ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಮುಗಿದ ಮೇಲೆ...

Last Updated 31 ಅಕ್ಟೋಬರ್ 2014, 15:45 IST
ಅಕ್ಷರ ಗಾತ್ರ

ಒಳ್ಳೆಯ ಕಾದಂಬರಿಯೊಂದು ಚಿತ್ರಿಸುವ ಜೀವನಚಿತ್ರದ ಸ್ವರೂಪ ‘ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ್ದು. ಈಗ ಷೋ ಮುಗಿದಿದೆ. ಜೀವನಚಿತ್ರಗಳನ್ನು ನಿರೂಪಿಸಿದ ರಮೇಶ್‌ ಅರವಿಂದ್‌ ಅವರಲ್ಲಿ ನಿರುಮ್ಮಳ ಭಾವ. ಈ ಕಾರ್ಯಕ್ರಮದ ಕುರಿತ ತಮ್ಮ ವಿಶಿಷ್ಟ ಅನುಭವವನ್ನು ಅವರು ‘ಸಿನಿಮಾ ರಂಜನೆ’ ಜೊತೆ ಹಂಚಿಕೊಂಡಿದ್ದಾರೆ. ಈ ಅನಿಸಿಕೆ, ಸೃಜನಶೀಲ ಕಲಾವಿದನೊಬ್ಬ ತನ್ನ ಕಲಾಕೃತಿಯನ್ನು ಸ್ವತಃ ವಿಶ್ಲೇಷಿಸಿದ ರೀತಿಯಂತಿದೆ.

ಯಶಸ್ಸು ಎಂದರೆ ಏನು?
ಇದು ‘ವೀಕೆಂಡ್‌ ವಿಥ್‌ ರಮೇಶ್‌’ ಷೋ ಕೊನೆಯಲ್ಲಿ ನನ್ನನ್ನು ಕಾಡಿದ ಪ್ರಶ್ನೆ. ಈ ಪ್ರಶ್ನೆಗೆ ಕಾರ್ಯಕ್ರಮದ ಮೂಲಕವೇ ನಾನು ಕಂಡುಕೊಂಡ ಉತ್ತರ– ‘ನಿಜವಾದ ಯಶಸ್ಸು ಎಂದರೆ ನೆಮ್ಮದಿ’. ಈ ನೆಮ್ಮದಿ ಬ್ಯಾಂಕ್‌ ಬ್ಯಾಲೆನ್ಸ್‌, ಕಟೌಟ್‌, ಇದಾವುದೂ ಇಲ್ಲದಿದ್ದಾಗಲೂ ಇರುವಂಥದ್ದು. ‘‘ನಮ್ಮ ಯೋಚನೆ, ಮಾತು ಮತ್ತು ಕೆಲಸ– ಇವು ಮೂರೂ ಒಂದೇ ಆಗಿದ್ದಾಗ ಮಾತ್ರ ಇಂಥ ನೆಮ್ಮದಿ ಸಾಧ್ಯವಾಗಬಲ್ಲದು’’– ಇದು ಕಾರ್ಯಕ್ರಮದ ಕೊನೆಯಲ್ಲಿನ ನನ್ನ ಹೇಳಿಕೆ. ಇದನ್ನು ಜನ ತುಂಬಾ ಮೆಚ್ಚಿಕೊಂಡರು.

ಪ್ರತಿಯೊಬ್ಬರ ಅಂತರಂಗದಲ್ಲೂ ಯಾವುದೋ ಒಂದು ಬಗೆಯ ತುಡಿತ ಇರುತ್ತದೆ. ಆ ತುಡಿತ ನಾವು ಮಾಡುವ ಕೆಲಸಗಳೊಂದಿಗೆ ಸಿಂಕ್‌ ಆದಾಗ ಯಶಸ್ಸು, ನೆಮ್ಮದಿ ದೊರೆಯುತ್ತದೆ ಎನ್ನುವುದು ನನಗೆ ಅರ್ಥವಾಗಿದ್ದು ‘ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಮೂಲಕ. ಒಂದರ್ಥದಲ್ಲಿ ಈ ಕಾರ್ಯಕ್ರಮದಿಂದ ಹೆಚ್ಚು ಲಾಭವಾದುದು ನನಗೇ. ಇದು ನನ್ನನ್ನು ನಾನು ನೋಡಿಕೊಳ್ಳಲು ವೇದಿಕೆಯಾಯಿತು, ಕಲಿಕೆಯ ಅನುಭವವಾಗಿ ಪರಿಣಮಿಸಿತು.

ಬದುಕಿನಲ್ಲಿ ಕುಟುಂಬ ಎಷ್ಟು ಮುಖ್ಯ ಎನ್ನುವುದನ್ನು ಈ ಕಾರ್ಯಕ್ರಮ ಮನದಟ್ಟು ಮಾಡಿಸಿತು. ಒಂದು ಬದುಕು ನಿಜವಾದ ಅರ್ಥದಲ್ಲಿ ಒಂದು ಬದುಕಾಗಿಯಷ್ಟೇ ಇರುವುದಿಲ್ಲ. ಅದು ಒಬ್ಬರ ಬದುಕು ಅಲ್ಲ; ಎಷ್ಟೊಂದು ಬದುಕುಗಳು ಸೇರಿ ಒಂದು ಬದುಕನ್ನು ರೂಪಿಸಿರುತ್ತವೆ. ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಧಕರನ್ನೇ ನೋಡಿ: ಇಲ್ಲಿನ ಉಪೇಂದ್ರ ಅಥವಾ ಯಶ್‌ ನಿರ್ದಿಷ್ಟ ವ್ಯಕ್ತಿಯಾದರೂ, ಅವರ ಬದುಕು ರೂಪುಗೊಂಡ ಹಿನ್ನೆಲೆಯಲ್ಲಿ ಎಷ್ಟೊಂದು ಜನರಿದ್ದಾರೆ. ಅವರೆಲ್ಲರ ಬದುಕುಗಳನ್ನು ಇವರು ಪ್ರತಿನಿಧಿಸುತ್ತಿರುತ್ತಾರೆ. ಈ ಪ್ರಮೇಯವನ್ನು ಷೋ ಅದ್ಭುತವಾಗಿ ತೋರಿಸಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರೊಬ್ಬರೂ ಸಾಧಾರಣ ವ್ಯಕ್ತಿಗಳಲ್ಲ. ಪ್ರತಿಯೊಬ್ಬರದೂ ಅಸಾಧಾರಣ ವ್ಯಕ್ತಿತ್ವವೇ. ಇವರುಗಳ ಬದುಕಿನ ಹಿನ್ನೆಲೆಯನ್ನು ನೋಡಿದಾಗ ‘ಯಶಸ್ಸಿಗೆ ಎಷ್ಟೊಂದು ದಾರಿಗಳಿವೆ’ ಎನ್ನಿಸಿತು. ಉಮಾಶ್ರೀ ಅವರು ನಡೆದ ದಾರಿ ಬೇರೆ, ತಾರಾ ಅವರು ಕ್ರಮಿಸಿದ ಮಾರ್ಗ, ಯಶ್‌ರ ಬದುಕಿನ ಪಥವೇ ಬೇರೆ. ಆದರೆ, ಅಂತಿಮವಾಗಿ ಎಲ್ಲರೂ ಸಾಧಿಸಿದ್ದು ಯಶಸ್ಸನ್ನು! ಈ ದಾರಿಗಳು ಬೆರಗು ಹುಟ್ಟಿಸುವುದರ ಜೊತೆಗೆ, ಬದುಕಿನ ಬಗ್ಗೆ ನಮ್ರತೆಯನ್ನು ಬೆಳೆಸುವಂತಿವೆ.

‘ಜೀವನಕ್ಕಿಂಥ ಅದ್ಭುತವಾದ ಚಿತ್ರಕಥೆ ಮತ್ತೊಂದಿಲ್ಲ’ ಎನ್ನುವುದು ಸಾಧಕರೊಂದಿಗಿನ ಒಡನಾಟದ ಮೂಲಕ ನಾನು ಕಂಡುಕೊಂಡ ಮತ್ತೊಂದು ಸತ್ಯ. ಒಂದು ಸಿನಿಮಾದ ಚಿತ್ರಕಥೆಗಾಗಿ ಅನೇಕ ಜನರು ಸೇರಿಕೊಂಡು ಚರ್ಚಿಸುತ್ತೇವೆ. ಅಂತಿಮವಾಗಿ ನಮಗೆ, ನಿಜ ಜೀವನದ ಘಟನೆಯೊಂದನ್ನು ಕಟ್ಟಿಕೊಡುವುದು ಸಾಧ್ಯವಾಗುವುದಿಲ್ಲ. ವಾಸ್ತವದ ಬದುಕು, ವಿಧಿಯಾಟ– ಇವೆಲ್ಲವೂ ಅದ್ಭುತ ಚಿತ್ರಕಥೆಗಳು. ಈ ಷೋ ನಿರೂಪಿಸುವ ಮೊದಲು, ನಾನು ನೋಡಿದ್ದು ನನ್ನ ಅನುಭವದ ಒಂದು ಪ್ರಪಂಚವನ್ನು ಮಾತ್ರ. ತಾರಾ, ಯಶ್‌, ಉಪೇಂದ್ರ, ರವಿಚಂದ್ರನ್‌– ಎಷ್ಟೊಂದು ಪ್ರಪಂಚಗಳನ್ನು ನೋಡುವ ಅವಕಾಶ ನನಗೆ ದೊರೆಯಿತು. ಈ ಸಾಧನೆಯ ಜಗತ್ತುಗಳೆಲ್ಲ ಒಂದೊಂದು ಕನ್ನಡಿ ಇದ್ದಂತೆ. ಒಂದೊಂದು ಕನ್ನಡಿ ಒಂದು ವಿಶ್ವವನ್ನು ಕಾಣಿಸುತ್ತದೆ. ಇಷ್ಟೆಲ್ಲ ಕಥೆಗಳನ್ನು ಕಂಡು–ಕೇಳಿಸಿಕೊಂಡ ನಂತರ– ‘ಯಾವುದು ಸರಿ ಎಂದು ಹೇಳುವುದು ತಪ್ಪು’ ಎಂದು ನನಗನ್ನಿಸಿತು.

ಸಾಧಕರ ಕುರ್ಚಿಯಲ್ಲಿ ಕುಳಿತವರೆಲ್ಲರೂ ಅಂತಿಮವಾಗಿ ಹಂಚಿಕೊಂಡಿದ್ದು ನೋವನ್ನೇ. ಈ ನೋವನ್ನು ಕೆಲವರು ನಗುವಿನ ಮೂಲಕ, ಕೆಲವರು ಅಳುವಿನ ಮೂಲಕ ಹಂಚಿಕೊಂಡರು. ಈ ಎಲ್ಲ ಕಥೆಗಳು ನೋಡುಗರಿಗೆ ತಮ್ಮದೇ ಕಥೆಗಳು ಅನ್ನಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರಣವಿರಬೇಕು.

ಅಂದಹಾಗೆ, ಸಾಧಕರ ಕುರ್ಚಿಯಲ್ಲಿ ಕುಳಿತವರೆಲ್ಲ ನನ್ನ ಆತ್ಮೀಯರೇ. ಆ ಕಾರಣದಿಂದಾಗಿ ಅವರೊಂದಿಗಿನ ಸಂವಹನ ಸಲೀಸಾಯಿತು. ನಮ್ಮದು ವ್ಯಕ್ತಿಯೊಬ್ಬರ ಸಂದರ್ಶನದ ಕಾರ್ಯಕ್ರಮವಾಗಿರಲಿಲ್ಲ. ಒಡನಾಡಿಗಳ ಮೂಲಕ ಸಾಧಕರ ಜೀವನಚಿತ್ರ ಕಟ್ಟಿಕೊಡುವ ಪ್ರಯತ್ನ ನಡೆಸಿದವು. ಈ ನಿಟ್ಟಿನಲ್ಲಿ– ವರ್ಷ, ವರುಣ್‌, ಶರಣ್‌, ಅನಿಲ್‌, ಆಂಥೋನಿ, ನಿರ್ದೇಶಕರಾದ ರಾಘವೇಂದ್ರ ಸೇರಿದಂತೆ ಸುಮಾರು ಎಂಬತ್ತು ಜನರ ಅದ್ಭುತ ತಂಡವೊಂದು ನನ್ನ ಜೊತೆಗಿತ್ತು. ಈಗ ತೆರೆಬಿದ್ದಿದೆ. ಎಲ್ಲರ ಮನಸ್ಸಿನಲ್ಲೂ ಒಂದು ಖಾಲಿ ಭಾವ. ಮತ್ತೊಂದು ಆವೃತ್ತಿಯ ಕನಸಂತೂ ಕಣ್ಣಮುಂದಿದೆ.

‘ಅಮೆರಿಕ ಅಮೆರಿಕ’, ‘ಅಮೃತವರ್ಷಿಣಿ’ ಚಿತ್ರಗಳ ಸಂದರ್ಭದಲ್ಲಿ ಜನರೊಂದಿಗೆ ಅದ್ಭುತವಾದ ಸಂವಹನವೊಂದು ನನಗೆ ಸಾಧ್ಯವಾಗಿತ್ತು. ‘ರಾಮ ಶಾಮ ಭಾಮ’ ಚಿತ್ರದ ಸಂದರ್ಭದಲ್ಲೂ ಈ ಸಖ್ಯ ಸಾಧ್ಯವಾಗಿತ್ತು. ಇದು ಮತ್ತೆ ಸಾಧ್ಯವಾಗಿದ್ದು ‘ವೀಕೆಂಡ್‌ ವಿಥ್‌ ರಮೇಶ್‌’ ಸಂದರ್ಭದಲ್ಲಿ.

ಜನರನ್ನು ಮುಟ್ಟುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ನಮ್ಮ ಕೆಲಸವನ್ನು ಸಹೃದಯರು ಹೃದಯಪೂರ್ವಕವಾಗಿ ಸ್ವೀಕರಿಸುವುದು ಮತ್ತೂ ಕಷ್ಟ. ನಮ್ಮ ಕೆಲಸವೇ ನಮ್ಮ ಬ್ರಾಂಡ್‌ ಎನ್ನುವುದು ನನ್ನ ನಂಬಿಕೆ. ಈಗ ಕಾರ್ಯಕ್ರಮವೇ ಅದರ ಯಶಸ್ಸಿನ ಬಗ್ಗೆ ಮಾತನಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT