ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗಲಡು ಬಿಟ್ಟು ಗೌಡಗೆರೆ ಕೆರೆಯತ್ತ...

Last Updated 26 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ಶಿರಾ: ಬಣ್ಣದ ಕೊಕ್ಕರೆಗಳ ಆಗಮನದಿಂದ ಬಹುಬೇಗ ಪಕ್ಷಿಧಾಮ ಎಂದು ಪ್ರಸಿದ್ಧಿಗೆ ಬಂದ ತಾಲ್ಲೂಕಿನ ಕಗ್ಗಲಡು ಗ್ರಾಮ ಕಳೆದ ಎರಡು ವರ್ಷಗಳಿಂದ ಪಕ್ಷಿಗಳು ಬಾರದೆ ಬಣಗುಡುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಸಮೀಪದ ಗೌಡಗೆರೆಯ ಕರೆಗಳಲ್ಲಿ ಅವೇ ಪಕ್ಷಿಗಳು ಈಚೆಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿವೆ.

ಸತತ ಬರಕ್ಕೆ ತುತ್ತಾಗಿ ಬೆಂಗಾಡು ಎಂದೇ ಗುರುತಿಸಿಕೊಂಡಿದ್ದ ತಾಲ್ಲೂಕಿನಲ್ಲಿ ಕಳೆದ 10 ವರ್ಷದ ಹಿಂದೆ ಒಂದು ದಿನ ಏಕಾಏಕಿ ಕುಗ್ರಾಮ ಕಗ್ಗಲಡು ಗ್ರಾಮದ ಹುಣಸೆಮರೆಗಳೆಲ್ಲಾ ವಿದೇಶಿ ಬಣ್ಣದ ಹಕ್ಕಿಗಳಿಂದ ತುಂಬಿ ಹೋಗಿ ಅವುಗಳ ಗೂಡು ಕಟ್ಟುವ ಕಲರವ ಕೇಳಿ ಸುತ್ತಲಿನ ಜನರೆಲ್ಲಾ ವಿಸ್ಮಯಗೊಂಡಿದ್ದರು.

ಆಗ ಎಂದೂ ನೋಡಿರದ ಬಣ್ಣದ ಹಕ್ಕಿಗಳ ದಂಡು ನೋಡಿದ ಸ್ಥಳೀಯ ಜನ ಇವೇನು ಕೇಡಿಗೆ ಬಂದಿವೆಯೋ? ಅಥವಾ ಒಳಿತಿಗೆ ಬಂದಿವೆಯೋ? ಎಂದು ಪಂಚಾಗದ ಮೊರೆ ಹೋಗಿದ್ದರು. ಆ ವೇಳೆಗೆ ನಾಡಿನ ವಿವಿಧೆಡೆಯಿಂದ ಆಗಮಿಸಿದ ಪಕ್ಷಿ ಪ್ರಿಯರು ಆ ಬಣ್ಣದ ಕೊಕ್ಕರೆಗಳ ಜಾತಿ ಇತರೆ ಚಹರೆ ಗುರುತಿಸಿ ಇಂಗ್ಲಿಷ್‌ನಲ್ಲಿ ಅದೆಂಥದ್ದೋ ಹೆಸರುಗಳನ್ನು ಹೇಳಿ ಹೋದರು. ಇದೊಂದು ಪಕ್ಷಿಧಾಮ ಎಂದರು.

ಅರಣ್ಯ ಇಲಾಖೆಯು ಸಿಬ್ಬಂದಿ ನಿಯೋಜಿಸಿ ಪಕ್ಷಿಗಳ ಯೋಗಕ್ಷೇಮ ವಹಿಸಿಕೊಂಡಿತು. ಸುದ್ದಿ ಹರಡಿದ ನಂತರ ನಾಡಿನ ವಿವಿಧೆಡೆಯಿಂದ ಜನರು ಕಗ್ಗಲಡು ಗ್ರಾಮಕ್ಕೆ ಭೇಟಿ ನೀಡಿ ಪಕ್ಷಿಗಳನ್ನು ಕಣ್ತುಂಬಿಕೊಂಡರು. ಕುಗ್ರಾಮ ಕಗ್ಗಲಡು ಹಠಾತ್ತನೆ ಪಕ್ಷಿಧಾಮವಾಗಿದ್ದಕ್ಕೆ ಸ್ಥಳೀಯರು ಪರಮ ಸಂತೋಷಪಟ್ಟಿದ್ದರು.

1999ರಿಂದ 2009ರವರೆಗೆ ಪ್ರತಿವರ್ಷ ಆಗಮಿಸುತ್ತಿದ್ದ ಪಕ್ಷಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಹೋಗಿತ್ತು. ಗ್ರಾಮದ ನಡು ರಸ್ತೆ ಬದಿಯ ಹುಣಸೆಮರಗಳಲ್ಲೇ ಮುಳ್ಳು ಕಡ್ಡಿಗಳಿಂದ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡಿ ಸಂತಾನೋತ್ಪತ್ತಿಯ ನಂತರ ತಮ್ಮ ಮೂಲ ನೆಲೆಗೆ ತೆರಳುತ್ತಿದ್ದ ಹಕ್ಕಿಗಳ ಲೋಕವೊಂದು ಇಡೀ ತಾಲ್ಲೂಕಿಗೆ ಮೆರಗು ತಂದಿತ್ತು.

ಆದರೆ ಕಳೆದ ಎರಡು ವರ್ಷಗಳಿಂದ ಕಾಡಿದ ಬರದ ಛಾಯೆಯೋ ಅಥವಾ ಪಕ್ಷಿಗಳ ಲೋಕದ ಮತ್ತೇನು ವಿಘ್ನವೋ ಒಂದೇ ಒಂದು ಬಣ್ಣದ ಕೊಕ್ಕರೆ ಬಾರದೆ  ಪಕ್ಷಿಧಾಮ ಬರಡಾಯಿತು.

ತಮ್ಮದೇ ನೂರೊಂದು ತರಲೆ ತಾಪತ್ರಾಯಗಳಲ್ಲಿ ಮುಳುಗಿದ್ದ ಜನರು ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಪಕ್ಷಿತಜ್ಞರು ಕೂಡ ಈಗೇಕೆ ಬಣ್ಣದ ಕೊಕ್ಕರೆಗಳು ಬರುತ್ತಿಲ್ಲ ಎಂದು ವಿವರಿಸಿ ಹೇಳಲಿಲ್ಲ.

ಆಶ್ಚರ್ಯವೆಂದರೆ ಕಗ್ಗಲಡು ಗ್ರಾಮಕ್ಕೆ ಐದಾರು ಕಿ.ಮೀ ದೂರವಿರುವ ಅದೇ ಚಂಗಾವರ ರಸ್ತೆಯ ಗೌಡಗೆರೆ ಕೆರೆಯಲ್ಲಿ ಈಚೆಗೆ ಬಣ್ಣದ ಕೊಕ್ಕರೆಗಳು ವಿರಳವಾಗಿ ಕಾಣಿಸಿಕೊಳ್ಳುತ್ತಿವೆ. ಮೀನಿನ ಶಿಕಾರಿ ಶುರುಮಾಡಿವೆ. ಇಲ್ಲಿಗೆ ಬರುತ್ತಿರುವ ಈ ವಿಭಿನ್ನ ಕೊಕ್ಕರೆಗಳು ಕಗ್ಗಲಡುವಿರಲಿ ಸಮೀಪದ ಬೇರೆಲ್ಲೂ ಗೂಡು ಕಟ್ಟಿದಂತೆ ಕಾಣುತ್ತಿಲ್ಲ. ಆದರೆ ಪ್ರತಿದಿನ ಬರುತ್ತಿವೆ.

ಹೀಗಾಗಿ ಇವು ಎಲ್ಲಿ ಗೂಡು ಕಟ್ಟಿವೆ? ಅದೆಷ್ಟು ದೂರದಿಂದ ಇಲ್ಲಿಗೆ ಬರುತ್ತಿವೆ ಎಂಬ ಸಹಜ ಪ್ರಶ್ನೆಗಳು ಹವ್ಯಾಸಿ ಪಕ್ಷಿಪ್ರಿಯರನ್ನು ಕಾಡುತ್ತಿವೆ.

ಜೊತೆಗೆ ದಿನೇ ದಿನೇ ಈ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಹೋಗಿ ಮತ್ತೆ ಪಕ್ಷಧಾಮದ ವೈಭವ ಮರುಕಳಿಸೀತೆ? ಎಂಬ ನಿರೀಕ್ಷೆಯನ್ನೂ ಹುಟ್ಟು ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT