಕ್ಕೆ ತಬಲಾ ಸಾಥಿ ನೀಡಿದ್ದು ಕೂಡ ಬಹಳ ಅಪರೂಪದ ಅವಕಾಶಗಳು.

ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ನಡೆಸುವ ವಿಶ್ವವಿದ್ಯಾನಿಲಯದಲ್ಲಿ ತಬಲಾ ಅಧ್ಯಾಪಕನಾಗಿ ಅನೇಕ ತಿಂಗಳುಗಳ ಕಾಲ ಕೆಲಸ ಮಾಡಿದ ಅನುಭವದ ಜತೆಗೆ ಹತ್ತಾರು ಮಕ್ಕಳಿಗೆ ತಬಲಾ ಪಾಠ ಮಾಡುವ ಕಾಯಕದಲ್ಲೂ ಕೇದಾರ್‌ ನಿರತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT