ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಚಿನ ಕಂಠದ ನಟನ ಭಿನ್ನ ಪಾತ್ರದ ಕನಸು

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ದಕ್ಕಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಲೇ ಬೆಳೆಯುತ್ತಿರುವ ನಟ ವಸಿಷ್ಠ ಸಿಂಹ. ಒಂದರ್ಥದಲ್ಲಿ ಕಾಣದ ಕನಸನ್ನು ನನಸಾಗಿಸಿಕೊಳ್ಳುತ್ತಿರುವ ಅವರ, ಹಲವು ತಿರುವುಗಳ ಸಿನಿಪಯಣವನ್ನು ಪರಿಚಯಿಸುವ ಬರಹ ಇಲ್ಲಿದೆ.

ಹರಿತ ನೋಟ ಬೀರುವ ತೀಕ್ಷ್ಣ ಕಣ್ಣುಗಳು... ಸದೃಢ ನೀಳ ಕಾಯ, ಚೂಪು ಮೀಸೆ... ದೂರದಲ್ಲೆ ಗುಡುಗಿದಂತೇ ಕೇಳುವ ಖಡಕ್‌ ಧ್ವನಿ...
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದಲ್ಲಿ ರಂಗನ ಪಾತ್ರ ನೋಡಿದವರಿಗೆಲ್ಲ ‘ಕನ್ನಡಕ್ಕೊಬ್ಬ ಒಳ್ಳೆಯ ನಟ ಸಿಕ್ಕ’ ಎಂದು ಅನಿಸಿದ್ದು ಸುಳ್ಳಲ್ಲ.

ಮನುಷ್ಯನೊಳಗಿನ ಕ್ರೌರ್ಯ ಮತ್ತು ಮಾನವೀಯ ಗುಣಗಳ ನಡುವಿನ ಸಂಘರ್ಷದ ತೊಳಲಾಟವನ್ನು ತೋರುವ ಈ ಪಾತ್ರದಲ್ಲಿ ಮಿಂಚಿದ್ದು ವಸಿಷ್ಠ ಸಿಂಹ.   ಸಿನಿಮಾ ನಟನಾಗಬೇಕು ಎಂಬ ಕಲ್ಪನೆಯಾಗಲಿ ಕನಸಾಗಲಿ ಅವರಿಗಿರಲಿಲ್ಲ.

ಮೈಸೂರಿನಲ್ಲಿ ಹುಟ್ಟಿ ಬೆಳೆದ ವಸಿಷ್ಠ ಅವರ ಬಾಲ್ಯದ ಕನಸು ಹಾಡುಗಾರನಾಗಬೇಕು ಎನ್ನುವುದು.  ಹಂಸಲೇಖ ಅವರ ರೋಲ್‌ ಮಾಡೆಲ್‌.
ಆದರೆ ಹಣ ಖರ್ಚು ಮಾಡಿ ಸಂಗೀತ ತರಬೇತಿ ಪಡೆದುಕೊಳ್ಳುವಷ್ಟು ಶಕ್ತಿ ಇಲ್ಲದ ಕಾರಣ ಗುರು ಮುಖೇನ ಸಂಗೀತಾಭ್ಯಾಸ ಮಾಡುವುದು ಸಾಧ್ಯವಾಗಲಿಲ್ಲ. ಆದರೆ ಶಾಲೆಗಳಲ್ಲಿ ಅವರೇ ಸ್ಟಾರ್‌ ಸಿಂಗರ್‌ ಆಗಿದ್ದರು.

ಮುಂದೊಮ್ಮೆ ಹಂಸಲೇಖ ಆಯೋಜಿಸಿದ್ದ ‘ಸಮ್ಮರ್‌ ಸಿಂಗಿಂಗ್‌’ ಶಿಬಿರದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದರು.  ಅಲ್ಲಿ ವಸಿಷ್ಠ ಅವರ ಗಾಯನವನ್ನು ಕೇಳಿ ಮೆಚ್ಚಿಕೊಂಡ ಹಂಸಲೇಖ ‘ಸ್ಟುಡಿಯೊಗೆ ಬಾ’ ಎಂದು ಆಹ್ವಾನಿಸಿದ್ದರು.

ತನ್ನ ನೆಚ್ಚಿನ ಸಂಗೀತಗಾರನ ಈ ಆಹ್ವಾನವನ್ನು ಕೇಳಿದ ವಸಿಷ್ಠ ಅವರಿಗೆ ಆಕಾಶಕ್ಕೆ ಮೂರೇ ಗೇಟು ಎಂಬಷ್ಟು ಸಂತೋಷ. ಮನೆಗೆ ಫೋನ್‌ ಮಾಡಿ ‘ನನಗೆ ಕಾಲೇಜೂ ಬೇಡ, ಏನೂ ಬೇಡ. ನಾನು ಹಂಸಲೇಖ ಅವರ ಬಳಿಯೇ ಇದ್ದು ಬಿಡುತ್ತೇನೆ’ ಎಂದು ಹೇಳಿದ್ದರು. ಆದರೆ ತಂದೆಯ ಆಗ್ರಹಕ್ಕೆ ಮಣಿದು ಬಸವನಗುಡಿಯ ನ್ಯಾಷನಲ್‌್ ಕಾಲೇಜಿನಲ್ಲಿ ಬಿಸಿಎ ಕೋರ್ಸಿಗೆ ಸೇರಿಕೊಂಡರು.

ಬಿಸಿಎ ಅಂತಿಮ ವರ್ಷದಲ್ಲಿದ್ದಾಗ ಅವರು ನಿರ್ದೇಶಿಸಿದ ನಾಟಕ ಅವರನ್ನು ರಂಗಭೂಮಿಗೆ ಅಂಟಿಕೊಳ್ಳುವಂತೇ ಮಾಡಿತು.
ವಸಿಷ್ಠ ನಿರ್ದೇಶಿಸಿದ ನಾಟಕ ದುಂಡಿರಾಜರ ‘ಹುಡುಕಾಟ’. ಅದರಲ್ಲಿ ತಾವೂ ಒಂದು ಪಾತ್ರದಲ್ಲಿ ನಟಿಸಿದ್ದರು. ಅದು ಸಾಕಷ್ಟು ಮೆಚ್ಚುಗೆ ಗಳಿಸಿತಲ್ಲದೇ ಸ್ಪರ್ಧೆಗಳಲ್ಲಿಯೂ ಬಹುಮಾನ ಗಳಿಸಿಕೊಂಡಿತು.

‘ಆ ನಾಟಕದ ಯಶಸ್ಸು ನನಗೊಂದು ರೀತಿ ಆತ್ವವಿಶ್ವಾಸವನ್ನು ತುಂಬಿತು. ರಂಗಭೂಮಿ ಎಂದರೆ ಏನು ಎಂದೇ ಗೊತ್ತಿರದವರಿಗೆ ಎಲ್ಲವನ್ನೂ ಕಲಿಸಿ ನಾಟಕ ಮಾಡಬಲ್ಲೆ ಎಂದರೆ ನನ್ನೊಳಗೂ ಏನೋ ಪ್ರತಿಭೆ ಇದೆ ಎಂದು ಅನಿಸಿತು’ ಎಂದು ಅವರು ಆ ನಾಟಕದ ಕುರಿತು ನೆನಪಿಸಿಕೊಳ್ಳುತ್ತಾರೆ.

ಅದಾದ ನಂತರ ಮತ್ತೂ ಒಂದೆರಡು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. ಹಾಗೆಯೇ ಕಾಲೇಜು ಮುಗಿಸಿ ಕೆಲಸಕ್ಕೆ ಸೇರಿದ್ದೂ ಆಯಿತು. ಆದರೆ ಒಂದು ಕಡೆ ಕೂತು ಮಾಡುವ ಕೆಲಸ ಅವರಿಗೆ ಒಗ್ಗಲಿಲ್ಲ. ತಲೆ ಮತ್ತು ಕೈ ಮಾತ್ರ ಅಲುಗಾಡಿಸುತ್ತಾ ಮಾಡುವ ಆ ಕೆಲಸ ಒಂದು ರೀತಿಯ ಜೈಲು ಎಂದು ಅವರಿಗನಿಸುತ್ತಿತ್ತು.

ಒಮ್ಮೆ ಅವರು ಸ್ವಲ್ಪ ದಿನಗಳ ರಜೆ ಕೇಳಿದರು. ಆದರೆ ಸಿಗಲಿಲ್ಲ. ಆ ಕಾರಣಕ್ಕೆ ಕೆಲಸವನ್ನೇ ಬಿಟ್ಟು ಬಂದುಬಿಟ್ಟರು. ಕೆಲ ಸಮಯ ವಿಶ್ರಾಂತಿ ಪಡೆದುಕೊಂಡು ಮತ್ತೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ನಾಟಕಗಳಲ್ಲಿ ಇವರ ನಟನೆಯನ್ನು ನೋಡಿದ ಸ್ನೇಹಿತರು ‘ಸಿನಿಮಾದಲ್ಲಿ ನಟಿಸು’ ಎಂದು ಸಲಹೆ ನೀಡಿದರು.

ಆದರೆ ಸಿನಿಮಾ ತನ್ನ ಕೈಗೆಟುಕದ ಕುಸುಮ ಎನಿಸಿದ್ದರಿಂದ ಕಿರುತೆರೆ ಧಾರಾವಾಹಿಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಯೋಚಿಸಿದರು. ಅದಕ್ಕಾಗಿ ಐದಾರು ಕಡೆ ಆಡಿಶನ್‌ನಲ್ಲಿಯೂ ಪಾಲ್ಗೊಂಡರು. ಎಲ್ಲರೂ ‘ಅದ್ಭುತವಾಗಿ ನಟಿಸ್ತಿಯಾ...’ ‘ಒಳ್ಳೆಯ ಭವಿಷ್ಯವಿದೆ’ ಎಂದೆಲ್ಲ ಹೊಗಳಿದರೇ ವಿನಾ ಅವಕಾಶ ಮಾತ್ರ ಕೊಡಲಿಲ್ಲ.

‘ಇದು ನನಗೆ ಹೊಂದುವುದಿಲ್ಲ’ ಎಂದು ವಸಿಷ್ಠ ಧಾರಾವಾಹಿ ಸಹವಾಸದಿಂದ ದೂರ ಸರಿಯಲು ನಿರ್ಧರಿಸಿದರು. ಆಗ ಅವರು ಪಿ.ಡಿ. ಸತೀಶ್‌ಚಂದ್ರ ಅವರ ಅವರ ‘ಪ್ರಕಾಸಂ’ ನಾಟಕ ತಂಡದಲ್ಲಿ ಸಕ್ರಿಯರಾಗಿದ್ದರು.

ಹೀಗಿದ್ದ ವಸಿಷ್ಠ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದು 2011ರಲ್ಲಿ. ಅವರ ನಟನೆಯ ಮೊದಲ ಸಿನಿಮಾ ‘ಹುಬ್ಬಳ್ಳಿ ಹುಡುಗ್ರು’ ತೆರೆ ಕಾಣಲೇ ಇಲ್ಲ. ಈ ನಡುವೆ ಒಂದು ವರ್ಷ ಮತ್ತೆ ಸಿನಿಮಾ ರಂಗದಿಂದ ದೂರವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು.

ಚಿತ್ರರಂಗಕ್ಕೆ ವಸಿಷ್ಠ ಮರು ಪ್ರವೇಶ ಮಾಡಿದ್ದು ಗುರು ದೇಶಪಾಂಡೆ ಅವರ ನಿರ್ದೇಶನದ ‘ರಾಜಾಹುಲಿ’ ಸಿನಿಮಾದ ಮೂಲಕ. ಈ ಚಿತ್ರದಲ್ಲಿ ಅವರ ಪಾತ್ರ ಹಲವರ ಮೆಚ್ಚುಗೆಗೆ ಕಾರಣವಾಯ್ತು. ನಂತರ ‘ನನ್‌ ಲವ್‌ ಟ್ರ್ಯಾಕ್‌’, ‘ಅಲೋನ್‌’ ಮುಂತಾದ ಸಿನಿಮಾದಲ್ಲಿ ನಟಿಸಿದರು.

‘ಅಲೋನ್‌’ ಚಿತ್ರದಲ್ಲಿ ನಟಿಸುತ್ತಿದ್ದಾಗಲೇ ಹೇಮಂತ್‌ ಅವರು ತಮ್ಮ ಚಿತ್ರ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದಲ್ಲಿ ನಟಿಸುವಂತೆ ಆಹ್ವಾನಿಸಿದರು. ‘ಗೋಧಿ ಬಣ್ಣ...’ದ ರಂಗನ ಪಾತ್ರ ವಸಿಷ್ಠ ಅವರಿಗೆ ಅವರದೇ ಆದ ಅಭಿಮಾನಿ ವರ್ಗವನ್ನು ಸೃಷ್ಟಿಸಿದೆ. ಅವರ ಕಂಚಿನ ಕಂಠ, ಪ್ರಬುದ್ಧ ಅಭಿನಯ ಸಾಮಾಜ್ಯ ಜನರಷ್ಟೇ ಅಲ್ಲದೇ, ಚಿತ್ರ ವಿಶ್ಲೇಷಕರ ಗಮನವನ್ನೂ ಸೆಳೆದಿದೆ.

‘ಗೋಧಿ ಬಣ್ಣ...’ ಸಿನಿಮಾದ ರಂಗನ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ’’ ಎಂದು ಹೇಳಿಕೊಳ್ಳುವ ವಸಿಷ್ಠ ಈಗ ಅಭಿಮಾನಿಗಳ ಪ್ರಶಂಸನೆಯ ಸುರಿಮಳೆಯಲ್ಲಿ ನಿರಂತರ ನೆನೆಯುತ್ತಿದ್ದಾರೆ.

‘ರಾಜಾಹುಲಿ ಸಿನಿಮಾದ ನಂತರ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಆದರೆ ಜನರ ಸ್ಪಂದನೆಯ ತೀವ್ರತೆ ಅರಿವಾಗಿದ್ದು ‘ಗೋಧಿಬಣ್ಣ..’ ಸಿನಿಮಾ ಬಿಡುಗಡೆಯಾದ ಮೇಲೆಯೇ.

ಇಂದಿಗೂ ಪ್ರತಿದಿನವೂ ಹಲವು ಕರೆಗಳು ಬರುತ್ತವೆ. ಫೇಸ್‌ಬುಕ್‌, ಟ್ವಿಟರ್‌ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಸಿನಿಮಾದಲ್ಲಿ ಅನಂತನಾಗ್‌ ಅವರ ಜತೆ ನಟಿಸಿದ್ದು ನಟನೆಯ ಹಲವು ಪಾಠಗಳನ್ನು ಕಲಿಸಿದೆ.  ತಮ್ಮ ಬದುಕನ್ನು ರೂಪಿಸುವ ಕ್ಷೇತ್ರ ನಟನೆ ಎಂಬುದು ಅವರಿಗೀಗ ಖಾತ್ರಿಯಾಗಿದೆ.

ವಸಿಷ್ಠ ಅವರಿಗೆ ಕನಸಿನ ಪಾತ್ರಗಳ ಕುರಿತು ಅಷ್ಟಾಗಿ ನಂಬಿಕೆಯಿಲ್ಲ. ‘ಬದಲಿಗೆ ಕನಸಿನ ಕಥೆಯಲ್ಲಿ ನಟಿಸಬೇಕು’ ಎನ್ನುವುದು ಅವರ ಹಂಬಲ. ‘ಸಿನಿಮಾ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನಸ್ಸಿಗೂ ತಾಕುವಂತಿರಬೇಕು’ ಎಂಬುದು ಅವರ ನಿಲುವು.

ಮುಂದೆಯೂ ಇಂಥದ್ದೇ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಕನಸು ಅವರಿಗಿದೆ. ಈ ಅಭಿಲಾಷೆಗೆ ತಕ್ಕಂತೆ ಸಾಕಷ್ಟು ಅವಕಾಶಗಳೂ ಅವರ ಮುಂದೆ ಹುಟ್ಟಿಕೊಂಡಿವೆ. 

ಖಳನಿಗಾಗಿ ಅತ್ತಿದ್ದು...
‘ಗೋಧಿಬಣ್ಣ..’ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರ ನಟನೆಯನ್ನು ನೋಡಿ ಸುಮಾರು ಅರವತ್ತು ವರ್ಷ ವಯಸ್ಸಿನ ಮಹಿಳೆ ಕರೆ ಮಾಡಿದ್ದರು. ಅವರು ಹೇಳಿದ ಮಾತು ಇನ್ನೂ ವಸಿಷ್ಠ ಅವರ ಕಿವಿಗಳಲ್ಲಿ ಗುಂಯ್ಗುಡುತ್ತಿವೆಯಂತೆ.

‘ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೊಗೆ ನೋವಾದಾಗ, ಅವನು ಸತ್ತಾಗ ಅಳುತ್ತಿದ್ದೆ. ‘ಗೋಧಿಬಣ್ಣ..’ ಸಿನಿಮಾ ನೋಡುತ್ತಾ ಮೊದಲ ಬಾರಿಗೆ ಖಳನಾಯಕನಿಗಾಗಿ ಅತ್ತೆ. ನಾನೊಬ್ಬಳೇ ಅಲ್ಲ, ಚಿತ್ರಮಂದಿರದಲ್ಲಿ ಇದ್ದವರೆಲ್ಲರೂ ಅಳುತ್ತಿದ್ದರು’ ಎಂದು ಹೇಳಿದ ಆ ಮಹಿಳೆಯ ಮಾತನ್ನು ನೆನಪಿಸಿಕೊಳ್ಳುತ್ತಾ ವಸಿಷ್ಠ ಈಗಲೂ ಭಾವುಕರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT