ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೈಕೆ ರಾಜಕಾರಣ ಬೇಡ

Last Updated 27 ಮೇ 2014, 19:30 IST
ಅಕ್ಷರ ಗಾತ್ರ

ಭಾರತದ ಸ್ವಾತಂತ್ರ್ಯ ಹೋರಾಟದ ಬಹುಮುಖ್ಯ ಗುರಿ ಕೇವಲ ರಾಜಕೀಯ ಸ್ವಾತಂತ್ರ್ಯವನ್ನು ಪಡೆಯುವುದಷ್ಟೇ ಆಗಿರಲಿಲ್ಲ. ಅದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯಗಳನ್ನೂ ದೃಷ್ಟಿಯಲ್ಲಿಟ್ಟು­ಕೊಂಡು ನಡೆದ ಹೋರಾಟ. ಅದೇ ಕಾರಣದಿಂದ ಸ್ವಾತಂತ್ರ್ಯೋತ್ತರ ಭಾರತ ತನ್ನ ಆಡಳಿತ ವ್ಯವಸ್ಥೆಯನ್ನಾಗಿ ಪ್ರಜಾಪ್ರಭುತ್ವ­ವನ್ನು ಆರಿಸಿಕೊಂಡಿತು. ಈ ಬಗೆಯ ಆಡಳಿತ ಕೇವಲ ಬಹುಸಂಖ್ಯಾತರ ಒಲವಿನ ಭಾರದಿಂದ ಬಳಲಬಾರದು ಎಂಬ ಕಾರಣಕ್ಕೆ ಸಮಾನತೆಯನ್ನು ಖಾತರಿಪಡಿಸುವ ವ್ಯವಸ್ಥೆಯೊಂದನ್ನು ಸಾಂವಿಧಾನಿಕ ಹಕ್ಕುಗಳ ಮೂಲಕ ಖಾತರಿಪಡಿಸಲಾಯಿತು.

ಚುನಾವಣೆಯಲ್ಲಿ ಗೆಲ್ಲಲು ಸುಲಭದ ದಾರಿಗಳನ್ನು ಸದಾ ಹುಡುಕುತ್ತಿರುವ ನಮ್ಮ ರಾಜಕಾರಣಿಗಳ ವರ್ಗ ಸಂವಿಧಾನದ ಮೂಲ ಆಶಯವನ್ನು ಗಾಳಿಗೆ ತೂರಲು ಹಲವು ತಂತ್ರಗಳನ್ನು ಹೆಣೆಯುತ್ತಿರುತ್ತದೆ. ಇದರಲ್ಲಿ ಬಹುಮುಖ್ಯವಾದುದು ಓಲೈಕೆ ರಾಜ­ಕಾರಣ. ಅದರ ಕೆಟ್ಟ ಮಾದರಿಯೊಂದಕ್ಕೆ ಪರಿಶಿಷ್ಟರಿಗೆ ಮೀಸಲಾಗಿ­ರುವ ವಿಜಾಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ರಮೇಶ ಜಿಗಜಿಣಗಿ ಇತ್ತೀಚೆಗೆ ಸಾಕ್ಷ್ಯ ಒದಗಿಸಿದರು. ಗೆಲುವಿನ ನಂತರ ಬಸವನ ಬಾಗೇವಾಡಿ­ಯಲ್ಲಿರುವ ಬಸವಣ್ಣನ ದೇವಸ್ಥಾನಕ್ಕೆ ಹೋದ ಅವರು ದೇವಸ್ಥಾನದ ಹೊರಗೇ ನಿಂತು ಪೂಜೆ ನೆರವೇರಿಸಿದರು. ಈ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ‘ಇದು ನನಗೇ ನಾನು ವಿಧಿಸಿಕೊಂಡ ಕಟ್ಟುಪಾಡು. ದಶಕಗಳಿಂದ ಇದನ್ನು ಪಾಲಿಸುತ್ತಿದ್ದೇನೆ’ ಎಂದು ಉತ್ತರಿಸಿದ್ದಾರೆ. ಜನಪ್ರತಿ­ನಿಧಿ­ಯೊಬ್ಬ ಸಾರ್ವಜನಿಕ­­­ವಾಗಿ ನಡೆದುಕೊಳ್ಳುವ  ಬಗೆಯನ್ನು  ವೈಯಕ್ತಿಕ ಎಂದು  ಪರಿಗಣಿಸಲಾಗದು. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ.

ಉತ್ತರ ಕರ್ನಾಟಕದಲ್ಲಿ ರಮೇಶ ಜಿಗಜಿಣಗಿ ಅವರ ಮಾದರಿಯ ಓಲೈಕೆ ರಾಜಕಾರಣ ಹೊಸತೇನೂ ಅಲ್ಲ. ಬೀದರ್ ಲೋಕಸಭಾ ಕ್ಷೇತ್ರ ಪರಿಶಿಷ್ಟರಿಗೆ ಮೀಸಲಾಗಿದ್ದ ಅವಧಿಯಲ್ಲಿ ಆಯ್ಕೆಯಾದ ಕೆಲ ಸಂಸದರೂ ಇದನ್ನೇ ಮಾಡಿದ್ದರು. ಇವರೆಲ್ಲರಿಗೂ ಸಂವಿಧಾನದತ್ತವಾಗಿ ದೊರೆತಿರುವ ಸಮಾನ ಹಕ್ಕುಗಳ ಬಗ್ಗೆ ತಿಳಿದಿತ್ತು. ಆದರೆ ಈ ಸಮಾನತೆಯ ಪ್ರತಿಪಾದನೆ ತಮ್ಮ ಮತದಾರರಲ್ಲಿ ಬಹುಸಂಖ್ಯಾತರಾಗಿರುವ ತಥಾಕಥಿತ ಮೇಲ್ಜಾತಿಗಳ ಮೇಲರಿಮೆಗೆ ಧಕ್ಕೆಯುಂಟು ಮಾಡಬಾರದು ಎಂಬ ಎಚ್ಚರದಿಂದ ತಮ್ಮ ಹೆಜ್ಜೆಗಳನ್ನು ಇಡುತ್ತಿದ್ದರು.

ಜನಪ್ರತಿನಿಧಿಯೊಬ್ಬ ಸಂವಿಧಾನಬದ್ಧವಾಗಿ ಮಾಡಬೇಕಾದ ಕೆಲಸಗಳಲ್ಲಿ ತೊಡಗಿಕೊಂಡು ಮತದಾರರನ್ನು ಗೆಲ್ಲಲು ಪ್ರಯತ್ನಿಸದೆ ಸ್ಥಾಪಿತ ಅಸಮಾನತೆಗಳನ್ನು ಪೋಷಿಸಿ ಮತದಾರರನ್ನು ಗೆಲ್ಲುವ ತಂತ್ರ ಇದು. ಸಮಾನತೆಯ ಆಶಯವನ್ನು ಸಾಕಾರಗೊಳಿಸುವು­ದ ಕ್ಕಾಗಿಯೇ ರೂಪುಗೊಂಡ ಮೀಸಲು ಕ್ಷೇತ್ರದಿಂದ ಗೆದ್ದು ಬರುವ ಜನಪ್ರತಿ­ನಿಧಿ ಅಸಮಾನತೆ ಪೋಷಿಸುವುದನ್ನು ರಾಜಕೀಯ ತಂತ್ರವಾಗಿ ಬಳಸಿಕೊಳ್ಳು­ವುದು ದುರದೃಷ್ಟಕರ. ಇದು ಶೋಷಿತರ ಕೀಳರಿಮೆಯನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗುತ್ತದೆ.

ಜಾತಿ ಅಸಮಾನತೆ ಇನ್ನೂ ಉಳಿದು­ಕೊಂಡಿರುವ  ವ್ಯವಸ್ಥೆಯಲ್ಲಿ ಇಂಥ ರಾಜಿಗಳು ಅಗತ್ಯ ಎಂಬ ಸಬೂಬನ್ನು ಯಾರೂ ಹೇಳಬಹುದು. ಜಾತಿ ಮೇಲರಿಮೆಯನ್ನು ಹೊಂದಿರುವ ಮತದಾರನಿಗೆ ಇದು ಆಪ್ಯಾಯ­ಮಾನವಾಗಿಯೂ ಕಾಣಿಸಬಹುದು. ಆದರೆ ಇದು ಸಂವಿಧಾನ ಮತ್ತು ಅದನ್ನು ಆಧಾರವಾಗಿಟ್ಟುಕೊಂಡಿರುವ ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ. ರಾಜಕಾರಣಿಯ ತಂತ್ರಗಾರಿಕೆ ಮತ್ತು ಮತದಾರನ ಜಾತಿ ಮೇಲರಿಮೆಗಳೆರಡೂ ಒಟ್ಟಾಗಿ ಸಂವಿಧಾನದ ಮೂಲ ಆಶಯವನ್ನು ಬಲಿತೆಗೆದುಕೊಳ್ಳುತ್ತವೆ ಎಂಬುದು ಕ್ರೂರ ವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT