ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬದ ಮೇಲೆ ಸಹಿಷ್ಣುತೆಯ ಪಾಠ

Last Updated 26 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಾಲು ಮತ್ತು ಭುಜದ ಭಾಗವನ್ನು ಕೆತ್ತಿದಂತೆ ಆದ ಗಾಯ ಕೆಲವರಿಗೆ. ಅಂಗೈ ಜಡ್ಡು ಕಟ್ಟಿದ ಅನುಭವ ಇನ್ನು ಕೆಲವರಿಗೆ. ಕಾಲುಗಳ ಹೆಬ್ಬೆರಳು ಮತ್ತು ಅದರ ಸಮೀಪದ ಬೆರಳಿನ ನಡುವೆ ಗೀರಿದಂಥ ಗಾಯ ಮತ್ತೆ ಕೆಲವರಿಗೆ. ಮೊಣಕಾಲಿನ ಹಿಂಭಾಗವನ್ನು ಕೊರೆದಂಥ ಗಾಯ ಅನೇಕರಿಗೆ.

ಗದಗ ಜಿಲ್ಲೆ ಲಕ್ಷ್ಮೇಶ್ವರದ ಬಿ.ಡಿ.ತಟ್ಟಿ ಸ್ಮಾರಕ ಶಾಲೆಯಲ್ಲಿ ಹತ್ತು ದಿನ ನಡೆದ ತರಬೇತಿಯ ನಂತರ ಮಲ್ಲಕಂಬ ಪಟುಗಳಲ್ಲಿ ಕಂಡು ಬಂದ ನೋಟವಿದು. ಕಂಬದ ಮೇಲೆ ಮಾಡುವ ಕಸರತ್ತು ಮೈ ಮತ್ತು ಮನಕ್ಕೆ ಸಹಿಷ್ಣುತೆಯ ಪಾಠ ಹೇಳಿಕೊಡುತ್ತದೆ. ನೋವನ್ನು ಬದಿಗೊತ್ತಿ ಹತ್ತೂ ದಿನವೂ ಕಂಬದೊಂದಿಗೆ ಸರಸವಾಡಲು ಕಿರಿಯ ಹಾಗೂ ಯುವ ಮಲ್ಲಕಂಬ ಪಟುಗಳಿಗೆ ಈ ‘ಪಾಠ’ವೇ ಪ್ರೇರಣೆಯಾಗಿತ್ತು.

ಮೈಸೂರಿನ ಸುತ್ತೂರು ಮಠ ಶಾಲೆ, ಬಳ್ಳಾರಿ, ಧಾರವಾಡ, ಸವದತ್ತಿ, ಗದಗ ಜಿಲ್ಲೆಯ ಅಂತೂರು ಬೆಂತೂರು, ಹಾವೇರಿ ಜಿಲ್ಲೆಯ ಹೊಸರಿತ್ತಿ, ಬಾದಾಮಿಯ ಬೇಲೂರು ಮುಂತಾದ ಸ್ಥಳಗಳಿಂದ ಬಂದ 67 ಮಂದಿಯಲ್ಲಿ ಅನೇಕರು ಮಲ್ಲಕಂಬದಲ್ಲಿ ಈಗಾಗಲೇ ತೊಡಗಿಸಿಕೊಂಡಿರುವವರು. ಉಳಿದವರು ಹತ್ತೇ ದಿನಗಳಲ್ಲಿ ಈ ಕಠಿಣ ಕಸರತ್ತಿನ ಪಾಠ ಕಲಿತುಕೊಂಡಿದ್ದಾರೆ.

ನಾಲ್ಕು ವರ್ಷದ ಪುಟಾಣಿಗಳಿಂದ ಹಿಡಿದು 28 ವರ್ಷದ ಯುವಕರು ಇಲ್ಲಿದ್ದರು. ಇವರ ಪೈಕಿ ನಾಲ್ಕು ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು. ತ್ರಿವಿಧ (ಸ್ಥಿರ ಕಂಬ, ನೇತಾಡುವ ಕಂಬ ಮತ್ತು ಹಗ್ಗ) ಮಲ್ಲಕಂಬದ ಕಸರತ್ತನ್ನು ಇವರೆಲ್ಲರೂ ಕರಗತ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಇದೇ ರೀತಿಯ ತರಬೇತಿ ನೀಡಿದ್ದ ಸಂಸ್ಥೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅದರ ಫಲ ಕಂಡಿತ್ತು. ನಿರ್ಣಾಯಕರ ಗಮನ ಸೆಳೆದ ಉತ್ತಮ ಮಲ್ಲಕಂಬ ಪಟುಗಳ ಪೈಕಿ ಅನೇಕರು ಇಲ್ಲಿ ತರಬೇತಿ ಪಡೆದವರೇ ಆಗಿದ್ದರು.

‘ಲಕ್ಷ್ಮೇಶ್ವರ ಮಲ್ಲಕಂಬದ ನೆಲ. ಈ ಕಾರಣಕ್ಕೇ ಇರಬೇಕು, 40 ಮಂದಿ ಹೊಸಬರು ಕೇವಲ ಹತ್ತೇ ದಿನಗಳಲ್ಲಿ ಕಂಬದ ಮೇಲೆ ಕಸರತ್ತು ಪ್ರದರ್ಶಿಸುವುದನ್ನು ಸಿದ್ಧಿಸಿಕೊಂಡಿದ್ದಾರೆ. ಸುಮಾರು ಏಳು ಆಸನಗಳನ್ನು ಸುಲಭವಾಗಿ ಕಲಿತಿದ್ದಾರೆ’ ಎಂಬುದು ಮಲ್ಲಕಂಬ ಗುರು ಎಂ.ಐ.ಕಣಕೆ ಅಭಿಪ್ರಾಯ.

ಜಿಮ್ನಾಸ್ಟಿಕ್ಸ್‌ನಂತೆ ಆರೋಗ್ಯ ರಕ್ಷಣೆ, ಫಿಟ್‌ನೆಸ್‌ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಮಲ್ಲಕಂಬ ಉತ್ತಮ ಕ್ರೀಡೆ ಎಂಬುದು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಿರಿಯರ ಅಭಿಪ್ರಾಯ. ದೇಹ ಬಳುಕಿಸುವ ವ್ಯಾಯಾಮ ಮತ್ತು ಶರೀರದ ಮೇಲಿನ ಸಂಪೂರ್ಣ ನಿಯಂತ್ರಣದ ಚಟುವಟಿಕೆ ಮಲ್ಲಕಂಬ ಕಲಿಕೆಯ ಆರಂಭಿಕ ಪಾಠಗಳಲ್ಲಿ ಮುಖ್ಯವಾದುದು. ನಂತರ ಸಲಾಂ, ದಸರಂಗ, ಬಗಲಿ ಉಲ್ಟಿ, ಟಿ–ಬ್ಯಾಲೆನ್ಸ್‌, ಪಿರಮಿಡ್‌ ನಿರ್ಮಾಣ ಮುಂತಾದವುಗಳನ್ನು ಕಲಿಸಲಾಗುತ್ತದೆ. ಇದರ ನಂತರ ಆಸನಗಳು ಆರಂಭವಾಗುತ್ತವೆ. 

‘ಇಲ್ಲಿ ಕಲಿಸಿದ್ದು ಕೇವಲ 30 ಶೇಕಡಾ ಮಾತ್ರ. ಇದನ್ನು ಬಳಸಿಕೊಂಡು ಶ್ರಮ ಹಾಕಿದರೆ ಒಂದು ವರ್ಷದಲ್ಲಿ ಉತ್ತಮ ಮಲ್ಲಕಂಬ ಪಟುಗಳು ರಾಜ್ಯಕ್ಕೆ ಕಾಣಿಕೆಯಾಗಿ ಸಿಗಬಲ್ಲರು. ಕಳೆದ ಬಾರಿ ಲಕ್ಷ್ಮೇಶ್ವರ ಸಮೀಪದ ರಾಮಗಿರಿಯಲ್ಲಿ ತರಬೇತಿ ಪಡೆದ ಮಹೇಶ ಬಳ್ಳೊಳ್ಳಿ ರಾಷ್ಟ್ರೀಯ ಮಲ್ಲಕಂಬ ಚಾಂಪಿಯನ್‌ಷಿಪ್‌ನ 14 ವರ್ಷದೊಳಗಿನವರ ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದ ತಂಡದಲ್ಲಿದ್ದರು. ಈ ಬಾರಿಯೂ ಇಂಥ ಪ್ರತಿಭೆಗಳು ಹೊರಹೊಮ್ಮಲಿವೆ ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಕಣಕೆ.

ಕೆಲವೇ ದಿನಗಳಲ್ಲಿ ದಕ್ಷಿಣ ವಲಯ ಮಲ್ಲಕಂಬ ಚಾಂಪಿಯನ್‌ಷಿಪ್‌ ನಡೆಯಲಿದೆ. ಹೀಗಾಗಿ ಲಕ್ಷ್ಮೇಶ್ವರದಲ್ಲಿ ಸಿದ್ಧತಾ ಶಿಬಿರವನ್ನು ನಡೆಸಲಾಗಿದೆ. ರಾಷ್ಟ್ರೀಯ ಮಲ್ಲ ಕಂಬದಲ್ಲಿ ಭರವಸೆ ಮೂಡಿಸಿರುವ ಅನುಪಮಾ ಕೆರಕಲ ಮಟ್ಟಿ, ಸವಿತಾ ಆಡಗಲ್‌, ಮಂಜು ಕೆ, ರವಿ ಕೀಡಿ, ವಿಜಯ ಶಿರಬೂರು ಮತ್ತಿತರರು ತರಬೇತಿ ಕಾರ್ಯ ಕ್ರಮದಲ್ಲಿ ಬಲ ಹೆಚ್ಚಿಸಿಕೊಂಡಿದ್ದು ರಾಷ್ಟ್ರಮಟ್ಟದಲ್ಲಿ ರಾಜ್ಯದ ಪತಾಕೆ ಎತ್ತಿ ಹಿಡಿಯಲು ಸಜ್ಜಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT