ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪೆನಿಗಳಿಗೇ ರಕ್ಷಣೆಯ ಜವಾಬ್ದಾರಿ

ಸಾಮೂಹಿಕ ಅತ್ಯಾಚಾರ ಪ್ರಕರಣ: ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ
Last Updated 7 ಅಕ್ಟೋಬರ್ 2015, 19:48 IST
ಅಕ್ಷರ ಗಾತ್ರ

ಬೆಂಗಳೂರು: ಐಟಿ–ಬಿಟಿ, ಬಿಪಿಒ ಸೇರಿದಂತೆ ಇತರ ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ರಕ್ಷಣೆ ನೀಡುವ ಸಂಬಂಧ ಕಾರ್ಮಿಕ ಇಲಾಖೆ ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗುತ್ತಿದ್ದೆಯೇ ಎಂಬುದನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಪಿಒ ಉದ್ಯೋಗಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ, ಕಾನೂನು, ಸಾರಿಗೆ, ಕಾರ್ಮಿಕ, ಕೈಗಾರಿಕೆ ಮತ್ತು ಐಟಿ–ಬಿಟಿ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಬುಧವಾರ ನಡೆಸಿದ  ತುರ್ತು ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಮಾಲೀಕರ ಜವಾಬ್ದಾರಿ: ‘ಬಿಪಿಒ, ಐಟಿ–ಬಿಟಿ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವ ಮಹಿಳೆಯ ರಕ್ಷಣೆಯ ಜವಾಬ್ದಾರಿ ಕಂಪೆನಿಗಳ ಮಾಲೀಕರ ಮೇಲೂ ಇದೆ. ಮಹಿಳಾ ಉದ್ಯೋಗಿಗಳ ಮೇಲೆ ಅವರು ನಿಗಾ ಇಡಬೇಕು. ರಾತ್ರಿ ಹೊತ್ತು ಪ್ರಯಾಣಿಸುವ ಉದ್ಯೋಗಿಗಳಿಗೆ ಕಂಪೆನಿಗಳೇ ರಕ್ಷಣೆ ಒದಗಿಸಬೇಕು’ ಎಂದು ಅವರು ಹೇಳಿದರು.

ಶನಿವಾರ ನಡೆದಿರುವ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಮಹಿಳೆಗೆ ರಕ್ಷಣೆ ಒದಗಿಸುವ ವಿಚಾರದಲ್ಲಿ  ಆಕೆಯ ಕಂಪೆನಿಯಿಂದ ಲೋಪವಾಗಿದ್ದಲ್ಲಿ, ಮಾಲೀಕರ ವಿರುದ್ಧ ದೂರು ದಾಖಲಿಸುವಂತೆ ಸಿದ್ದರಾಮಯ್ಯ ಪೊಲೀಸರಿಗೆ ತಿಳಿಸಿದರು.

ಗಸ್ತು  ಇನ್ನಷ್ಟು ಬಿಗಿ: ‘ತಡರಾತ್ರಿ ನಗರದಲ್ಲಿ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ನಿಗಾ ಇಡಬೇಕು. ಗಸ್ತು ವ್ಯವಸ್ಥೆ ಇನ್ನಷ್ಟು ಬಿಗಿಗೊಳಿಸಬೇಕು. ಆಗಾಗ ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು. ಹೊಯ್ಸಳ ವಾಹನಗಳು ರಸ್ತೆಗಳಲ್ಲಿ ಸಾರ್ವಜನಿಕರ ಗಮನಕ್ಕೆ ಬರುವಂತೆ ನಿಲ್ಲಬೇಕು’ ಎಂದು ಸೂಚಿಸಿದರು.

1000 ಬೈಕ್‌ ವಿತರಣೆ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿ ರಾತ್ರಿ ಹೊತ್ತು ಬಿಗಿ ಭದ್ರತೆ  ಒದಗಿಸುವುದಕ್ಕಾಗಿ ಪೊಲೀಸರಿಗೆ 1000 ಬೈಕ್‌ಗಳನ್ನು ವಿತರಿಸಲಾಗುವುದು’ಎಂದರು.

ಸರಗಳ್ಳತನ ಎಚ್ಚರಿಕೆ: ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

‘ಸರಗಳ್ಳತನ ತಡೆಗೆ ಬಿಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕಿರಿಯ ಅಧಿಕಾರಿಗಳ ಬದಲಿಗೆ ಡಿಸಿಪಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಅಮಾನತು ಮಾಡಲಾಗುವುದು’ ಎಂದರು.

ಬಾಡಿಗೆ ವಾಹನಗಳಿಗೂ ಡಿಸ್‌ಪ್ಲೆ ಕಾರ್ಡ್‌
ಬಿಪಿಒ ಉದ್ಯೋಗಿ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಯಿಂದ ಎಚ್ಚೆತ್ತುಕೊಂಡಿರುವ ನಗರ ಸಂಚಾರ ಪೊಲೀಸರು ಕ್ಯಾಬ್ ಮತ್ತು ಬಾಡಿಗೆ ವಾಹನಗಳಿಗೆ  ಡಿಸ್‌ಪ್ಲೆ ಕಾರ್ಡ್‌ (ವಾಹನಗಳ ಮಾಲೀಕರು, ಚಾಲಕರು ಹಾಗೂ ವಾಹನದ ವಿವರಗಳನ್ನೊಳಗೊಂಡ ಕಾರ್ಡ್) ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆಸಿದ್ದಾರೆ.

‘ಆಟೊಗಳಿಗೆ ಈಗಾಗಲೇ ಕಡ್ಡಾಯ ಮಾಡಲಾಗಿರುವ ವಿವರಗಳ ಡಿಸ್‌ಪ್ಲೆ ಕಾರ್ಡ್‌ ಅನ್ನು ಕ್ಯಾಬ್ ಮತ್ತು ಬಾಡಿಗೆ ವಾಹನಗಳಿಗೆ ಕಡ್ಡಾಯ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಹೀಗೆ ಮಾಡುವುದರಿಂದ ಚಾಲಕರ ವಿವರಗಳು ಕೂಡಲೇ ಸಿಗುತ್ತವೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT