ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ ಹೇಳುವೆ ನಮ್ಮ ಕಥೆಯ

ವೇಶ್ಯಾವೃತ್ತಿಯಲ್ಲಿ ನಿರತರಾಗಿರುವ ಇಬ್ಬರು ಮಹಿಳೆಯರ ಅನುಭವ ಕಥನ ಇಲ್ಲಿದೆ.
Last Updated 12 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನನಗಾಗ 13 ವರ್ಷ. ತುಂಬು ಸಂಸಾರ. ಶಾಲೆ ಬಿಡಿಸಿದ್ದರು. ಶಾಲೆಗೆ ಹೋಗುತ್ತೇನೆ ಎಂದು ಹಟ ಹಿಡಿದಾಕೆಯನ್ನು ಹೊಡೆದು–ಬಡಿದು ಮಾಡಿದರು.  ಒಂದು ದಿನ ವಿಪರೀತ ಹೊಡೆತ ತಿಂದು ಮನೆ ಬಿಟ್ಟು ಹುಬ್ಬಳ್ಳಿಗೆ ಬಂದೆ; ನನ್ನಕ್ಕನ ಮನೆಗೆ ಹೋಗಿ ಅಲ್ಲಿ­ಯಾ­ದರೂ ಓದಬಹುದೇನೋ ಎಂಬ ಆಸೆಯಿಂದ. ಅಳುತ್ತಾ ಬಸ್‌ ನಿಲ್ದಾಣದಲ್ಲಿ ಕುಳಿತಿದ್ದ ನನ್ನನ್ನು ಒಬ್ಬ ಹೆಣ್ಣು ಮಗಳು ಅಕ್ಕನ ಮನೆಗೆ ಬಿಡು­ವುದಾಗಿ ಹೇಳಿ ಕರೆದೊಯ್ದಳು.  ಆದರೆ ಪೂನಾದ ಘರ್‌ವಾಲಿಗೆ ನನ್ನನ್ನು 10 ಸಾವಿರ ರೂಪಾಯಿಗೆ ಮಾರಿದ್ದಳು!

ಘರ್‌ವಾಲಿ ಹೇಳಿದಂತೆ ಕೇಳದಿದ್ದರೆ ಕೋಣೆಯಲ್ಲಿ ಕೂಡಿ ಹಾಕಿ ಹೊಡೆಯುತ್ತಿದ್ದರು. ಅಲ್ಲಿದ್ದವರು ನನ್ನನ್ನು ಸಮಾಧಾನ ಮಾಡಿ, ಆಕೆಯ ದುಡ್ಡು ತೀರು­ವವರೆಗೆ ದುಡಿದು ಹೊರಡು ಎಂದು ಹೇಳಿದರು. ಅವರು ಹೇಳಿದಂತೆ ಕೇಳಿ ಎಂಟ್ಹತ್ತು ತಿಂಗಳಿಗೆ ದುಡ್ಡು ಮುಟ್ಟಿಸಿ ಹುಬ್ಬಳ್ಳಿ ಬಸ್ಸು ಹತ್ತಿದೆ. ಮನೆಯವರು ಸೇರಿಸದೆ ಹೊರ ಅಟ್ಟಿದರು. ರೋಡಿನ ಮೇಲೆ ನಿಲ್ಲುವ ಕೆಲಸ ಮತ್ತೆ ಆರಂಭ­ವಾಯಿತು. ನಾಲ್ಕು ಗೋಡೆಗಳ ಒಳಗೆ ಗಿರಾಕಿಗಳು ಏನೇನು ಮಾಡಿಲ್ಲ? ರೇಜರ್‌ ಹಾಕುವುದು, ಹೊಡೆಯು­ವುದು, ನಮ್ಮ ದುಡ್ಡನ್ನೂ ದೋಚುವುದು... ಇದೆಲ್ಲ ‘ನಮ್ಮ ಹೆಣ್ಮಕ್ಕಳು’ ನಿತ್ಯ ಅನುಭವಿಸುವ ಹಿಂಸೆ.

20 ವರ್ಷಗಳ ಇಂಥ ಹಿಂಸೆಯಿಂದ ನನಗೀಗ ಮುಕ್ತಿ ಸಿಕ್ಕಿದೆ. ನನಗೊಬ್ಬ ಬಾಳ ಸಂಗಾತಿ ಸಿಕ್ಕಿದ್ದಾರೆ. ಆದರೆ ನಾನು, ನನ್ನಂತೆ ನರಳುತ್ತಿರುವವರ ಬದುಕಿಗೆ ಬೆಂಬಲವಾಗಿ SPAD (Society For Pepole’s Action for Development) ನೆರವಿನಿಂದ  ‘ಬೆಳಕು’ ಎಂಬ ಸಂಸ್ಥೆಯನ್ನು ಕಟ್ಟಿದ್ದೇನೆ. ಎಚ್‌ಐವಿ, ಕಾಂಡೋಮ್‌ ಬಳಕೆ ಬಗ್ಗೆ ಅರಿವು ಮೂಡಿಸು­ತ್ತೇವೆ.

ಧಾರವಾಡ ಜಿಲ್ಲೆಯ ನಮ್ಮ ಹೆಣ್ಮಕ್ಕಳು ಸೇರಿ ‘ರಾಣಿ ಚೆನ್ನಮ್ಮ ಸಹಕಾರ ಸಂಸ್ಥೆ’ಯನ್ನು ಮಾಡಿಕೊಂಡಿ­ದ್ದೇವೆ. ಜಡ್ಡು–ಜಾಪತ್ರೆ ಬಂದರೆ, ಮಕ್ಕಳ ಓದಿಗೆ  ಸಾಲ ಪಡೆಯ­ಬಹುದು. ಅನಾಥವಾಗಿ ಹೆಣವಾದ ನಮ್ಮ ಹೆಣ್ಮಕ್ಕಳ ಅಂತ್ಯಕ್ರಿಯೆಯನ್ನು ನಾವೇ ದುಡ್ಡು ಸೇರಿಸಿ ಮಾಡು­ತ್ತೇವೆ. ಎಚ್‌ಐವಿ ಪಾಸಿಟಿವ್ ಇದ್ದವ­ರಿಗೆ ಚಿಕಿತ್ಸೆ ಕೊಡಿಸುತ್ತೇವೆ. ನಮಗೆ ಕಾನೂನು ಮಾನ್ಯತೆ ಸಿಕ್ಕರೆ ಹಿಂಸೆ ತಪ್ಪಬಹುದು.  ನಮಗೂ ಎಲ್ಲ ಸೌಲಭ್ಯ ಸಿಕ್ಕು ಹೊಟ್ಟೆಗೆ–ಬಟ್ಟೆಗೆ ಆಸರೆ ಆಗ ಬ­ಹುದು. ಆದರೆ, ಅದರ ಜೊತೆಗೆ ಬ್ರೋಕರ್‌ಗಳು, ತಲೆ­­ಹಿಡುಕರು ಬಲವಂತದಿಂದ ಹೆಣ್ಣು ಮಕ್ಕಳನ್ನು ಈ ಕೆಲಸಕ್ಕೆ ದೂಡುವುದೂ ಹೆಚ್ಚಾಗಬಹುದು.
ಕಲಾದೇವಿ

ನಾನು 13 ವರ್ಷದವಳಿದ್ದಾಗ ಯುವಕ­ನೊಬ್ಬ  ನನ್ನನ್ನು ಬಲಾತ್ಕಾರ ಮಾಡಿಬಿಟ್ಟ. ಮುಂದೆ ಗರ್ಭಿಣಿ ಎಂದು ತಿಳಿದಾಗ ಅಪ್ಪ ಮನೆಯಿಂದ ಹೊರ­ಹಾಕಿದ. ನನಗೆ ರಸ್ತೆಯೇ ಗತಿಯಾಯಿತು. ಈ ನಡುವೆ ನನಗೆ ಮದುವೆ­ಯಾಗಿ ಮೂವರು ಮಕ್ಕಳೂ ಆದವು. ಗಂಡ ಇದ್ದಕ್ಕಿ­ದ್ದಂತೆ ಬಿಟ್ಟು ಹೋಗಿಬಿಟ್ಟ. ಇಬ್ಬರು ಗಂಡು ಮಕ್ಕಳನ್ನು ಗೌಂಡಿ ಕೆಲಸಕ್ಕೆ ಕಳಿಸುತ್ತಿದ್ದೆ. ನಾನು ‘ಹೀಗೆ’ ಎಂದು ಗೊತ್ತಾದ ಮೇಲೆ ಅವರು ನನ್ನನ್ನು ತೊರೆದರು. ಈ ನಡುವೆ ನನ್ನಂತಹ ಇನ್ನೊಂದಿಬ್ಬರ ಜೊತೆ ಸೇರಿ ಮನೆ ಮಾಡಿ ಈ ಕೆಲಸಕ್ಕೆ ನಿಂತೆವು. ಪೊಲೀಸರು ರೇಡ್‌ ಮಾಡಿದರು. ಒಳಗೆ ಹಾಕಿ­ದರು. ಹೊಡೆದರು, ಬಡಿ­ದರು. ಇಂಥ ಅವಮಾನ, ಬೈಗುಳಕ್ಕೆ ಲೆಕ್ಕವಿಲ್ಲ.

ನನ್ನಿಂದ ದೂರ ಹೋದ ಒಬ್ಬ ಮಗನ ಹೆಂಡತಿ ಸತ್ತಿದ್ದ­ರಿಂದ ಅವನ ಮಗಳನ್ನು ತಂದು ಸಾಕಿಕೊಂಡಿದ್ದೇನೆ. ಆಕೆ­ಯನ್ನು ಚೆನ್ನಾಗಿ ಓದಿಸಬೇಕು. ಸುಡುವ ಹೊಟ್ಟೆ ತಣ್ಣ­ಗಾಗ­­ಬೇಕೆಂದರೆ ನಾನು ಈ ವಯಸ್ಸಲ್ಲೂ ಗಿರಾಕಿ ಕರೆ­ದಲ್ಲಿಗೆ ಹೋಗ­ಬೇಕು! ನಮ್ಮ ಕೆಲಸಕ್ಕೇನಾ­ದರೂ ಕಾನೂನು ಮಾಡು­ತ್ತಾರೆಂದರೆ  ನಮ್ಮ ಜೀವನಕ್ಕೊಂದು ಆಧಾರ­ವಾಗ­ಬಹುದು. ಪೊಲೀಸರ ಹೊಡೆತ, ಗಿರಾಕಿಗಳ ದೌರ್ಜನ್ಯ ತಪ್ಪಬಹುದು.
-ಅಂಜನಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT