ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧೀಯ ಗಿಡಗಳ ಖನಿ

Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಸುವರ್ಣಮುಖಿ ನದಿ ಮೂಲವನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿರುವ ಶ್ರೀಕ್ಷೇತ್ರ ಸಿದ್ದರಬೆಟ್ಟ ಅಸೀಮ ಸಸ್ಯ ಸಂಪತ್ತಿನ ಸೊಬಗಿನ ರಾಶಿಯನ್ನೇ ಹೊಂದಿದೆ. ಜಾಲಾರಿ ಹೂವಿನ ಘಮಲು ಬೆಟ್ಟಕ್ಕೆ ಶೋಭೆ ನೀಡಿದೆ. ಔಷಧಿ ಗಿಡಮೂಲಿಕೆಗಳು ಇಲ್ಲಿನ ವಿಶೇಷಗಳಲ್ಲೊಂದು.

ದಕ್ಷಿಣ ಕಾಶಿಯೆಂದೇ ಪ್ರಸಿದ್ಧಿ ಪಡೆದಿರುವ ಸಿದ್ದರಬೆಟ್ಟವನ್ನು ಸಿದ್ದಗಿರಿ, ಸುವರ್ಣಗಿರಿ ಎಂದೂ ಕರೆಯುತ್ತಾರೆ. ಇದು ಅತ್ಯಂತ ಕಡಿದಾದ ಬೆಟ್ಟ. ಮೆಟ್ಟಿಲು ಬಿಟ್ಟು ಅಡ್ಡ ದಾರಿಗಿಳಿದರೆ ಬೆಟ್ಟ ಹತ್ತುವುದು ಕಷ್ಟ. ಆದರೆ ಇಷ್ಟಪಟ್ಟು ಹತ್ತುವ ಚಾರಣಿಗರಿಗೆ ಇಷ್ಟವಾದ ದಾರಿ ಇದು. ಮೇಲಕ್ಕೆ ಹೋದಂತೆ ಅಲ್ಲಲ್ಲಿ ತಪೋನಿರತರಾಗಿರುವ ಸಿದ್ದರನ್ನು ನೋಡಬಹುದು. ನಸುಕಿನಲ್ಲಿ ಬೆಟ್ಟ ಹತ್ತುವುದು ಉತ್ತಮ. ಬಿಸಿಲಲ್ಲಿ ಸ್ವಲ್ಪ ಕಷ್ಟ.

ಬೆಟ್ಟವು ಸುಮಾರು 2650 ಅಡಿ ಎತ್ತರವಿದೆ. ಬೆಟ್ಟದ ಮೇಲೆ ನಿಂತು ನೋಡಿದಾಗ ಸುತ್ತಲೂ ಪರ್ವತಗಳೇ. ಚನ್ನರಾಯನದುರ್ಗ, ದೇವರಾಯನದುರ್ಗ, ಮಧುಗಿರಿ ಬೆಟ್ಟಗಳ ಪಕ್ಷಿನೋಟ ನೋಡಬಹುದು.  ಇಲ್ಲಿಯ ಸೌಂದರ್ಯ ಕವಿಗಳಿಗೆ ಸ್ಫೂರ್ತಿ ನೀಡಿದರೆ, ವೈವಿಧ್ಯಮಯ ವನಸ್ಪತಿಗಳು, ಸಸ್ಯಶಾಸ್ತ್ರಜ್ಞರಿಗೆ, ಆಯುರ್ವೇದ ಅಧ್ಯಯನ ಮಾಡುವವರಿಗೆ ಆಹ್ವಾನ ನೀಡುತ್ತಿದೆ. ಕಾಡು ಮಾವು, ಕಾಡು ನೆಲ್ಲಿ, ಕಾಡು ನಿಂಬೆ, ಕಾಡುದ್ರಾಕ್ಷಿ ಸೇರಿದಂತೆ ಸಸ್ಯ ವೈವಿಧ್ಯವೇ ಬೆಟ್ಟದಲ್ಲಿದೆ. ಅನೇಕ ಮರಗಳಿಗೆ ನೂರಾರು ವರ್ಷಗಳ ಚರಿತ್ರೆಯಿದೆ. ಅವುಗಳ ಬೇರು ಬಿಳಲುಗಳು ಗವಿ ತುಂಬಾ ತುಂಬಿವೆ.

ಬೆಟ್ಟ ಹತ್ತುವಾಗ ಬಲಬದಿಯ ಹಾಗೂ ಇಳಿಯುವಾಗ ಎಡಬದಿ ಇರುವ ಗಿಡ ಮರಗಳ ಎಲೆಗಳನ್ನು, 48ದಿನಗಳ ಕಾಲ ತಿನ್ನುತ್ತಾ ಬಂದರೆ ಎಂತಹ ರೋಗಗಳೂ ವಾಸಿಯಾಗುತ್ತವೆ ಎಂಬ ಪ್ರತೀತಿ ಇದೆ. ಬೆಟ್ಟ ಹತ್ತಿ ಅರ್ಧ ಭಾಗ ತಲುಪಿದರೆ ಗುಹೆಯೊಂದರ ದರ್ಶನವಾಗುತ್ತದೆ. ಒಂದರ ಮೇಲೊಂದು ಜೋಡಿಸಿದಂತಿರುವ ಬೃಹತ್ ಬಂಡೆಗಳು, ಮೂಲೆಯಲ್ಲಿ ಉದ್ಭವ ಲಿಂಗ ಇಲ್ಲಿಯ ಆಕರ್ಷಣೆ. ಇದೇ ಶ್ರೀ ಸಿದ್ದೇಶ್ವರ. ಲಿಂಗದ ಮುಂದೆ ಎದುರು ಭಾಗದ ಪುಟ್ಟ ಕೊಳದಲ್ಲಿ ಉಕ್ಕುವ ಗಂಗೆಯ ತಣ್ಣನೆ ಕೊರೆತವಿದೆ.

ಇದೇ ಸುವರ್ಣಮುಖಿ ನದಿಯ ಉಗಮಸ್ಥಾನ. ಹಾಗಾಗಿ ಸುವರ್ಣ ಗವಿ ಎಂದೂ ಇದನ್ನು ಕರೆಯಲಾಗುತ್ತದೆ. ಈ ನೀರಿನಲ್ಲೂ ಔಷಧೀಯ ಗುಣವಿದೆ. ಈ ಪವಿತ್ರ ಜಲದಲ್ಲಿ ಮಿಂದರೆ ಸರ್ವ ರೋಗಗಳೂ ಪರಿಹಾರ ಎನ್ನುವ ಪ್ರತೀತಿಯಿದೆ. ಶೀತಲ ಜಲದಲ್ಲಿ ಸ್ನಾನ ಮಾಡಿದರೆ ಬೆಟ್ಟ ಹತ್ತಿದ ಆಯಾಸವೆಲ್ಲಾ ಪರಿಹಾರವಾಗುತ್ತದೆ.

ಬೆಟ್ಟದ ಬುಡದಿಂದಲೇ ಅಲೌಕಿಕ ಲೋಕವೊಂದು ಅನಾವರಣಗೊಂಡಂತೆ ಭಾಸವಾಗುತ್ತದೆ. ಉದ್ಭವಲಿಂಗದ ಎದುರು ಭಾಗದಲ್ಲಿ ಒಂದು ಗವಿಯಿದೆ. ಟಾರ್ಚ್ ಬೆಳಕಿನಲ್ಲಿಯೇ ಪಯಣ ಆರಂಭಿಸಬೇಕು. ಗವಿಯ ಒಳಭಾಗ ಒಂದು  ಕಿ.ಮೀಟರ್‌ಗೂ  ಹೆಚ್ಚು ದೂರವಿದೆ. ಟಾರ್ಚ್ ಬೆಳಕಿನಲ್ಲಿ ತೆವಳುತ್ತಾ, ನಡೆಯುತ್ತಾ, ಬಂಡೆಗಳನ್ನು ಹತ್ತಿ ಇಳಿಯುತ್ತಾ ಹೊರಟಾಗ ಮೈಮನವೆಲ್ಲಾ ರೋಮಾಂಚನ. ಕೆಲವೆಡೆ ಬಂಡೆಗಳ ನಡುವೆ ನುಸುಳಬೇಕು. ದೇಹವನ್ನು ಬಳುಕಿಸಿ  ಸಾಗಬೇಕು.

ಸ್ಥಳೀಯರ ಸಹಕಾರ ಪಡೆದು ಗುಹೆಯಲ್ಲಿ ಪಯಣಿಸುವುದು ಉತ್ತಮ. ಗವಿಯಲ್ಲಿ ಗಾಳಿಗೆ ಕೊರತೆಯಿಲ್ಲ. ಶುದ್ಧಗಾಳಿ, ಹೊರಗೆ ನೆತ್ತಿ ಸುಡುವ ಕೆಂಡದಂತಹ ಬಿಸಿಲಿದ್ದರೂ, ಬಂಡೆಗಳ ಲೋಕದ ಗವಿಯೊಳಗೆ ತಣ್ಣನೆ ಅನುಭವ. ಕೆಲವೆಡೆ ಸೂರ್ಯನ ಬೆಳಕು ಸರಾಗ. ಬೆಟ್ಟದ ತುದಿಗೆ ತಲುಪಿದರೆ ವಿಶಾಲ ಬಯಲು. ಹತ್ತು ಎಕರೆಗೂ ಹೆಚ್ಚಿನ ಸ್ಥಳ. ಸಮತಟ್ಟಾದ ಬಂಡೆ. ಬೆಟ್ಟದ ಮೇಲೆ ಪ್ರಾಚೀನಕಾಲದ ಹಲವಾರು ಗುಹೆಗಳಿವೆ.

ಋಷಿ ಮುನಿಗಳು ಗುಹೆಯಲ್ಲಿ ತಪಸ್ಸನ್ನಾಚರಿಸಿರುವ ಕುರುಹುಗಳೂ ಇವೆ. ಹೀಗಾಗಿ ಧಾರ್ಮಿಕ ಮತ್ತು ಪುರಾತತ್ವಕ್ಕೆ ಹೆಸರಾಗಿದೆ. ಸುವರ್ಣಗವಿ, ಬೂದು ಗವಿ, ಬಂಗಾರದಗಿಂಡಿ ಗವಿ, ಯೋಗ ಸಾಧನೆಯಗದ್ದುಗೆ, ಲಕ್ಷ್ಮೀದೇವಿಯ ಗದ್ದುಗೆ ಮುಂತಾದ ಪವಿತ್ರ ಸ್ಥಳಗಳಿವೆ. ಸುವರ್ಣಗವಿಯಲ್ಲಿ ಹಲವಾರು ಹೆಬ್ಬಂಡೆಗಳಿವೆ.

ಸ್ಥಳದ ಐತಿಹ್ಯ
ಸ್ಥಳ ಪುರಾಣದ ಪ್ರಕಾರ ಶ್ರೀರಾಮ -ರಾವಣರ ಯುದ್ಧದಲ್ಲಿ ಲಕ್ಷ್ಮಣ ಮೂರ್ಛೆ ಹೋದಾಗ ಹನುಮಂತ ಸಂಜೀವಿನಿ ಪರ್ವತವನ್ನೆತ್ತಿಕೊಂಡು ಬರುತ್ತಾನೆ. ಹಾಗೆ ಬರುವಾಗ ಸಂಜೀವಿನಿ ಪರ್ವತದ ತುಣುಕೊಂದು ಸಿದ್ದರಬೆಟ್ಟದ ಮೇಲೆ ಬಿದ್ದಿತೆಂದು ಪ್ರತೀತಿ. ಇನ್ನೊಂದು ಕಥೆಯ ಪ್ರಕಾರ, ಮಧುಗಿರಿಯ ಮಹಾ ನಾಡಪ್ರಭು ಇಮ್ಮಡಿ ಚಿಕ್ಕಪ್ಪಗೌಡನ ಸೇನಾನಿ ಕುರಂಗನಾಯಕ 16ನೇ ಶತಮಾನದ ಆದಿಯಲ್ಲಿ ಇಲ್ಲಿ ಕೋಟೆ-ಕೊತ್ತಲ ಕಟ್ಟಿಸಿ ಆಳ್ವಿಕೆ ನಡೆಸುತ್ತಿದ್ದ. ಆತನ ಪಟ್ಟದಾನೆಗೆ ಕಣ್ಣು ಕುರುಡಾಯಿತು. ಆನೆಯನ್ನು ಈ ಬೆಟ್ಟದ ಮೇಲೆ ಬಿಟ್ಟುಬಿಟ್ಟರು. ಬೆಟ್ಟದಲ್ಲಿನ ಹುಲ್ಲು ಸೊಪ್ಪುಗಳನ್ನು ಐದಾರು ತಿಂಗಳ ಕಾಲ ತಿಂದ ನಂತರ ಆನೆಗೆ ಪುನಃ ದೃಷ್ಟಿ ಮರಳಿ ಬಂದಿತು ಎಂಬುದು.

ಈ ಸ್ಥಳದ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಇಂದ್ರನ ಮಗ ಜಯಂತ ಮುನಿಯೊಬ್ಬರ ಶಾಪದಿಂದ ಕಾಗೆಯಾಗುತ್ತಾನೆ. ಆತ ತನ್ನ ತಪ್ಪಿಗೆ ಕ್ಷಮೆಕೋರಿದಾಗ ರಾಮನ ಪಾದಸ್ಪರ್ಶದಿಂದ ಅವನಿಗೆ ಮುಕ್ತಿದೊರಕಲಿ ಎನ್ನುತ್ತಾನೆ ಮುನಿ. ಅದರಂತೆ ರಾಮ-ಸೀತೆ ಈ ಸ್ಥಳಕ್ಕೆ ಬಂದಾಗ ಸೀತೆಯನ್ನು ಕಾಕಾಸುರ ಕುಕ್ಕುತ್ತಾನೆ. ಆಗ ರಾಮ ಕೈಗೆ ಸಿಕ್ಕಿದ ಒಂದು ದರ್ಬೆಯನ್ನು ಮಂತ್ರಿಸಿ ಕಾಕಾಸುರನ ಮೇಲೆ ಪ್ರಯೋಗಿಸುತ್ತಾನೆ.

ಅದರ ಹೊಡೆತ ತಾಳಲಾರದೆ ಕಾಕಾಸುರ ಶ್ರೀರಾಮನ ಕಾಲಿಗೆ ಬೀಳುತ್ತಾನೆ. ಜಯಂತನಿಗೆ ಶಾಪ ವಿಮೋಚನೆಯಾಗುತ್ತದೆ. ಶ್ರೀರಾಮ ಆತನನ್ನು ಕ್ಷಮಿಸಿದರೂ  ಈ ಪ್ರದೇಶದಲ್ಲಿ ಸುಳಿಯದಂತೆ  ಹೇಳುತ್ತಾನೆ. ಇದಕ್ಕೆ ಸಾಕ್ಷಿಯಾಗಿರುವಂತೆ ಇಂದಿಗೂ ಬೆಟ್ಟದಲ್ಲಿ ಕಾಗೆಗಳ ಸಂಚಾರವಿಲ್ಲ.

ಪ್ರವಾಸಿಗರಿಗಿಷ್ಟು ಮಾಹಿತಿ...
ಮೊದಮೊದಲು ಕಲ್ಲು ಹಾಸಿದ, ಸುಸ್ಥಿತಿಯ ಮೆಟ್ಟಿಲುಗಳಿವೆ. ಮೇಲೆ ಹತ್ತುತ್ತಿದ್ದಂತೆ ಒಂದೆರಡು ಕಡೆ ಕಲ್ಲು ಬಂಡೆಯಲ್ಲೇ ಮೆಟ್ಟಿಲುಗಳನ್ನು ಕಡೆದಿದ್ದಾರೆ. ಮಧ್ಯೆ ಮಧ್ಯೆ ಅರಣ್ಯ ಇಲಾಖೆಯವರು ನಿರ್ಮಿಸಿರುವ ವಿಶ್ರಾಂತಿ ಕುಟೀರಗಳು. ಬೆಟ್ಟದ ಮೇಲೆ ಕುಳಿತು ಹರಟಲು, ಕುರುಕಲು ತಿಂಡಿ ತಿನ್ನಲು ಸಾಕಷ್ಟು ಸ್ಥಳಾವಕಾಶವಿದೆ. ಆದರೆ ಬೃಹತ್ ಆಕಾರದ ಬಂಡೆಯ ಅಂಚಿಗೆ ಹೋಗುವಾಗ ವಿಶೇಷ ಎಚ್ಚರಿಕೆ ಅಗತ್ಯ.

ಬೆಟ್ಟದ ಬುಡದಲ್ಲಿ ಸಿದ್ದೇಶ್ವರ ದೇವಾಲಯ, ಮಠವೂ ಇದೆ. ಪ್ರತಿ ಸೋಮವಾರ ಔಷಧವನ್ನು ಕೊಡುತ್ತಾರೆ. ಮಠದಲ್ಲಿ ಪ್ರತಿ ನಿತ್ಯ ದಾಸೋಹವಿದೆ. ಬೆಟ್ಟ ಏರುವ ಮಧ್ಯೆ ದೊಡ್ಡ ಮರಗಳೇನೂ ಹೆಚ್ಚಿಲ್ಲ. ಕಲ್ಲು ಹಾಸಿದ ಮೆಟ್ಟಿಲುಗಳ ಎಡಬಲಕ್ಕೆ ಅಲ್ಲಲ್ಲಿ ಸ್ವಲ್ಪ ನೆರಳು ಸಿಗಬಹುದಾದರೂ, ಬೆಟ್ಟದ ದಾರಿಯ ಬಹುಪಾಲು ಬಿಸಿಲಿನಲ್ಲೇ ಸಾಗಬೇಕು. ಆದ್ದರಿಂದ ಬೆಳಿಗ್ಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹತ್ತಲು ಆರಂಭಿಸುವುದು ಉತ್ತಮ.

ಹೋಗುವುದು ಹೀಗೆ: ಈ  ತಾಣ ಬೆಂಗಳೂರಿನಿಂದ 110 ಕಿ.ಮೀ ದೂರದಲ್ಲಿದೆ. ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ತುಂಬಾಡಿ ಊರಿನಿಂದ ಈ ಬೆಟ್ಟಕ್ಕೆ ಹೋಗಬಹುದು. ಈ ಮಾರ್ಗ ಒಟ್ಟು 35 ಕಿ.ಮೀ ದೂರವಿದೆ. ಹಾಗೆಯೇ ತುಮಕೂರಿನಿಂದ ತೋವಿನಕೆರೆ ಮಾರ್ಗವಾಗಿಯೂ ಹೋದರೆ ಸುಮಾರು 30 ಕಿ.ಮೀ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT