ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ಶಿಕ್ಷಣ

Last Updated 27 ನವೆಂಬರ್ 2015, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂಬರುವ ಶೈಕ್ಷಣಿಕ ವರ್ಷದಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕೊಡಿಸಲು ಚಿಂತನೆ ನಡೆದಿದೆ’ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್‌ ತಿಳಿಸಿದರು.

ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ  ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ನೂತನ ಪೋರ್ಟಲ್‌ ಹಾಗೂ ಹೊಸ ರೂಪ ಪಡೆದ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದರು. ‘ಕಾರ್ಮಿಕರ ಮಕ್ಕಳಿಗೂ ಉತ್ತಮ ಶಿಕ್ಷಣ ದೊರಕಿಸಿಕೊಡಬೇಕು ಎಂಬ ಕಾರಣಕ್ಕಾಗಿ ಇಲಾಖೆ ಈ ಕುರಿತು ಗಂಭೀರವಾಗಿ ಯೋಚನೆ ನಡೆಸುತ್ತಿದೆ’ ಎಂದರು.

‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ಐದನೇ ತರಗತಿಯಿಂದ ಪಿಎಚ್‌ಡಿ ವರೆಗೆ ವಿದ್ಯಾಭ್ಯಾಸ ಪೂರೈಸಲು ಧನಸಹಾಯ ನೀಡುವ ಯೋಜನೆಯೂ ಇದೆ. ಎಂಜಿನಿಯರಿಂಗ್‌ ಮಾಡುವ ವಿದ್ಯಾರ್ಥಿಗಳ ಸಿಇಟಿ ಶುಲ್ಕವನ್ನು ಸಂಪೂರ್ಣವಾಗಿ ಭರಿಸಲಾಗುವುದು.  ಜೊತೆಗೇ ತಿಂಗಳಿಗೆ ₹2 ಸಾವಿರ ಪ್ರೋತ್ಸಾಹ ಧನ ನೀಡಲು ಉದ್ದೇಶಿಸಲಾಗಿದೆ. ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಆರ್ಥಿಕ ನೆರವು ನೀಡಲಾಗುವುದು’ ಎಂದು ಅವರು ವಿವರಿಸಿದರು.

ಕಾರ್ಮಿಕರಿಗೆ ₹10,520 ಕನಿಷ್ಠ ವೇತನಕ್ಕೆ ಆದೇಶ: ‘ರಾಜ್ಯದ 23 ವಿವಿಧ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ತಿಂಗಳಿಗೆ ₹10,520  ಕನಿಷ್ಠ ವೇತನ ದೊರಕಿಸಿಕೊಡಲು ಆದೇಶ ಹೊರಡಿಸಲಾಗಿದೆ’ ಎಂದು ನಾಯ್ಕ್‌ ತಿಳಿಸಿದರು.

‘ಆಹಾರ ಸಂಸ್ಕರಣೆ ಮತ್ತು ಪದಾರ್ಥಗಳ ಪ್ಯಾಕಿಂಗ್‌ ಉದ್ದಿಮೆ, ಮದ್ಯ ತಯಾರಿಕೆ, ಹೋಟೆಲ್‌, ಆಯುರ್ವೇದಿಕ್‌ ಮತ್ತು ಅಲೊಪೆಥಿಕ್‌ ಔಷಧ ತಯಾರಿಕೆ, ಸಿನಿಮಾ, ಗೃಹ ಕಾರ್ಮಿಕರು  ಸೇರಿದಂತೆ ಒಟ್ಟು 23 ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಹೊಸ ವೇತನ ಅನ್ವಯಿಸಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ 196 ಅನುದಾನಿತ ಖಾಸಗಿ ಐಟಿಐ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 2,410 ಸಿಬ್ಬಂದಿಗೆ ನಿವೃತ್ತಿ ವೇತನ, ಗ್ರ್ಯಾಚುಟಿ ಸೇರಿದಂತೆ ಇತರ ಸೌಕರ್ಯಗಳು ಇರಲಿಲ್ಲ. 1,888 ಸಿಬ್ಬಂದಿಗೆ ಈ ಸೌಲಭ್ಯ ನೀಡಲು ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಇನ್ನೂ 13 ಕಾಲೇಜುಗಳಿಂದ ಮಾಹಿತಿ ಬಂದ ನಂತರ ಇನ್ನುಳಿದವರಿಗೂ ಇದರ ವ್ಯಾಪ್ತಿಗೆ ತರಲಾಗುವುದು’ ಎಂದು ತಿಳಿಸಿದರು.

‘ಕಳೆದ ವರ್ಷ ಆರಂಭಿಸಿರುವ ಮೂರು ಹೊಸ ಐಟಿಐ ಕಾಲೇಜುಗಳು ಸೇರಿದಂತೆ ಇತರ ಕಾಲೇಜುಗಳಲ್ಲಿ ಪ್ರಾಚಾರ್ಯ, ಉಪಪ್ರಾಚಾರ್ಯರು ಹಾಗೂ ಇತರ ಒಟ್ಟು 1,806 ಹುದ್ದೆಗಳ ಭರ್ತಿಗೆ ಶೀಘ್ರದಲ್ಲೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಹೇಳಿದರು.

ಜಿಲ್ಲೆಗಳಲ್ಲಿ ಕಲ್ಯಾಣ ಕೇಂದ್ರ ಭವನ: ‘ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ₹8ರಿಂದ ₹10 ಕೋಟಿ ವೆಚ್ಚದಲ್ಲಿ ಬಹು ಉದ್ದೇಶದ ‘ಕಾರ್ಮಿಕರ ಕಲ್ಯಾಣ ಕೇಂದ್ರ ಭವನ’ ನಿರ್ಮಾಣ ಮಾಡಲಾಗುವುದು’ ಎಂದು ತಿಳಿಸಿದರು.
‘ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ ಸಾಕಷ್ಟು ಲೋಪ ದೋಷಗಳಿದ್ದವು. ಅವುಗಳನ್ನು ಸರಿಪಡಿಸಲಾಗಿದೆ’ ಎಂದರು.

ವಿಟಿಯು ಜತೆ ಒಪ್ಪಂದ: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತರಬೇತಿ, ಕೌಶಲ ಹೆಚ್ಚಿಸಲು ಕಾರ್ಮಿಕ ಇಲಾಖೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಜತೆ  ಇದೇ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಂಡಿತು. ಕಾರ್ಮಿಕ ಇಲಾಖೆಯ ಆಯುಕ್ತ ಡಿ.ಎಸ್‌. ವಿಶ್ವನಾಥ್‌ ಮತ್ತು ವಿಟಿಯು ಕುಲಪತಿ ಡಾ. ಎಚ್‌. ಮಹೇಶಪ್ಪ ಅವರು ಕಡತಗಳಿಗೆ ಸಹಿ ಹಾಕಿ ಪರಸ್ಪರ ವಿನಿಮಯ ಮಾಡಿಕೊಂಡರು.

ಪೋರ್ಟಲ್‌ನಲ್ಲಿ ಏನಿದೆ...
www.karlabour.in ವೆಬ್‌ಸೈಟ್‌ನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ನೋಂದಣಿ, ಪರವಾನಗಿ, ನವೀಕರಣ ಸೇರಿದಂತೆ ಇತರ ಮಾಹಿತಿ ಪಡೆಯಬಹುದು. ₹75 ಸಾವಿರ ವೆಚ್ಚದಲ್ಲಿ ವೆಬ್‌ಸೈಟ್‌ಗೆ ಹೊಸ ರೂಪ ಕೊಡಲಾಗಿದೆ. karmika sahayoga ಪೋರ್ಟಲ್‌ನಲ್ಲಿ ಇಲಾಖೆಯ ಅಧಿಕಾರಿಗಳು, ಇನ್‌ಸ್ಪೆಕ್ಟರ್‌ಗಳು ವರದಿಯನ್ನು ಅಪ್‌ಲೋಡ್‌ ಮಾಡುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಉದ್ಯಮಗಳ ಮಾಲೀಕರು ಆಕ್ಷೇಪ, ದೂರು ಸಲ್ಲಿಸಬಹುದು. ಕಾರ್ಮಿಕ ಕಾಯ್ದೆಗಳು, ನಿಯಮಗಳು, ಇಲಾಖೆ ಹೊರಡಿಸುವ ಅಧಿಸೂಚನೆ ಸೇರಿದಂತೆ ಇತರ ಮಾಹಿತಿ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT