ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಿಗೆ ಜನಸಾಗರ!

Last Updated 15 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಯಂಕ್ಟೇಸ ಅದೇ ತಾನೇ ರಾಜ್ಯೋತ್ಸವ ಸಮಾರಂಭ ಮುಗಿಸಿಕೊಂಡು ಬಂದಿದ್ದ. ಶರ್ಟು, ಪ್ಯಾಂಟುಗಳ ಮೇಲೆಲ್ಲ ಹೂಗಳ ಎಸಳುಗಳಿದ್ದವು. ಕತ್ತಿನಲ್ಲಿ ಅರಿಶಿಣ ಕುಂಕುಮ ಬಣ್ಣದ ಕನ್ನಡದ ಧ್ವಜ ಕಂಗೊಳಿಸುತ್ತಿತ್ತು. ‘ಏನೇ ಆದರೂ ಅಕಂಡ ಕರ್ನಾಟಕವನ್ನು ತುಂಡು ಮಾಡಲು ಬಿಡಲ್ಲ ಸಾ...’ ಎಂದ ಸಿಟ್ಟಿನಿಂದ. ‘ಈ ಸಲವೂ ನಿನಗೆ ರಾಜ್ಯೋತ್ಸವ ಪ್ರಶಸ್ತಿ ಬರಲಿಲ್ಲ ಅಲ್ವೇನಪ್ಪಾ...’ ಎಂದು ಕಾಲೆಳೆದೆ. ‘ಬಿಡಿ ಸಾ..! ನಾಲ್ಕು ಕೋಟಿ ಕನ್ನಡಿಗರ ಹಾಶೀರ್ವಾದ ನನ್ನ ಮೇಲಿದೆ ಸಾಕು’ ಎಂದ!
‘ಅದಿರಲಿ, ಈ ಕತ್ತಿ ಕಥೆ ಏನೋ ಯಂಕ್ಟೇಶ’ ಎಂದು ಗಾಂಭೀರ್ಯದಿಂದ ಪ್ರಶ್ನಿಸಿದೆ.

‘ಸೂಪರ್‌ ಸ್ಸಾ! ಏನ್‌ ಡೈಲಾಗು ಅಂತೀರಾ.. ಜನ ಹುಚ್ಚೆದ್ದು ಚಪ್ಪಾಳೆ ತಟ್ತಾ ಇದ್ರು ಸ್ಸಾ.!’
ಹೌದಾ.. ಅಷ್ಟೊಂದು ಕ್ರೇಝ್‌ ಇದೆಯಾ ಜನರಲ್ಲಿ?
‘ಸ್ಸಾ, ಲಕ್ಷಾಂತರ ಜನ್ರು! ಒಂದೊಂದು ಮಾತಿಗೂ ಜೋರು ಚಪ್ಪಾಳೆ. ಸಾವಿರಾರು ಜನ ಜೀವ ಕೊಡೋದಕ್ಕೂ ಸಿದ್ದರಿದ್ದಾರೆ ಸ್ಸಾ...’
ಅವರಿಗೆ ಅಷ್ಟೊಂದು ಅಭಿಮಾನಿಗಳು ಇದ್ದಾರೇನಪ್ಪಾ..- ಎಂದು ಅಚ್ಚರಿ ವ್ಯಕ್ತಪಡಿಸಿದೆ.
‘ಬೆಳಿಗ್ಗೆ ಎಂಟು ಗಂಟೆಗೇ ಜನ ಸೇರ್ತವ್ರೆ. ರಾತ್ರಿ ಎಂಟಾದರೂ ಜನಸಂದಣಿ ಕಡಿಮೆ ಆಗೋದಿಲ್ಲ ಸ್ಸಾ..’
ಎಲ್ಲಿ... ಕತ್ತಿಯವರ ಮನೆ ಮುಂದೇನಾ!
‘ಮನೆ ಅಲ್ಲ ಸ್ಸಾ.. ಥಿಯೇಟರ್‌ ಮುಂದೆ!’

ಕತ್ತಿಯವರಿಗೆ ಥಿಯೇಟರ್‌ ಬೇರೆ ಇದೆಯಾ? ನಾನು ಬರೀ ಸಕ್ಕರೆ ಕಾರ್ಖಾನೆ ಮಾತ್ರ ಇದೆ ಅಂದ್ಕೊಂಡಿದ್ದೆ..
‘ನೀವು ಯಾವ ಕತ್ತೀ ಬಗ್ಗೆ ಹೇಳ್ತಿದ್ದೀರಿ ಸ್ಸಾ?’
ಅದೇ ಉಮೇಶ್‌ ಕತ್ತಿ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಅಂತ ಕತ್ತಿವರಸೆ ಶುರು ಮಾಡಿದ್ದಾರಲ್ಲ.. ಅವರು...!
‘ಅಯ್ಯೋ, ನಾನ್‌ ಹೇಳ್ತಾ ಇರೋದು ನಮ್ಮ ತಮಿಳು ಸೂಪರ್‌ಸ್ಟಾರ್‌ ವಿಜಯ್‌ ಅವರ ಕತ್ತಿ ಸಿನಿಮಾದ ಬಗ್ಗೆ ಸ್ಸಾ!’
ಇದೊಳ್ಳೆ ಕತ್ತೀ ಸಮಾಚಾರ ಆಯ್ತಲ್ಲ, ಇಬ್ರೂ ಕತ್ತೆಗಳ ಥರಾ ಮಾತಾಡಲು ತೊಡಗಿದ್ದೀವಲ್ಲ... ಎಂದುಕೊಂಡೆ ಮನಸ್ಸಿನಲ್ಲೇ!

‘ಥೂ ನಿನ್ನ. ನೀನ್‌ ಯಾವಾಗ ಸಿನಿಮಾ ಬಗ್ಗೆ ಮಾತಾಡ್ತೀ, ಯಾವಾಗ ರಾಜಕೀಯದ ಬಗ್ಗೆ ಮಾತಾಡ್ತೀ ಅಂತ ಗೊತ್ತಾಗಲ್ಲ ಕಣಯ್ಯ..’ ಎಂದು ಹುಸಿ ಸಿಟ್ಟು ಪ್ರದರ್ಶಿಸಿದೆ.
‘ಕತ್ತಿ ಸಮಾಚಾರ ಏನಂತೆ ಸ್ಸಾ? ಅವರಿಗೆ ಬೇರೆ ರಾಜ್ಯ ಯಾಕೆ ಬೇಕಂತೆ?’
ನೋಡಪ್ಪಾ, ಇಲ್ಲಿ ಬ್ಯಾಂಗಲೂರ್‌ನಲ್ಲಿ ನೀವು ಎಲ್ರೂ ಮಜವಾಗಿ ಸುಖವಾಗಿ ಇದ್ದೀರಿ. ಎಲ್ಲ ಸವಲತ್ತುಗಳೂ ನಿಮಗೇ ಸಿಕ್ಕಿವೆ. ಅಲ್ಲಿ ಉತ್ತರ ಕರ್ನಾಟಕದಲ್ಲಿ ಏನೂ ಇಲ್ಲ. ಬೆಳಗಾವೀನೂ ಬ್ಯಾಂಗಲೂರ್ ಆಗಿ ಬದಲಾಗಬೇಕು. ಅದಕ್ಕಾಗಿ ಪ್ರತ್ಯೇಕ ರಾಜ್ಯ ಬೇಕು ಅನ್ನೋದು ಅವರ ಪಾಯಿಂಟು- ಎಂದೆ.

‘ಬ್ಯಾಂಗಳೂರೂ ಬದಲಾಗಿದೆಯಲ್ಲ ಸ್ಸಾ.. ಈಗ ಬೆಂಗಳೂರು ಆಗಿದೆ...’
ಬೆಂಗಳೂರು ಬದಲಾಗ್ತಾನೇ ಇದೆಯಪ್ಪ. ಇಲ್ಲಿ ನಡೆಯೋ ರೇಪ್‌ಗಳನ್ನು ನೋಡಿದರೆ ಬಳೆ ತೊಟ್ಟಿರೋರು ಅನ್ನೋ ಅರ್ಥದಲ್ಲಿ ಬ್ಯಾಂಗಲ್‌-ಊರು ಎಂದೂ ಕರೆಯಬಹುದು. ಬ್ಯಾಂಗಲ್‌ ಇರೋ ಯಾವ ಕೈಯನ್ನು ಕಂಡರೂ ರೇಪ್‌ ಮಾಡ್ತಾರೆ ಅನ್ನೋ ಸ್ಥಿತಿ ಬಂದಿದೆ. ಡಯಾಬಿಟಿಸ್‌, ಅಸ್ತಮಾ, ಆತ್ಮಹತ್ಯೆಗಳ ರಾಜಧಾನಿ- ಹೀಗೆ ಬ್ಯಾನೆಗಳ ಊರು ಕೂಡಾ ಆಗಿದೆ. ಕತ್ತಿಯವರಿಗೆ ಬೆಳಗಾವೀನೂ ಹಿಂಗೇ ಆಗ್ಬೇಕು ಅಂತ ಆಸೆ ಇದ್ರೆ ಏನಪ್ಪಾ ಮಾಡೋಣ- ಎಂದು ರಾಗ ಎಳೆದೆ.
‘ಉತ್ತರ ಕರ್ನಾಟಕದ್ದು ಪ್ರಾಬ್ಲಮ್ಮು ಅಲ್ಲಿಗೇ ನಿಂತಿಲ್ಲ ಸ್ಸಾ. ನಮ್ಮ ಬಸವರಾಜ ಹೊರಟ್ಟಿಯರದ್ದೂ ಅದೇ ರಾಗ. ಜೆಡಿಎಸ್‌ನಲ್ಲಿ ಉತ್ತರ ಕರ್ನಾಟಕದವರಿಗೆ ಅನ್ಯಾಯ ಆಗಿದೆ. ಹೀಗೇ ಮುಂದುವರಿದರೆ ಪ್ರತ್ಯೇಕ ಉತ್ತರ ಕರ್ನಾಟಕ ಜೆಡಿಎಸ್‌ ಮಾಡಬೇಕಾಗುತ್ತೆ ಅಂತ ರೋಪ್‌ ಹಾಕಿದ್ದಾರೆ’

ಹೌದಪ್ಪ.. ಕೋರ್‌ ಕಮಿಟೀನಲ್ಲಿ ಕುಮಾರಸ್ವಾಮಿ ಅವ್ರಿಗೆ ಬೇಕಾದವರನ್ನು ಮಾತ್ರ ಹಾಕಿದ್ದಾರಂತಲ್ಲ?
‘ಕೋರ್ ಕಮಿಟೀನಲ್ಲಿ ಎಲ್ಲರನ್ನೂ ತುಂಬಿಸೋದಕ್ಕೆ ಅದೇನ್‌ ಟೂರಿಸ್ಟ್‌ ಬಸ್ಸಾ ಎಂದು ಕುಮಾರ್ಸಾಮಿನೇ ಹೇಳಿದ್ದಾರೆ ಸ್ಸಾ..! ಅದೂ ನಿಜ ಅಲ್ವೆ? ಜಮೀರ್‌ ಸಾಬ್ರದ್ದು ಬಸ್‌ನಲ್ಲಿ ಜನಾ ತುಂಬಿಸ್ದಂಗೆ ಜೆಡಿಎಸ್‌ ಕಮಿಟೀಲಿ ತುಂಬಿಸಕ್ಕೆ ಆಗುತ್ಯೆ?’
ಪಕ್ಷದ ವಿಷಯವನ್ನು ನಾಲ್ಕು ಗೋಡೆ ನಡುವೆ ಚರ್ಚಿಸಬೇಕು, ಬಯಲಲ್ಲಿ ಅಲ್ಲ ಎಂದೂ ಕುಮಾರಸ್ವಾಮಿ ಹೇಳಿದ್ದಾರೆ ಕಣಯ್ಯ...

‘ನಾಲ್ಕು ಗೋಡೆ ನಡುವೆ ಸರಿ ಸ್ಸಾ. ಆದರೆ ಆ ನಾಲ್ಕು ಗೋಡೆಗಳು ಎಲ್ಲಿವೆ? ಪದ್ಮನಾಭ ನಗರದಲ್ಲಾ.. ಹುಬ್ಬಳ್ಳಿಯಲ್ಲಾ ಅನ್ನೋದು ಪ್ರಶ್ನೆ!’ ಎಂದು ಯಂಕ್ಟೇಸ ತನ್ನ ಬುದ್ಧಿವಂತಿಕೆ ಪ್ರದರ್ಶಿಸಿದ. ಏನೇ ಆದ್ರೂ ಉತ್ತರ ಕರ್ನಾಟಕಕ್ಕೆ ಎಲ್ಲ ಫೀಲ್ಡಲ್ಲೂ ಅನ್ಯಾಯ ಆಗಿದೆ ಅನ್ನೋದು ನಿಜ ಕಣಯ್ಯ- ಎಂದೆ.

‘ಹೂನ್ಸಾ! ನಾನು ಒರಿಜಿನಲ್ಲೀ ಹುಬ್ಬಳ್ಳಿಯವ್ನೇ. ನಮ್ಮಪ್ಪ ಬೆಂಗಳೂರಿಗೆ ಬಂದು ವಾಪಸ್‌ ಹೋಗೋದಕ್ಕೆ ಬಸ್ಸಿಗೆ ದುಡ್ಡಿಲ್ಲ ಎಂದು ಇಲ್ಲೇ ಸೆಟ್ಲ್‌ ಆದ್ರು. ಮುಂದಿನ ವರ್ಷದಿಂದ ಉತ್ತರ ಕರ್ನಾಟಕದವರಿಗೆ ಹೆಚ್ಚು ರಾಜ್ಯೋತ್ಸವ ಪ್ರಶಸ್ತಿ ಕೊಡಲಿಲ್ಲಾಂದ್ರೆ ನಾವೂ ಪ್ರತ್ಯೇಕ ರಾಜ್ಯೋತ್ಸವ ಪ್ರಶಸ್ತಿ ಸ್ಥಾಪನೆ ಮಾಡ್ಬೇಕಾಗುತ್ತೆ..’ ಎಂದು ಯಂಕ್ಟ ತನ್ನ ಒರಿಜಿನಲ್‌ ಬ್ಯಾನೆಯನ್ನು ಹೊರ ಹಾಕಿದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT