ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಖರ್ಚಿನ ಸಿರೋಹಿ ಸಾಕಣೆ

Last Updated 29 ಜೂನ್ 2015, 19:30 IST
ಅಕ್ಷರ ಗಾತ್ರ

ಆಡು ಸಾಕಿ ಲಾಭ ಗಳಿಸಬೇಕೆಂಬ ಆಸೆ ಹಲವರಿಗೆ. ಆದರೆ ಯಾವ ತಳಿಯ ಆಡು ಹೆಚ್ಚು ಲಾಭದಾಯಕ ಎನ್ನುವ ಅರಿವು ಇರುವುದಿಲ್ಲ ಜೊತೆಗೆ ಆಡಿನ ಸಾಕಣೆಯಲ್ಲಿ ಖರ್ಚು ಕೂಡ ಅಧಿಕ ಎನ್ನುವುದು ಹಲವರ ಅಂಬೋಣ.

ಇಂಥ ಯೋಚನೆಯಲ್ಲಿ ಇರುವವರಿಗೆ  ವರದಾನ ಸಿರೋಹಿ ಆಡಿನ ತಳಿ. ನಮ್ಮ ರಾಜ್ಯದಲ್ಲಿ ಬಹುತೇಕ ರೈತರಿಗೆ ಇದರ ಪರಿಚಯವೇ ಇಲ್ಲ. ಅಲ್ಲೊಂದು ಇಲ್ಲೊಂದು ರೈತರು ಮಾತ್ರ ಇದರ ಸಾಕಣೆ ಮಾಡುತ್ತಿದ್ದಾರೆ. ಬೇರೆ ಜಾನುವಾರುಗಳಿಗೆ ಹೋಲಿಸಿದರೆ ಸಿರೋಹಿ ತಳಿಯ ಆಡು ಸಾಕಣೆಯ ಖರ್ಚು ತೀರಾ ಕಡಿಮೆ, ಆದರೆ ಹಾಲು ಮತ್ತು ಮಾಂಸದ ದೃಷ್ಟಿಯಿಂದ ತುಂಬ ಲಾಭ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕಿನ ಪಣಕಜೆಯ ಸುಬ್ರಹ್ಮಣ್ಯ ಭಟ್ಟರ ಅನಿಸಿಕೆ. ಒಂದು ವರ್ಷದಿಂದ ಈ ತಳಿಯ ಜೋಡಿ ಆಡುಗಳನ್ನು ಅವರು ಸಾಕುತ್ತಿದ್ದಾರೆ.

ಸಿರೋಹಿ ಮೂಲತಃ ರಾಜಸ್ಥಾನದಲ್ಲಿ ಅಭಿವೃದ್ಧಿ ಮಾಡಿದ ತಳಿ. ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಕೊಂಚ ವ್ಯತ್ಯಾಸವಿರುವ ಅದರ ಹತ್ತಕ್ಕಿಂತ ಅಧಿಕ ಜಾತಿಗಳು ಹರಡಿಕೊಂಡಿವೆ. ಇದರ ಸಾಕಣೆ ಕಳಪೆಯಾದಾಗಲೂ ಸಾಕಿದವನಿಗೆ ಅದರಿಂದ ನಷ್ಟವಾಗುವುದಿಲ್ಲ. ಹವಾಮಾನದ ಪ್ರತಿಕೂಲ ಪರಿಸ್ಥಿತಿಯನ್ನೂ ಎದುರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಿರೋಹಿ ತಳಿಗೆ ಹೆಚ್ಚು ಅಂಕಗಳನ್ನು ಕೊಡಲಾಗಿದೆ.

ಚಿಕ್ಕ ಬಾಲ, ಕಂದು ವರ್ಣದ ತುಪ್ಪಳ, ಅದರ ಮೇಲೆ ದಟ್ಟ ಕಂದು ಬಣ್ಣದ ಮಚ್ಚೆಗಳ ಮೂಲಕ ಈ ತಳಿ ತನ್ನ ಪ್ರತ್ಯೇಕತೆಯನ್ನು ತೋರಿಸಿಕೊಳ್ಳುತ್ತದೆ. ಸಿಲಿಂಡರ್ ಆಕಾರದ ಮೈ ಹೊಂದಿರುವ ಇದು 65 ಸೆ.ಮೀ. ತನಕ ಉದ್ದ ಬೆಳೆಯುತ್ತದೆ. ಎದೆಯ ಸುತ್ತಳತೆ 72 ಸೆ.ಮೀ. ಇರುತ್ತದೆ. ಸಾಮಾನ್ಯವಾಗಿ ಒಂದು ವರ್ಷ ವಯಸ್ಸಿನ ಹೋತದ ತೂಕ 35 ಕಿಲೋ ಇರುವುದಾದರೆ ಉತ್ತಮ ಸಾಕಣೆಯಿರುವ ಭಟ್ಟರ ಹೋತ ಒಂದೇ ವರ್ಷದಲ್ಲಿ 50 ಕಿಲೋ ತೂಕ ಹೊಂದಿದೆ. ಸದ್ಯದ ಮಾರುಕಟ್ಟೆ ಬೆಲೆ 20 ಸಾವಿರ ರೂಪಾಯಿಗಳು.

‘ಈ ಆಡುಗಳನ್ನು ತೂಕ ಮಾಡಿ ಕಿಲೋ ಲೆಕ್ಕಾಚಾರದಲ್ಲಿ ಮಾರಾಟ ಮಾಡಲಾಗುತ್ತದೆ’ ಎನ್ನುತ್ತಾರೆ ಭಟ್ಟರು. ಅವರು ತಂದ ಜೋಡಿ ಆಡುಗಳಿಗೆ 19 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಆಗ ಕಿಲೋಗೆ 350 ರೂಪಾಯಿ ಲೆಕ್ಕ ಹಾಕಲಾಗಿತ್ತು. ಈ ವರ್ಷ ಒಂದು ಕಿಲೋಗೆ 500 ರೂಪಾಯಿ ಬೆಲೆ ಇದೆ ಎನ್ನುತ್ತಾರೆ ಅವರು.

ಸೊಪ್ಪು, ಪೊದೆ, ಅಡುಗೆ ತ್ಯಾಜ್ಯಗಳನ್ನು ಕೂಡ ತಿನ್ನಿಸಿ ಇದನ್ನು ಸುಲಭವಾಗಿ ಸಾಕಬಹುದಾದರೂ ಭಟ್ಟರು ನಾಟಿ ಮಾಡಿದ ಹೈಬ್ರಿಡ್ ಹುಲ್ಲು ಮಾತ್ರ ತಿನ್ನಿಸಿದ್ದಾರೆ. ದಿನಕ್ಕೆ ಮೂರೂವರೆ ಕಿಲೋ ಹಸಿರು ಮೇವು ಬೇಕು. 300ಗ್ರಾಂ ಪ್ರಮಾಣದ ಖನಿಜ ಸತ್ವಗಳಿರುವ ಆಹಾರ ಕೊಡಬೇಕಾಗುತ್ತದೆ. ಭಟ್ಟರು ಶೇಂಗಾ ಹುಡಿ, ಜೋಳದ ಹುಡಿ, ಕಡಲೆ ಸಿಪ್ಪೆಗಳ ಮಿಶ್ರಣವನ್ನು ನೀಡಿದ್ದಾರೆ. ಹೆಣ್ಣು ಆಡು ಎಂಟು ತಿಂಗಳಲ್ಲಿ ಬೆದೆಗೆ ಬಂದಿದೆ. ಗರ್ಭಾವಸ್ಥೆ 143ರಿಂದ 150 ದಿನಗಳು.

ವರ್ಷಕ್ಕೆರಡು ಸಲ ಮರಿ ಹಾಕುತ್ತವೆ. ಈ ಜಾತಿಯ ಆಡು ಹೆಚ್ಚಿನ ಸಂದರ್ಭಗಳಲ್ಲಿ ಎರಡು ಮರಿಗಳನ್ನು ಹಾಕುತ್ತವೆ. ಮೈಯಲ್ಲಿ ಕೂದಲು ಒರಟಾಗಿದ್ದು ವರ್ಷದಲ್ಲಿ ಎರಡು ಸೆ.ಮೀ. ಉದ್ದ ಬೆಳೆಯುತ್ತದೆ. ನೀಳವಾದ ಕಿವಿಗಳು ಇದರ  ವೈಶಿಷ್ಟ್ಯ. ವಕ್ರವಾದ ಚಿಕ್ಕ ಕೋಡುಗಳಿರುತ್ತವೆ.

ಸಿರೋಹಿ ಆಡು 3 ತಿಂಗಳವರೆಗೆ ದಿನಕ್ಕೆ 3 ಕಿಲೋ ಪ್ರಮಾಣದಲ್ಲಿ ಹಾಲು ಕೊಡುತ್ತದೆ. ಹಾಲು  ತುಂಬ ಸ್ವಾದಿಷ್ಟವಾಗಿದೆ. ಸಾಮಾನ್ಯವಾಗಿ ಮೇಕೆ ಹಾಲಿಗಿರುವ ಘಾಟು ವಾಸನೆ ಇದಕ್ಕಿರುವುದಿಲ್ಲ. ಭಟ್ಟರು ವಾರಕ್ಕೆ ಒಮ್ಮೆ ಪಪ್ಪಾಯ ಎಲೆಗಳ ರಸವನ್ನು ಕುಡಿಸುತ್ತಾರೆ.

ಈ ರಸದಲ್ಲಿ ರೋಗನಿರೋಧಕ ಅಂಶವಿದೆ ಎಂಬುದು ಅವರ ಸಲಹೆ. ಈ ಆಡುಗಳಿಗೆ ಜ್ವರ ಬರುವುದುಂಟು. ಆಗ ಅಮೃತಬಳ್ಳಿಯ ರಸ, ನೊರೆಕ್ಕಾಯಿ ರಸ, ಅರಿಶಿಣ, ತುಳಸಿ ಎಲೆಗಳ ಕಷಾಯ ಇವೆಲ್ಲ ಜ್ವರ ನಿವಾರಣೆಗೆ ಹೆಚ್ಚು ಸಹಾಯಕವೆಂಬುದನ್ನೂ ಕಂಡುಕೊಂಡಿದ್ದಾರೆ. ಆಡುಗಳಿಗೆ ಸುಲಭ ಖರ್ಚಿನಲ್ಲಿ ಭಟ್ಟರು ಸ್ವತಃ ಗೂಡುಗಳನ್ನು ತಯಾರಿಸಿದ್ದಾರೆ. ಅಡಿಕೆ ಮರದ ದಬ್ಬೆಗಳಿಂದ ಈ ಆಡುಗಳ ಮನೆ ಸಿದ್ಧವಾಗಿದೆ. ತಳಭಾಗದಲ್ಲಿಯೂ ದಬ್ಬೆಗಳನ್ನು ಜೋಡಿಸಿದ್ದಾರೆ.  ಈ ದಬ್ಬೆಗಳ ನಡುವೆ ಹೆಚ್ಚು ಸ್ಥಳಾವಕಾಶವಿರಬಾರದೆಂದು ಎಚ್ಚರಿಸುತ್ತಾರೆ.

ಹಿಕ್ಕೆಗಳು ಕೆಳಗೆ ಬೀಳಲು ಮಾತ್ರ ಅನುಕೂಲವಾಗುವಂತೆ ದಬ್ಬೆಗಳ ರಚನೆ ಮಾಡಬೇಕು. ಆದರೆ ಎರಡು ದಬ್ಬೆಗಳ ನಡುವೆ ಅಗಲ ಹೆಚ್ಚಿದ್ದರೆ ಅದರಲ್ಲಿ ಮರಿಗಳ ಗೊರಸುಗಳು ಸಿಲುಕಿಕೊಂಡು ತೊಂದರೆಯಾಗುತ್ತದೆ. ಕೆಳಗೆ ಬಿದ್ದ ಹಿಕ್ಕೆಗಳು ಕೃಷಿಗೆ ಅತ್ಯುತ್ತಮ ಗೊಬ್ಬರವಾಗುತ್ತವೆ.

ಸಣ್ಣ ರೈತರಿಗೆ ಉಪ ಕಸುಬಾಗಿ ಸಿರೋಹಿ ಆಡುಗಳ ಸಾಕಣೆ ತುಂಬ ಸೂಕ್ತವಾಗಿದೆಯೆಂದು ಹೇಳುತ್ತಾರೆ. ಭಟ್ಟರ ಪ್ರಾಯೋಗಿಕ ಸಾಕಣೆಯಲ್ಲಿ ಈಗ ಮರಿಗಳು ಲಭ್ಯವಿಲ್ಲ. ಆದರೆ ಈ ಕುರಿತು ಮಾಹಿತಿಗೆ– (ರಾತ್ರಿ 8-9) ದೂರವಾಣಿ 9481318264.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT