ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದನವಿರಾಮಕ್ಕೆ ಅಮೆರಿಕ ಯತ್ನ

ಇಸ್ರೇಲ್‌ಗೆ ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ
Last Updated 23 ಜುಲೈ 2014, 19:41 IST
ಅಕ್ಷರ ಗಾತ್ರ

ಗಾಜಾ/ಜೆರುಸಲೆಂ (ಪಿಟಿಐ): ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಘರ್ಷಣೆಗೆ ಅಂತ್ಯ ಹಾಡಲು ಇಸ್ರೇಲ್‌ ಮತ್ತು ಹಮಾಸ್‌ ಪಡೆಗಳು ನಿರಾಕರಿಸಿದ್ದು, ಬುಧವಾ­ರವೂ ತೀವ್ರ ಪ್ರಮಾಣದ ದಾಳಿ ಮುಂದುವರಿದಿದೆ. ಘರ್ಷಣೆಯಲ್ಲಿ ಮೃತಪಟ್ಟ ಪ್ಯಾಲೆಸ್ಟೀನಿಯನ್ನರ ಸಂಖ್ಯೆ 650ಕ್ಕೆ ಏರಿದ್ದು 31 ಮಂದಿ ಇಸ್ರೇಲ್‌ ಸೈನಿಕರು ಹತರಾಗಿದ್ದಾರೆ.

ಈ ನಡುವೆ ಗಾಜಾಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಮೂಲಕ ಶಾಂತಿ ಮತ್ತು ಸುವ್ಯವಸ್ಥೆ ಜಾರಿಗೆ ಪ್ರಯತ್ನಿಸುತ್ತಿರುವ ಅಮೆರಿಕದ ವಿದೇಶಾಂಗ ಕಾರ್ಯ­ದರ್ಶಿ ಜಾನ್ ಕೆರಿ ಅವರು ಜೆರುಸಲೆಂನಲ್ಲಿ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ.

ಹಮಾಸ್‌ ಪಡೆಗಳ ನಿಯಂತ್ರಣದಲ್ಲಿರುವ ಗಾಜಾ ಪಟ್ಟಿಯಿಂದ ಕ್ಷಿಪಣಿಯೊಂದು ಇಸ್ರೇಲ್‌ನ ಅತಿ ದೊಡ್ಡ ವಿಮಾನ ನಿಲ್ದಾಣವಾದ ಟೆಲ್‌ ಅವಿವ್‌ನಲ್ಲಿರುವ ಬೆನ್‌­ಗುರಿ­ಯನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬಿದ್ದಿದೆ.. ಇದರಿಂದ ಮುನ್ನೆಚ್ಚರಿಕೆ ಸಲುವಾಗಿ ಇಸ್ರೇಲ್‌ಗೆ ತೆರಳುವ ಅನೇಕ ಅಂತರರಾಷ್ಟ್ರೀಯ ವಿಮಾನ­ಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಅಮೆರಿಕ ಮತ್ತು ಯುರೋಪ್‌ ದೇಶಗಳಿಂದ ತೆರಳ­ಬೇಕಾದ ಸುಮಾರು 80ಕ್ಕೂ ಅಧಿಕ ವಿಮಾನಗಳು ಬುಧವಾರ ಹಾರಾಟ ನಡೆಸಲಿಲ್ಲ.

ಇಸ್ರೇಲ್‌ ಹೆಚ್ಚುವರಿ ವಿಮಾನ ಸಂಪರ್ಕ ವ್ಯವಸ್ಥೆ ಮಾಡುವ ಮೂಲಕ ಇತರೆ ದೇಶಗಳಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸಿತು. ಆದರೆ ಇಸ್ರೇಲ್‌ ಪ್ರಯಾಣಿಕರನ್ನು ಹೊತ್ತ ವಿಮಾನಗಳು ಮಾರ್ಗ ಬದಲಿಸಿ ಇಸ್ತಾನ್‌ಬುಲ್‌ನಲ್ಲಿ ಇಳಿಯುತ್ತಿವೆ.

ವಿಮಾನ ನಿಲ್ದಾಣ ಸಮೀಪ ರಾಕೆಟ್‌ ದಾಳಿ ನಡೆದಿ­ದ್ದರಿಂದ ಒಂದು ದಿನದ ಮಟ್ಟಿಗೆ ಇಸ್ರೇಲ್‌ಗೆ ತೆರಳುವ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತ­ಗೊಳಿ­ಸಿರು­ವುದಾಗಿ ಅಮೆರಿಕ ವಿಮಾನಯಾನ ಸಂಸ್ಥೆ ತಿಳಿಸಿದೆ.

ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡುವ ಬೆದರಿಕೆಯೊಡ್ಡಿ,  ಇಸ್ರೇಲ್‌ಗೆ ತೆರಳುವ ಎಲ್ಲಾ ಅಂತರ­ರಾಷ್ಟ್ರೀಯ ವಿಮಾನಗಳು ಹಾರಾಟ ಸ್ಥಗಿತಗೊಳಿ­ಸಬೇಕು ಎಂದು ಹಮಾಸ್‌ ಸಶಸ್ತ್ರ ಪಡೆ ಕಳೆದ ವಾರ ಎಚ್ಚರಿಕೆ ನೀಡಿತ್ತು. ಪ್ರವಾಸೋದ್ಯಮ ಆದಾಯದ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ಇಸ್ರೇಲ್‌ಗೆ ಇದರಿಂದ ಭಾರಿ ನಷ್ಟ ಉಂಟಾಗಿದೆ ಎನ್ನಲಾಗಿದೆ.

ಕೆರಿ– ಬಾನ್‌ ಕಿ ಮೂನ್ ಚರ್ಚೆ
ವಿಮಾನಯಾನದ ಬಗ್ಗೆ ಅಮೆರಿಕದ ಎಚ್ಚರಿಕೆಯ ನಡುವೆಯೂ ಟೆಲ್‌ ಅವಿವ್‌ಗೆ ತೆರಳಿದ ಕೆರಿ ಅವರು ಜೆರುಸಲೆಂನಲ್ಲಿ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಘರ್ಷಣೆ ಪೀಡಿತ ಪ್ರದೇಶದಲ್ಲಿ ದೀರ್ಘಾವಧಿ ಪ್ರವಾಸ ಕೈಗೊಂಡಿರುವ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತಾನ್ಯಾಹು ಮತ್ತು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮುದ್‌ ಅಬ್ಬಾಸ್‌ ಅವರನ್ನು ಭೇಟಿ ಮಾಡಲಿದ್ದಾರೆ.

ತಕ್ಷಣದ ಕದನ ವಿರಾಮಕ್ಕೆ ಒತ್ತಡ ಹೇರುವ ಸಲುವಾಗಿ ಜಾನ್‌ ಕೆರಿ ಮಂಗಳವಾರ ಕೈರೊದಲ್ಲಿ ಈಜಿಪ್ಟ್‌ ಮತ್ತು ಅರಬ್‌ ಲೀಗ್‌ನ ಅಧಿಕಾರಿಗ­ಳೊಂದಿಗೆ ಸಮಾಲೋಚನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT