ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟುವೆವು ನಾವು...

Last Updated 23 ಅಕ್ಟೋಬರ್ 2014, 19:39 IST
ಅಕ್ಷರ ಗಾತ್ರ

ಹೊಸ ತಲೆಮಾರಿನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ಜಯತೀರ್ಥ ‘ಒಲವೇ ಮಂದಾರ’, ‘ಟೋನಿ’ ಚಿತ್ರಗಳ ಮೂಲಕ ಚಿತ್ರರಸಿಕರ ಗಮನಸೆಳೆದವರು. ಕನ್ನಡ ಚಿತ್ರರಂಗದಲ್ಲಿನ ಗುಣಾತ್ಮಕ ಪ್ರಯತ್ನಗಳ ಕೊರತೆಯ ಬಗ್ಗೆ ವಿಷಾದ ವ್ಯಕ್ತಪಡಿಸುವ ಅವರು, ಕನ್ನಡ ಚಿತ್ರರಂಗದಲ್ಲಿ ಹೊಸ ಗಾಳಿ ಬೀಸುವ ಹಂಬಲದಲ್ಲಿ ತಮ್ಮ ಕನಸುಗಳನ್ನು ಈ ಬರಹದಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾ ನಿರ್ದೇಶಕನಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಹಣ ತೆತ್ತು ಚಿತ್ರ ನೋಡಲು ಬರುವ ಪ್ರೇಕ್ಷಕನ ಬದುಕಿಗೆ ಉಪಯುಕ್ತವಾದ ವಿಷಯ ಸಿನಿಮಾದಲ್ಲಿ ಇರಬೇಕು. ಸಿನಿಮಾ ಒಂದು ಪ್ರಾದೇಶಿಕ ಸಮುದಾಯದ ಪ್ರತಿರೂಪದಂತಿರಬೇಕು. ಸಮಾಜದಿಂದ ಕಲೆ, ಕಲೆಯಿಂದ ಸಮಾಜದ ಆರೋಗ್ಯಕರ ಬೆಳವಣಿಗೆ... ಹೀಗೆ ಒಂದಕ್ಕೊಂದು ಪೂರಕವಾಗಿ ಇರಬೇಕು.

ಇಂಥ ನಂಬಿಕೆಗಳನ್ನು ಇಟ್ಟುಕೊಂಡು ‘ಕನ್ನಡಚಿತ್ರರಂಗ ಎಂಬ ಪರೀಕ್ಷೆ’ ಎದುರಿಸಲು ಕಷ್ಟಪಟ್ಟು ಹಗಲು ರಾತ್ರಿ ತಯಾರಿ ನಡೆಸಿ ಪರೀಕ್ಷಾ ಕೊಠಡಿಗೆ ಬಂದು ಕೂತಾಗ, ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳು ಸಂಪೂರ್ಣ ಬೇರೆಯೇ ಇದ್ದರೆ ಪರಿಸ್ಥಿತಿ ಹೇಗಾಗಬೇಡ. ನಾನು ಚಿತ್ರರಂಗದಲ್ಲಿ ಎದುರಿಸಿದ್ದು ಹೆಚ್ಚೂಕಡಿಮೆ ಇಂಥದೇ ವಿರೋಧಾಭಾಸದ ಸಂದರ್ಭವನ್ನು.

ಜಾಗತಿಕ ಮತ್ತು ಕನ್ನಡದ ಅನೇಕ ಶ್ರೇಷ್ಠ ಚಿತ್ರನಿರ್ದೇಶಕರ ಸಿನಿಮಾಗಳನ್ನು ನೋಡಿ ಪ್ರೇರಿತನಾದ ನಾನು, ನೇರವಾಗಿ ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದೆ. ಚಲನಚಿತ್ರ ಮಾಧ್ಯಮದ ಸಾಮಾಜಿಕ ಕೊಡುಗೆಯ ಬಗ್ಗೆ ನನ್ನಲ್ಲಿ ಅಪಾರವಾದ ವಿಶ್ವಾಸವಿತ್ತು. ಆದರೆ ಇವತ್ತಿನ ಮನರಂಜನಾ ಕ್ಷೇತ್ರಕ್ಕೆ ಚಲನಚಿತ್ರ ಎಂಬುದು ಒಂದು ಆಯ್ಕೆಯಾಗಿ ಉಳಿದಿದೆ ಅಷ್ಟೇ. ಅಂಗೈಯಲ್ಲಿನ ಮೊಬೈಲ್‌ ಪರದೆಯಲ್ಲಿ ಯುಟ್ಯೂಬ್‌, ಫೇಸ್‌ಬುಕ್‌, ವಾಟ್ಸಪ್‌, ಆಪ್‌ಗಳು, ವಿವಿಧ ಸುದ್ದಿಮಾಧ್ಯಮಗಳು ಸುಲಭವಾಗಿ ದೊರೆಯುವಾಗ, ಅವುಗಳ ಮುಂದೆ ಕನ್ನಡ ಚಲನಚಿತ್ರವು ಹೇಗೆ ಕಾರ್ಯನಿರ್ವಹಿಸಬೇಕು? ಯಾವ ರೀತಿ ಸಾಮಾಜಿಕ ಹೊಣೆಗಾರಿಕೆ ಹೊತ್ತು ಕಥೆಗಳನ್ನು ಹೆಣೆಯಬೇಕು? ನಾವೇನೇ ಮಾಡಿದರೂ ಒಂದು ‘ಲುಂಗಿಡಾನ್ಸ್’ ಹಾಡಿನ ಮುಂದೆ ಅಥವಾ ಒಂದು ಸೆನ್ಸೇಶನಲ್ ಬ್ರೇಕಿಂಗ್ ನ್ಯೂಸ್ ಎದುರು ನಿಸ್ಸಹಾಯಕರಾಗಿ ನಿಲ್ಲಬೇಕಾಗಿ ಬಂದಿದೆ!

ಅಂದಹಾಗೆ, ಯಶಸ್ಸು ಎಂದರೇನು? ಭರಪೂರ ಮನರಂಜನೆ ಕೊಟ್ಟು ಹಣ ಗಳಿಸುವುದೇ? ಅಥವಾ ಮುಂದಿನ ಪೀಳಿಗೆಗೆ ಸಿನಿಮಾ ಮೂಲಕ ಕೊಡುವ ಮೌಲ್ಯಾಧಾರಿತ ಕೊಡುಗೆಯೇ?

ಮಕ್ಕಳಿಗೆ ಚಾಕೊಲೆಟ್ ಮತ್ತು ಸಿಹಿ ತಿನಿಸುಗಳು ಬಹಳ ಇಷ್ಟ. ಮಕ್ಕಳಿಗೆ ಇಷ್ಟವಾದುದನ್ನು ಪೋಷಕರೂ ಇಷ್ಟಪಟ್ಟು ಕೊಡಿಸುವುದು ಸರಿ. ಆದರೆ, ಊಟ ತಿಂಡಿ ಎಲ್ಲವನ್ನೂ ಕುರುಕಲು ತಿಂಡಿಯೇ ತುಂಬುತ್ತದೆ ಎಂದಾದರೆ ಆರೋಗ್ಯದ ಗತಿ..? ಆ ಕಾರಣದಿಂದಲೇ ಪೋಷಕರು ಮಕ್ಕಳಿಗೆ ಇಷ್ಟವಾದುದನ್ನು ಕೊಡಿಸಿದರೂ ಅದರ ಹಿತ ಅಹಿತದ ಬಗ್ಗೆ ಯೋಚಿಸುತ್ತಾರೆ, ಯಾವ ತಿಂಡಿಯನ್ನು ಎಷ್ಟರಮಟ್ಟಿಗೆ ಕೊಡಿಸಬೇಕು ಎಂದು ನಿರ್ಧರಿಸುತ್ತಾರೆ. ಬಹುಶಃ, ಈ ತುಲನಾತ್ಮಕ ಗುಣ ಸಿನಿಮಾ ನಿರ್ದೇಶಕನಿಗೆ ಮಾದರಿಯಾದುದು. ಒಬ್ಬ ನಿರ್ದೇಶಕನಿಗೆ ಪೋಷಕರ ಸ್ಥಾನದಲ್ಲಿ ಅಥವಾ ಸಿಹಿ ತಿನಿಸು ಮಾರಾಟದ ವ್ಯಾಪಾರಿ ಸ್ಥಾನದಲ್ಲಿ– ಎರಡು ಕಡೆಯೂ ಸಲ್ಲುವ ಸಾಧ್ಯತೆಯಿದೆ. ಎಲ್ಲಿ ನಿಲ್ಲಬೇಕು ಎನ್ನುವುದು ನಿರ್ದೇಶಕನ ಸಾಮಾಜಿಕ ಬದ್ಧತೆಗೆ ಸಂಬಂಧಿಸಿದ ಸಂಗತಿ.

ಮೇಲಿನ ಜಿಜ್ಞಾಸೆಗೆ ನಾನು ಇತ್ತೀಚೆಗೆ ಕಂಡುಕೊಂಡ ಉತ್ತರ– ‘ಕನ್ನಡ ಚಿತ್ರರಂಗ ಒಂದು ಕಲಾತ್ಮಕ ಅಭಿವ್ಯಕ್ತಿಯ ಕ್ಷೇತ್ರವಾಗಿ ಪ್ರಸ್ತುತ ಉಳಿದಿಲ್ಲ, ಇದೊಂದು ಉದ್ಯಮ... ಅನ್ನದಾತ ಪ್ರೇಕ್ಷಕರೆಲ್ಲ ಈಗ ಗ್ರಾಹಕರಾಗಿದ್ದಾರೆ. ಚಿತ್ರರಂಗ ಮಾತ್ರವಲ್ಲ, ಶಿಕ್ಷಣ, ರಾಜಕೀಯ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳೂ ಉದ್ಯಮಗಳಾಗಿ ರೂಪಾಂತರಗೊಂಡಿವೆ. ಇಂಥ ಸಂದರ್ಭದಲ್ಲಿ, ಒಬ್ಬ ನಿರ್ದೇಶಕ ಅಪ್ಪಟ ವ್ಯಾಪಾರಿಯಂತೆಯೇ ಯೋಚಿಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಸಮಾಜ ಒಬ್ಬ ಕಲಾವಿದನಿಗೆ (ನಿರ್ದೇಶಕನಿಗೆ) ತಂದೊಡ್ಡಿದೆ. ಇದು ಕಹಿಯಾದರೂ ಸತ್ಯ. ಹಿಂದೆಂದೂ ಕಾಣದಷ್ಟು ತೀವ್ರವಾದ ಗುಣಾತ್ಮಕ ಕೊರತೆಯನ್ನು ಮನರಂಜನಾ ಉದ್ಯಮ ಎದುರಿಸುತ್ತಿದೆ.                

ಈ ಪರಿಸ್ಥಿತಿಯಿಂದ ಹೊರಬರಲು, ಮತ್ತು ಸೃಜನಶೀಲ, ಸದಭಿರುಚಿಯ ಚಿತ್ರಗಳ ಯುಗ ಮರುಕಳಿಸಲು ಸಾಧ್ಯವೇ ಇಲ್ಲವೇ? ಖಂಡಿತಾ ಇದೆ. ಆದರೆ ಆ ನಿಟ್ಟಿನಲ್ಲಿ ಇಡೀ ಚಿತ್ರರಂಗ ಒಂದುಗೂಡಿ ಕೆಲಸ ಮಾಡಬೇಕು. ಉದ್ಯಮದ ಈಗಿನ ವಹಿವಾಟು ಮುಂದುವರೆಸಿಕೊಂಡೇ ಪ್ರೇಕ್ಷಕವರ್ಗವನ್ನು ಹಿಗ್ಗಿಸಿಕೊಳ್ಳಬೇಕು. ವಹಿವಾಟಿನ ದೃಷ್ಟಿಯಿಂದ ರೀಮೇಕ್‌ ನಮ್ಮ ಚಿತ್ರರಂಗಕ್ಕೆ ಅನಿವಾರ್ಯವಾಗಿದೆ. ವೈಯುಕ್ತಿಕವಾಗಿ ನಾನು ರೀಮೇಕ್‌ಗೆ ಪರಮ ವಿರೋಧಿಯಲ್ಲ. ನಮ್ಮ ಸಂಸ್ಕೃತಿಗೆ ಮಾರಕವಲ್ಲದ ಪೂರಕವಾದ ಯಾವ ವಿಚಾರವೇ ಆಗಲಿ ಅದು ಕನ್ನಡಕ್ಕೆ ಬಂದರೆ ತಪ್ಪೇನಿಲ್ಲ.  ಅದರೂ ನಮ್ಮ ನೆಲದ ಸೃಜನಶೀಲತೆಗೆ ಮೊದಲ ಆದ್ಯತೆ.

ಯಾರೂ ಕೆಟ್ಟವರಲ್ಲ...
ಗುಣಾತ್ಮಕ ಸಿನಿಮಾಗಳ ಕೊರತೆಯ ಹಿನ್ನೆಲೆಯಲ್ಲಿ ಕೆಲವರನ್ನು ವಿಲನ್‌ಗಳಂತೆ ನೋಡುವ ಸಂದರ್ಭ ನಮ್ಮಲ್ಲಿದೆ. ಆದರೆ, ನನ್ನ ಈವರೆಗಿನ ಚಿತ್ರರಂಗದಲ್ಲಿನ ಅನುಭವದಲ್ಲಿ ಇಲ್ಲಿ ಯಾರೂ ಖಳನಾಯಕರಿಲ್ಲ. ಹಣ ಇರುವೆಡೆ ಸಣ್ಣಪುಟ್ಟ ತಪ್ಪುಗಳು, ಯಡವಟ್ಟುಗಳು ಆಗುವುದು ಸಹಜ. ಹಾಗೆಂದು ಸಿನಿಮಾ ಮಂದಿಯನ್ನು ವಿಲನ್‌ಗಳಂತೆ ನೋಡುವುದು ಸರಿಯಲ್ಲ. ಕಲಾವಿದರು, ನಿರ್ಮಾಪಕ – ನಿರ್ದೇಶಕರುಗಳು, ತಂತ್ರಜ್ಞರುಗಳಾದ ನಾವೆಲ್ಲ ತುಂಬಾ ಅನಿವಾರ್ಯವಾದ ಸ್ಥಿತಿಯಲ್ಲಿ ಸಿನಿಮಾಗಳನ್ನು ರೂಪಿಸುತ್ತಿದ್ದೇವೆ. ನಿರ್ಮಾಪಕರುಗಳ ವಿಷಯವನ್ನೇ ತೆಗೆದುಕೊಳ್ಳುವುದಾದರೆ, ರೀಮೇಕ್‌ ಮಾಡಿಯೇ ಹಣಗಳಿಸಬೇಕು ಎಂದು ಸಂಕಲ್ಪ ಮಾಡಿದವರು ಇಲ್ಲಿಲ್ಲ. ಅಶ್ಲೀಲ ಸಿನಿಮಾಗಳನ್ನು ಮಾಡಿ ಹಣ ಗಳಿಸಬೇಕು ಎನ್ನುವ ಉಮೇದಿನವರೂ ಇಲ್ಲ. ಆದರೂ ಕೆಲವರು ಅನಿವಾರ್ಯವಾಗಿ ರೀಮೇಕ್‌ಗಳ ಹಿಂದೆ, ಸಿದ್ಧಸೂತ್ರಗಳ ಹಿಂದೆ ಬೀಳುತ್ತಾರೆ. ಸಿನಿಮಾ ಮಾಡುವ ನಮ್ಮಲ್ಲಿ ಬಹುತೇಕ ಮಂದಿ ಯಾವಾಗಲೂ ಸೋಲಿನ ಭಯದಲ್ಲಿ ಬದುಕುತ್ತಿರುತ್ತೇವೆ. ಆ ಕಾರಣದಿಂದಲೇ ಗೆಲುವಿಗೆ ಹತ್ತಿರವೆನ್ನಿಸುವ ರೀಮೇಕ್‌ಗಳ ಬಗ್ಗೆ ಯೋಚಿಸುತ್ತೇವೆ.
ಹಾಗಾದರೆ, ಸೋಲಿನ ಭಯವನ್ನು ಮೀರಲು, ಸ್ವಂತಿಕೆಯನ್ನು ಕಂಡುಕೊಳ್ಳಲು ಯಾವುದು ದಾರಿ? ಈ ನಿಟ್ಟಿನಲ್ಲಿ ನನಗೆ ಮಲಯಾಳಂ ಚಿತ್ರರಂಗವೇ ಮಾದರಿ ಅನ್ನಿಸುತ್ತದೆ.

ಮಲಯಾಳಂ ಮಾದರಿ
‘ಶಕೀಲಾ ಸಿನಿಮಾ ಬಿಡುಗಡೆ ಆಗ್ತಿದೆಯಾ ನೋಡಿ?’ ದೊಡ್ಡ ದೊಡ್ಡ ಸ್ಟಾರ್‌ಗಳೆಲ್ಲ ತಮ್ಮ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಶಕೀಲಾ ಅವರ ನಟನೆಯ ಸಿನಿಮಾದ ಸ್ಪರ್ಧೆ ಇಲ್ಲದಿರುವುದನ್ನು ಬಯಸುವ ಸ್ಥಿತಿ ಕೆಲವೇ ವರ್ಷಗಳ ಹಿಂದೆ ಮಲಯಾಳಂ ಚಿತ್ರರಂಗದಲ್ಲಿತ್ತು. ಈಗ ಅದೇ ಚಿತ್ರರಂಗ ತನ್ನ ಹಿಂಜರಿಕೆಯನ್ನು ದಾಟಿ, ಇಡೀ ಭಾರತೀಯ ಚಿತ್ರರಂಗಕ್ಕೆ ಕಥೆಗಳನ್ನು ಸರಬರಾಜು ಮಾಡುವ ಮಟ್ಟಕ್ಕೆ ಬೆಳೆದಿದೆ. ಇದಕ್ಕೆ ಕಾರಣ, ಇಡೀ ಚಿತ್ರರಂಗ ಗುಣಮಟ್ಟಕ್ಕಾಗಿ ತುಡಿದದ್ದು ಹಾಗೂ ಒಂದು ತಂಡವಾಗಿ ಕೆಲಸ ಮಾಡಿದ್ದು.

ತನಗಂಟಿದ ಅಶ್ಲೀಲತೆಯ ಸೋಂಕಿನಿಂದ ಪಾರಾಗಲು ಮಲಯಾಳಂ ಚಿತ್ರರಂಗ ಕಂಡುಕೊಂಡಿದ್ದು ಗುಣಮಟ್ಟದ ದಾರಿಯನ್ನು. ಈ ನಿಟ್ಟಿನಲ್ಲಿ ತಂತ್ರಜ್ಞರು, ನಿರ್ಮಾಪಕ – ನಿರ್ದೇಶಕರು, ಕಲಾವಿದರು ಸೇರಿದಂತೆ ಇಡೀ ಚಿತ್ರರಂಗ ಒಂದು ಧ್ಯೇಯಕ್ಕಾಗಿ ದುಡಿಯಿತು. ಅದರ ಫಲವನ್ನು ಈಗ ಕಾಣುತ್ತಿದ್ದೇವೆ. ಪ್ರಸ್ತುತ ಮಲಯಾಳಿ ಚಿತ್ರಗಳ ಯಶಸ್ಸನ್ನು ಕೇವಲ ಗಲ್ಲಾಪೆಟ್ಟಿಗೆ ಯಶಸ್ಸಿನ ದೃಷ್ಟಿಯಿಂದ ಅಳೆಯುವುದಿಲ್ಲ; ಅದು ಗಳಿಸಿದ ಪ್ರಶಸ್ತಿಗಳ ಮಾನದಂಡದಿಂದಲೂ ಗುರ್ತಿಸಲಾಗುತ್ತದೆ. ನಮ್ಮಲ್ಲಿ ಪ್ರಶಸ್ತಿಗಳೆಂದರೆ ‘ಜನನೋಡದ ಸಿನಿಮಾ’ ಎನ್ನುವ ಹಣಪಟ್ಟಿ ಕೇರಳದಲ್ಲಿಲ್ಲ.

ಕನ್ನಡದಲ್ಲೂ 2013ರಲ್ಲಿ ಕೆಲವು ಗುಣಾತ್ಮಕ ಚಿತ್ರಗಳ ಪ್ರಯೋಗಗಳು ನಡೆದವು. ಈ ನಿಟ್ಟಿನಲ್ಲಿ ‘ಟೋನಿ’, ‘ಲೂಸಿಯಾ’, ‘ಜಟ್ಟ’, ‘ಎದೆಗಾರಿಕೆ’ ರೀತಿಯ ಕೆಲವು ಪ್ರಾಮಾಣಿಕ ಪ್ರಯತ್ನಗಳನ್ನು ಗುರ್ತಿಸಬಹುದು. ಆದರೆ, 2014ರಲ್ಲಿ ‘ಬಹುಪರಾಕ್‌’ ಹೊರತುಪಡಿಸಿದರೆ ಪ್ರಯೋಗಶೀಲ ಚಿತ್ರಗಳ ಸುಳಿವೇ ಕಾಣಿಸುತ್ತಿಲ್ಲ. ಗೆಲ್ಲುತ್ತಿರುವ ಸಿನಿಮಾಗಳೆಲ್ಲ ರೀಮೇಕ್‌ ಫಸಲುಗಳೇ. ನನ್ನಂಥ ನಿರ್ದೇಶಕರಲ್ಲಿ ಆತಂಕ ಹುಟ್ಟಿಸುತ್ತಿರುವುದು ಇದೇ.

ಪ್ರಸ್ತುತ ಜನರಿಗೆ ಒಂದು ಲೈಟ್‌ ಕಾಮಿಡಿ ಸಾಕು. ಪ್ರೇಕ್ಷಕರು ಒಂದು ರೀತಿಯಲ್ಲಿ ಸೆಟೆದುಕೊಂಡಿದ್ದಾರೆ. ‘ಗುಣಾತ್ಮಕ ಸಿನಿಮಾಗಳನ್ನು ಮಾಡಲು ನಿಮ್ಮಿಂದ ಎಲ್ಲಿ ಸಾಧ್ಯ?’ ಎನ್ನುವ ಮನೋಭಾವ ಅವರದಾಗಿದೆ. ಇದಕ್ಕೆ ನಾವು ಕೂಡ ಕಾರಣರಾಗಿದ್ದೇವೆ.

ಹೊಸ ಕನಸು..
ಕನ್ನಡ ಚಿತ್ರರಂಗದಲ್ಲಿ ಬದಲಾವಣೆ ಸಾಧ್ಯವೇ ಇಲ್ಲ ಎನ್ನುವ ನಿರಾಶಾದಾಯಕ ಮನೋಭಾವ ನನ್ನದಲ್ಲ. ಒಳ್ಳೆಯ ದಿನಗಳು ಮುಂದೆ ಬಂದೇ ಬರುತ್ತವೆ ಎನ್ನುವ ನಂಬಿಕೆ ನನ್ನದು. ಈ ನಿಟ್ಟಿನಲ್ಲಿ ನಾವು ಕೆಲವು ಸಮಾನ ಮನಸ್ಕ ಗೆಳೆಯರು ಚಿಂತನೆಯನ್ನೂ ನಡೆಸಿದ್ದೇವೆ.
ಹತ್ತು–ಹದಿನೈದು ನಿರ್ದೇಶಕರ ತಂಡ ಒಂದು ಸಂಕಲ್ಪವನ್ನು ಕೈಗೊಳ್ಳಬೇಕಿದೆ: ನಾವು ಕಡಿಮೆ ಅಥವಾ ಮಧ್ಯಮ ಬಜೆಟ್‌ನ ಚಿತ್ರಗಳನ್ನಷ್ಟೇ ನಿರ್ಮಿಸುತ್ತೇವೆ. ಹೀರೋ ಪ್ರಧಾನ ಅಲ್ಲದ, ಕಥನಕ್ಕೆ ಒತ್ತು ನೀಡಿದ ಸಿನಿಮಾಗಳನ್ನು ಮಾಡುತ್ತೇವೆ. ಸಾಮಾಜಿಕ ಆಶಯಗಳ ಜೊತೆಗೆ ಮನರಂಜನೆಯನ್ನೂ ನಮ್ಮ ಚಿತ್ರಗಳಲ್ಲಿ ಅಳವಡಿಸುತ್ತೇವೆ... ಹೀಗೆ, ಒಂದಷ್ಟು ನಿರ್ದೇಶಕರು ಬದ್ಧತೆಯೊಡನೆ ನಿರಂತರವಾಗಿ ಸಿನಿಮಾಗಳನ್ನು ಮಾಡತೊಡಗಿದರೆ ಕನ್ನಡ ಚಿತ್ರರಂಗದಲ್ಲಿ ನವ ವಸಂತದ ಗಾಳಿ ಬೀಸಿಯೇ ಬೀಸುತ್ತದೆ. ಇಂಥ ಪ್ರಯತ್ನಗಳಿಂದಾಗಿ, ಮುಂದಿನ ಎಂಟು ಹತ್ತು ವರ್ಷಗಳಲ್ಲಿ ಕನ್ನಡದ ಶೇ 60ರಷ್ಟು ಸಿನಿಮಾ ಮಾರುಕಟ್ಟೆಯಾದರೂ ಸದಭಿರುಚಿಯ ಚಿತ್ರಗಳಿಗೆ ದಕ್ಕುತ್ತದೆ ಎನ್ನುವ ಹಂಬಲ ನನ್ನದು. ಇದರಿಂದಾಗಿ ಹೊಸತೊಂದು ಪ್ರೇಕ್ಷಕವರ್ಗ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮಗೆ ಸಹೃದಯಿ ನಿರ್ಮಾಪಕರ ಬೆಂಬಲ ಅಗತ್ಯ.

ಈ ಹೊತ್ತಿನ ಕಮರ್ಷಿಯಲ್‌ ಚಿತ್ರಗಳ ನಿರ್ಮಾಪಕರು ಹೊಸ ಪ್ರಯತ್ನಗಳನ್ನು ಬೆಂಬಲಿಸುವ ಸ್ಥಿತಿಯಲ್ಲಿಲ್ಲ. ಆ ಕಾರಣದಿಂದಲೇ, ಸಾಮಾಜಿಕ ಕಾಳಜಿಯುಳ್ಳ ಕಾರ್ಪೊರೇಟ್‌ ಸಂಸ್ಥೆಗಳು ಸಿನಿಮಾ ನಿರ್ಮಾಣದಲ್ಲಿ ತೊಡಗಬಹುದಾಗಿದೆ. ಸಿನಿಮಾ ಪ್ರೀತಿಯ ಅನಿವಾಸಿ ಕನ್ನಡಿಗರು ಕೂಡ ಹೊಸ ಪ್ರಯೋಗಗಳಲ್ಲಿ ಕೈಜೋಡಿಸಬಹುದಾಗಿದೆ. ಯುವ ನಿರ್ದೇಶಕರು ಸಿನಿಮಾ ಸಂಪನ್ಮೂಲಗಳತ್ತ ಯೋಚಿಸಬೇಕಾಗಿದೆ.

ಮಲಯಾಳಂನಲ್ಲಿ ಹೊಸ ಶಕೆ ಆರಂಭವಾದಾಗ, ಹೊಸ ಪ್ರಯತ್ನಗಳಿಗೆ ಅಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲಿಸಿತು. ಆದರೆ, ನಮ್ಮ ವಾಣಿಜ್ಯ ಮಂಡಳಿಯೂ ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ. ಹಾಗೆ ನೋಡಿದರೆ, ಹೊಸ ಪ್ರಯತ್ನಗಳನ್ನು ಉತ್ತೇಜಿಸುವ ಹಾಗೂ ಸೃಜನಶೀಲರ ಪಡೆಯೊಂದನ್ನು ಗುರ್ತಿಸಿ ಬೆಂಬಲಿಸುವುದು, ಹೊಸ ಪ್ರೇಕ್ಷಕರನ್ನು ಸೃಷ್ಟಿಸುವುದು ವಾಣಿಜ್ಯ ಮಂಡಳಿಯ ಕೆಲಸವಾಗಬೇಕು. ವಾಣಿಜ್ಯ ಮಂಡಳಿಯಲ್ಲಿ ಹೊಸ ಮುಖಗಳು ಬಂದರೆ, ಹೊಸ ಪ್ರಯತ್ನಗಳಿಗೆ ಅವಕಾಶವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT