ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಗಾವಲಿನ ರೆಡ್‌ಐ ಆ್ಯಪ್...

Last Updated 28 ಜೂನ್ 2016, 19:30 IST
ಅಕ್ಷರ ಗಾತ್ರ

ಜಗತ್ತಿನಲ್ಲಿಂದು ತಂತ್ರಜ್ಞಾನ ಉತ್ತುಂಗದ ಶಿಖರದಲ್ಲಿದೆ. ಮನುಷ್ಯನ ದೈನಂದಿನ ಬದುಕನ್ನು ನಿಯಂತ್ರಿಸುವ ಮಟ್ಟಕ್ಕೆ ತಂತ್ರಜ್ಞಾನ ಬೆಳೆದಿದೆ.

ಇಂದು ಮನುಷ್ಯರು ಮಾಡುವ ಶೇ 80 ರಷ್ಟು ದೈಹಿಕ ಕೆಲಸಗಳನ್ನು ತಂತ್ರಜ್ಞಾನ ಹಾಗೂ ಆ್ಯಪ್ ಆಧಾರಿತ ಸಾಧನಗಳು ಮಾಡುತ್ತಿವೆ. ಇದೀಗ ಆಪ್ತ ಸಹಾಯಕರು ಮಾಡುವ ಕೆಲಸಗಳನ್ನು ಕೂಡ ಆ್ಯಪ್‌ಗಳು ನಿರ್ವಹಿಸಬಲ್ಲವು!?

ಅಮೆರಿಕದ ರೈಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ರೆಡ್‌ಐ ಎಂಬ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದು ಇದು ಆಪ್ತ ಸಹಾಯಕರು ಮಾಡುವಂತಹ ಕೆಲಸಗಳನ್ನು ಯಶಸ್ವಿಯಾಗಿ ಮಾಡಬಲ್ಲದು. ರೆಡ್‌ಐ ಆ್ಯಪ್‌ ಅನ್ನು ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಅಳವಡಿಸಿಕೊಂಡರೆ ನಮ್ಮ ಸುತ್ತಲಿನ ಹಾಗುಹೋಗುಗಳ ಬಗ್ಗೆ ನಿರ್ದೇಶನ ಮಾಡಬಲ್ಲದು.

ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಬಳಸದವರಿಗಾಗಿ ಎರಡು ರೂಪಾಯಿ ಗಾತ್ರದ ರೆಡ್‌ಐ ಸಾಧನವನ್ನು ರೂಪಿಸಲಾಗಿದೆ. ಈ ಸಾಧನವನ್ನು ಮೈಕ್ರೊ ಫೋನ್‌ನಂತೆ ನಾವು ಧರಿಸುವ ಬಟ್ಟೆಯಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದು. ಎಲ್‌ಸಿಡಿ ಪರದೆಯನ್ನು ಹೊಂದಿರುವ ಈ ಸಾಧನ ಸ್ಮಾರ್ಟ್‌ಫೋನಿನಂತೆ ಕೆಲಸ ಮಾಡುತ್ತದೆ ಎನ್ನುತ್ತಾರೆ ರೈಸ್ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಲೀನ್ ಝೋಂಗ್.

ರೆಡ್‌ಐನ ಕಾರ್ಯವೈಖರಿ
ಗ್ರಾಹಕರು ಮೊದಲು ತಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ಗೆ ರೆಡ್‌ಐ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ತಮ್ಮ ದೈನಂದಿನ ಕೆಲಸಗಳ ಬಗ್ಗೆ ವೇಳೆ ಸಹಿತ ಮಾಹಿತಿಯನ್ನು ಅಪ್‌ಲೋಡ್ ಮಾಡಿದರೆ ಸಾಕು.

ನಿಗದಿತ ಸಮಯಕ್ಕೆ ಈ ಆ್ಯಪ್‌ ಅಲರಾಂ ಗಡಿಯಾರದಂತೆ ನಮ್ಮನ್ನು ಜಾಗೃತಗೊಳಿಸುತ್ತದೆ. ಉದಾಹರಣೆಗೆ ಬೆಳಗ್ಗೆ 9 ಗಂಟೆಗೆ ತಿಂಡಿ, ಮಧ್ಯಾಹ್ನ 2 ಗಂಟೆಗೆ ಊಟ, ಸಂಜೆ 4 ಗಂಟೆಗೆ ಅತಿಥಿಗಳ ಭೇಟಿ ಎಂಬ ಮಾಹಿತಿಯನ್ನು ಆಪ್‌ನಲ್ಲಿ ಟೈಪಿಸಿ ಸೇವ್  ಮಾಡಿದರೆ ಅದು 9 ಗಂಟೆಗೆ ಸರಿಯಾಗಿ ತಿಂಡಿಗೆ, ಸಂಜೆ 4 ಗಂಟೆಗೆ ಅತಿಥಿಗಳು ಬರುವ ಸಮಯವಾಯಿತು ಎಂದು ಎಚ್ಚರಿಸುತ್ತದೆ. ಸದಾ ಕೆಲಸದಲ್ಲೇ ಮುಳುಗಿರುವವರಿಗೆ, ವ್ಯಾಪಾರಸ್ಥರಿಗೆ ಈ ಆ್ಯಪ್‌ ಬಹು ಉಪಯುಕ್ತವಾಗಿದೆ.

ಆಪ್ತ ಸಹಾಯಕರನ್ನು ನೇಮಿಸಿಕೊಳ್ಳುವುದು, ಅವರು ಸಕಾಲದಲ್ಲಿ ಕೆಲಸ ಮಾಡದಿದ್ದರೆ ಅವರ ಮೇಲೆ ರೇಗುವಂತಹ ಸನ್ನಿವೇಶಗಳು ಎದುರಾಗುತ್ತವೆ. ಇಂತಹ ಕಿರಿಕಿರಿ ತಪ್ಪಿಸುವ ಸಲುವಾಗಿಯೇ ಈ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ ಬಳಸುವುದರಿಂದ ಆಪ್ತ ಸಹಾಯಕರಿಗೆ ನೀಡುವ ವೇತನವನ್ನು ಉಳಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು.

ವಿಡಿಯೊ ಕಣ್ಗಾಲು
ಈ ಆ್ಯಪ್‌ ಎಚ್ಚರಿಸುವಂತಹ ನಿರ್ದೇಶನ ನೀಡುವುದರ ಜತೆಯಲ್ಲೇ ಕಣ್ಗಾವಲಿನಂತೆಯೂ ಕೆಲಸ ಮಾಡುತ್ತದೆ. ಉದಾಹರಣೆಗೆ ಕಚೇರಿಯಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ನಾವು ಎಲ್ಲಿ ಬೇಕಾದರಲ್ಲಿ ನೋಡಬಹುದು. ಅದಕ್ಕಾಗಿ ಈ ಆ್ಯಪ್‌ ಅನ್ನು ಸಿಸಿ ಟಿವಿ ಕ್ಯಾಮೆರಾಗೆ ಸಿಂಕ್ ಮಾಡಬೇಕು ಅಷ್ಟೇ!

ಉದಾಹರಣೆಗೆ ಕಂಪೆನಿಯ ವ್ಯವಸ್ಥಾಪಕರೊಬ್ಬರು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ ಎಂದು ತಿಳಿದುಕೊಳ್ಳಿ, ಅವರು ಅಮೆರಿಕದಲ್ಲೇ ಕುಳಿತುಕೊಂಡು ಇಲ್ಲಿನ ಕಚೇರಿಯಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ವೀಕ್ಷಿಸಬಹುದು. ಅಂದರೆ ಯಾರ್‍ಯಾರು  ಹೇಗೆ ಕೆಲಸ ಮಾಡುತ್ತಿದ್ದಾರೆ, ಕಚೇರಿಗೆ ಯಾರು ಭೇಟಿ ನೀಡಿದ್ದಾರೆ ಎಂಬುದನ್ನು ಬೆರಳ ತುದಿಯಲ್ಲೇ ವೀಕ್ಷಿಸಬಹುದು.

ರೈಸ್ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಯಶಸ್ವಿ ಪ್ರಯೋಗ ಕಂಡಿರುವ ಈ ಆ್ಯಪ್‌ನ ಪೇಟೆಂಟ್ ವಿಶ್ವವಿದ್ಯಾಲಯದ ಬಳಿ ಇದೆ.  ಮುಂದಿನ ದಿನಗಳಲ್ಲಿ ಇದನ್ನು ಬಹುರಾಷ್ಟ್ರೀಯ ಕಂಪೆನಿಯೊಂದಕ್ಕೆ ಮಾರಾಟ ಮಾಡುವುದಾಗಿ ಲೀನ್ ಝೋಂಗ್ ಹೇಳುತ್ತಾರೆ. ಇದೇ ವಿಶ್ವವಿದ್ಯಾಲಯದ ಹಿರಿಯ ಅಧ್ಯಾಪಕರಾದ ಲಿಕ್ ಮಾ ವಾ ಅವರು, ಒಂದೆರಡು ವರ್ಷಗಳಲ್ಲಿ ಈ ರೆಡ್‌ಐ ಆ್ಯಪ್‌ ಮಾರುಕಟ್ಟೆ ಪ್ರವೇಶಿಸಿ ತಂತ್ರಜ್ಞಾನದಲ್ಲಿ ಹೊಸ ಕಾಂತ್ರಿ ಮಾಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT