ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗನಾ ಚಿತ್ರಕಥಾ ಬೇಟ

Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹತ್ತು ವರ್ಷಗಳ ಹಿಂದೆ ಅರ್ಥಾತ್‌ 2005ರಲ್ಲಿ ಒಂದೇ ಮನೆಯಲ್ಲಿ ಎರಡು ಘಟನೆಗಳು ನಡೆದವು. ಒಂದು– ಒಬ್ಬ ಮಗಳು ನಟಿಯಾದಳು; ‘ಗ್ಯಾಂಗ್‌ಸ್ಟರ್‌’ ಸಿನಿಮಾ ಮೂಲಕ. ಇನ್ನೊಬ್ಬ ಮಗಳಿಗೆ ದುಷ್ಕರ್ಮಿಯೊಬ್ಬ ಆ್ಯಸಿಡ್‌ ಎರಚಿದ. ನಟಿಯಾದ ಹುಡುಗಿ ಕಂಗನಾ ರನೋಟ್‌. ಆ್ಯಸಿಡ್‌ ದಾಳಿಯ ನಂತರ ಚಿಕಿತ್ಸೆ ಪಡೆದು ಚೇತರಿಸಿಕೊಂಡು, ದಾಂಪತ್ಯ ಬದುಕು ನಡೆಸುತ್ತಿರುವ ಹುಡುಗಿ ರಂಗೋಲಿ.

ಕಂಗನಾ ಶಿಸ್ತಿನ ವಾತಾವರಣದಲ್ಲಿ ಬೆಳೆದವರು. ಸಿನಿಮಾ ಅಂದರೆ ಅಷ್ಟಕ್ಕಷ್ಟೆ. ವೈದ್ಯಕೀಯ ವಿಷಯದಲ್ಲಿ ಆಸಕ್ತಿ ಇದ್ದುದರಿಂದ ಕಾಲೇಜು ಮೆಟ್ಟಿಲು ಹತ್ತಿದಾಗ ಸದಾ ಓದುವುದೇ ಚಾಳಿ. ಗ್ರಂಥಾಲಯವೇ ಅವರ ಲವರ್‌. ಸ್ನೇಹಿತೆಯರು ಹರಟೆ ಕೊಚ್ಚುತ್ತಾ, ಕುರುಕಲು ಮೆಲ್ಲುತ್ತಾ ಕೂತಾಗಲೂ ವಿಚಲಿತಳಾಗದೆ ಓದುತ್ತಿದ್ದ ಕಂಗನಾಗೆ ದಿಢೀರನೆ ನಾಟಕದ ಮೋಹ ಹುಟ್ಟಿತು. ಇಂಡಿಯಾ ಹೆಬಿಟೇಟ್‌ ಸೆಂಟರ್‌ನಲ್ಲಿ ಅರವಿಂದ್‌ ಗೌರ್‌ ಅವರ ರಂಗಕಮ್ಮಟ ಸೇರಿಕೊಂಡರು. ಮೊದಲು ಅಭಿನಯಿಸಿದ ನಾಟಕ ಗಿರೀಶ ಕಾರ್ನಾಡರ ‘ತಲೆದಂಡ’ದ ರೂಪಾಂತರ ‘ರಕ್ತ್ ಕಲ್ಯಾಣ್’.

ರಂಗದ ಆಕರ್ಷಣೆಗೆ ಬಿದ್ದು, ರ್‍್ಯಾಂಪ್‌ ಹತ್ತಿದ ಮೇಲೂ ಕಂಗನಾ ಪುಸ್ತಕ ಪ್ರೀತಿ ಮುಕ್ಕಾಗಲಿಲ್ಲ. ಮನೆಯಲ್ಲಿ ಅಪ್ಪನ ಮುನಿಸು ಎದುರಿಸಲು  ಕಂಗನಾ ಕಂಡುಕೊಂಡ ಪರಿಹಾರ ಓದು. ಅಪ್ಪ ಹುಬ್ಬುಗಂಟಿಕ್ಕಿ ಎದುರಲ್ಲಿ ಕುಳಿತಿದ್ದರೆ, ಈ ಮಗಳು ನೂರಿನ್ನೂರು ಪುಟಗಳನ್ನು ತ್ರಾಸೆ ಇಲ್ಲದಂತೆ ಓದುತ್ತಾ ಕೂರುತ್ತಿದ್ದಳು. ಮಗಳ ಈ ವರಸೆಯನ್ನು ಕಂಡು ಅಪ್ಪ ಕೊನೆಗೆ ಮುಗುಳ್ನಕ್ಕು ಕೋಪವ್ರತ ಮುರಿದಿದ್ದರಂತೆ.

ಜನಪ್ರಿಯತೆ, ತಾರಾಪಟ್ಟ ಇವೆಲ್ಲವೂ ಕ್ಷಣಿಕ ಎಂದು ನಮ್ರವಾಗಿ ಹೇಳುವವರ ಸಾಲಿಗೆ ಸೇರುವವರು ಕಂಗನಾ. ‘ಫ್ಯಾಷನ್‌’ ಸಿನಿಮಾಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಬಂದ ಸುದ್ದಿ ಕಿವಿ ಮುಟ್ಟಿದಾಗ, ಅವರು ಬಟ್ಟೆ ಒಗೆಯುತ್ತಿದ್ದುದು ಅನೇಕರಿಗೆ ಅಚ್ಚರಿಯ ಸಂಗತಿ ಎನಿಸೀತು.

ಈಗ ಶ್ರೇಷ್ಠ ನಟಿ ರಾಷ್ಟ್ರಪ್ರಶಸ್ತಿ ತಂದಿತ್ತಿರುವ ‘ಕ್ವೀನ್‌’ ಸಿನಿಮಾ ಚಿತ್ರೀಕರಣ ಮುಗಿದ ಮೇಲೆ ಅವರು ನ್ಯೂಯಾರ್ಕ್‌ನಲ್ಲಿ ಬಾಡಿಗೆ ರೂಮ್‌ ಮಾಡಿಕೊಂಡು, ತಮ್ಮ ಅಡುಗೆಯನ್ನು ತಾವೇ ಸಿದ್ಧಪಡಿಸುತ್ತಾ, ಬಟ್ಟೆ ಒಗೆದು, ಇಸ್ತ್ರಿ ಹಾಕುತ್ತಾ ಇದ್ದುದು ಸಿನಿಮಾ ತಂಡದವರಿಗೇ ಆಸಕ್ತಿಕರ ಸಂಗತಿಯಾಗಿತ್ತು.  ಅವರು ಚಿತ್ರಕಥಾ ಬರವಣಿಗೆಯ ಕೋರ್ಸ್‌ ಒಂದಕ್ಕೆ ಸೇರಿ ಥೇಟ್‌ ವಿದ್ಯಾರ್ಥಿನಿಯಂತೆ ಅಲ್ಲಿ ತರಗತಿಗೆ ಹೋಗುತ್ತಿದ್ದರು. ‘ಕ್ವೀನ್‌’ ಸಿನಿಮಾ ಪ್ರಚಾರಕ್ಕೆ ಆಹ್ವಾನ ಬಂದದ್ದೇ ಕೋರ್ಸನ್ನು ಅರ್ಧಕ್ಕೇ ಬಿಟ್ಟು ಹೊರಟರು. ಆ ಕೋರ್ಸ್‌ ಮುಂದುವರಿಸುವ ಉದ್ದೇಶ ಅವರದ್ದು.

ಚಿತ್ರಕಥಾ ಬರಹ ಅವರಿಗೆ ಹಳೆಯ ಆಸಕ್ತಿ. ಒಂದು ಪೀರಿಯೆಡ್‌ ಸಿನಿಮಾದ ನೀಳ್ಗತೆ ಇಟ್ಟುಕೊಂಡು ಸ್ಕ್ರಿಪ್ಟ್‌ ಬರೆದಿಟ್ಟಿರುವ ಅವರಿಗೆ ಒಂಬತ್ತು ನಿಮಿಷದ ಕಿರುಚಿತ್ರ ತಯಾರಿಸಿದ ಅನುಭವವೂ ಇದೆ. ಮುಂದೆ ಚಲನಚಿತ್ರವೊಂದನ್ನು ನಿರ್ದೇಶಿಸಲು ಅವರು ದೀರ್ಘ ಕಾಲದಿಂದ ಮಾಡಿಕೊಂಡಿರುವ ತಯಾರಿಗೆ ಇವೆಲ್ಲಾ ಉದಾಹರಣೆಗಳು.

ಸಿನಿಮಾದ ಕುರಿತು ಇಂಥ ಆಸಕ್ತಿ ಇದ್ದರೂ, 27 ಸಿನಿಮಾಗಳಲ್ಲಿ ನಟಿಸಿದ್ದರೂ ಕಂಗನಾ ಅವರಿಗೆ ಟೀವಿ, ಸಿನಿಮಾ ನೋಡುವುದು ಹಿತಾನುಭವ ಅಲ್ಲ. ಅವರು ಹೆಚ್ಚೆಂದರೆ ಹತ್ತು ಸಿನಿಮಾಗಳನ್ನು ಒಂದೇ ಸಿಟಿಂಗ್‌ನಲ್ಲಿ ನೋಡಿದ್ದಾರಷ್ಟೆ. ‘ಶೂಟೌಟ್‌ ಅಟ್‌ ವಾಡಾಲಾ’ ತಾನು ನೋಡಿದ ಕೆಟ್ಟ ಸಿನಿಮಾ ಎಂದು ಹೇಳಿಕೊಳ್ಳುವ ಕಂಗನಾ ಕಣ್ಣಲ್ಲಿ ಸದಾ ದುಗುಡವೊಂದು ತುಳುಕುತ್ತಾ ಇರುತ್ತದೆ. ಅದು ಯಾಕೆ ಎಂದು ಅನೇಕರು ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ಕೊಟ್ಟಿರುವ ಉತ್ತರ: ‘ಅದು ದುಗುಡ ಅಲ್ಲ; ಚಲಿಸುವ ಕನಸುಗಳು ಕೆಲವರಿಗೆ ಹಾಗೆ ಕಾಣುತ್ತವೆ’. ಕಂಗನಾ ಅವರನ್ನು ‘ಡ್ರೀಮ್‌ ಗರ್ಲ್‌’ ಎಂದು ಕರೆದರೆ, ಎರಡೆರಡು ಅರ್ಥಗಳು ಸಿಕ್ಕಾವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT