ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔದಾರ್ಯದ ‘ಅಪ್ಪ’

Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಹತ್ತಿರದಿಂದ ಕಾಣಬೇಕು,ಕಂಡು ಮಾತನಾಡಬೇಕು, ಮಾತನಾಡಿದ್ದನ್ನು ಕುಳಿತು ಕೇಳಬೇಕು ಎಂದು ನಾನು ಆಸೆ ಪಡುವ ವ್ಯಕ್ತಿಗಳ ಪಟ್ಟಿಯೊಂದಿದೆ. ಯಾವ ದೈವ/ನಕ್ಷತ್ರ/ಗ್ರಹಕ್ಕೆ ಕೈ ಜೋಡಿಸಬೇಕೋ ಗೊತ್ತಿಲ್ಲ, ಆ ಪಟ್ಟಿಯಲ್ಲಿನ ಹಲವಾರು ಹೆಸರುಗಳ ಮುಂದೆ ‘ನೈಕಿ’ ಚಿನ್ಹೆ ಹಾಕುವ ಭಾಗ್ಯ ನನ್ನದಾಗಿದೆ. ಈ ಭಾಗ್ಯಕ್ಕೆ  ನನ್ನ ವಾಸ್ತವ್ಯದ ಭೂಗೋಳವೂ ಕಾರಣವಿರಬೇಕು. ನಮ್ಮೂರ ಹಾದಿಯಲ್ಲಿ ಪ್ರವಾಸಕ್ಕಾಗಿ ಬಂದು ಹೋಗುವವರ ಸಂಖ್ಯೆ ಹೆಚ್ಚು.

ಕೆಲ ವರ್ಷಗಳ ಹಿಂದೆ, ನನ್ನ ಪಟ್ಟಿಯ ಪ್ರಮುಖರಲ್ಲಿರುವ ಡಾ.ಜಿ ಎಸ್ ಆಮೂರ ಅವರು ಅಮೆರಿಕೆಯಲ್ಲಿ ಮಗಳ ಮನೆಗೆ ಬಂದಿದ್ದಾರೆಂದು ಕೇಳಿದಾಗಿನ ನನ್ನ ಸಂಭ್ರಮ ಏನೂ ಕಮ್ಮಿ ಇರಲಿಲ್ಲ; ಕಾರಣ ಡಾ. ಶಶಿ ಆಮೂರ ಅವರ ಮನೆ ನಮ್ಮ ಮನೆಯಿಂದ ಕೂಗಳತೆ ದೂರದಲ್ಲಿ ಅಲ್ಲದಿದ್ದರೂ ಭೂಪಟದ ಮೇಲೆ ಕಣ್ಣಳತೆಯಲ್ಲಿಯೇ ಇದೆ! ಮೇಲಾಗಿ ಆಮೂರರು ಅಮೆರಿಕೆಗೆ ಬಂದಿದ್ದ ದಿನಗಳ ಆಸುಪಾಸಿನಲ್ಲಿ ಬಾಲ್ಟಿಮೋರ್‌ನಲ್ಲಿ ‘ಅಕ್ಕ’ ಸಮ್ಮೇಳನ ನಡೆಯುತ್ತಿತ್ತು.

ಕಾರ್ಯಕ್ರಮದ ಉಸ್ತುವಾರಿಯಲ್ಲಿ ತೊಡಗಿಸಿಕೊಂಡಿದ್ದ ನನಗೆ ಅವರ ಇಲ್ಲಿನಿರುವಿಕೆ ಆಸೆಯೊಂದನ್ನು ಹುಟ್ಟುಹಾಕಿತು. ‘ಅಕ್ಕ’ ಪರವಾಗಿ ಸಾಹಿತ್ಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ. ಮಗಳ ಕುಟುಂಬದೊಂದಿಗೆ ಕಾಲ ಕಳೆಯುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದ ಅವರು ಥಟ್ಟನೆ ಒಪ್ಪಿಗೆ ಏನೂ ಕೊಡಲಿಲ್ಲ. ನೇರವಾಗಿ, ಗೌರವಪೂರ್ವಕವಾಗಿ, ಮೆಲು ಧ್ವನಿಯಲ್ಲಿ ಕಾರ್ಯಕ್ರಮಕ್ಕೆ (ಏಕೆ)ಬರಲು ಆಗುವುದಿಲ್ಲ ಎಂದು ತಿಳಿಸಿದರು.

ನಾನೂ ಗೌರವಪೂರ್ವಕವಾಗಿ ಕಾರ್ಯಕ್ರಮಕ್ಕೆ (ಏಕೆ)ಬರಬೇಕು ಎಂದು ಹೇಳಿದೆ (ಅಪ್ಪಾ, ನಿಮ್ಮ ಮಗಳು ಕರೆದರೆಂದು ಅಮೆರಿಕಾಗೆ ಬಂದಿದ್ದೀರಿ. ನಿಮ್ಮ ಮಗಳ ಹೆಸರಿನವಳೇ ಆದ ನಾನು ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯುತ್ತಿರುವೆ ಬನ್ನಿ ಎನ್ನುವ ವಾಕ್ಯವೂ ನನ್ನ ಮಾತಿನಲ್ಲಿತ್ತು). ಅಂತೂ ಅಪ್ಪ ಕಾರ್ಯಕ್ರಮಕ್ಕೆ ಬಂದಿದ್ದರು. ಅರವತ್ತರ ದಶಕದ ಕೂಸಾದ ನಾನು ಎಪ್ಪತ್ತರ ದಶಕದಲ್ಲಿ ಪತ್ರಿಕೆ, ವಿಶೇಷಾಂಕಗಳಲ್ಲಿ ಗಮನಿಸಿದ್ದ ಹೆಸರು ಆಮೂರರದ್ದು. ಈಗ ಅವರನ್ನು ಮುಃಖತಃ ಭೇಟಿಯ ಅವಕಾಶದ ಖುಷಿಯಲ್ಲಿದ್ದೆ.

ಆಮೂರರನ್ನು ಕಾಣಲೆಂದು, ಡಾ. ಶಶಿ ಆಮೂರರ ಮನೆಗೆ ಹೋದೆವು (ಚಂದ್ರು ಮತ್ತು ಶಶಿ ಐಐಎಸ್ಸಿಯಲ್ಲಿ ಡಾಕ್ಟರೇಟ್ ಪದವಿ ಪಡೆದವರು, ನಮಗೆ ಪರಿಚಯವಿದ್ದವರು). ಅಂದು ನಾವೆಲ್ಲಾ ಕೂತು ಆಡಿದ ಮಾತಿಗೆ ವಸ್ತು, ವಿಷಯ ಹಾಗೂ ಸಮಯದ ಸೀಮೆಯೇ ಇರಲಿಲ್ಲ. ವಿಜ್ಞಾನ, ಚಿಂತನೆ, ಸಾಹಿತ್ಯ, ಕಾದಂಬರಿ, ಕಾವ್ಯ ಇತ್ಯಾದಿ ಹೀಗೇ... ತೆರೆದ ಕಣ್ಣು, ಬಿರಿದ ಬಾಯಿ, ಹಾತೊರೆವ ಮೆದುಳು–ಮನಸ್ಸಿನಿಂದ ಅವರ ಮಾತುಗಳನ್ನೇ ಕೇಳುತ್ತಿದ್ದೆ.

ಖಂಡಾಂತರದ ಬರಹಗಾರರ (ಅಂದಿನಿಂದ ಇತ್ತೀಚಿನವರೆಗಿನ) ಬರಹಗಳ ಬಗ್ಗೆ ಅವರಿಗಿದ್ದ ಅರಿವು, ಬರಹಗಳನ್ನು ಉಲ್ಲೇಖಿಸುವ ಅವರ ನೆನಪಿನ ಶಕ್ತಿ ಅಸಮಾನ್ಯವಾಗಿತ್ತು. ಹೊರಡುವ ಮುನ್ನ ‘ನಮ್ಮಲ್ಲಿಗೆ ಬನ್ನಿ’ ಎನ್ನುವ ಆಹ್ವಾನಕ್ಕೆ ಅಪ್ಪ ಥಟ್ಟನೆ ಒಪ್ಪಿದರು. ನಮ್ಮಲ್ಲಿಗೆ ಅವರು ಬಂದರು. ‘ವಿಮರ್ಶೆ’ಯ ಬಗ್ಗೆ ನನ್ನಲ್ಲಿದ್ದ ಗೊಂದಲ/ ಕಲ್ಪನೆ/ ಪ್ರಶ್ನೆ/ ಕುತೂಹಲ/ ಕೌತುಕ ಎಲ್ಲಕ್ಕೂ ಸಾಮಾಧಾನವಾಗಿ, ಸ್ಪಷ್ಟವಾಗಿ, ತೃಪ್ತಿಯಾಗುವ ಹಾಗೆ ಉತ್ತರಿಸಿದರು. ಜೊತೆಯಲ್ಲಿದ್ದ, ಶ್ರೀಮತಿ ಆಮೂರರೂ ಮೆಲುದನಿಯಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದರು.  

ಆ ಕ್ಷಣ ಪ್ರಧಾನವಾಗಿ ಎದ್ದು ತೋರುತ್ತಿದ್ದ ಒಂದಂಶ ಎಂದರೆ– ಸಹಚರ್ಯೆ. ಇಬ್ಬರ ನಡುವಿನ ಪರಸ್ಪರ ಗೌರವ; ಇಬ್ಬರಲ್ಲೂ ಇದ್ದ ಆಳವಾದ ಅನುಭವದ ಸಮಾನತೆ; ಇಬ್ಬರಲ್ಲೂ ಇದ್ದ ವಿಷಯ ಜ್ಞಾನದ ಸಾಮ್ಯ. ಮಾತು ಮುಂದುವದಂತೆ ಲೇಖಕಿಯರ ಬಗ್ಗೆ ವಿಷಯ ತೆರೆದುಕೊಂಡಿತು. ಬರಹಗಾರ್ತಿಯರ ಬಗ್ಗೆ ಅವರ ಅನಿಸಿಕೆ  ಗೌರವಪೂರ್ವಕವಾಗಿದ್ದು ಒಪ್ಪುವಂತಿತ್ತು. ಲೇಖಕರು ಇತರರ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಬಗೆಗಿನ ಅವರ ನಿಲುವು ಒಪ್ಪುವಂತಿದ್ದರೂ ಆಶ್ಚರ್ಯ ಅನ್ನಿಸಿತ್ತು.

ಮಾತು  ನನ್ನ ಬರವಣಿಯ ಕಡೆ ಹರಿದಾಗ ಅಪ್ಪ ಹೇಳಿದ ಮಾತು ಬೆನ್ನು ತಟ್ಟಿದ ಹಾಗಿತ್ತು. ಶೈಲಿ, ಬರವಣಿಗೆಯ ದ್ರವ್ಯದ ಬಗ್ಗೆ ಮಾತನಾಡುತ್ತಾ ಕಥೆಗಳಲ್ಲಿ ಪಾತ್ರಗಳನ್ನು ಬಿಂಬಿಸಲು ಯಾವ ಮಗ್ಗುಲನ್ನು ಆಯ್ಕೆ ಮಾಡಿಕೊಂಡಿರುವಿರೋ ಅದರಲ್ಲಿ ದೋಷವಿಲ್ಲ, ಅನಿಸಿದ್ದನ್ನು ಬರೆಯುತ್ತಾ ಇರಿ, ಎನ್ನುವ ಅವರ ಪ್ರೊತ್ಸಾಹದ ಮಾತು ಮಗ್ಗುಲಲ್ಲೇ ನಿಂತಿದೆ. ಅಂದು ಒಟ್ಟಿಗೆ ಕೂತು ಆಡಿದ ಮಾತು, ಉಂಡ ಊಟ ಎರಡೂ ಚಂದದ್ದಾಗಿತ್ತು.

ಆ ಸಂಜೆ ಅವರೇ ಸಂಪಾದಿಸಿದ ‘ಅವಳ ಕಥೆಗಳು’ ಕೃತಿಯ ಬಗ್ಗೆ ಮಾತನಾಡುತ್ತಾ, ನನ್ನ ಕಥೆಯೊಂದನ್ನು ಆ ಪುಸ್ತಕದಲ್ಲಿ ಸೇರಿಸಬಹುದಿತ್ತು ಎಂಬ ಅವರ ಮಾತು, ನನಗೆ ದೊಡ್ಡದೊಂದು ಪ್ರಶಸ್ತಿ ಸಿಕ್ಕ ಅನುಭವಕ್ಕೆ ಏರಿಸಿತ್ತು. (ಮನೋಹರ ಗ್ರಂಥಮಾಲೆ ವತಿಯಿಂದ ಹೊರಬರಲಿರುವ ಪರಿಷ್ಕೃತ ‘ಅವಳ ಕಥೆಗಳು’ ಆವೃತ್ತಿಯಲ್ಲಿ ನನ್ನದೊಂದು ಕಥೆ ಸೇರ್ಪಡೆಯಾಗಲಿದೆ). ಧಾರವಾಡದಲ್ಲಿ ಅಮ್ಮ ಮಾಡಿಟ್ಟ, ಅಪ್ಪ ಬಡಿಸಿದ ಊಟವನ್ನು ಉಂಡು ಬಂದಿದ್ದೇನೆ. ಹಲವಾರು ಸಲ ಫೋನಲ್ಲಿ ಮಾತನಾಡಿದ್ದೇನೆ.

ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಶಶಿಯ ಮೂಲಕ ಅವರ ಮೇರು ವ್ಯಕ್ತಿತ್ವ ಕಂಡಿದ್ದೇನೆ. ನನ್ನ ಬರಹದ ಬಗ್ಗೆ ಶಶಿಯಲ್ಲಿ ವಿಚಾರಿಸುತ್ತಲೇ ಇರುತ್ತಾರೆ. ಕಾಳಜಿಯಿಂದ ‘ಬರಿ’ ಎಂದು ಸೂಚಿಸುತ್ತಾರೆ. ಅವರ ಅವ್ಯಾಹತ ಬರವಣಿಗೆ, ಜೀವನ ರೀತಿ, ನಿಲುವು ನನ್ನ ಬದುಕಿನ ಕ್ಷಣಗಳಿಗೆ ಒದಗಿ ಬಂದಿವೆ. ಅವರು ನನಗೆ ಕೊಟ್ಟ/ ಶಶಿಯೊಂದಿಗೆ ಕಳುಹಿಸಿದ ಪುಸ್ತಕಗಳು ನನ್ನಲ್ಲಿವೆ. ಕಳೆದಬಾರಿ ಅವರನ್ನು ಭೇಟಿಯಾದಾಗ, ನಿಮ್ಮ ‘ಕೊರಡು ಕೊನರಿದಾಗ’ ಕವನ ಸಂಗ್ರಹದಲ್ಲಿನ ಕವಿತೆ ‘ಶಶಿಗೆ ಒಂದು ಪತ್ರ’ ನನಗಾಗಿಯೂ ಹೌದು ಎಂದು ಓದಿಕೊಂಡೆ ಎಂದಾಗ ಅವರ ಮುಖದಲ್ಲಿ ಪ್ರಸನ್ನ ನಸು ನಗುವಿತ್ತು. ಅಪ್ಪನ ಜ್ಞಾನ ಅಪಾರ, ಹಾಗೆಯೇ ಔದಾರ್ಯ. 

(ಹವ್ಯಾಸಿ ಬರಹಗಾರ್ತಿ ಶಶಿಕಲಾ ಚಂದ್ರಶೇಖರ್ ಮೂಲತಃ ತುಮಕೂರಿನವರು. ಪ್ರಸ್ತುತ ಅಮೆರಿಕದ ಮೇರಿಲ್ಯಾಂಡ್‌ನ ಬಾಯ್ಡ್ಸ್‌ನಲ್ಲಿ ವಾಸ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT