ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುನಿಟ್ಟಿನ ಪಾಲನೆಗೆ ನಿರ್ದೇಶನ

ನಗರ ವ್ಯಾಪ್ತಿಯಲ್ಲಿನ ಗಗನಚುಂಬಿ ಕಟ್ಟಡಗಳಲ್ಲಿ ಸುರಕ್ಷತಾ ನಿಯಮ
Last Updated 31 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರ ವ್ಯಾಪ್ತಿಯಲ್ಲಿನ ಗಗನಚುಂಬಿ ಕಟ್ಟಡಗಳು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತಿರಬೇಕು’ ಎಂದು ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ಬಿಯಾಂಡ್ ಕಾರ್ಲಟನ್‌ ಕಟ್ಟಡದಲ್ಲಿ 2010ರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ವಿಭಾಗೀಯ ಪೀಠವು ಸೋಮವಾರ ವಿಲೇವಾರಿ ಮಾಡಿತು. ಈ ಸಂದರ್ಭದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು, ‘ಈ ಕುರಿತು ಈಗಾಗಲೇ 2011ರ ಜುಲೈ 7ರಂದು ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಸ್ಪಷ್ಟ ತಾಕೀತು ಮಾಡಲಾಗಿದೆ’ ಎಂದು ತಿಳಿಸಿದರು.

ಕೆಪಿಎಸ್‌ಸಿ ನೇಮಕ-ನಿಯಮ ರೂಪಿಸಲು ಮೌಖಿಕ ಸೂಚನೆ:‘ಸೂಕ್ತ ನಿಯಮಾವಳಿಗಳನ್ನು ರೂಪಿಸಿದ ನಂತರವೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಸದಸ್ಯರನ್ನು ನೇಮಕ ಮಾಡಿ’ ಎಂದು ಹೈಕೋರ್ಟ್‌ ಮೌಖಿಕವಾಗಿ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಕುರಿತು ಟಿ.ಜೆ.ಅಬ್ರಾಹಂ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ‘ಈಗಾಗಲೇ ಈ ಸಂಬಂಧ ಶಿಫಾರಸು ಮಾಡಲಾಗಿರುವ ಎಂಟು ಜನ ಪದಾಧಿಕಾರಿಗಳಲ್ಲಿ ನಾಲ್ವರನ್ನು ನೇಮಕ ಮಾಡಲಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ‘ಸದ್ಯ ಈ ಬಗ್ಗೆ ನಮ್ಮ ಬಳಿ ಯಾವುದೇ ವಿವರಗಳಿಲ್ಲ. ಸೂಕ್ತ ಮಾಹಿತಿ ಪಡೆದು ನಂತರ ವಿವರ ಒದಗಿಸಲಾಗುವುದು’ ಎಂದು ತಿಳಿಸಿದರು.

ಅಮಾನತ್‌ ಬ್ಯಾಂಕ್‌ ₨ 43 ಕೋಟಿ ನೀಡಲು ಜಾಫರ್‌ ಷರೀಫ್‌ಗೆ ಸೂಚನೆ: ‘ನಷ್ಟದಲ್ಲಿರುವ ಅಮಾನತ್‌ ಸಹಕಾರ ಬ್ಯಾಂಕ್‌ ಪುನಶ್ಚೇತನಕ್ಕೆ ₨ 43 ಕೋಟಿ ನೆರವು ನೀಡುವ ವಾಗ್ದಾನವನ್ನು ಮುಂದಿನ 15 ದಿನಗಳಲ್ಲಿ  ಈಡೇರಿಸಿ’ ಎಂದು ಹೈಕೋರ್ಟ್‌ ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್‌ ಷರೀಫ್‌ ಅವರಿಗೆ ಸೂಚಿಸಿದೆ.

ಕೆನರಾ ಬ್ಯಾಂಕ್‌ ಜೊತೆ ಅಮಾನತ್‌ ಬ್ಯಾಂಕ್‌ ವಿಲೀನಗೊಳಿಸುವ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ವಿಚಾರಣೆ ನಡೆಸಿತು. ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ ಅವರ ಮೂಲಕ ಈ ಹಣವನ್ನು ಪಾವತಿ ಮಾಡಿ ಎಂದು ಪೀಠ ಷರೀಫ್‌ ಪರ ವಕೀಲರಿಗೆ ಸೂಚಿಸಿತು.

ವಿವರ ಸಲ್ಲಿಕೆಗೆ ಸೂಚನೆ: ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿನ ಬಂಡಿಕೊಡಿಗೇನಹಳ್ಳಿ ಬಳಿ 71 ಎಕರೆಯನ್ನು ಸ್ವಾಧೀನಕ್ಕೆ ಪಡೆದಿರುವ ಕುರಿತಂತೆ ವಿವರಗಳನ್ನು ಸಲ್ಲಿಸಿ’ ಎಂದು ಹೈಕೋರ್ಟ್‌, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸೂಚಿಸಿದೆ.

ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಬಿ.ಎಂ.ರಂಗಸ್ವಾಮಿ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

‘ಸ್ವಾಧೀನಕ್ಕೆ ಪಡೆದಿರುವ 71 ಎಕರೆ ಪ್ರದೇಶದಲ್ಲಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪತ್ನಿ ಸೌಭಾಗ್ಯ ಅವರಿಗೆ ಸೇರಿದ 5 ಎಕರೆ ಜಮೀನೂ ಇದೆ. ಆದರೆ ಸೌಭಾಗ್ಯ ಅವರಿಗೆ ಎಕರೆಗೆ ₨ 40 ಲಕ್ಷ ಪರಿಹಾರ ನೀಡಲಾಗಿದ್ದರೆ ನನಗೆ ಎಕರೆಗೆ ₨ 30 ಲಕ್ಷ ನೀಡಲಾಗಿದೆ’ ಎಂಬುದು ಅರ್ಜಿದಾರರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT