ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬದಾ ಮ್ಯಾಲಿನಾ ಗೊಂಬಿಯ ಚಿತ್ತಾರ...

Last Updated 10 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ನವೀನ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ, ವಾಸ್ತುಶಾಸ್ತ್ರ ಪ್ರಿಯ ಲಕ್ಞಾಂತರ ಕಾಂಕ್ರಿಟ್ ಮನೆಗಳೇ ಇರುವ ಬೆಂಗಳೂರೆಂಬ ಮಹಾ ನಗರದಲ್ಲಿ ಅಪ್ಪಟ ಗ್ರಾಮೀಣ ಸೊಗಡಿನ, ದೇಸಿ ಶೈಲಿ ಮನೆಯೊಂದು ಗಮನ ಸೆಳೆಯುತ್ತಿದೆ. ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ಮೂಡಲ ಪಾಯದ ಮನೆಯಲ್ಲಿ ಉತ್ತರ ಕರ್ನಾಟಕದ ಕಲಾವೈಭವ, ಗೌಡರ ಸಿರಿವಂತಿಕೆ ಮೇಳೈಸಿದೆ.  ಒಳಕ್ಕೆ ಹೆಜ್ಜೆ ಇಡುತ್ತಿದ್ದಂತೆಯೇ ‘ವಾಡೆ ಮನೆ’ ಪ್ರವೇಶಿಸಿದ ಭಾವ. ಕಲಾಕೃತಿಯಂತಹ ಈ ಭವನದ ನಿರ್ಮಾಣಕ್ಕೂ ವಾಡೆ ಮನೆಗಳ ಅಧ್ಯಯನವೇ ಪ್ರೇರಣೆ ಎಂಬುದು ವಿಶೇಷ.

ಆ  ಮನೆ, ಕ್ಷಮಿಸಿ ಮನೆಯಲ್ಲ, ದೊಡ್ಡ ‘ವಾಡೆ’ ಯಂತಹ ಭವನ ಮೊದಲ ನೋಟಕ್ಕೇ ಅಚ್ಚರಿ ಉಂಟು ಮಾಡಿತ್ತು. ಅದರ ಗಾತ್ರ, ವೈವಿಧ್ಯತೆ ದಂಗು ಬಡಿಸುವಂತಿತ್ತು.

ಅದರಲ್ಲೂ, ದೊಡ್ಡ ಬಾಗಿಲು, ಅದರ ಅಲಂಕಾರಿಕ ತೋರಣದ ಕೆತ್ತನೆ, ಒಳಾಂಗಣದಲ್ಲಿನ ತೊಟ್ಟಿಯ ಸುತ್ತಲೂ ದುಂಡಗೆ ನಿಂತಿದ್ದ ಮೋಹಕ ಕಂಬಗಳು, ಮಹಡಿಯ ಮೇಲೆಯೂ ತಾರಸಿಗೆ ಆನಿಸಿದ್ದ ಕರಿ ಮರದ ನುಣುಪು ಕಂಬಗಳು, ಅವುಗಳ ಶಿರೋ ಭಾಗದಲ್ಲಿನ ಬಾಳೆಗೊನೆ ಮೋತೆಯಂತಹ ಸುಂದರ ಕೆತ್ತನೆ... ಅವನ್ನೆಲ್ಲಾ ನೋಡುತ್ತಿದ್ದಂತೆ ನಾಗಾಭರಣ ನಿರ್ದೇಶನದ ನಾಗಮಂಡಲ ಸಿನಿಮಾದ ‘ಕಂಬದಾ ಮ್ಯಾಲಿನಾ ಗೊಂಬಿಯೇ’.... ಹಾಡು ಗುನುಗು ವಂತಾಯಿತು.

ನವೀನ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದ ಕಾಂಕ್ರಿಟ್ ಮನೆಗಳಿಂದ ತುಂಬಿರುವ ಸಿಲಿಕಾನ್ ಸಿಟಿಯಲ್ಲಿ ಅಪ್ಪಟ ಗ್ರಾಮೀಣ ಸೊಗಡಿನ ಈ ಮನೆ ತನ್ನ  ವಿಭಿನ್ನ ದೇಸಿ ಶೈಲಿಯಿಂದಲೇ ಗಮನ ಸೆಳೆಯುತ್ತಿದೆ.

ಬೆಂಗಳೂರಿನ ಹೆಬ್ಬಾಳದ ಮಾನ್ಯತಾ ಟೆಕ್‌ಪಾರ್ಕ್‌ ನಲ್ಲಿರುವ ಮೂಡಲ ಪಾಯದ ಮನೆಯಲ್ಲಿ ಉತ್ತರ ಕರ್ನಾಟಕದ ಕಲಾವೈಭವ ಹಾಗೂ ಗೌಡರ ಸಿರಿವಂತಿಕೆ ಮೇಳೈಸಿದೆ. ಈ ಮನೆಯೊಳಕ್ಕೆ ಹೆಜ್ಜೆ ಇಡುತ್ತಿದ್ದಂತೆಯೇ ಉತ್ತರ ಕರ್ನಾಟಕದ ‘ವಾಡೆ ಮನೆ’ ಪ್ರವೇಶಿಸಿ ದಂತೆಯೇ ಭಾಸವಾಗುತ್ತದೆ. ಈ ಭವ್ಯ ಮನೆಯ ನಿರ್ಮಾಣಕ್ಕೂ ವಾಡೆ ಮನೆಗಳ ಅಧ್ಯಯನವೇ ಪ್ರೇರಣೆ. ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯ ಡಾ.ಮಹಾಂತೇಶ್ ಚರಂತಿಮಠ ಹಾಗೂ ಪತ್ನಿ ಹೂವಿನ ಹಡಗಲಿಯ ವೀಣಾ ಅವರ ಕನಸಿನ ಮನೆ ಇದು.

ಬೆಂಗಳೂರಿನಲ್ಲಿ ಮನೆ ಕಟ್ಟುವುದಾದರೆ ವಿಭಿನ್ನ ಶೈಲಿ ಮನೆ ಕಟ್ಟಬೇಕು ಎಂದುಕೊಂಡಿದ್ದ ದಂಪತಿಗೆ, ಆಗ ಹೊಳೆದದ್ದೇ ಉತ್ತರ ಕರ್ನಾಟಕ ಶೈಲಿಯ ‘ವಾಡೆ ಮನೆ’. ಎಷ್ಟೇ ಕಷ್ಟವಾದರೂ ಸರಿ ವಾಡೆ ಮನೆಯನ್ನೇ ಕಟ್ಟೋಣ ಎಂಬ ಗಟ್ಟಿ ನಿರ್ಧಾರಕ್ಕೆ ಬಂದರು.

‘ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಡಾಕ್ಟರೇಟ್ ಮಾಡುತ್ತಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಶೈಲಿಯ ಮನೆಗಳ ಅಧ್ಯಯನವನ್ನು ಸಂಶೋಧನೆಗಾಗಿ ಆಯ್ದುಕೊಂಡಿದ್ದೆ. ಆಗ ಬೆಳಗಾವಿ ಜಿಲ್ಲೆ ಬೈಲಹೊಂಗಲ, ಧಾರವಾಡ, ಬಳ್ಳಾರಿ, ಬಾಗಲ ಕೋಟೆ, ವಿಜಯಪುರದ ಲೋಕಾಪುರ ಮುಂತಾದೆಡೆ ವರ್ಷಗಟ್ಟಲೇ ತಿರುಗಿ ಕಂಬದ ಮನೆ, ತೊಟ್ಟಿ ಮನೆ, ಗೌಡರ ಹಾಗೂ ದೇಸಾಯಿ ವಾಡೆ, ಅಗಸಿ ಬಾಗಿಲು, ಸುಂದರ ಚಿತ್ತಾರದ ಕಂಬಗಳ ಬಗ್ಗೆ ನಡೆಸಿದ ಅಧ್ಯಯ ನವೇ ಈ ದೇಸಿ ಮನೆಯ ನಿರ್ಮಾಣಕ್ಕೆ ಪ್ರೇರಣೆ ಯಾಯಿತು’ ಎನ್ನುತ್ತಾರೆ ವೀಣಾ.

ತಮ್ಮ ಕನಸಿನ ಮನೆ ಹೇಗಿರಬೇಕು ಬಗ್ಗೆ ಸಂಪೂರ್ಣ ಚಿತ್ರಣ ಹೊಂದಿದ್ದ ವೀಣಾ, ಮನೆಯ ನೀಲನಕ್ಷೆಯನ್ನು ಸ್ವತಃ  ಸಿದ್ಧಪಡಿಸಿದರು. 50/80 ಅಡಿ ಉದ್ದ ಅಗಲದ ನಿವೇಶನದಲ್ಲಿ ಮನೆ ನಿರ್ಮಾಣ ಆರಂಭಿಸುವುದಕ್ಕೂ ಮುನ್ನವೇ ಅದಕ್ಕೆ ಬೇಕಾದ ಎಲ್ಲ ಅಗತ್ಯ ಪರಿಕರಗ ಳನ್ನೂ ಹೊಂದಿಸಿಕೊಂಡರು. ದೇಸಿ ಮನೆಗಳಿಗೆ ಸಂಬಂಧಿಸಿದಂತೆ ವಿವಿಧೆಡೆಯಿಂದ ಚಿತ್ರಗಳನ್ನು ತರಿಸಿ ಕೊಂಡರು. ತಮ್ಮಲ್ಲಿದ್ದ ಉತ್ತರ ಕರ್ನಾಟಕದ ಮನೆಗಳ ಚಿತ್ರಗಳ ಸಂಗ್ರಹವನ್ನು ಕಟ್ಟಡ ನಿರ್ಮಿಸುವವರಿಗೆ ಹಾಗೂ ಮರಗೆಲಸ ಮಾಡುವವರಿಗೆ ತೋರಿಸಿ, ಅವರಿಗೂ ತಮ್ಮ ಕನಸಿನ ಮನೆಯ ಚಿತ್ರಣವನ್ನು ಸ್ಪಷ್ಟಪಡಿಸಿದರು.

ಕಂಬ ಮತ್ತು ಬಾಗಿಲುಗಳಿಗೆ ಹೊಂದಾಣಿಕೆಯಾ ಗುವ ಸಾಗುವಾನಿ ಹಾಗೂ ಕಪ್ಪುಸೀಸ ಮೊದಲಾದ ಉತ್ತಮ ಜಾತಿಯ ಮರದ ದಪ್ಪ ತೊಲೆ, ಪಟ್ಟಿಗಳನ್ನು ಹಳಿಯಾಳ ಮತ್ತು ದಾಂಡೇಲಿಗೆ ವೀಣಾ ಅವರೇ  ಹೋಗಿ ಹುಡುಕಾಡಿ ತಂದಿದ್ದಾರೆ.
ದೇಸಿ ಮನೆಯ ಇಂಚಿಂಚೂ ತಮ್ಮ ಅಭಿರುಚಿಗೆ ತಕ್ಕಂತೆಯೇ ಪೂರ್ಣಗೊಳ್ಳಬೇಕೆಂಬ ಹಂಬಲದಲ್ಲಿ ಮನೆಯ ನಿರ್ಮಾಣದಲ್ಲಿ ಮುತುವರ್ಜಿ ವಹಿಸಿದ್ದರಿಂದ ಕಟ್ಟಡದ ನಿರ್ಮಾಣ ಪೂರ್ಣಗೊಳ್ಳಲು ನಾಲ್ಕು ವರ್ಷ ಗಳೇ ಹಿಡಿದವು.

ಎಲ್ಲಿಯೂ ಕಟ್ಟಡದ ಗುಣಮಟ್ಟ, ವಿನ್ಯಾಸದ ವಿಚಾ ರದಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಇದು ಕೇವಲ  ಕಲ್ಲು, ಇಟ್ಟಿಗೆ, ಮರ, ಸಿಮೆಂಟಿನ ಮನೆಯಲ್ಲ. ಸುಂದರ ಮರದ ಕಂಬಗಳು, ಮನೋಹರ ಕೆತ್ತನೆಗಳಿಂದ ಅರಳಿದ ವಿಶಿಷ್ಟ ಕಲಾಕೃತಿ ಎಂದು ಬಹಳ ಖುಷಿಯಿಂದ ಹೇಳಿಕೊಳ್ಳುತ್ತಾರೆ ವೀಣಾ-ಮಹಾಂತೇಶ್ ದಂಪತಿ.

ಹಳ್ಳಿ ಸೊಗಡಿನ ಭವನ
ಹಳ್ಳಿಗಳ ಮನೆಯಂತೆ ಸೆಗಣಿಯ ಕುಳ್ಳುಗಳಿಂದ ಅಲಂಕೃತವಾದ ಗೋಡೆಯ ಮಾದರಿಯಲ್ಲಿ ಸುಣ್ಣದ ಗೋಡೆಯ ಕಾಂಪೌಂಡ್ ಮಧ್ಯೆ ಅಗಸಿ ಬಾಗಿಲ ಮಾದರಿ ಯಲ್ಲಿ ಪ್ರವೇಶದ್ವಾರ ನಿರ್ಮಿಸಲಾಗಿದೆ. ದೀವಿಗೆ (ದೀಪ) ಹಚ್ಚಲು ಎರಡೂ ಬದಿಯಲ್ಲಿ ತ್ರಿಕೋನಾಕೃತಿ ಗೂಡು ರಚಿಸಲಾಗಿದೆ. ನಂತರ ನಾಲ್ಕೈದು ಮೆಟ್ಟಿಲು ಮೇಲೇರಿದರೆ ಕುಳಿತು ಕೊಳ್ಳಲು ಜಗಲಿಯೂ (ಕಟ್ಟೆ) ಇದೆ. ಮುಂದೆ ಸುಂದರ ಕೆತ್ತನೆಯ ಬೃಹತ್ ಹೆಬ್ಬಾಗಿಲು. ಬಾಗಿಲ ನಡುವಿನ ತುದಿಯಲ್ಲಿ ಮಾವಿನಕಾಯಿ ಮೊಗ್ಗಿನ ಆಕೃತಿ, ಗುಬ್ಬಿ ಚಿತ್ರಗಳು ಗ್ರಾಮೀಣ ಸೊಬಗನ್ನು ನೆನಪಿಸುತ್ತವೆ. ಒಳಕ್ಕೆ ಹೆಜ್ಜೆ ಇಡುತ್ತಿದ್ದಂತೆ ತಣ್ಣನೆಯ ಗಾಳಿ ಸುಳಿದು ಹಳ್ಳಿಯ ಸೊಗಡೇ ಸುಳಿದಂತೆ ಭಾಸವಾಗುತ್ತದೆ. ಮೂಡಲ ಮನೆಯ ಸೌಂದರ್ಯ, ಗೌಡರ ಸಿರಿವಂತಿಕೆ ಎರಡೂ ಈ ಮನೆಯಲ್ಲಿ ಮೇಳೈಸಿವೆ.

ಒಳಾಂಗಣದಲ್ಲಿ ಸುಂದರ ಕಂಬಗಳಿಂದ ಅಲಂಕೃತ ವಾದ ಭವನದ ಮಧ್ಯಭಾಗದಲ್ಲಿ ನಿರ್ಮಿಸಲಾದ ವಿಶಾಲವಾದ ತೊಟ್ಟಿಯಲ್ಲಿ ನೇಸರನ ಕಿರಣಗಳು, ತಂಪಾದ ಗಾಳಿ ಸುಳಿದಾಡುತ್ತವೆ. ಎತ್ತರದ ಛಾವಣಿ ಯಿಂದ ಈ ತೊಟ್ಟಿಯ ಭಾಗಕ್ಕೆ ನೇರವಾಗಿ ಸೂರ್ಯನ ಬೆಳಕು, ಮಳೆ ನೀರು ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ.

ದೊಡ್ಡ ಕಿಟಕಿಗಳಿಂದ ಯಥೇಚ್ಛವಾಗಿ ನೈಸರ್ಗಿಕ ಗಾಳಿ, ಬೆಳಕು ಬರುತ್ತದೆ. ಹಾಗಾಗಿ, ಫ್ಯಾನ್, ಹವಾ ನಿಯಂತ್ರಿತ ವ್ಯವಸ್ಥೆ (ಎ.ಸಿ), ಹೆಚ್ಚಿನ ವಿದ್ಯುತ್ ದೀಪಗಳ ಅಗತ್ಯ ಈ ಮನೆಗೆ ಇಲ್ಲ. 22 ಕಂಬಗಳಿಂದ ಅಲಂಕೃತ ವಾದ ಈ ತೊಟ್ಟಿ ಮನೆ ಒಂದು ರೀತಿಯಲ್ಲಿ ಪರಿಸರ ಸ್ನೇಹಿ ಕಟ್ಟಡವೇ ಆಗಿದೆ. ಮಳೆನೀರು ಸಂಗ್ರಹ ವ್ಯವಸ್ಥೆಯೂ ಇದೆ.

ಮಲಗುವ ಕೊಠಡಿ, ಅಡುಗೆ ಕೋಣೆ ದೇಸಿ ವಿನ್ಯಾಸದಲ್ಲಿದ್ದರೂ, ಅಲ್ಲಲ್ಲಿ ಅಗತ್ಯಗಳಿಗೆ ತಕ್ಕಂತೆ ಆಧುನಿಕ ಸ್ಪರ್ಶವನ್ನೂ ನೀಡಲಾಗಿದೆ. ವಾಷ್‌ ಬೇಸಿನ್ ಇರಬೇಕಾದೆಡೆ ದೊಡ್ಡ ತಾಮ್ರದ ದೊಡ್ಡ ಬಟ್ಟಲು ಅಳವಡಿಸಿರುವುದು ವಿಶೇಷ.
ಮರದ ಹಲಗೆಯ ಮೆಟ್ಟಿಲುಗಳನ್ನು ಹತ್ತಿ ಮೇಲಿನ ಮಹಡಿ ಮೇಲೇರಿದರೆ ದೊಡ್ಡ ಪೂಜಾಗೃಹ, ನಡುವೆ ಎತ್ತರದ ಗದ್ದುಗೆ ಮೇಲೆ ಆರಾಧ್ಯ ದೇವರು, ಸುತ್ತಲೂ ಗೋಡೆಗೆ ಆನಿಸಿ ದೇವರ ವಿಗ್ರಹಗಳನ್ನಿರಿಸಲು ಪ್ರತ್ಯೇಕ ಸ್ಥಳ ಬಿಡಲಾಗಿದೆ.

ಐರೋಪ್ಯ ಶೈಲಿ ಕಿಟಕಿ
ಮುಂದೆ ಸಾಗಿದರೆ ಎರಡು ಮಲಗುವ ಕೋಣೆ, ವಿಶಾಲ ಸ್ನಾನದ ಕೋಣೆಗಳನ್ನು ಕಾಣಬಹುದು. ಪ್ರತಿ ಕೋಣೆಗೂ ಐರೋಪ್ಯ ಶೈಲಿಯ ಸುಂದರ­ವಾದ ದೊಡ್ಡ ಬಾಲ್ಕನಿ ಗಮನ ಸೆಳೆಯುತ್ತವೆ.

ಮನೆಯಲ್ಲಿ ಒಟ್ಟು 22 ಕಂಬಗಳನ್ನು ಜೋಡಿಸಲಾ ಗಿದೆ. ಇದರಲ್ಲಿ 12 ಕಂಬಗಳನ್ನು ಕಾಂಕ್ರಿಟ್‌ನಿಂದ ನಿರ್ಮಿಸಿ  ಹೊರಮೈಗೆ ಬೀಟೆ ಮರದ ಫಿನಿಶಿಂಗ್  ನೀಡಲಾಗಿದೆ. ಮೇಲಿನ ಅಂತಸ್ತಿನಲ್ಲಿರುವ 10 ಕಂಬಗ ಳನ್ನು ಪೂರ್ಣ ಮರದಿಂದಲೇ ಸಿದ್ಧಪಡಿಸಲಾಗಿದೆ.  ಈ ಕಂಬಗಳ ಸುತ್ತಲೂ ಬಾಳೆಗಿಡದ ಗೊನೆಯ ತುದಿ ಮೊಗ್ಗು ಬಾಗಿದಂತೆ ಇರುವ ರೂಪವನ್ನು ನೀಡಲಾಗಿದೆ. ನಾಲ್ಕೂ ಬದಿಯಲ್ಲಿ ನಿರ್ಮಿಸಿದ ಬಾಳೆಗೊನೆ ಮೋತೆಯ ಆಕಾರವನ್ನು ತೊಟ್ಟಿಯಲ್ಲಿ ನಿಂತು ನೋಡುತ್ತಿದ್ದರೆ ಕಣ್ಣುಗಳು ದೊಡ್ಡದಾಗಿ ಅರಳಿ ಮೆಚ್ಚುಗೆ ಸೂಚಿಸುತ್ತವೆ.

ಸಿನಿಮಾ ಚಿತ್ರೀಕರಣಕ್ಕೆ ಮೆಚ್ಚಿನ ತಾಣ
22 ಕಂಬಗಳ, ವಿಶಾಲವಾದ ತೊಟ್ಟಿಯ ಈ ಮನೆ ಸಿನಿಮಾ  ನಿರ್ಮಾಪಕರಿಗೂ ಅಚ್ಚುಮೆಚ್ಚು. ಇತ್ತೀಚೆಗೆ ಈ ದೇಸೀ ಮನೆಯ ಕಲಾ ಶ್ರೀಮಂತಿಕೆ ಬಗ್ಗೆ ಕೇಳಿ ತಿಳಿದುಕೊಂಡ ಕಲಾ ನಿರ್ದೇಶಕರು ಇಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಶಿವರಾಜ್‌ ಕುಮಾರ್ ಅಭಿನಯದ ಬೆಳ್ಳಿ, ಗಣೇಶ್ ನಟಿಸು ತ್ತಿರುವ, ಇನ್ನೂ ಹೆಸರಿಡದ ಹೊಸ ಚಿತ್ರ ಸೇರಿ ದಂತೆ ಹಲವು ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ.

ಬೆಂಗಳೂರಿನಲ್ಲಿಯೇ ದೇಸಿ ಮನೆ ಇರುವಾಗ ಗ್ರಾಮೀಣ ಕಥಾಹಂದರದ ಸಿನಿಮಾ ಚಿತ್ರೀಕರ ಣಕ್ಕೆ ಹಳ್ಳಿ ಹುಡುಕಿಕೊಂಡು ಹೋಗುವ ಅಗತ್ಯ ಇಲ್ಲ. ಕಡಿಮೆ ವೆಚ್ಚದಲ್ಲಿ ಶೂಟಿಂಗ್ ಮುಗಿಯು ತ್ತದೆ ಎನ್ನುವುದೇ ಚಿತ್ರ ನಿರ್ಮಾಪಕರ ಆಯ್ಕೆಗೆ ಕಾರಣ.

ಪರಿಸರ ಸ್ನೇಹಿ ಮನೆ
ತೊಟ್ಟಿಯಲ್ಲಿ ಮಳೆ ನೀರು ಬೀಳಲು, ಗಾಳಿ, ಬೆಳಕು ಯಥೇಚ್ಛವಾಗಿ ಬರುವಂತೆ ಎತ್ತರದ ಛಾವಣಿಯನ್ನು ಮುಚ್ಚದೇ ಹಾಗೆ ಬಿಡಲಾಗಿದೆ. ಆದರೆ, ಕ್ರಿಮಿ ಕೀಟ ಗಳು ಒಳನುಗ್ಗದಂತೆ ಸುರಕ್ಷತೆ ದೃಷ್ಟಿ ಯಿಂದ ಜಾಲರಿ  ಅಳವಡಿಸ­ಲಾಗಿದೆ. ತೊಟ್ಟಿಯಲ್ಲಿ ಬೀಳುವ ಮಳೆ ನೀರನ್ನು ಸಂಗ್ರಹಿಸಲು ಕಾಂಪೌಂಡ್‌­ನೊಳಗೆ ಮನೆಯ ಎರಡೂ ಬದಿ 12 ಅಡಿ ಉದ್ದ ಗಲದ ಸಂಪ್‌ ನಿರ್ಮಿಸಲಾಗಿದೆ. ಸ್ನಾನಕ್ಕೆ ನೀರು ಬಿಸಿಯಾಗಿಸಲು ಸೌರಶಕ್ತಿ ಬಳಕೆ.  ಸಾಧ್ಯವಿರುವೆಡೆಯೆಲ್ಲಾ ಪರಿಸರ ಸ್ನೇಹಿ ಮಾರ್ಗಗಳನ್ನು ಅನುಸರಿ­ಸಲಾಗಿದೆ.
- ಡಾ. ಮಹಾಂತೇಶ್
ಚರಂತಿಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT