ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್ ಕಲಿಕಾ ಯೋಜನೆ: ಈಡೇರದ ಉದ್ದೇಶ

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮತ್ತು ಉಚಿತವಾಗಿ ನೀಡಬೇಕು ಎಂಬುದು ಸಂವಿಧಾನದ ಆಶಯ. ಇದರ ಈಡೇರಿಕೆಗೆ ಕೇಂದ್ರ ಸರ್ಕಾರದ ಮಾನವ ಸಂಪ­ನ್ಮೂಲ ಸಚಿವಾಲಯ ಸರ್ವ ಶಿಕ್ಷಣ ಅಭಿಯಾ­ನವನ್ನು ರೂಪಿಸಿತು. ‘ಸರ್ವರಿಗೂ ಶಿಕ್ಷಣ’, ಇದು ಈ ಅಭಿಯಾನದ ಮೂಲ ಮಂತ್ರವಾಗಿದೆ.

ಪ್ರಾಥಮಿಕ ಹಂತದಲ್ಲಿ ಬೇರೆ ಬೇರೆ ಕಾರಣಗಳಿ­ಗಾಗಿ ಅರ್ಧಕ್ಕೇ ಶಾಲೆಯನ್ನು ಬಿಟ್ಟಿರುವಂತಹ ಮಕ್ಕಳನ್ನು ಪುನಃ ಶಾಲೆಗೆ ಕರೆತಂದು ಅವರಿಗೆ ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣ ನೀಡುವುದೂ ಈ ಅಭಿಯಾನದ  ಭಾಗವಾಗಿದೆ. ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಮಾನವ ಸಂಪನ್ಮೂಲ ಸಚಿವಾಲಯ, ಕಂಪ್ಯೂಟರ್ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಿದೆ.

ಹಂತ ಹಂತವಾಗಿ ಎಲ್ಲ ಶಾಲೆಗಳಲ್ಲಿಯೂ ಕಂಪ್ಯೂಟರ್ ಅಳವಡಿಸಿ ಆ ಮೂಲಕ ಎಲ್ಲರೂ ಸ್ಪರ್ಧಾತ್ಮಕ ಶಿಕ್ಷಣಕ್ಕೆ ಹೊಂದಿಕೊಳ್ಳುವಂತೆ ಮಾಡಲು ನಿರಂತರ ಪ್ರಯತ್ನಗಳು ನಡೆದಿವೆ. ೨೦೦೧–-೦೨ನೇ ಶೈಕ್ಷಣಿಕ ವರ್ಷದಿಂದ  ರಾಜ್ಯದ ಬೆಂಗಳೂರು ನಗರ, ಕೋಲಾರ ಮತ್ತು ಮಂಡ್ಯ ಜಿಲ್ಲೆಗಳ ೩೫ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮೊದಲು ಆರಂಭಗೊಂಡ ಈ ಯೋಜನೆ, ಮುಂದಿನ ವರ್ಷ ಇತರೆ ಎಂಟು ಜಿಲ್ಲೆಗಳಿಗೆ ವಿಸ್ತರಣೆಯಾಯಿತು. ೨೦೦೩-–೦೪ನೇ ವರ್ಷ­ದಲ್ಲಿ ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಲ್ಲಿಯೂ ಮೊದಲಾಯಿತು.

ಇದೀಗ ಈ ಯೋಜನೆಯಡಿ ರಾಜ್ಯದಲ್ಲಿನ ಒಟ್ಟಾರೆ ೪,೧೦೩ ಕ್ಲಸ್ಟರ್‌ಗಳ ೪,೬೦೧ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಶಿಕ್ಷಣ ಕಲಿಕೆ ಜಾರಿಗೊಂಡಿದ್ದು, ಅದನ್ನು ಎಲ್ಲ ಶಾಲೆಗಳಿಗೂ ವಿಸ್ತರಿಸುವ ಯೋಜನೆಗಳಿವೆ. ಸರ್ವ ಶಿಕ್ಷಣ ಅಭಿಯಾನದ ಕೇಂದ್ರ ಕಚೇರಿ, ಪ್ರತಿವರ್ಷ ಈ ಯೋಜನೆಯಡಿ ಸೇರಿಸಬೇಕಾದ ಶಾಲೆಗಳನ್ನು, ಸಂಬಂಧಿತ ಜಿಲ್ಲೆಯ ಶಿಕ್ಷಣ ಇಲಾಖೆ ಮುಖ್ಯಸ್ಥ ರೊಂದಿಗೆ ಚರ್ಚಿಸಿ ಆಯ್ಕೆ ಮಾಡುತ್ತಿದೆ. ಅನು­ದಾನ ಹಂಚಿಕೆಯನ್ನು  ಆಧರಿಸಿ ಮುಂಬರುವ ವರ್ಷಗಳಲ್ಲಿ ಎಲ್ಲ ಶಾಲೆಗಳಿಗೂ ಇದನ್ನು ವಿಸ್ತರಿಸುವ ಯೋಜನೆಗಳಿವೆ.

ಸರ್ವ ಶಿಕ್ಷಣ ಅಭಿಯಾನದಡಿ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಂಪ್ಯೂಟರ್ ಆಧಾರಿತ ಕಲಿಕೆ ಕಾರ್ಯಕ್ರಮಗಳಿಗೆ ಇಲ್ಲಿಯ­ವರೆಗೆ ಒಟ್ಟಾರೆ ₹ ೯೪.೫೧ ಕೋಟಿ  ಅನುದಾನ ವೆಚ್ಚವಾಗಿದ್ದು, ಇದನ್ನು ಕಂಪ್ಯೂಟರ್ ಖರೀದಿ ಮತ್ತು ಮಕ್ಕಳಿಗೆ ಈ ಶಿಕ್ಷಣ ನೀಡುವ ಸಿಬ್ಬಂದಿಗೆ ತರಬೇತಿ ನೀಡುವ ಉದ್ದೇಶಗಳಿಗಾಗಿ ಬಳಸಿ­ಕೊಳ್ಳಲಾಗಿದೆ. ಸರ್ಕಾರದ ಇ-–ಪ್ರೊಕ್ಯುರ್‌­ಮೆಂಟ್ ಪೋರ್ಟಲ್‌ನಲ್ಲಿ ಮುಕ್ತ ಟೆಂಡರ್‌ ಗಳನ್ನು ಆಹ್ವಾನಿಸಿ ನಿಯಮಾನುಸಾರ ಅರ್ಹ ಸಂಸ್ಥೆ­ಗಳಿಂದ ಕಂಪ್ಯೂಟರ್ ಮತ್ತು ಯುಪಿಎಸ್‌­ಗಳನ್ನು ಖರೀದಿಸಲಾಗುತ್ತದೆ.

ಅದಕ್ಕೂ ಮುನ್ನ  ಇಲಾಖೆಯ ತಜ್ಞರ ಸಮಿತಿಯಿಂದ ತಾಂತ್ರಿಕ ವೈಶಿಷ್ಟ್ಯಗಳ ನಿಖರತೆಗಳನ್ನು ಖಚಿತಪಡಿಸಿಕೊಳ್ಳ­ಲಾ­ಗುತ್ತದೆ. ಆ ನಂತರವೇ ಖರೀದಿ ಪ್ರಕ್ರಿಯೆಯ ಟೆಂಡರ್ ಮೌಲ್ಯಮಾಪನ ಮತ್ತು ದಾಖಲೆ­ಗಳನ್ನು ಅಂತಿಮಗೊಳಿಸಲಾಗುತ್ತದೆ. ಇಲ್ಲಿಯವರೆಗೆ ಐ.ಟಿ. ಕ್ಷೇತ್ರದ ಹೆಸರಾಂತ ಕಂಪೆನಿಗಳಾದ ವಿಪ್ರೊ, ಎಚ್‌ಸಿಎಲ್, ಎಚ್‌ಪಿ ಮತ್ತಿತರ ಸಂಸ್ಥೆಗಳಿಂದ ಕಂಪ್ಯೂಟರ್‌ಗಳನ್ನು ಖರೀದಿ ಮಾಡಲಾಗಿದೆ.

2014–-15ನೇ ಸಾಲಿ­ನಲ್ಲಿ ಈ ಯೋಜನೆಗಾಗಿ ಪ್ರತಿ ಜಿಲ್ಲೆಗೆ ತಲಾ ೧೦ ಶಾಲೆಗಳಂತೆ ೩೦೦ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವ ಹಂತಕ್ಕೆ ಬಂದಿದ್ದರೂ ಕಂಪ್ಯೂಟರ್‌ ಖರೀದಿ ಪ್ರಕ್ರಿಯೆ ಇನ್ನೂ ಅಂತಿಮವಾಗಿಲ್ಲ. ದಶಕಗಳಿಂದಲೂ ಪ್ರಾಥಮಿಕ ಶಾಲೆಗಳಲ್ಲಿ ಜಾರಿಗೊಂಡಿರುವ ಈ ಯೋಜನೆಯ ಪರಿಣಾಮ­ಗಳನ್ನು ಅವಲೋಕಿಸುತ್ತ ಹೋದರೆ ಒಂದೊಂದೇ ಭಯಾನಕ ಸತ್ಯಗಳು ಹೊರ ಬರಲಾರಂ ಭಿಸುತ್ತವೆ.

ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಮಕ್ಕಳಿಗೆ ಆಧುನಿಕ ತಾಂತ್ರಿಕ ಶಿಕ್ಷಣವನ್ನು ಪರಿಚಯಿಸುವ ಉದ್ದೇಶವಿರುವ ಕೇಂದ್ರ ಸರ್ಕಾರದ ಈ ಕಾರ್ಯಕ್ರಮದ ಕಳಕಳಿ ಪ್ರಶ್ನಾತೀತ. ಆದರೆ ರಾಜ್ಯದ ಪ್ರಾಥಮಿಕ ಶಾಲೆ­ಗಳಲ್ಲಿ ಇದರ ಪರಿಣಾಮಕಾರಿ ಅನುಷ್ಠಾನವೇ ಅತಿ ದೊಡ್ಡ ಸಮಸ್ಯೆಯಾಗಿದೆ. ಈ ಮಹತ್ವಾ­ಕಾಂಕ್ಷಿ ಕಂಪ್ಯೂಟರ್‌  ಶಿಕ್ಷಣವನ್ನು ಮಕ್ಕಳಿಗೆ ಕಲಿ­ಸಲು ಶಾಲೆಗಳಲ್ಲಿ ಸಿಬ್ಬಂದಿಯೇ ಇಲ್ಲ ಎಂಬುದು ವಿಚಿತ್ರವಾದರೂ ಸತ್ಯವಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಾಮಾನ್ಯವಾಗಿದೆ.

ಹೀಗಿದ್ದರೂ ಶಾಲೆಗಳಲ್ಲಿ ಇರುವ ಶಿಕ್ಷಕ ಸಿಬ್ಬಂದಿಯಲ್ಲಿಯೇ ಒಂದಿಬ್ಬರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿ ಪಡೆದ ಶಾಲೆಗಳಲ್ಲಿನ ಶಿಕ್ಷಕರೇ ತಮ್ಮ ವಿಷಯ­ಗಳ ಜೊತೆ ಹೆಚ್ಚುವರಿಯಾಗಿ ಕಂಪ್ಯೂಟರ್‌ ಶಿಕ್ಷಣವನ್ನೂ ಮಕ್ಕಳಿಗೆ ಬೋಧಿಸಬೇಕು. ಒಂದೊಂದು ಸಲ ಆ ಶಾಲೆ ಏಕೋಪಾಧ್ಯಾಯ ಶಾಲೆಯಾಗಿ­ದ್ದರಂತೂ ಆ ಶಿಕ್ಷಕ, ಶಿಕ್ಷಕಿಯರ ಪಾಡು  ದೇವರಿಗೇ    ಪ್ರೀತಿ. 

ಕಂಪ್ಯೂಟರ್‌  ಶಿಕ್ಷಣಕ್ಕಾಗಿ ಆಯ್ದ ಶಾಲೆಗಳಿಗೆ ತಲಾ ಐದು ಕಂಪ್ಯೂಟರ್‌ಗಳನ್ನು ನೀಡಲಾ­ಗುತ್ತದೆ.  ಬಹುತೇಕ ಶಾಲೆಗಳಲ್ಲಿ ಈ ಕಂಪ್ಯೂ ಟರ್‌­ಗಳ ಮೇಲುಸ್ತುವಾರಿಯೇ ಶಿಕ್ಷಕರಿಗೆ ದೊಡ್ಡ ಸಮಸ್ಯೆಯಾಗಿದೆ. ಅವುಗಳಲ್ಲೇನಾದರೂ ತಾಂತ್ರಿಕ ದೋಷ ಕಂಡುಬಂದರೆ ಆ ಕಂಪ್ಯೂಟರ್‌ಗಳೆಲ್ಲಾ  ಮೂಲೆಗುಂಪಾಗುತ್ತವೆ. ಹೀಗೆ ಎಷ್ಟೋ ಶಾಲೆಗಳಲ್ಲಿನ ಕಂಪ್ಯೂಟರ್‌ಗಳು ಮಾಯವಾಗಿರುವ ಉದಾಹರಣೆಗಳಿವೆ.

ಅವು ಎಲ್ಲಿ ಹೋದವು? ಏನಾದವು? ಯಾಕೆ ಕಾಣೆ ಯಾದವು? ಎಂದು ಯಾರೂ ವಿಚಾರ ಮಾಡುವು­ದಿಲ್ಲ. ಅದಕ್ಕೆ  ಅಲ್ಲಿನ ಸಿಬ್ಬಂದಿಗೆ ಬಿಡುವೂ ಇರುವುದಿಲ್ಲ. ರಾಜ್ಯದಲ್ಲಿ ಈ ಯೋಜನೆ ಬರೀ ಹೆಸರಿಗೇನೋ ಎಂಬಂತಾಗಿದೆ. ಆದರೆ ಇದಕ್ಕೆ ಖರ್ಚಾಗಬೇಕಾದ ಹಣ ಮಾತ್ರ ಯಾವುದೇ ಅಡೆತಡೆಯಿಲ್ಲದೇ ಖರ್ಚಾ ಗುತ್ತಿರುತ್ತದೆ. ಪ್ರಾಥಮಿಕ ಶಿಕ್ಷಣದ ಮಕ್ಕಳಿಗಾಗಿ ಇರುವ ಕೇಂದ್ರ ಪ್ರಾಯೋಜಕತ್ವದ ಒಂದು ಮಹತ್ವಾಕಾಂಕ್ಷಿ ಯೋಜನೆಯ ಮೂಲ ಉದ್ದೇಶ ಮಾತ್ರ ಈಡೇರದಿರುವುದು ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT