ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಕಟ್ಟಿ ಹೇರ್‌ಕಟ್!

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಖ್ಯಾತ ಕೇಶ ವಿನ್ಯಾಸಕ ಹರೀಶ್‌ ಭಾಟಿಯಾ ಅವರ ಕೈಯಲ್ಲಿ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಖುಷಿಯಿಂದ ಕಾಯುತ್ತಿದ್ದ ಯುವತಿಗೆ ಆಶ್ಚರ್ಯ ಕಾದಿತ್ತು. ಹರೀಶ್‌ ಅವರು ಸ್ಟೇಜ್‌ ಮೇಲೆ ಬರುತ್ತಿದ್ದಂತೆ ಆಕೆಯ ಮುಖದಲ್ಲಿ ಮಂದಹಾಸ. ಆದರೆ ಹರೀಶ್‌ ಆಕೆಯ ಕೇಶವನ್ನು ನೋಡಿ ನಂತರ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕತ್ತರಿ ಹಿಡಿಯುತ್ತಿದ್ದಂತೆ ಆಕೆಯ ಮುಖದಲ್ಲಿದ್ದ ಮಂದಹಾಸ ಮಾಯವಾಗಿ ಒಂದು ರೀತಿಯ  ಗಾಬರಿ ಮೂಡಿತು. ಯಾವಾಗ ಹೇರ್‌ಕಟ್‌ ಮುಗಿದು ತನ್ನ ಕೂದಲನ್ನು ನೋಡಿಕೊಳ್ಳುತ್ತೇನೋ ಎಂಬ ತವಕ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಹರೀಶ್ ತಮ್ಮ ಪಾಕೆಟ್‌ನಲ್ಲಿ ಇಟ್ಟುಕೊಂಡಿದ್ದ ನಾನಾ ರೀತಿಯ ಕತ್ತರಿಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಆಕೆಯ ಕೂದಲಿಗೆ ಹೊಸ ಸ್ವರೂಪ ಕೊಟ್ಟೇಬಿಟ್ಟರು. ಅದನ್ನು ನೋಡಿದ ಆಕೆ ಒಂದು ಕ್ಷಣ ಮೌನವಾಗಿ ನಿಂತುಬಿಟ್ಟಳು. ನಂತರ ಸಂತೋಷದಿಂದ ಹರೀಶ್‌ ಅವರ ಕೈ ಕುಲುಕಿದರು.    

ಹರೀಶ್‌ ಪಡೆದದ್ದು ಪ್ರಾಥಮಿಕ ಶಿಕ್ಷಣವಷ್ಟೇ ಆದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.  ಬಾಲಿವುಡ್ ತಾರೆಗಳಿಗೆ ಕೇಶ ವಿನ್ಯಾಸಕರಾಗಿ ಬಹುಕಾಲ ಕಾರ್ಯನಿರ್ವಹಿಸಿದ್ದ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಯಾವ ರೀತಿಯ ಹೇರ್‌ ಸ್ಟೈಲನ್ನು ಬೇಕಾದರೂ ಸರಾಗವಾಗಿ ಮಾಡಿ ಮುಗಿಸುತ್ತಾರೆ.

ಇವರು ಗಾಜಿನ ಚೂರು ಮತ್ತು ಮೇಣದ ಬತ್ತಿಯ ಬೆಂಕಿಯಿಂದ ಹೇರ್‌ ಕಟ್‌ ಮಾಡುತ್ತಾರೆ. ಇಷ್ಟೇ ಅಲ್ಲದೆ ಏಕಕಾಲದಲ್ಲಿ ಎಂಟು ಕತ್ತರಿಗಳನ್ನು ಬಳಸಿ ಬೇರೆಯವರಿಗೆ ಹೇರ್‌ಸ್ಟೈಲ್‌ ಮಾಡುವುದರ ಜತೆಗೆ ಸ್ವತಃ ತಾವೂ ಹೇರ್‌ಕಟ್‌ ಮಾಡಿಕೊಳ್ಳಬಲ್ಲರು. ಇಂತಹ ಅಪರೂಪದ ಕಲೆಯನ್ನು ಕರಗತಗೊಳಿಸಿಕೊಂಡಿರುವ ವಿಶೇಷ ವ್ಯಕ್ತಿ ‘ಅರ್ಥ್‌ ಥೆರಪಿ ದ ನೇಚರ್ಸ್‌ ಕಾನ್ಸೆಪ್ಟ್‌ ಮತ್ತು ಬಜಂತ್ರಿ ಕ್ರೆಡಿಟ್‌ ಕೋ–ಆಪರೇಟೀವ್‌ ಸೊಸೈಟಿ‘ ಜಂಟಿಯಾಗಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ‘ಬ್ಯೂಟಿ ಅಂಡ್‌ ಮೇಕಪ್‌ ತರಬೇತಿ’ ಕಾರ್ಯಾಗಾರಕ್ಕೆ ಬಂದಿದ್ದರು.

ರಾಜಸ್ತಾನದ ಬಡ ಕ್ಷೌರಿಕರ ಕುಟುಂಬದ ಹರೀಶ್‌ ಮೂರನೇ ತರಗತಿಯಲ್ಲಿ ಫೇಲಾಗಿದ್ದರು. ಆಗ ಅವರ ತಂದೆ, ‘ನಿಧಾನವಾಗಿ ಓದಬಹುದು, ಮೊದಲು ಕೆಲಸ ಕಲಿ’ ಎಂದು ಹರೀಶ್‌ ಅವರ ಕೈಗೆ ಕತ್ತರಿ ಕೊಟ್ಟು ಕೇಶವಿನ್ಯಾಸ ಮಾಡುವುದನ್ನು ಕಲಿಸಿದರು. ನಂತರ ಕೆಲಸ ಮಾಡುತ್ತಲೇ ಕೆಲಕಾಲ ವಿದ್ಯಾಭ್ಯಾಸ ಮುಂದುವರೆಸಿದ ಹರೀಶ್‌, ಓದಿನಲ್ಲಿ ಆಸಕ್ತಿ ಕಳೆದುಕೊಂಡು, ಫುಲ್‌ಟೈಮ್‌ ಕೇಶ ವಿನ್ಯಾಸಕರಾದರು. ಆ ವಿಷಯದಲ್ಲಿಯೇ ಸ್ನಾತಕೋತ್ತರ ಪದವಿ ಪಡೆದರು.

ಸ್ನೇಹಿತರ ಸಲಹೆಯಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೇರ್‌ಕಟ್‌ ಮಾಡುವ ಸವಾಲಿಗೆ ಹರೀಶ್‌ ಒಡ್ಡಿಕೊಂಡದ್ದು. ‘ಉದ್ದ ಕೂದಲಿದ್ದ ಬ್ರಾಹ್ಮಣ ಸ್ನೇಹಿತನ ಕೂದಲಿಗೆ 1985ರಲ್ಲಿ ಮೊದಲ ಬಾರಿಗೆ ಕತ್ತರಿ ಪ್ರಯೋಗ ಮಾಡಿದೆ. ಮರುದಿನ ಆ ಸ್ನೇಹಿತನ ಕೇಶ ಮುಂಡನ ಶಾಸ್ತ್ರವಿದ್ದ ಕಾರಣ ಆತನೂ ಒಪ್ಪಿಗೆ ನೀಡಿದ್ದ. ಆತನ ಉದ್ದವಾದ ಕಪ್ಪು ಕೂದಲು ಸಂಪೂರ್ಣವಾಗಿ ಚಿಕ್ಕದಾಗುವವರೆಗೂ ಎಲ್ಲ ರೀತಿಯ ವಿನ್ಯಾಸಗಳನ್ನು ಪರೀಕ್ಷೆ ಮಾಡಿದೆ. ಅಂದಿನಿಂದ ಯಾವುದೇ ಭಯ, ಆತಂಕವಿಲ್ಲದೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಯಾರಿಗೆ ಬೇಕಾದರೂ ಹೇರ್‌ಕಟ್‌ ಮಾಡುತ್ತೇನೆ’ ಎನ್ನುತ್ತಾರೆ 61ರ ಹರೆಯದ ಹರೀಶ್‌.

ಗುಜರಾತ್ ಹಾಗೂ ಪಂಜಾಬ್‌ನಲ್ಲಿ ಕೆಲ ಸಮುದಾಯದವರು ಕೂದಲಿಗೆ ಕತ್ತರಿ ಹಾಕುವುದಿಲ್ಲ. ಅವರಿಗಾಗಿ ಗಾಜಿನ ಚೂರು ಮತ್ತು ಮೇಣದಬತ್ತಿಯ ಬೆಂಕಿಯಿಂದ ಹೇರ್‌ಕಟ್‌ ಮಾಡುತ್ತಾರೆ. ಇಂತಹ ಗ್ರಾಹಕರು ಇವರಿಗಾಗಿಯೇ ಹುಡುಕುತ್ತಾ ಬರುತ್ತಾರೆ.

‘ರಾಜಸ್ತಾನದಿಂದ ಮುಂಬೈಗೆ ಬಂದಾಗ ಎರಡು ಬಾರಿ ಮೋಸ ಹೋದೆ. ನಂತರ ಕಷ್ಟಪಟ್ಟು ಒಂದು ಸಲೂನ್‌ನಲ್ಲಿ ಕೆಲಸ ಪ್ರಾರಂಭಿಸಿ, ಅದನ್ನೇ ಖರೀದಿಸಿದೆ. ಇಲ್ಲಿಂದ ನನ್ನ ಪಯಣ ಪ್ರಾರಂಭವಾಯಿತು. ಕಷ್ಟಪಟ್ಟು ಮಾರುಕಟ್ಟೆಗೆ ಬರುವ ಹೊಸ ಹೊಸ ಟ್ರೆಂಡ್‌ಗಳಿಗೆ ಅಪ್‌ಡೇಟ್‌ ಆಗುತ್ತಾ ನನ್ನದೇ ಆದ ಹೊಸ ವಿನ್ಯಾಸಗಳನ್ನು ಪರಿಚಯಿಸುತ್ತಾ ಇದ್ದೇನೆ. ಇಂದಿಗೂ ಯಾವ ದೇಶದಲ್ಲಾದರೂ ತರಬೇತಿ ಅಥವಾ ಕಾರ್ಯಾಗಾರಗಳು ನಡೆದರೆ ಅದರಲ್ಲಿ ಭಾಗವಹಿಸುತ್ತೇನೆ. ವಯಸ್ಸು ಎಷ್ಟೇ ಆದರೂ ಕಲಿಕೆ ಮಾತ್ರ ನಿರಂತರ’ ಎನ್ನುವುದು ಹರೀಶ್‌ ಅವರ ಅಭಿಪ್ರಾಯ.

ಲಂಡನ್‌, ಜರ್ಮನಿ, ದುಬೈನಲ್ಲಿ ಹಲವಾರು ಪ್ರದರ್ಶನ ನೀಡಿರುವ ಹರೀಶ್‌ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಒಮ್ಮೆ ಜೋಧ್‌ಪುರದ ಜನರು ಹರೀಶ್‌ ಅವರ ಸಾಧನೆಗೆ ಮನಸೋತು, ಬೆಳ್ಳಿನಾಣ್ಯಗಳ ತಲಾಭಾರ ಮಾಡಿ, ಬಡವರಿಗೆ ಹಂಚಿದ್ದನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

ಸಿನಿಮಾ ಜಗತ್ತಿನೊಂದಿಗಿನ ನಂಟು
ನಟ ಕಮಲ್‌ ಹಾಸನ್ ಅವರೊಂದಿಗೆ ಎರಡು ವರ್ಷ ಕೆಲಸ ಮಾಡಿದ ಅನುಭವ ಇವರಿಗಿದೆ. ಕಮಲ್‌ ಚಿತ್ರವೊಂದಕ್ಕೆ ಅವರು ಮೇಕ್‌ಓವರ್‌ ಮಾಡಿದ್ದರು. ಬಾಲಿವುಡ್‌ನಲ್ಲಿ ಕರಿಷ್ಮಾ ಕಪೂರ್‌, ಕಮಲ್‌ ಹಾಸನ್‌, ಮುಖೇಶ್‌ ಖನ್ನಾ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿರುವ ಹರೀಶ್‌, ಈಗ ಬಾಲಿವುಡ್‌ನ ತಂಟೆಯೇ ಬೇಡ ಎನ್ನುತ್ತಾರೆ.

‘ಬಾಲಿವುಡ್‌ನಲ್ಲಿ ಬೇಕಾದಷ್ಟು ಕೆಲಸ ಸಿಗುತ್ತದೆ. ಆದರೆ ಸಮಯಕ್ಕೆ ಸರಿಯಾಗಿ ಹಣ ಸಿಗುವುದಿಲ್ಲ. ಜತೆಗೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ’ ಎನ್ನುವ ಅವರು ಸದ್ಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಯುವಕರಿಗೆ ಪರಿಚಯಿಸುವುದನ್ನು ಧ್ಯೇಯವನ್ನಾಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT