ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಪಚಾರಿಕ ಶಿಕ್ಷಣ ವಂಚಿತರಿಗೆ ವರದಾನ

Last Updated 26 ಜೂನ್ 2015, 19:30 IST
ಅಕ್ಷರ ಗಾತ್ರ

ದೂರ ಶಿಕ್ಷಣ (ಡಿಸ್ಟೆನ್ಸ್ ಎಜುಕೇಷನ್) ಸೈದ್ಧಾಂತಿಕವಾಗಿ 150– 200 ವರ್ಷಗಳ ಹಳೆಯ ವ್ಯವಸ್ಥೆ.  ಇದು ಹತ್ತಾರು ದಶಕಗಳಿಂದ ಬಾಹ್ಯ ಶಿಕ್ಷಣ, ಅಂಚೆ ಮತ್ತು ತೆರಪಿನ ಶಿಕ್ಷಣ ಇತ್ಯಾದಿ ಹಲವಾರು ಹೆಸರುಗಳಿಂದ ಪ್ರಸಿದ್ಧವಾಗಿದೆ. 1985ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) ಸ್ಥಾಪನೆಯೊಂದಿಗೆ ದೂರ ಶಿಕ್ಷಣವು, ಹಿಂದಿನ ಹತ್ತಾರು ನ್ಯೂನತೆಗಳನ್ನು ಸರಿಪಡಿಸಿಕೊಂಡು ಇಂದಿನ ಮುಕ್ತ ವಿಶ್ವವಿದ್ಯಾಲಯದ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಇದು ಇಂಗ್ಲೆಂಡಿನ ಯು.ಕೆ. ಓಪನ್ ಯೂನಿವರ್ಸಿಟಿ ಮಾದರಿಯಲ್ಲಿ ರೂಪುಗೊಂಡ ವ್ಯವಸ್ಥೆಯೂ ಹೌದು. 

ರಾಷ್ಟ್ರ ಮಟ್ಟದಲ್ಲಿ ಇಗ್ನೊ ಸ್ಥಾಪನೆಯಾಗುವುದಕ್ಕೂ ಮೊದಲು 1982ರಲ್ಲಿಯೇ ಆಂಧ್ರ ಪ್ರದೇಶದಲ್ಲಿ ರಾಜ್ಯ ಮಟ್ಟದ ‘ಆಂಧ್ರ ಪ್ರದೇಶ ಓಪನ್ ಯೂನಿವರ್ಸಿಟಿ’ (ಎ.ಪಿ.ಒ.ಯು.) ಹೈದರಾಬಾದಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇಲ್ಲಿ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಣ ತಜ್ಞ ಪ್ರೊ. ಜಿ.ರಾಮರೆಡ್ಡಿ  ಅವರೇ ಇಗ್ನೊದ ಪ್ರಥಮ ಕುಲಪತಿಯಾಗಿಯೂ ಅಧಿಕಾರ ವಹಿಸಿಕೊಂಡರು. ಈ ಮೂಲಕ, ಅವರು ದೇಶದ ಮುಕ್ತ ವಿಶ್ವವಿದ್ಯಾಲಯ ವ್ಯವಸ್ಥೆಯ ‘ಪಿತಾಮಹ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರ ಮಾರ್ಗದರ್ಶನದ ಫಲವಾಗಿ ಇಂದು ಇಗ್ನೊ ಮತ್ತು ಎ.ಪಿ.ಒ.ಯು.ನ ಜೊತೆಗೆ 15– 18 ರಾಜ್ಯಗಳಲ್ಲಿ ಮುಕ್ತ ವಿ.ವಿ.ಗಳು ಕಾರ್ಯ ನಿರ್ವಹಿಸುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ದೂರಶಿಕ್ಷಣದ ಪ್ರಭಾವ, ಅಗತ್ಯವನ್ನು ಅಲ್ಲಗಳೆಯಲಾಗದು.

ಇಂದಿನ ದೂರ ಶಿಕ್ಷಣ ವ್ಯವಸ್ಥೆಯ ಘೋಷಣಾ ವಾಕ್ಯಗಳಾದ ‘ಜನರ ಮನೆ ಬಾಗಿಲಿಗೆ ಶಿಕ್ಷಣ’  ಹಾಗೂ ‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ತುಂಬಾ ಆಪ್ಯಾಯಮಾನವಾಗಿವೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಭೌಗೋಳಿಕ ಇತ್ಯಾದಿ ಕಾರಣಗಳಿಂದ ಔಪಚಾರಿಕ ಶಿಕ್ಷಣದ ಮೂಲಕ ಉನ್ನತ ಶಿಕ್ಷಣವನ್ನು ಪಡೆಯಲಾಗದವರಿಗೆ ದೂರ ಶಿಕ್ಷಣ ವ್ಯವಸ್ಥೆ ಕಲ್ಪವೃಕ್ಷವಾಗಿದೆ. ವಿಭಿನ್ನ ಸಂಸ್ಕೃತಿ, ಭಾಷೆ, ಭೌಗೋಳಿಕ ಸ್ಥಿತಿ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ಭಾರತದಂತಹ ದೇಶಕ್ಕೆ ಮುಕ್ತ ವಿಶ್ವವಿದ್ಯಾಲಯಗಳ ಮೂಲಕ ನೀಡುವ ದೂರ ಶಿಕ್ಷಣ ಒಂದು ವರದಾನ. ಆದರೆ ಹಲವಾರು ರಾಜ್ಯ ಸರ್ಕಾರಗಳ ವಿಶ್ವವಿದ್ಯಾಲಯಗಳಿಗೆ ಸೇರಿದ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯಗಳು ಹಾಗೂ ಮುಕ್ತ ವಿಶ್ವವಿದ್ಯಾಲಯಗಳು ಬಹುತೇಕ  ನಿಯಮಗಳನ್ನು ಉಲ್ಲಂಘಿಸಿ ಅಧ್ಯಯನ ಕೇಂದ್ರಗಳನ್ನು ತೆರೆದಿರುವುದು ಮತ್ತು  ಮಧ್ಯವರ್ತಿ ಸಂಯೋಜಕರುಗಳನ್ನು ನೇಮಿಸಿಕೊಂಡಿರುವುದರಿಂದ ಶಿಕ್ಷಣವು ಆರ್ಥಿಕ ದಂಧೆಯಾಗಿ ಪರಿವರ್ತಿತವಾಗಿದೆ.

ಔಪಚಾರಿಕವಾಗಿ ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳ ಶಿಕ್ಷಣದ ರೀತಿನೀತಿಗಳ ಹೋಲಿಕೆ ಆಧಾರದ ಮೇಲೆ ಮುಕ್ತ ವಿಶ್ವವಿದ್ಯಾಲಯಗಳ ಶಿಕ್ಷಣ ಎಂದರೆ ಮೂಗು ಮುರಿಯುವಂತಹ  ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಅವು ಅಪಖ್ಯಾತಿಗೆ ಒಳಪಡುತ್ತಿವೆ. ಸರ್ಕಾರಗಳು ಇದನ್ನು ಸರಿಪಡಿಸುವ ಗೋಜಿಗೆ ಹೋಗದೆ, ಅದು ತಮ್ಮ ಕರ್ತವ್ಯ ಅಲ್ಲ ಎಂಬಂತೆ ವರ್ತಿಸುತ್ತಿವೆ. ಯಾವುದೇ ಅವ್ಯವಸ್ಥೆಗೆ ಪರಿಹಾರವಿಲ್ಲದೇ ಇಲ್ಲ.

  ಆದರೆ ರಾಜಕೀಯ ಇಚ್ಛಾಶಕ್ತಿ ಇಲ್ಲದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗದೆ, ಇಂತಹ ದುರದೃಷ್ಟಕರ ಪರಿಸ್ಥಿತಿ ಹಂತ ಹಂತವಾಗಿ ಬೆಳೆದು ಗುಣಮಟ್ಟವಿಲ್ಲದ ಪದವೀಧರರ ಸಂಖ್ಯೆ ಹೆಚ್ಚುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕಾದರೆ ಔಪಚಾರಿಕ ವ್ಯವಸ್ಥೆಯಿಂದ ಆಗಾಗ್ಗೆ ಸಂಭವಿಸುತ್ತಿರುವ ಅವ್ಯವಹಾರಗಳಿಗೂ ಕಡಿವಾಣ ಹಾಕಲೇಬೇಕು. ಇಂತಹ ಎಚ್ಚರಿಕೆಗಳ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಹೊಣೆ ಸರ್ಕಾರ, ನ್ಯಾಯಾಲಯಗಳು, ಸಮಾಜದ ಹಿರಿಯರು ಹಾಗೂ ಮಠಮಾನ್ಯಗಳ ಮೇಲಿದೆ.

ದೂರಶಿಕ್ಷಣ ವ್ಯವಸ್ಥೆಯು 20ನೇ ಶತಮಾನದಲ್ಲಿ ಮಾನವಿಕ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ಭಾಷಾ ವಿಷಯಗಳಿಗೆ ಸೀಮಿತವಾಗಿತ್ತು. ಆದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ  ಮುಕ್ತ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದ ನಂತರ ವಿಜ್ಞಾನ ವಿಭಾಗ, ಅನ್ವಯಿಕ ವಿಜ್ಞಾನ, ಎಂಜಿನಿಯರಿಂಗ್‌, ಕೃಷಿ, ಅರೆ ವೈದ್ಯಕೀಯ ಕೋರ್ಸ್‌ಗಳನ್ನೂ ಈ ವ್ಯವಸ್ಥೆ ಒಳಗೊಂಡಿತು. ಇದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನು ಇಗ್ನೊ ರಾಷ್ಟ್ರ ಮಟ್ಟದಲ್ಲಿ ರೂಪಿಸಿದೆ. ಆದರೆ ಈ ಬದಲಾದ ವ್ಯವಸ್ಥೆಯನ್ನು ಹಲವಾರು ರಾಜ್ಯ ಮುಕ್ತ ವಿ.ವಿ.ಗಳು ಹಾಗೂ ಔಪಚಾರಿಕ ವಿಶ್ವವಿದ್ಯಾಲಯಗಳ ಅಂಚೆ ಮತ್ತು ತೆರಪಿನ ಶಿಕ್ಷಣ ನಿರ್ದೇಶನಾಲಯಗಳು ದುರುಪಯೋಗ ಪಡಿಸಿಕೊಂಡಿರುವ ನಿದರ್ಶನಗಳು ನಮ್ಮ ಮುಂದೆ ಇವೆ. 

ವಿಜ್ಞಾನದ ಕೋರ್ಸ್‌ಗಳು: ರಸಾಯನಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರದಂತಹ  ಮೂಲ ವಿಜ್ಞಾನದ ಕೋರ್ಸ್‌ಗಳು, ಜೈವಿಕ ವಿಜ್ಞಾನ, ಸೂಕ್ಷ್ಮಜೀವಿಶಾಸ್ತ್ರ, ಬಿ.ಸಿ.ಎ., ಎಂ.ಸಿ.ಎ. ಅಂತಹ ಅನ್ವಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಕೋರ್ಸ್‌ಗಳನ್ನು ದೂರಶಿಕ್ಷಣದ ಮೂಲಕ ನೀಡುವಾಗ, ಇಂತಹುದೇ ಕೋರ್ಸ್‌ಗಳನ್ನು ಔಪಚಾರಿಕ ವಿಧಾನದಲ್ಲಿ ನಡೆಸುತ್ತಿರುವ ಉನ್ನತ ಶಿಕ್ಷಣ ಕಾಲೇಜುಗಳ ನೆರವು ಪಡೆಯಬಹುದು. ಹೇಗೆಂದರೆ, ಅಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯಗಳು ಇರುತ್ತವೆ. ಅವನ್ನು ಬೋಧಿಸುವ ಅರ್ಹ ಮತ್ತು ಅನುಭವಿ ಬೋಧಕರು ಇರುತ್ತಾರೆ. ಈ ವ್ಯವಸ್ಥೆಯನ್ನು ಔಪಚಾರಿಕ ಶಿಕ್ಷಣಕ್ಕಾಗಿ ದಿನದ 24 ಗಂಟೆಗಳೂ ಉಪಯೋಗಿಸುವುದಿಲ್ಲ. ದಿನದ 10– 15 ಗಂಟೆಗಳು, ಶನಿವಾರ, ಭಾನುವಾರ, ರಜಾ ದಿನಗಳಲ್ಲಿ ಈ ವ್ಯವಸ್ಥೆ ಉಪಯೋಗಿಸದೆ ಖಾಲಿ ಇರುತ್ತದೆ. ಇದನ್ನು ದೂರಶಿಕ್ಷಣ ಸಂಸ್ಥೆಗಳು ಬಾಡಿಗೆಗೆ ಪಡೆದುಕೊಂಡು, ಆ ಸಮಯದಲ್ಲಿ ತನ್ನ ವಿದ್ಯಾರ್ಥಿಗಳಿಗಾಗಿ ಈ ಸವಲತ್ತುಗಳನ್ನು ಬಳಸಿಕೊಳ್ಳಬಹುದು.

ಕಾಲೇಜುಗಳ ಅಧ್ಯಯನ ಕೇಂದ್ರಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಸೂಕ್ತ ಮೇಲ್ವಿಚಾರಣೆ, ಗುಣಮಟ್ಟದ ಬೋಧನಾ ಸಾಮಗ್ರಿ, ಅನುಭವಿ ಶಿಕ್ಷಕರು, ಟೆಲಿಕಾನ್ಫರೆನ್ಸ್, ವಿಡಿಯೊ ಕಾನ್ಫರೆನ್ಸ್‌ನಂತಹ ವ್ಯವಸ್ಥೆ ಮೂಲಕ ಔಪಚಾರಿಕ ಶಿಕ್ಷಣದಷ್ಟೇ ಉತ್ತಮ ಗುಣಮಟ್ಟದ ಸರ್ಟಿಫಿಕೇಟ್ ಕೋರ್ಸ್‌, ಡಿಪ್ಲೊಮಾ, ಪದವಿ ಕೋರ್ಸ್‌ ನೀಡಬಹುದು.

ಈಗಾಗಲೇ ಇಗ್ನೊ ಇಂತಹ ಸಾಧ್ಯತೆಯನ್ನು ಕಾರ್ಯರೂಪಕ್ಕೆ ತಂದಿದೆ. ಇಗ್ನೊದ ಅಧ್ಯಯನ ಸಾಮಗ್ರಿಗೆ ಕಾಮನ್‌ವೆಲ್ತ್ ಆಫ್ ಲರ್ನಿಂಗ್‌ ಸಂಸ್ಥೆಯಿಂದ ‘ಬೆಸ್ಟ್ ರೀಡಿಂಗ್ ಮೆಟೀರಿಯಲ್‌’ ಮಾನ್ಯತೆ ದೊರಕಿದೆ. ಇಂತಹ ಹಲವಾರು ಪ್ರಯೋಗಗಳನ್ನು ಹಿಂದೆ ಕೆ.ಎಸ್‌.ಒ.ಯು.ದಲ್ಲೂ ಮಾಡಲಾಗಿದೆ. ಅಂಚೆ ಮತ್ತು ತೆರಪಿನ ಶಿಕ್ಷಣ ವ್ಯವಸ್ಥೆಯಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ದೂರಶಿಕ್ಷಣದಲ್ಲಿ ಪರಿವರ್ತನೆ ತರಲಾಗಿದೆ. ಆದರೆ ಇಂದು ಹಲವೆಡೆ ಮುಕ್ತ ವಿ.ವಿ.ಗಳು, ಸರ್ಕಾರಿ ಔಪಚಾರಿಕ ವಿ.ವಿ.ಗಳ ಬಹುತೇಕ ಅಧ್ಯಯನ ಕೇಂದ್ರಗಳು ಹಾಗೂ ಮಧ್ಯವರ್ತಿಗಳ ಮುಖಾಂತರ ಗುಣಮಟ್ಟ ಹಂತಹಂತವಾಗಿ ಕಳಚಿಕೊಂಡು ಉತ್ತಮ ವ್ಯವಸ್ಥೆಗೆ ಕಳಂಕ ಬರುತ್ತಿದೆ. 

ವಿಜ್ಞಾನ ಕೋರ್ಸ್‌ಗಳ ನಿರ್ವಹಣೆಯಂತೆಯೇ ಎಂಜಿನಿಯರಿಂಗ್, ಅರೆವೈದ್ಯಕೀಯ, ಕೃಷಿಗೆ ಸಂಬಂಧಿಸಿದ ಕೋರ್ಸ್‌ಗಳನ್ನೂ ನಡೆಸಬಹುದು. ಇವುಗಳ ನಿರ್ವಹಣೆಯ ಮೇಲ್ವಿಚಾರಣೆಗಾಗಿ ರಾಷ್ಟ್ರ ಮಟ್ಟದಲ್ಲಿ ದೂರ ಶಿಕ್ಷಣ ಮಂಡಳಿ, ಯು.ಜಿ.ಸಿ., ಹಾಗೇ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಎಐಸಿಟಿಇ ಅಂತಹ ನಿಯಂತ್ರಣ ಮಂಡಳಿಗಳ ಮಾನ್ಯತೆ ಪಡೆಯಲು ಅವಕಾಶವೂ ಇದೆ. ಈ ಮೂಲಕ, ದೂರ ಶಿಕ್ಷಣ ವ್ಯವಸ್ಥೆಯಡಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಕೊಡುತ್ತಿರುವ ಹಲವಾರು ಸಂಸ್ಥೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇವೆ. ಆದರೆ, ಎಲ್ಲರ ನಿಯಂತ್ರಣವನ್ನೂ ಮೀರಿ ನಡೆಯುತ್ತಿರುವ ಕೆಲವು ಸಂಸ್ಥೆಗಳು ಇಂತಹ ಉತ್ತಮ ವ್ಯವಸ್ಥೆಗೆ ಕಳಂಕ ತರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT