ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಠಿಣ ಕ್ರಮಕ್ಕೆ ಹಿಂಜರಿಯುವುದಿಲ್ಲ

ಅಥ್ಲೆಟಿಕ್ಸ್‌ ವಲಯದಲ್ಲಿ ಸಂಚಲನ ಮೂಡಿಸಿದ ದತ್ತಾಂಶ ಸೋರಿಕೆ ವಿವಾದ * ಐಒಸಿ ಕಠಿಣ ಎಚ್ಚರಿಕೆ
Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ/ಮಾಸ್ಕೊ (ಎಪಿ, ಎಎಫ್‌ಪಿ/ರಾಯಿಟರ್ಸ್‌/ಐಎಎನ್‌ಎಸ್‌): ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕೆಲ ಅಥ್ಲೀಟ್‌ಗಳೂ ಉದ್ದೀಪನ ಮದ್ದು ಸೇವಿಸಿದ್ದರು ಎನ್ನುವ ಮಾಧ್ಯಮಗಳ ವರದಿ ಅಥ್ಲೆಟಿಕ್‌ ರಂಗದಲ್ಲಿ ಭಾರಿ ಕೋಲಾಹಲವನ್ನೇ ಉಂಟು ಮಾಡಿದೆ. ಒಂದು ವೇಳೆ ಆರೋಪ ಸಾಬೀತಾದರೆ ಪದಕ ಜಯಿಸಿದ ಅಥ್ಲೀಟ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿ ಯುವುದಿಲ್ಲ ಎಂದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಹೇಳಿದೆ.

‘ಮದ್ದು ಸೇವನೆ ತಡೆಯುವ ಕುರಿತು ವಿಶ್ವ ಉದ್ದೀಪನಾ ಮದ್ದು ತಡೆ ಘಟಕ (ವಾಡಾ) ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಸಂಶಯ ಬಂದ ಅಥ್ಲೀಟ್‌ ಗಳನ್ನು ಪರೀಕ್ಷೆಗೂ ಒಳಪಡಿಸಿದೆ. ವಾಡಾ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ’ ಎಂದು ಐಒಸಿ ಅಧ್ಯಕ್ಷ ಥಾಮಸ್‌ ಬಾಕ್‌ ಹೇಳಿದ್ದಾರೆ.

2001ರಿಂದ 2012ರ ವರೆಗೆ ನಡೆದ ಒಲಿಂಪಿಕ್ಸ್‌ ಮತ್ತು ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗಳಲ್ಲಿ ಹಲವು ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವಿ ಸಿದ ಕುರಿತು  ದತ್ತಾಂಶದ ವರದಿ ಮಾಧ್ಯ ಮಗಳಿಗೆ ಸೋರಿಕೆಯಾಗಿದೆ. ಬ್ರಿಟನ್‌ನ ಸಂಡೇ ಟೈಮ್ಸ್‌ ಪತ್ರಿಕೆ ಮತ್ತು ಜರ್ಮ ನಿಯ ಎಆರ್‌ಡಿ/ಡಬ್ಲ್ಯುಡಿಆರ್‌ ಸುದ್ದಿ ವಾಹಿನಿ ಈ ವಿಷಯವನ್ನು ಬಹಿರಂಗ ಮಾಡಿತ್ತು. ಆದ್ದರಿಂದ ಐಒಸಿ ಈ ಪ್ರತಿಕ್ರಿಯೆ ನೀಡಿದೆ.

13 ವರ್ಷಗಳಲ್ಲಿ ಐದು ಸಾವಿರ ಅಥ್ಲೀಟ್‌ಗಳ 12,000 ರಕ್ತದ ಮಾದರಿ ಯನ್ನು ವಾಡಾ ಸಂಗ್ರಹಿಸಿತ್ತು. ಇದರಲ್ಲಿ 800 ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.  2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದ ಹತ್ತು ಅಥ್ಲೀಟ್‌ಗಳು ಮದ್ದು ಸೇವಿಸಿದ್ದರು ಎಂದು ಸಂಡೇ ಟೈಮ್ಸ್‌ ತನ್ನ ವರದಿಯಲ್ಲಿ ಹೇಳಿದೆ.

‘ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವಿಸದಂತೆ ಎಚ್ಚರಿಕೆ ವಹಿಸುತ್ತೇವೆ. ವಾಡಾ ತನ್ನ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದೆ. ಈ ಕುರಿತು ತನಿಖೆ ನಡೆ ಸಲಾಗುವುದು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊ ಳ್ಳುವ ಅಥ್ಲೀಟ್‌ಗಳು ಸೇರಿದಂತೆ ಎಲ್ಲರ ಮೇಲೆ ಕಣ್ಣಿಡಲಾಗುವುದು’ ಎಂದು ಥಾಮಸ್‌ ಬಾಕ್‌  ತಿಳಿಸಿದ್ದಾರೆ. ಅವರು ಈ ವಿಷಯದ ಕುರಿತು ಚರ್ಚಿಸಲು ವಾಡಾದ ಮುಖ್ಯಸ್ಥ ಕ್ರೆಗ್‌ ರಿಡೀ ಅವರನ್ನು ಭೇಟಿಯಾದರು.

‘ರಿಯೊ ಡಿ ಜನೈರೊ ಒಲಿಂಪಿಕ್ಸ್‌ ಆರಂಭವಾಗಲು ಒಂದು ವರ್ಷವಷ್ಟೇ ಬಾಕಿಯಿದೆ. ಈ ವೇಳೆ ಅಥ್ಲೀಟ್‌ಗಳ ಆತ್ಮ ಸ್ಥೆರ್ಯ ಕುಗ್ಗಿಸುವ ಘಟನೆಗಳು ನಡೆಯ ಬಾರದು. ಪದಕ ಗೆಲ್ಲಬೇಕೆನ್ನುವ ಅವರ ಛಲಕ್ಕೆ ಇಂಥ ವಿಷಯಗಳು ಅಡ್ಡಿಯಾಗ ಬಾರದು’ ಎಂದು ಬಾಕ್‌ ಹೇಳಿದ್ದಾರೆ.

ಕುತೂಹಲ ಮೂಡಿಸಿದ ವಿವಾದ:  ಆಗಸ್ಟ್‌ 22ರಿಂದ 30 ವರೆಗೆ ಬೀಜಿಂಗ್‌ನಲ್ಲಿ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ನಡೆಯ ಲಿದೆ. ಈ ಕ್ರೀಡಾಕೂಟ ಆರಂಭವಾಗಲು ಕೆಲ ದಿನಗಳಷ್ಟೇ ಬಾಕಿ ಇರುವಾಗ  ದತ್ತಾಂಶ ಸೋರಿಕೆ ಯಾಗಿರುವುದು ಕುತೂಹಲ ಮೂಡಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಂತರರಾಷ್ಟ್ರೀಯ ಅಥ್ಲೆಟಿಕ್‌ ಫೆಡರೇಷನ್‌ (ಐಎಎಎಫ್‌) ಅಧ್ಯಕ್ಷ ಲಾಮಿನಿ ಡಿಯಾಕ್‌, ‘ಈ ಘಟನೆ ಕುರಿತು ಪರಿಶೀಲಿಸುತ್ತೇವೆ. ಫೆಡರೇಷನ್‌ ಸಂಪೂರ್ಣ ಹೊಣೆ ಹೊತ್ತುಕೊಳ್ಳುತ್ತದೆ. ಉದ್ದೀಪನ ಮದ್ದು ಸೇವಿಸಿದವರು ಗೆದ್ದ ಪದಕಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಕೆಲವರು ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ವಿಶ್ವ ಅಥ್ಲೆಟಿಕ್ಸ್ ಆರಂಭವಾಗಲು ಕೆಲ ದಿನಗಳಷ್ಟೇ ಬಾಕಿ ಇರುವಾಗ ಘಟನೆ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಆಗಸ್ಟ್‌ 19ರಂದು ಐಎಎಎಫ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಇಂಥ ಮಹತ್ವದ ಸಂದರ್ಭದಲ್ಲಿ ದತ್ತಾಂಶ ಸೋರಿಕೆಯಾಗಿರುವುದು ಅಚ್ಚರಿಯೇ ಸರಿ’ ಎಂದು ಡಿಯಾಕ್‌ ನುಡಿದಿದ್ದಾರೆ.

ನೈರೋಬಿ ವರದಿ: ‘ವಿಶ್ವ ಚಾಂಪಿಯ ನ್‌ಷಿಪ್‌ನಲ್ಲಿ ಹೆಚ್ಚು ಪದಕಗಳನ್ನು ಜಯಿಸಲು ನಮ್ಮ ಅಥ್ಲೀಟ್‌ಗಳು ಕಠಿಣ ಅಭ್ಯಾಸ ನಡೆಸಿದ್ದಾರೆ. ಮಾಧ್ಯಮಗಳ ವರದಿಯಿಂದ ಅಥ್ಲೀಟ್‌ಗಳ ಆತ್ಮಸ್ಥೆರ್ಯ ಕುಂದಿದಂತಾಗಿದೆ’ ಎಂದು ಅಥ್ಲೆಟಿಕ್ಸ್ ಕೆನ್ಯಾ ಆಕ್ರೋಶ ವ್ಯಕ್ತಪಡಿಸಿದೆ. ವಿಶ್ವ ಅಥ್ಲೆಟಿಕ್ಸ್‌ಗೆ ಕೆನ್ಯಾ  47 ಅಥ್ಲೀಟ್‌ಗಳ ತಂಡವನ್ನು ಆಯ್ಕೆ ಮಾಡಿದೆ. 

‘ಅಥ್ಲೀಟ್‌ಗಳು ಉದ್ದೀಪನ ಮದ್ದು ಸೇವಿಸುವುದನ್ನು ನಾವು ಒಪ್ಪುವುದಿಲ್ಲ. ಇದನ್ನೂ ಬೆಂಬಲಿಸುವುದೂ ಇಲ್ಲ. ಅಥ್ಲೆಟಿಕ್ಸ್‌ ವಲಯದಲ್ಲಿ ಸಾಕಷ್ಟು ಹಗರಣಗಳು ನಡೆದಿವೆ. ದೊಡ್ಡ ಹುದ್ದೆಯಲ್ಲಿ ಇರುವವರೂ ತಪ್ಪೆಸಗಿದ್ದಾರೆ. ಅದೆಲ್ಲವನ್ನೂ ಬಿಟ್ಟು ಮಾಧ್ಯಮಗಳು ಅಥ್ಲೀಟ್‌ಗಳ ಧೈರ್ಯಗೆಡಿಸುವ ವಿಷಯವನ್ನು ಪ್ರಸಾರ ಮಾಡಿದ್ದು ಸರಿಯಲ್ಲ. ಅಥ್ಲೆಟಿಕ್ಸ್ ಕೆನ್ಯಾದ ಕಾನೂನು ಪರಿಣತರ ತಂಡ ಪ್ರಸಾರವಾದ ವಿಡಿಯೊ ದೃಶ್ಯಗಳನ್ನು ನೋಡಿ ಅಧ್ಯಯನ ಮಾಡಲಿದೆ. ವಾಹಿನಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’
ಎಂದು ಅಥ್ಲೆಟಿಕ್ಸ್ ಕೆನ್ಯಾ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಆರಂಭಕ್ಕೆ ಕೆಲ ದಿನಗಳಿರುವಾಗ ವರದಿ ಬಹಿರಂಗ ಮಾಡಿದ ಮಾಧ್ಯಮಗಳ ವಿರುದ್ಧ ಆಲ್‌ ರಷ್ಯಾ ಅಥ್ಲೆಟಿಕ್‌ ಫೆಡ ರೇಷನ್‌ ಕೂಡಾ ಆಕ್ರೋಶ ವ್ಯಕ್ತಪಡಿಸಿದೆ. ಮೊಕದ್ದಮೆ ದಾಖಲಿಸಲಾಗುವುದು ಎಂದು ರಷ್ಯಾದ ಕ್ರೀಡಾ ಸಚಿವ ವಿಟಾಲ್‌ ಮುಟ್ಕೊ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ಅಥ್ಲೀಟ್‌ಗಳೇ ಹೆಚ್ಚು ಮದ್ದು ಸೇವನೆ ವಿವಾದದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಸೋರಿಕೆಯಿಂದ ಬಹಿ ರಂಗವಾಗಿತ್ತು.  ಈ ಕುರಿತು ಐಎಎಎಫ್‌ ಚುರುಕಾಗಿ ತನಿಖೆ ನಡೆಸಬೇಕು ಎಂದು ವಿವಿಧ ಅಥ್ಲೆಟಿಕ್‌ ಫೆಡರೇಷನ್‌ಗಳು ಒತ್ತಾಯಿಸಿವೆ.

ಒಲಿಂಪಿಕ್ಸ್‌ಆತಿಥ್ಯಕ್ಕೆ ಕಸರತ್ತು
2024ರ ಒಲಿಂಪಿಕ್ಸ್‌ಗೆ ಆತಿಥ್ಯ ಪಡೆಯಲು ಬಿಡ್‌ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು ಹಲವು ರಾಷ್ಟ್ರಗಳು ಸ್ಪರ್ಧೆಯಲ್ಲಿವೆ. ಪ್ಯಾರಿಸ್‌, ರೋಮ್‌, ಹ್ಯಾಂಬರ್ಗ್‌, ಜರ್ಮನಿ, ಹಂಗರಿ ಮತ್ತು ಬುಡಾಪೆಸ್ಟ್‌ ಬಿಡ್‌ ಸಲ್ಲಿಸಿವೆ.  ಸಾರ್ವಜನಿಕರ ಬೆಂಬಲ ಲಭಿಸದ ಕಾರಣ ಹೋದ ವಾರ ಬಾಸ್ಟನ್‌ ಬಿಡ್ ಸಲ್ಲಿಸುವ ಕೆಲಸದಿಂದ ಹಿಂದೆ ಸರಿದಿತ್ತು. ಅಮೆರಿಕ ಒಲಿಂಪಿಕ್‌ ಸಮಿತಿ ಬಿಡ್‌ ಸಲ್ಲಿಸಲು ಯೋಚಿಸುತ್ತಿದೆ. 2017ರಲ್ಲಿ ಪೆರುವಿನಲ್ಲಿ ನಡೆಯಲಿರುವ 130ನೇ ವರ್ಷದ ಸಭೆಯಲ್ಲಿ ಒಲಿಂಪಿಕ್‌ ಆತಿಥ್ಯ ಯಾರಿಗೆ ನೀಡಬೇಕೆಂದು ಐಒಸಿ ನಿರ್ಧರಿಸಲಿದೆ.
****
ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಹಾಗೂ ಐಎಎಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಇರುವಾಗ ಈ ಘಟನೆ ಬಹಿರಂಗ ವಾಗಿರುವುದು ಅಚ್ಚರಿಯಲ್ಲವೇ?
-
ಲಾಮಿನಿ ಡಿಯಾಕ್‌, ಐಎಎಎಫ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT