ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣುಬ್ಬಿದರೆ ತಬ್ಬಿಬ್ಬಾಗದಿರಿ

Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಕೆಲವರನ್ನು ನೋಡಿ. ಇವರು ನಿದ್ದೆಯನ್ನೇ ಮಾಡಿಲ್ಲ ಎಂಬಂತೆ ಕಣ್ಣು ಉಬ್ಬಿಕೊಂಡು ಕೆಂಪಗಾಗಿರುತ್ತದೆ. ಇನ್ನು ಕೆಲವರಿಗೆ ಕಣ್ಣು ಕೆಂಪಗಿಲ್ಲದಿದ್ದರೂ ಉಬ್ಬಿ ಕಣ್ಣು ಆಳಕ್ಕೆ ಇಳಿದಿರುತ್ತದೆ. ಕಣ್ಣು ಸುತ್ತಲು ಕಪ್ಪಾಗಿರುತ್ತದೆ. ಇವೆಲ್ಲ ವಯಸ್ಸಾದಂತೆಲ್ಲ ಸಾಮಾನ್ಯವಾಗಿ ಕಂಡುಬರುವಂಥದ್ದು. ವಯಸ್ಸಾದಂತೆ ಕಣ್ಣೆವೆಯನ್ನು ಹಿಡಿದಿಡುವ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದರಿಂದಾಗಿ ಎಲ್ಲೆಡೆ ಸಮನಾಗಿ ಹರಡಿಕೊಂಡಿರುವ ಕೊಬ್ಬು ಕೆಳ ಕಣ್ಣೆವೆಗೆ ಬಂದು ಶೇಖರಗೊಂಡು ಉಬ್ಬಿಕೊಳ್ಳುತ್ತದೆ. ಕೆಲವು ಬಾರಿ ಲಿಂಫಾಟಿಕ್ ಗ್ರಂಥಿಗಳಲ್ಲಿ ನೀರು (ಫ್ಲ್ಯುಯ್ಡ್) ಶೇಖರಗೊಂಡು ಹೀಗಾಗುತ್ತದೆ. ನಿದ್ರಾಹೀನತೆ, ನೀರು ಸಾಕಷ್ಟು ಕುಡಿಯದಿರುವುದು ಇದಕ್ಕೆ ಕೆಲ ಕಾರಣಗಳಾಗಿರುತ್ತವೆ.

ನೋಡಲು ಎಷ್ಟೇ ಭೀಕರ ಎನಿಸಿದರೂ ಈ ಕಣ್ಣುಬ್ಬು ಸೌಂದರ್ಯ ಸಮಸ್ಯೆಯೇ ಹೊರತು ಯಾವುದೇ ರೋಗವಲ್ಲ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇದು ರೋಗವೊಂದರ ಲಕ್ಷಣವಾಗಿರುತ್ತದೆ.

ಕಣ್ಣುಬ್ಬು ಎಂದು ಗುರುತಿಸುವುದು ಹೇಗೆ?
ಕಣ್ಣುಬ್ಬಿರುವವರಲ್ಲಿ ಸಾಮಾನ್ಯವಾಗಿ ಈ ಲಕ್ಷಣಗಳು ಕಂಡು ಬರುತ್ತವೆ...
* ಕಣ್ಣಿನ ಸುತ್ತಲಿನ ಭಾಗದಲ್ಲಿ ಸ್ವಲ್ಪ ಊತ ಬಂದಂತಾಗುವುದು
* ಚರ್ಮ ಸಡಿಲಗೊಂಡಂತಾಗುವುದು
* ಕಣ್ಣು ಸುತ್ತ ಕಪ್ಪಗಾಗುವುದು

ವೈದ್ಯರನ್ನು ಯಾವಾಗ ಕಾಣಬೇಕು?
* ಕಣ್ಣು ಸುತ್ತಲಿನ ಊತ ಯಾವಾಗಲೂ ಇದ್ದರೆ ಹಾಗೂ ಊತದ ಪ್ರಮಾಣ ಹೆಚ್ಚಿದ್ದರೆ
* ಊತ ಕೆಂಪಗಾಗಿದ್ದರೆ, ಕೆರೆತ ಇದ್ದರೆ ಅಥವಾ ನೋವಿದ್ದರೆ
* ಇತರ ಅವಯವಗಳಿಗೂ ಊತ ಬಂದಿದ್ದರೆ, ಉದಾಹರಣೆ ಕಾಲಿನಲ್ಲೂ ಊತ ಕಂಡು ಬಂದರೆ.
ಕೆಲವೊಮ್ಮೆ ಥೈರಾಯ್ಡ್ ರೋಗಗಳು, ಸೋಂಕು ಅಥವಾ ಅಲರ್ಜಿಯಿಂದಲೂ ಕಣ್ಣಿನ ಸುತ್ತ ಉಬ್ಬು ಉಂಟಾಗಿರುತ್ತದೆ. ವೈದ್ಯರು ಇದನ್ನು ಗಮನದಲ್ಲಿಟ್ಟುಕೊಂಡು ವಿವಿಧ ಟೆಸ್ಟ್‌ಗಳನ್ನು ಮಾಡಿಸುತ್ತಾರೆ.

ಕಣ್ಣುಬ್ಬಿಗೆ ಮನೆ ಮದ್ದು
ಕಣ್ಣುಬ್ಬನ್ನು ಸರಿಯಾದ ಜೀವನಶೈಲಿ ಹಾಗೂ ಮನೆ ಮದ್ದಿನಿಂದಲೇ ಹತೋಟಿಯಲ್ಲಿಡಬಹುದು. ಇಲ್ಲಿವೆ ಕಣ್ಣುಬ್ಬು ಕಡಿಮೆ ಮಾಡಿಕೊಳ್ಳುವ ಸುಲಭೋಪಾಯಗಳು.

* ತಣ್ಣೀರು ಪಟ್ಟಿ: ಸ್ವಚ್ಛವಿರುವ ಮೃದುವಾದ ಹತ್ತಿ ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ. ನೆಟ್ಟಗೆ ಕುಳಿತುಕೊಂಡು ಈ ಬಟ್ಟೆಯನ್ನು ಕೆಲ ನಿಮಿಷಗಳ ಕಾಲ ಕಣ್ಣಿನ ಕೆಳಗೆ ಮೃದುವಾಗಿ ಒತ್ತಿ.

* ಉಪ್ಪು ನೀರು: ಈ ಪದ್ಧತಿಯಲ್ಲಿ ಕಣ್ಣಿನ ಕೆಳಗಿನ ಹೆಚ್ಚುವರಿ ನೀರನ್ನು ಆಸ್ಮಾಸಿಸ್ ತತ್ವದಡಿ ಕಡಿಮೆ ಮಾಡಲಾಗುತ್ತದೆ. ಅರ್ಧ ಚಮಚ ಉಪ್ಪನ್ನು ನಾಲ್ಕು ಲೋಟ ನೀರಿನಲ್ಲಿ ಮಿಶ್ರಣ ಮಾಡಿ. ನೀರು ಬೆಚ್ಚಗಿರಲಿ. ಇದರಿಂದ ಉಪ್ಪು ಕರಗುತ್ತದೆ. ಆದರೆ ತೀರಾ ಬಿಸಿ ಮಾಡಿಕೊಳ್ಳಬೇಡಿ, ಕಣ್ಣು ಸುಟ್ಟು ಹೋದೀತು. ಈ ನೀರಿನಲ್ಲಿ ಹತ್ತಿ ಒದ್ದೆ ಮಾಡಿ ಕೆಲ ನಿಮಿಷಗಳ ಕಾಲ ಕಣ್ಣಿನ ಎವೆಯ ಮೇಲೆ ಇಟ್ಟುಕೊಳ್ಳಿ. ಇದನ್ನು ಹಲವು ಬಾರಿ ಪುನರಾವರ್ತಿಸಿ.

* ಐಸ್: ಐಸ್ ಕಣ್ಣನ್ನು ತಾಜಾಗೊಳಿಸುತ್ತದೆ. ಇದು ರಕ್ತನಾಳಗಳನ್ನು ಬಿಗಿಗೊಳಿಸಿ ಊತವನ್ನು ಕಡಿಮೆ ಮಾಡುತ್ತದೆ. ಐಸ್ ತುಂಡುಗಳನ್ನು ಟಾವೆಲ್‌ನಲ್ಲಿ ಸುತ್ತಿ ಕೆಲ ನಿಮಿಷಗಳ ಕಾಲ ಕಣ್ಣಿನ ಕೆಳಗೆ ಇಟ್ಟುಕೊಳ್ಳಬಹುದು.

ಅವಸರದಲ್ಲಿದ್ದರೆ ತಣ್ಣನೆಯ ನೀರು ಕಣ್ಣಿಗೆ ಎರೆಚಿಕೊಳ್ಳಿ. ಇದು ಐಸ್ ಪಟ್ಟಿಯಷ್ಟೇ ಪರಿಣಾಮಕಾರಿ. ತಣ್ಣೀರಿನಲ್ಲಿ ಮುಖ ತೊಳೆದಾಗ ತಂಪಾಗಿ ಆಹ್ಲಾದಕರ ಅನುಭವ ಉಂಟಾಗುತ್ತದೆ. ಜತೆಗೆ ಕಣ್ಣು ಸುತ್ತಲಿನ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ.

* ತಣ್ಣನೆ ಚಮಚ: ತಣ್ಣೆನೆಯ ಚಮಚದಿಂದ ಕಣ್ಣು ತಂಪು ಮಾಡಿಕೊಳ್ಳುವುದೂ ಒಂದು ಪರಿಣಾಮಕಾರಿ ಉಪಾಯ. ಐದಾರು ಸ್ಟೀಲ್ ಚಮಚವನ್ನು ಫ್ರಿಡ್ಜ್‌ನಲ್ಲಿ 10-15 ನಿಮಿಷ ಕಾಲ ಇಟ್ಟು ತಣ್ಣಗಾಗಿಸಿಕೊಳ್ಳಿ. ತಣ್ಣಗಾದ ಚಮಚದ ಅಗಲ ಭಾಗವನ್ನು ಕಣ್ಣಿನ ಎವೆ ಮೇಲೆ ಇಟ್ಟುಕೊಳ್ಳಿ. ಇದರ ತಂಪು ಕಡಿಮೆ ಆದೊಡನೆ ಬೇರೆ ತಣ್ಣನೆಯ ಚಮಚ ತೆಗೆದುಕೊಂಡು ಮತ್ತೆ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಕೆಲ ನಿಮಿಷ ಹೀಗೆ ತಂಪು ಮಾಡುವುದರಿಂದ ಊತ ಬಹಳಷ್ಟು ಕಡಿಮೆಯಾಗುತ್ತದೆ.

* ಸೌತೆಕಾಯಿ ತುಂಡು: ಕಣ್ಣಿನ ಸೌಂದರ್ಯಕ್ಕೆ ಸೌತೆಕಾಯಿ ತುಂಡುಗಳನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳುವುದು ಅತ್ಯಂತ ಜನಪ್ರಿಯ ಚಿಕಿತ್ಸೆ. ಸೌತೆಕಾಯಿ ತುಂಡುಗಳನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿಟ್ಟು ತಂಪು ಮಾಡಿಕೊಳ್ಳಿ. ತಲೆಕೆಳಗೆ ದಿಂಬು ಇಟ್ಟುಕೊಂಡು ಮಲಗಿಕೊಂಡು ಈ ತಣ್ಣನೆಯ ಸೌತೆಕಾಯಿ ತುಂಡುಗಳನ್ನು ಕಣ್ಣಿನ ಮೇಲೆ 10 ನಿಮಿಷ ಇಟ್ಟುಕೊಳ್ಳಿ. ಇದು ಕಣ್ಣಿನ ಕಿರಿಕಿರಿ ಕಡಿಮೆ ಮಾಡುವುದರ ಜತೆಗೆ ಇದರ ತಂಪು ಗುಣ ಕಣ್ಣಿನ ಊತವನ್ನು ಕಡಿಮೆ ಮಾಡುತ್ತದೆ.

* ಆಲೂಗಡ್ಡೆ: ಸೌತೆಕಾಯಿಯಂತೆಯೇ ಆಲೂಗಡ್ಡೆ ಕೂಡ ಕಣ್ಣಿನ ಊತ ಕಡಿಮೆ ಮಾಡಲು ಸಹಕಾರಿ. ಇದರಲ್ಲಿರುವ ಸ್ಟಾರ್ಚ್ ಅಂಶವು ಊತಕಡಿಮೆ ಮಾಡುವ ಗುಣ ಹೊಂದಿದೆ. ಜತೆಗೆ ಇದು ಕಣ್ಣು ಸುತ್ತಲಿನ ಕಪ್ಪನ್ನೂ ಕಡಿಮೆ ಮಾಡುತ್ತದೆ.

ಒಂದು ಮಧ್ಯಮ ಗಾತ್ರದ ಆಲೂಗಡ್ಡೆಯನ್ನು ತೊಳೆದುಕೊಂಡು ಮೇಲಿನ ಸಿಪ್ಪೆ ತೆಗೆಯಿರಿ. ಆಲೂಗಡ್ಡೆಯನ್ನು ಹೆರೆದು ಅದನ್ನು ಸ್ವಚ್ಛ ಬಟ್ಟೆಯಲ್ಲಿ ಗಂಟು ಕಟ್ಟಿಕೊಳ್ಳಿ. ಈ ಗಂಟನ್ನು ಕಣ್ಣಿನ ಕೆಳೆಗ ಕೆಲ ನಿಮಿಷ ಇಟ್ಟುಕೊಳ್ಳಿ. ಕಣ್ಣಿನ ಊತ ಕಡಿಮೆ ಆಗುವವರೆಗೂ ಇದನ್ನು ಮಾಡಿ.

* ಸ್ಟ್ರಾಬೆರ್ರಿ: ಇದರಲ್ಲಿರುವ ಆಲ್ಫಾ ಹೈಡ್ರೋಕ್ಸಿಲ್ ಆಸಿಡ್ ಚರ್ಮವನ್ನು ನುಣ್ಣಗಾಗಿಸಿ ಯೌವ್ವನಭರಿತವನ್ನಾಗಿಸುತ್ತದೆ. ಜತೆಗೆ ಕಣ್ಣಿನ ಊತ ಕಡಿಮೆ ಮಾಡುತ್ತದೆ. ಇದಕ್ಕೆ ಕೆಲ ಸ್ಟ್ರಾಬೆರ್ರಿಗಳನ್ನು ಫ್ರಿಡ್ಜ್‌ನಲ್ಲಿ 30 ನಿಮಿಷಗಳ ಕಾಲ ಇಟ್ಟು ತಣ್ಣಗಾಗಿಸಿ. ನಂತರ ಈ ಹಣ್ಣಿನ ತುದಿ ತೆಗೆದು ದಪ್ಪನೆಯ ಹೋಳುಗಳನ್ನಾಗಿ ಮಾಡಿ. ಮಲಗಿಕೊಂಡು ಕಣ್ಣುಗಳ ಮೇಲೆ ಈ ಹೋಳುಗಳನ್ನು ಹಲವು ನಿಮಿಷಗಳ ಕಾಲ ಇಟ್ಟುಕೊಳ್ಳಿ.

* ಟೀ ಬ್ಯಾಗ್‌ಗಳು: ಗ್ರೀನ್ ಟೀ ಅಥವಾ ಮಾಮೂಲಿ ಚಹಾದ ಬ್ಯಾಗ್‌ಗಳನ್ನು ಈ ಚಿಕಿತ್ಸೆಯಲ್ಲಿ ಬಳಸಬಹುದು. ಗ್ರೀನ್ ಟೀಯಲ್ಲಿ ಹೆಚ್ಚು ಆಂಟಿಆಕ್ಸಿಡೆಂಟ್‌ಗಳು ಇರುವುದರಿಂದ ಇದು ಕಣ್ಣಿನ ತುರಿಕೆಯನ್ನು ಕಡಿಮೆ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ. ಎರಡು ಟೀ ಬ್ಯಾಗ್‌ಗಳನ್ನು ಬಿಸಿ ನೀರಿನಲ್ಲಿ ಎರಡು ನಿಮಿಷ ಹಾಕಿ ತೆಗೆದು ಆರಲು ಬಿಡಿ. ಆರಿದ ಟೀ ಬ್ಯಾಗ್‌ಗಳನ್ನು ಕಣ್ಣಿನ ಮೇಲೆ 15 ನಿಮಿಷ ಇಡಿ. ದಿನದಲ್ಲಿ ಹಲವು ಬಾರಿ ಹೀಗೆ ಮಾಡಿ.

* ಮೊಟ್ಟೆ: ಮೊಟ್ಟೆ ಬಿಳಿ ಭಾಗ ಚರ್ಮವನ್ನು ಬಿಗಿಗೊಳಿಸುತ್ತದೆ ಹಾಗೂ ನೆರಿಗೆಯನ್ನು ತಡೆಯುತ್ತದೆ. ಎರಡು ಮೊಟ್ಟೆಯ ಬಿಳ ಭಾಗ ತೆಗೆದು ಚೆನ್ನಾಗಿ ಕಲಕಿ, ಅದು ದಪ್ಪಗಾಗಲಿ. ಇದಕ್ಕೆ ಕೆಲ ಹನಿಗಳಷ್ಟು ವಿಚ್ ಹೇಜಲ್ ಸೇರಿಸಿ. ಈ ಮಿಶ್ರಣವನ್ನು ಕಣ್ಣಿನ ಕೆಳಗೆ ಬ್ರಷ್‌ನಲ್ಲಿ ಅಥವಾ ಮೃದವಾದ ಬಟ್ಟೆಯಿಂದ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದು ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಇದನ್ನು ಪ್ರತಿದಿನ ಮಾಡಿ.

* ಲೋಳೆಸರ: ಲೋಳೆಸರದಲ್ಲಿ (ಅಲೋ ವಿರಾ) ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಇದು ಚರ್ಮಕ್ಕೆ ಪೌಷ್ಟಿಕಾಂಶ ನೀಡುವ ಜತೆಗೆ ಆರಾಮವನ್ನೂ ನೀಡುತ್ತದೆ. ಇದು ಚರ್ಮ ಸುಕ್ಕುಗಟ್ಟುವುದನ್ನೂ ತಡೆಯುತ್ತದೆ. ಹಾಗಾಗಿ ಇವುಗಳ ತಾಜಾ ಎಲೆ ತೆಗೆದುಕೊಂಡು ಅದರ ಮೇಲಿನ ಹೊದಿಕೆ ತೆಗೆಯಿರಿ. ಒಳಗಿನ ಜೆಲ್ ಅನ್ನು ಕಣ್ಣಿನ ಕೆಳಗೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ. ಆದರೆ ಇದು ಕಣ್ಣಿನ ಒಳಗೆ ಹೋಗದಂತೆ ನೋಡಿಕೊಳ್ಳಿ. ಅಲೋವಿರಾ ಕಣ್ಣಿನ ಆಯಾಸವನ್ನು ಪರಿಹರಿಸುತ್ತದೆ. ಜತೆಗೆ ಮಸಾಜ್ ಮಾಡುವುದರಿಂದ ಕಣ್ಣಿನ ಕೆಳಗಿನ ಬಾವು ಕಡಿಮೆಯಾಗಿ ರಕ್ತ ಸಂಚಾರ ಸುಧಾರಣೆಯಾಗುತ್ತದೆ.

ಕಣ್ಣುಬ್ಬು ಹತೋಟಿಗೆ ಜೀವನಶೈಲಿ ಹೀಗಿರಲಿ...
* ನೀರು ಕುಡಿಯುತ್ತಿರಿ:
ನೀವು ಸಾಕಷ್ಟು ನೀರು ಕುಡಿಯದಿದ್ದರೆ ದೇಹವು ನೀರಿನ ಅಭಾವ ಉಂಟಾದಾಗ ಉಪಯೋಗಿಸಲೆಂದು ಕಣ್ಣಿನ ಸುತ್ತ ದ್ರವ ಶೇಖರಣೆ ಆರಂಭಿಸುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯದಿದ್ದರೆ ಕಣ್ಣಿನ ಊತ ಬರುವ ಸಂಭವವಿರುತ್ತದೆ. ದಿನಕ್ಕೆ 1.5ರಿಂದ 2 ಲೀಟರ್ ನೀರು ಕುಡಿದರೆ ಕಣ್ಣಿನ ಊತ ಕಡಿಮೆಯಾಗುತ್ತದೆ.

* ಹೆಚ್ಚು ಉಪ್ಪು ತಿನ್ನುವುದನ್ನು ಬಿಡಿ.

* ಸಾಕಷ್ಟು ನಿದ್ದೆ ಮಾಡಿ, ವಯಸ್ಕರಿಗೆ ಸಾಮಾನ್ಯವಾಗಿ 7ರಿಂದ 8 ಗಂಟೆಗಳ ರಾತ್ರಿ ನಿದ್ರೆ ಅವಶ್ಯವಿರುತ್ತದೆ. ತಲೆಯನ್ನು ದಿಂಬಿನ ಮೇಲಿಟ್ಟುಕೊಂಡು ನಿದ್ದೆ ಮಾಡಿ. ಬೇಕಾದರೆ ಎರಡು ದಿಂಬುಗಳನ್ನು ಒಂದರಮೇಲೊಂದು ಇಟ್ಟುಕೊಳ್ಳಿ. ಇದರಿಂದ ಕಣ್ಣಿನ ಕೆಳಗೆ ದ್ರವ ಶೇಖರಣೆಯಾಗುವುದು ಕಡಿಮೆಯಾಗುತ್ತದೆ.

* ನೀವು ಬಳಸುವ ಸೌಂದರ್ಯ ವರ್ಧಕಗಳಾದ ಹೇರ್ ಸ್ಪ್ರೇ, ಮೇಕ್‌ಅಪ್‌ನಿಂದೇನಾದರೂ ಹೀಗಾಗುತ್ತಿದೆಯೇ ಎಂಬುದನ್ನು ಗಮನಿಸಿ. ಸಾಧ್ಯವಾದಷ್ಟು ರಾಸಾಯನಿಕ ಸೌಂದರ್ಯವರ್ಧಕಗಳಿಂದ ದೂರವಿರಿ. ಬದಲಿಗೆ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ.

* ಕೆಲಸದ ನಡುವೆ ಬ್ರೇಕ್ ತೆಗೆದುಕೊಳ್ಳಿ. ಇದರಿಂದ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ. ಕಣ್ಣನ್ನು ಸಿಕ್ಕಾಪಟ್ಟೆ ಉಜ್ಜಬೇಡಿ. ಮೃದುವಾಗಿ ಮಸಾಜ್ ನೀಡುವುದನ್ನು ಬಿಟ್ಟರೆ ಇನ್ಯಾವಾಗಲೂ ಕಣ್ಣನ್ನು ಮುಟ್ಟಲು ಹೋಗಬೇಡಿ.

* ಅಲರ್ಜಿ ಕಡಿಮೆ ಮಾಡಿಕೊಳ್ಳಿ. ಸಾಧ್ಯವಾದಷ್ಟು ಅಲರ್ಜಿಕಾರಕಗಳಿಂದ ದೂರವಿರಿ. ಅಲರ್ಜಿ ಔಷಧಗಳನ್ನು ತೆಗೆದುಕೊಳ್ಳಿ. ಶ್ಯಾಂಪು, ಕೂದಲಿನ ಬಣ್ಣ ಮತ್ತಿತರ ಪದಾರ್ಥಗಳು ಅಲರ್ಜಿ ಉಂಟು ಮಾಡುತ್ತಿದ್ದರೆ ಇವುಗಳಿಂದ ದೂರವಿರಿ.

* ಮಸಾಜ್: ಕಣ್ಣಿನ ಮಸಾಜ್ ಮಾಡಿದರೆ ಬಾವು ಬಹಳಷ್ಟು ಕಡಿಮೆಯಾಗುತ್ತದೆ. ನಿಮ್ಮ ಬೆರಳುಗಳಿಂದ ಕಣ್ಣಿನ ಸುತ್ತ ಮೃದುವಾಗಿ ವೃತ್ತಾಕಾರಾವಾಗಿ ಮಸಾಜ್ ಮಾಡಿ. ಮಸಾಜ್ ಅನ್ನು ಪ್ರತಿದಿನ ಬೆಳಿಗ್ಗೆ ಕೆಲ ನಿಮಿಷಗಳ ಕಾಲ ಮಾಡಿ.

ಮನೆಮದ್ದು ಹಾಗೂ ಕೆಲ ಜೀವನಶೈಲಿ ಅಭ್ಯಾಸಗಳಿಂದ ಕಣ್ಣುಬ್ಬನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳುವುದು ಸಾಧ್ಯವಿರುವಾಗ ಇನ್ನೇಕೆ ತಡ ಅಲ್ಲವೇ?
*
ಕಣ್ಣುಬ್ಬು ಏಕೆ ಉಂಟಾಗುತ್ತದೆ?
ವಯಸ್ಸಾದಂತೆ ಕಣ್ಣೆವೆಗಳನ್ನು ಹಿಡಿದಿಡುವ ಟಿಷ್ಯುಗಳು ಹಾಗೂ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಚರ್ಮ ಸಡಿಲಗೊಳ್ಳುವುದರಿಂದ ಕಣ್ಣು ಸುತ್ತಲಿನ ಕೊಬ್ಬು ಕೆಳಗಿನ ಭಾಗಕ್ಕೆ ಬಂದು ಶೇಖರಗೊಳ್ಳುತ್ತದೆ. ಜತೆಗೆ ಕಣ್ಣು ಕೆಳಗಿನ ಭಾಗದಲ್ಲಿ ಫ್ಲ್ಯುಯ್ಡ್ ಶೇಖರಗೊಳ್ಳುವುದರಿಂದ ಅದು ಉಬ್ಬಿದಂತೆ ಕಾಣುತ್ತದೆ. ಇದಕ್ಕೆ ಹಲವು ಕಾರಣಗಳಿರುತ್ತವೆ. ಕೆಳಗಿವೆ ಕೆಲ ಕಾರಣಗಳು...
* ವಾತಾವರಣದಲ್ಲಿನ ಬದಲಾವಣೆಗಳು ಉದಾಹರಣೆಗೆ ಉಷ್ಣತೆ, ಆರ್ದ್ರತೆ ಹೆಚ್ಚಿದ್ದರೆ, ಹಾರ್ಮೋನ್ ಬದಲಾವಣೆಗಳಿಂದ ಅಥವಾ ಹೆಚ್ಚು ಉಪ್ಪು ತಿಂದರೂ ಕಣ್ಣಿನ ಕೆಳಗೆ ಫ್ಲ್ಯುಯ್ಡ್ ಶೇಖರಗೊಳ್ಳುತ್ತದೆ.

* ಸಾಕಷ್ಟು ನಿದ್ರೆ ಮಾಡದಿದ್ದರೆ

* ಕಣ್ಣಿನ ಊತ ಕೆಂಪಗಿದ್ದರೆ ಹಾಗೂ ತುರಿಕೆ ಇದ್ದರೆ ಇದಕ್ಕೆ ಅಲರ್ಜಿ ಅಥವಾ ಚರ್ಮರೋಗಗಳು ಕಾರಣವಾಗಿರುವ ಸಾಧ್ಯತೆಗಳಿರುತ್ತವೆ.

* ಆನುವಂಶೀಯತೆಯೂ ಕಣ್ಣುಬ್ಬಿಗೆ ಒಂದು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT