ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ತಣಿಸಿದ ಹವ್ಯಾಸಿಗಳ ಯಕ್ಷೋತ್ಸವ

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಹವ್ಯಾಸಿ ಯಕ್ಷಗಾನ ತಂಡ ‘ಯಕ್ಷ ಸಿಂಚನ’ ಆರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮ ಪ್ರೇಕ್ಷಕರ ಕಣ್ಮನ ತಣಿಸಿತು.

‘ಗದಾಯುದ್ಧ’, ಪಾರ್ತಿ ಸುಬ್ಬ ರಚನೆಯ ‘ಕುಂಭಕರ್ಣ ವಧೆ’ ಹಾಗೂ ಹಟ್ಟಿಯಂಗಡಿ ರಾಮಭಟ್ಟ ರಚಿಸಿದ ‘ಅತಿಕಾಯ ಮೋಕ್ಷ’ ಪ್ರಸಂಗಗಳನ್ನು ಆಕರ್ಷಕವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಿಕೊಡುವಲ್ಲಿ ಯಕ್ಷ ಸಿಂಚನದ ಪ್ರಯತ್ನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಆರಂಭದಲ್ಲಿ ಯಕ್ಷ ಗುರು ಕೃಷ್ಣಮೂರ್ತಿ ತುಂಗ ಅವರ ಸಾರಥ್ಯದಲ್ಲಿ ಯಕ್ಷಕಲಾ ಅಕಾಡೆಮಿಯ ಪ್ರತಿಭಾನ್ವಿತ ಬಾಲ ಕಲಾವಿದರು ಗದಾಯುದ್ಧ ಯಕ್ಷಗಾನ ಪ್ರದರ್ಶನ ನೀಡಿದರು.

ಕೌರವನಾಗಿ ಚಿತ್ಕಲಾ ಕೆ.ತುಂಗ ಗಂಭೀರ ಅಭಿನಯ ಮತ್ತು ಮಾತುಗಾರಿಕೆಯಿಂದ ಮೆಚ್ಚುಗೆ ಗಳಿಸಿದರೆ, ಭೀಮನಾಗಿ ಕೌಸ್ತುಭ ತಮ್ಮ ಸ್ಪಷ್ಟ ಮಾತುಗಾರಿಕೆಯಿಂದ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾದರು. ಕೃಷ್ಣನಾಗಿ ಹೇಮಂತ್ ಮತ್ತೋಡ್ ಉತ್ತಮವಾಗಿ ಅಭಿನಯಿಸಿದರೆ, ನಕುಲ ಮತ್ತು ಅಶ್ವತ್ಥಾಮನ ಪಾತ್ರದಲ್ಲಿ ಕೌಸ್ತುಭ ರಾವ್ ಚುರುಕುತನದಿಂದ ಮಿಂಚಿದರು. ಬೇಹಿನಚರನಾಗಿ ಉತ್ತಮ್ ತಮ್ಮ ಅದ್ಭುತ ನಗೆ ಚಟಾಕಿಗಳಿಂದ ಪ್ರೇಕ್ಷಕರನ್ನು ರಂಜಿಸಿದರು.

ಧರ್ಮರಾಯನಾಗಿ ಫಣೀಂದ್ರ, ಅರ್ಜುನನಾಗಿ ಪ್ರಾರ್ಥನಾ, ಸಹದೇವನ ಪಾತ್ರದಲ್ಲಿ ಶ್ರಾವ್ಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಸಂಜಯನ ಪಾತ್ರ ನಿರ್ವಹಿಸಿದ ಆಯುಶ್, ಕೌರವ-ಸಂಜಯರ ಭಾವನಾತ್ಮಕ ಸನ್ನಿವೇಶ ಪ್ರೇಕ್ಷಕರ ಮನತಟ್ಟುವಂತೆ ಮಾಡಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಹಿರಿಯ ಭಾಗವತರಾದ ವಿಶ್ವೇಶ್ವರ ಸೋಮಯಾಜಿ ಮೋರ್ಟು ಅವರಿಗೆ ಯಕ್ಷ ಸಿಂಚನದ 2015ನೇ ಸಾಲಿನ ಸಾರ್ಥಕ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.  ನಂತರ ಯಕ್ಷಸಿಂಚನ ತಂಡ ಪ್ರದರ್ಶಿಸಿದ ‘ಕುಂಭಕರ್ಣ ವಧೆ’, ‘ಅತಿಕಾಯ ಮೋಕ್ಷ’ ಪ್ರಸಂಗಗಳು ಕಲಾರಸಿಕರ ಮನಸೂರೆಗೊಂಡವು. ಅತಿಕಾಯನ ಪಾತ್ರದಲ್ಲಿ ರವಿ ಮಡೋಡಿ ಅರ್ಥಗರ್ಭಿತ ಮಾತುಗಾರಿಕೆ ಮತ್ತು ಗತ್ತು ಗಾಂಭೀರ್ಯವನ್ನು ಮೆರೆದರೆ, ಕುಂಭಕರ್ಣನ ಪಾತ್ರದಲ್ಲಿ ಆದಿತ್ಯ ಉಡುಪ ಬಣ್ಣದ ವೇಷದಲ್ಲಿ ಮಿಂಚಿದರು.

ರಾಮನಾಗಿ ಮನೋಜ್ ಭಟ್, ಲಕ್ಷ್ಮಣನಾಗಿ ಶಶಿರಾಜ ಸೋಮಯಾಜಿ ಅತ್ಯುತ್ತಮ ಹೆಜ್ಜೆಗಾರಿಕೆ ಹಾಗೂ ಅಭಿನಯದ ಪ್ರೌಢಿಮೆ ಮೆರೆದರು. ರಾವಣನಾಗಿ ಶಶಾಂಕ ಎಂ. ಕಾಶಿ ಅಬ್ಬರಿಸಿ ಮೆರೆದರು. ಉಳಿದಂತೆ ವಿಭೀಷಣನಾಗಿ ಗುರುರಾಜ ಭಟ್ ಅಂಪಾರು, ಚಾರಕನಾಗಿ ಗುರುರಾಜ ಅಭಿನಯಿಸಿದರು. ಯಕ್ಷರಂಗಭೂಮಿಯಿಂದ ಮರೆಯಾಗುತ್ತಿರುವ ಸಂಪ್ರದಾಯದ ಪ್ರಯಾಣ ಕುಣಿತ, ಒಡ್ಡೋಲಗ, ಯುದ್ಧ ನೃತ್ಯ, ಕಟ್ಟು ಮೀಸೆ, ಮುಂಡಾಸು ವೇಷ, ಬಣ್ಣದ ‌ವೇಷ ಮೊದಲಾದವುಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳನ್ನು ತಂಡ ಆಡಿ ತೋರಿಸಿದ್ದು ವಿಶೇಷವಾಗಿತ್ತು.

ಹಿಮ್ಮೇಳದಲ್ಲಿ ಹೆಸರಾಂತ ಯಕ್ಷ ಗುರು ಕೃಷ್ಣಮೂರ್ತಿ ತುಂಗ ಅವರು ಗದಾಯುದ್ಧ ಪ್ರಸಂಗದ ಭಾಗವತಿಕೆ ಪ್ರಾರಂಭ ಮಾಡಿದರು. ಬಡಗು ತಿಟ್ಟಿನಲ್ಲಿ ಪಾರಂಪರಿಕ ಪ್ರಸಂಗ ನಡೆಗಳನ್ನು ಚೆನ್ನಾಗಿ ಅರಿತ ಸತೀಶ್ ಕೆದಿಲಾಯ ಅವರ ಸುಶ್ರಾವ್ಯ ಭಾಗವತಿಕೆ, ಮದ್ದಲೆ ಮಾಂತ್ರಿಕ ಅನಂತ ಪದ್ಮನಾಭ ಪಾಠಕ್ ಅವರ ಇಂಪಾದ ಮದ್ದಲೆ, ಹಾಗೂ ಬೆಂಗಳೂರಿನ ಚಿರಪರಿಚಿತ ಯುವಕಲಾವಿದ ಶ್ರೀನಿವಾಸ ಪ್ರಭು ಅವರ ಚೆಂಡೆ ಎಲ್ಲರ ಗಮನ ಸೆಳೆದವು. ಎಂದಿನಂತೆ ಕಾರ್ಯಕ್ರಮದ ಬಗ್ಗೆ ತಂಡ ಅಭಿಪ್ರಾಯ ಸಂಗ್ರಹಣೆ ಮಾಡಿತು. ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ. ನಾರಾಯಣ ಚೆಂಬಲ್ತಿಮಾರ್, ಪುರುಷೋತ್ತಮ ಅಡಿಗ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT