ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದುಗರ ಪತ್ರ

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಏಪ್ರಿಲ್ 12ರ ‘ನನ್ನ ಅಂಬೇಡ್ಕರ್ – ನಮ್ಮ ಅಂಬೇಡ್ಕರ್‌’ ವಿಶೇಷ ಸಂಚಿಕೆಗೆ ಬಂದ ಕೆಲವು ಪ್ರತಿಕ್ರಿಯೆಗಳು.

‘ಮುಕ್ತಛಂದ’ ಪುರವಣಿಯ ‘ನನ್ನ ಅಂಬೇಡ್ಕರ್ – ನಮ್ಮ ಅಂಬೇಡ್ಕರ್’ ವಿಶೇಷ ಸಂಚಿಕೆ ಒಂದು ಅದ್ಭುತ ಪ್ರಯತ್ನ. ‘ಬಹು ಸಂಖ್ಯಾತರು ಅಲ್ಪಸಂಖ್ಯಾತರ ಅಸ್ತಿತ್ವವನ್ನು ನಿರಾಕರಿಸುವುದು ತಪ್ಪಾಗಿರುವಂತೆಯೇ, ಅಲ್ಪಸಂಖ್ಯಾತರು ತಮ್ಮನ್ನು ತಾವೇ ನಾಶಪಡಿಸಿಕೊಳ್ಳುವುದೂ ತಪ್ಪು’ ಎಂದು ಅಂಬೇಡ್ಕರ್‌ ಹೇಳಿದ್ದರು. ಬಹುಸಂಖ್ಯಾತರು ತಮ್ಮ ಸಾಮಾಜಿಕ ತರತಮ ಮನೋಭಾವದಿಂದ ದೂರವಾಗುತ್ತಿರುವ ಹಾಗೂ ಅಲ್ಪಸಂಖ್ಯಾತರು ತಮ್ಮ ಬಗ್ಗೆ ತಾವು ಜಾಗೃತಗೊಳ್ಳುತ್ತಿರುವ ಸಂದರ್ಭ ಇಂದಿನದು. ಇಂಥ ಸಂದರ್ಭದಲ್ಲಿ ಸಹೃದಯರ ಮನಸ್ಸುಗಳನ್ನು ಬೆಳಗುವಂತೆ ರೂಪುಗೊಂಡ ಸಂಚಿಕೆ ಸಕಾಲಿಕ, ಸ್ವಾಗತಾರ್ಹ.
–ಡಾ. ಎಚ್.ಆರ್‌. ಸುರೇಂದ್ರ, ಸಪ್ತಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಆಸ್ಪತ್ರೆ, ಬೆಂಗಳೂರು

ಸಮಾಜದಲ್ಲಿ ಕಂದರ ಸೃಷ್ಟಿಸುವ ಇಂಥ ಸಂಚಿಕೆಗಳನ್ನು ರೂಪಿಸುವುದರ ಬದಲು, ಕಟು ವಾಸ್ತವಗಳಾದ ಬಡತನ, ಭ್ರಷ್ಟಾಚಾರ, ಶಿಕ್ಷಣಗಳಂಥ ವಿಷಯಗಳ ಬಗ್ಗೆ ಗಮನ ಹರಿಸುವುದು ಒಳಿತು. ಜಾತಿ – ಧರ್ಮಗಳಿಗೆ ಬದಲಾಗಿ ಶಿಕ್ಷಣದ ಮಹತ್ವದ ಬಗ್ಗೆ ಚರ್ಚೆಗಳು ನಡೆಯುವುದು ಹೆಚ್ಚು ಉಪಯುಕ್ತ.
–ಸುಭಾಷ್‌ ಶೆಟ್ಟಿ, ಬೆಂಗಳೂರು

ವಿಶೇಷ ಸಂಚಿಕೆಯ ಲೇಖನಗಳು ನಮ್ಮ ಮನಸನ್ನು ತಿಳಿಗೊಳಿಸಿವೆ. ಈ ಬರಹಗಳನ್ನು ಓದಿ ನಾನು ಸಂತೋಷ ಪಟ್ಟೆ, ಸಂಕಟವನ್ನೂ ಅನುಭವಿಸಿದೆ. ದೀಪಾ ಗಿರೀಶ್ ಅವರ ಲೇಖನ ಪ್ರತಿಯೊಬ್ಬರ ಅಂತರಂಗವನ್ನು ಎಚ್ಚರಿಸುವಂತಿದೆ. ಅಂಬೇಡ್ಕರು ಹೇಳುವುದು– ‘ಧರ್ಮ ಎನ್ನುವುದು ಮನುಷ್ಯನಿಗಾಗಿ ಇರಬೇಕೇ ಹೊರತು, ಮನುಷ್ಯ ಧರ್ಮಕ್ಕಾಗಿ ಬದುಕಬಾರದು’ ಎನ್ನುವ ನಿಲುವು ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಸಂಚಿಕೆ ಪ್ರೇರಣೆಯಂತಿದೆ. ನನ್ನಂಥ ಅದೆಷ್ಟೋ ಯುವಜನಕ್ಕೆ ಈ ಸಂಚಿಕೆಯ ಮೂಲಕ ಅಂಬೇಡ್ಕರ್ ಎನು ಅನ್ನುವುದರ ಅರಿವಾಗಿರಬೇಕು. 
–ಮಲ್ಲಮ್ಮ ಯಾಟಗಲ್, ದೇವದುರ್ಗ

ಇದು ನಿಜ ಅರ್ಥದಲ್ಲಿ ವಿಶೇಷ ಸಂಚಿಕೆ, ಸಂಗ್ರಾಹ್ಯ ಸಂಚಿಕೆ. ಇಡೀ ಪುರವಣಿಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ.
–ಅನಿಲ್ ಎಂ. ಚಟ್ನಳ್ಳಿ, ದಾವಣಗೆರೆ

ಅಂಬೇಡ್ಕರ್ ಅವರನ್ನು ವರ್ತಮಾನದಲ್ಲಿ ಗ್ರಹಿಸಬೇಕಾದ ಸ್ವರೂಪಕ್ಕೆ ‘ಮುಕ್ತಛಂದ’ದ ಸಂಚಿಕೆ ಒಂದು ಮಾದರಿ ಒದಗಿಸಿದೆ. ಓದುಗರನ್ನು ಬಹುಕಾಲ ಕಾಡುವ ಹಾಗೂ ಮನಸ್ಸಿನಲ್ಲಿ ತುಂಬಾ ದಿನ ಉಳಿಯುವ ಸಂಚಿಕೆ ಇದು.
–ಎಸ್‌. ಶಶಿಕುಮಾರ ನಾಯ್ಕ, ಶಿವಮೊಗ್ಗ

ಶಿಕ್ಷಿತ ಸಮುದಾಯದೊಳಗೆ ಬೆಳೆದ ಅಂಬೇಡ್ಕರ್ ಎಂಬ ಚೈತನ್ಯದ ಬಹುರೂಪಗಳು ಸದಾ ದಾಖಲಾಗುತ್ತಾ ಬಂದಿವೆ. ಇವು ಅಂಬೇಡ್ಕರ್ ಎಂಬ ದಿವ್ಯೌಷಧದಿಂದ ವಾಸಿಯಾದ ಆಯಾಕಾಲದ ಗಾಯಗಳ ಕಲೆಗಳನ್ನು ತೋರುವ ಹೊಸ ಕಥನಗಳು. ಇದರ ಅಚ್ಚೊತ್ತಿದಂತೆ ‘ನನ್ನ ಅಂಬೇಡ್ಕರ್-ನಮ್ಮ ಅಂಬೇಡ್ಕರ್’ ಬರಹಗಳು ಮುಕ್ತಛಂದದಲ್ಲಿದ್ದವು.

ಅಶಿಕ್ಷಿತ ಮತ್ತು ಅರೆವಿದ್ಯಾವಂತ ಗ್ರಾಮೀಣ/ನಗರ ಭಾಗದ ಮೌಖಿಕ ಪರಂಪರೆಯಲ್ಲಿ ಅಂಬೇಡ್ಕರ್ ಗುರುತುಗಳು ಹೇಗೆ ಬೇರುಬಿಟ್ಟಿವೆ ಎಂಬುದನ್ನು ಹುಡುಕುವುದೊಂದು ಕುತೂಹಲ ಕಾರಿ ಸಂಗತಿ. ಆ ಅರ್ಥದಲ್ಲಿ ಕರ್ನಾಟಕ ಒಳಗೊಂಡಂತೆ ಭಾರತದಾದ್ಯಂತ ದೊಡ್ಡ ಮಟ್ಟದಲ್ಲಿ ‘ಅಂಬೇಡ್ಕರ್ ಜಾನಪದ’ ಸೃಜಿಸಿದೆ. ಈ ಬಗ್ಗೆ ಸಾಂಪ್ರದಾಯಿಕ ಜಾನಪದ ಅಧ್ಯಯನಗಳು ಕಣ್ಣಾಯಿಸಿಲ್ಲವಷ್ಟೆ. ಈಚಿನ ಆನಂದ ಪಟವರ್ಧನ್ ಅವರ ‘ಜೈಭೀಮ್ ಕಾಮ್ರೇಡ್’ ಎಂಬ ಸಾಕ್ಷ್ಯಚಿತ್ರ ಇಂತದ್ದೊಂದು ಪರಿಣಾಮಕಾರಿ ಶೋಧ ಮಾಡಿದ್ದನ್ನು ನೆನೆಯಬಹುದು.

ಬೀದರ್, ಗುಲ್ಬರ್ಗಾ, ರಾಯಚೂರು ಭಾಗದಲ್ಲಿ ವಿಶೇಷವಾಗಿ ಮೌಖಿಕ ಪರಂಪರೆಯ ಭಜನೆ, ರಿವಾಯ್ತ್, ಗೀಗಿ, ಲಾವಣಿ, ತತ್ವಪದ ಮುಂತಾದ ಹಾಡುಪರಂಪರೆಯಲ್ಲಿ ಅಂಬೇಡ್ಕರ್ ಪುನರ್ ಸೃಷ್ಟಿಯಾಗುತ್ತಿದ್ದಾರೆ. ಸುರಪುರ ಸಮೀಪ ಲಕ್ಷ್ಮೀಪುರದ ವೆಂಕಟೇಶ್ ಮಿಠ್ಠ ಎಂಬ ರಿವಾಯ್ತ್ ಹಾಡುಗಾರ ಕಟ್ಟಿದ ‘ಅಂಬೇಡ್ಕರ್ ಪದ’ ಕುರಿತು ಕೇಳಿದಾಗ. ಆತ ತನ್ನ ಮಗನ ಐದನೇ ತರಗತಿಯ ಕನ್ನಡ ಪುಸ್ತಕದಲ್ಲಿದ್ದ ಅಂಬೇಡ್ಕರ್ ಬಾಲ್ಯ ಕುರಿತ ಪಾಠವನ್ನು ಮಗನಿಂದಲೆ ಓದಿಸಿ, ಅದನ್ನೇ ಹಾಡು ಕಟ್ಟಿದ್ದಾಗಿ ಹೇಳಿದ. ಹೀಗೆ ಶಾಲಾ ಪಠ್ಯದೊಳಗಿನ ಅಂಬೇಡ್ಕರ್ ಮೌಖಿಕ ಪರಂಪರೆಗೆ ಜಿಗಿದಿರುವುದು ಅಚ್ಚರಿ ಹುಟ್ಟಿಸುವಂಥದ್ದು.

ಹೊಸಪೇಟೆ ತಾಲೂಕು ಕಮಲಾಪುರದ ಅಂಬೇಡ್ಕರ್ ಪ್ರತಿಮೆ ಕೆಳಗೆ ಬೆಳಗಿನ ಜಾವ ಐದು ಗಂಟೆಗೆ ಕೂಲಿಯಾಳುಗಳು ಜಮಾಯಿಸುತ್ತಾರೆ, ಮಾಲಿಕರು ಹೊಲಕ್ಕೆ ಕರೆದೊಯ್ಯಲು ಕೂಲಿ ಚೌಕಾಸಿ ಮಾಡುತ್ತಾರೆ. ಇದು ಅಕ್ಷರಶಃ ಕೂಲಿಗಳ ಮಾರಾಟದಂತಿರುತ್ತದೆ. ಇವರತ್ತಲೇ ಕೈತೋರುವಂತಿರುವ ಅಂಬೇಡ್ಕರ್ ಏನು ಹೇಳುತ್ತಿರಬಹುದೆಂದು ಶಾಲೆ ಅರ್ಧಕ್ಕೆ ಬಿಟ್ಟು ಮದುವೆಯಾಗಿ ಕೂಲಿ ಹೋಗುವ ಯುವತಿಯನ್ನು ಕೇಳಿದಾಗ– ‘ಇನ್ನೇನು ಏಳ್ತಾರೆ ಅವ್ರು, ಓದ್ರಿ ಓದ್ರಿ ಅಂತ ಬಡಕೊಂಡ್ರೂ ನೀವು ಓದಲಿಲ್ಲ, ನಿನ್ನ ಮಕ್ಕಳನ್ನಾದ್ರೂ ಓದ್ಸು ಅಂತಿರಬೇಕು ಸಾರ್. ಅದಿಕ್ಕೆ ಮಗಳನ್ನು ಶಾಲೆಗೆ ಹಾಕೀನಿ. ಆಕೀನಾದ್ರೂ ಓದಿಸಬೇಕು’ ಎಂದಳು. ಹೀಗೆ ಮೌನವಾಗಿ ನಿಂತ ಅಂಬೇಡ್ಕರ್ ಪ್ರತಿಮೆಗಳ ಬಗ್ಗೆ ಹುಟ್ಟಿದ ಮೌಖಿಕ ಕಥನಗಳು ಕುತೂಹಲಕಾರಿಯಾಗಿವೆ. ಕೆ.ಬಿ. ಸಿದ್ದಯ್ಯ ಅವರ ‘ಅಂಬೇಡ್ಕರನ ತೋರುಬೆರಳು’ ಪದ್ಯವೂ ಈ ನೆಲೆಗೆ ಸಾಕ್ಷಿಯಂತಿದೆ. ಇನ್ನಾದರೂ ಮೌಖಿಕ ಪರಂಪರೆಯೊಳಗೂ ಅಂಬೇಡ್ಕರರ ಬೇರುಗಳನ್ನು ಹುಡುಕುವಂತಾಗಬೇಕಿದೆ.
–ಅರುಣ್ ಜೋಳದಕೂಡ್ಲಿಗಿ, ಹಂಪಿ

‘ಮುಕ್ತಛಂದ’ವನ್ನು ಅಂಬೇಡ್ಕರ್‌ಮಯ ಮಾಡಿದ್ದು ನೋಡಿ ಅಯೋಮಯವಾಯಿತು. ವಿವಿಧ ಆಸಕ್ತಿಗಳ  ಅಗತ್ಯಗಳ ಜನರ ನಿರೀಕ್ಷೆಗಳನ್ನು ಕಡೆಗಣಿಸಿ ಪತ್ರಿಕೆ ಏಕಪಕ್ಷೀಯವಾಗ ಮಿತಿಗೊಳ್ಳುವುದು ಓದುಗರಿಗೆ ಬಗೆವ ಅಪಚಾರ. ಸಂಚಿಕೆ ಪೂರಾ ಒಂದೇ ವಿಷಯ ಆವರಿಸಿಕೊಂಡರೆ, ಅದು ಮೀಸಲಾತಿ ಹರಿಕಾರ ಅಂಬೇಡ್ಕರ್‌ಗೆ ಮೀಸಲಾದ ಸಂಚಿಕೆಯಾದರೂ, ಇನ್ನಾರಿಗೇ ಮೀಸಲಾದರೂ ಯಾರಿಗೂ ಯಾವುದಕ್ಕೂ ಮೀಸಲೂ  ಅಲ್ಲದ ಬದ್ಧರೂ  ಅಲ್ಲದ ಕೇವಲ ನರ ಮನುಷ್ಯರ ಮನಸ್ಸುಗಳಿಗೆ ಕಸಿವಿಸಿ ಖಂಡಿತ.
–ಚಂದನ್, ಬೆಂಗಳೂರು

ಇಂಥ ವಿಶಿಷ್ಟ ಚಿಂತನೆಗಳಿಂದಾಗಿಯೇ ‘ಪ್ರಜಾವಾಣಿ’ ನಮ್ಮ ಪ್ರಜ್ಞೆಯ ಒಂದು ಭಾಗವಾಗಿ ಉಳಿದುಕೊಂಡಿದೆ. ಈ ಸಂಚಿಕೆಯ ಪ್ರತಿಯೊಂದು ಬರಹವೂ ಮನಮುಟ್ಟುವಂತಿವೆ. ಅಂಬೇಡ್ಕರ್ ಚಿಂತನೆಗಳನ್ನು ಹೊಸ ಪೀಳಿಗೆಯವರಲ್ಲಿ ನೆಟ್ಟು ಪೋಷಿಸುವಲ್ಲಿ ಇಂಥ ಪ್ರಯತ್ನಗಳು ಸಹಕಾರಿ. ದಲಿತರು ಬಸವಣ್ಣನನ್ನು, ಲಿಂಗಾಯತರು ಮತ್ತು ಬ್ರಾಹ್ಮಣರು ಅಂಬೇಡ್ಕರರನ್ನು, ಒಕ್ಕಲಿಗರು ಬುದ್ಧನನ್ನು ತಮ್ಮ ತಮ್ಮ ಮನಸ್ಸುಗಳ ನಡುಮನೆಯಲ್ಲಿ ಪ್ರತಿಷ್ಠಾಪಿಸಿಕೊಂಡರೆ ಜಾತಿಗಳು ಉಂಟು ಮಾಡುವ ಸಾಮಾಜಿಕ ಶೋಷಣೆಗಳಿಂದ ಸ್ಪಲ್ಪವಾದರೂ ಮುಕ್ತಿ ದೊರಕಬಹುದೇನೋ.
–ಬಿ.ಎನ್. ಮಲ್ಲೇಶ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT