ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಮನೆಯಲ್ಲಿ ಮೆಟ್ಟಿಲುಗಳ ದೃಶ್ಯಕಾವ್ಯ

Last Updated 16 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹಿಂದಿನ ಕಾಲದ ಮನೆಗಳಲ್ಲಿ ಮೆಟ್ಟಿಲುಗಳು ಮೇಲು ಅಂತಸ್ತಿಗೆ, ಅಟ್ಟಕ್ಕೆ ಹತ್ತಲಷ್ಟೆ ಇರುವಂತಹವು ಎಂಬ ಭಾವನೆ ಇತ್ತು. ಆದರೆ ಈಗ ಮೆಟ್ಟಿಲುಗಳು ಕೂಡ ಇಂಟೀರಿಯರ್ ಡೆಕೊರೇಷನ್‌ನ ಅವಿಭಾಜ್ಯ ಅಂಗವಾಗಿವೆ. ಮನೆಯ ಮಹಡಿಗೆ, ಬಹು ಅಂತಸ್ತಿನ ಸಂಕೀರ್ಣಗೊಳಿಗೋ ಹತ್ತಿಳಿಯುವ ಮೆಟ್ಟಿಲುಗಳೇ ಆಗಿರಬಹುದು, ತಗ್ಗಿನಲ್ಲಿರುವ ಹಜಾರಕ್ಕೆ ಇಳಿಯಲು ಇರುವ ಮೆಟ್ಟಿಲಾಗಿರಬಹುದು, ಸಾಯಂಕಾಲ ಗಾಳಿ ತೆಗೆದುಕೊಳ್ಳಲೆಂದು ಟೆರೆಸ್‌ ಹೋಗಿ ಕುಳಿತುಕೊಳ್ಳಲು ಇರುವ ಮೆಟ್ಟಿಲುಗಳಿರಬಹುದು ಎಲ್ಲದರಲ್ಲೂ ಈ ನಾವೀನ್ಯ ಸ್ಪರ್ಶ, ಹೊಸ ಪರಿಕಲ್ಪನೆಯ ವೇಶ.

ಮನೆಯಲ್ಲಿಯೂ ಈಗ ಮೆಟ್ಟಿಲುಗಳು ವಿಶೇಷ ಆಸಕ್ತಿ ವಹಿಸಿ ಮನೆಯ ಅಂದವನ್ನು ಹೆಚ್ಚಿಸುವಂತೆಯೇ ವಿನ್ಯಾಸಗೊಳಿಸಲಾಗುತ್ತಿದೆ.
ಹಿಂದೆ ಮನೆಗಳಲ್ಲಿ ಮೆಟ್ಟಿಲುಗಳೆಂದರೆ ಏಣಿಯ ಹಾಗೆ ಇರುತ್ತಿದ್ದವು. ಆದರೆ ಈಗ ಹೊಸ ರೂಪು, ಶೈಲಿ, ವಿನ್ಯಾಸ ನೀಡಲಾಗುತ್ತಿದೆ.
ಈಗ ನೆಲ, ಗೋಡೆ, ಮೇಲ್ಛಾವಣಿಯಂತೆ ಮೆಟ್ಟಿಲುಗಳೂ ಕೂಡ ಅತಿಥಿ ಅಭ್ಯಾಗತರ ಗಮನವನ್ನು ಸೆಳೆಯುತ್ತವೆ, ವೈವಿಧ್ಯಪೂರ್ಣವಾಗಿರುತ್ತವೆ.

ಮಂಗಳೂರಿನ ಡಾ. ಪ್ರಕಾಶ್ ರಾವ್ ಮನೆಯ ಮೆಟ್ಟಿಲುಗಳು  ಸಹ ಆಕರ್ಷಕವಾಗಿವೆ. ಸಿಮೆಂಟಿನಿಂದಲೇ ನಿರ್ಮಾಣಗೊಂಡಿದ್ದರೂ ಅಂಚಿಗೆ ಉತ್ತಮ ಜಾತಿಯ ಮರದ ಪಟ್ಟಿ ಜೋಡಿಸಲಾಗಿದೆ. ಇಬ್ಬದಿಯಲ್ಲಿ ಉಕ್ಕಿನ ಸರಳುಗಳನ್ನು ಹಾಕಲಾಗಿದೆ. ಎಲ್ ಆಕಾರ ಬರುವಂತೆ ಇರಿಸಲಾಗಿದೆ.

ತೀರ್ಥಹಳ್ಳಿ ಮುರುಳಿ ಅವರ ಮನೆಯ ಮೆಟ್ಟಿಲುಗಳು ಸರಳವಾಗಿ ಕಂಡರೂ ಬೀಟೆ ಮರವನ್ನು ಹಿಂಬದಿಯಲ್ಲಿಯೂ ಉಪಯೋಗಿಸಿ ಚೌಕಾಕಾರ ನೀಡಲಾಗಿದೆ. ಮಂಗಳೂರಿನ ಕೆ.ಎಂ.ಸಿಯ ಪ್ರೊಫೆಸರೊಬ್ಬರ ಮನೆಯ ಮೆಟ್ಟಿಲುಗಳು ಸಿಮೆಂಟಿನಿಂದ ನಿರ್ಮಿಸಲ್ಪಟ್ಟಿದ್ದು, ಒಂದರ ಮೇಲೊಂದು ಪುಸ್ತಕ ಇರಿಸಿದಂತೆ ಕಾಣುತ್ತವೆ. ಎರಡು ಕಡೆ ನಿರ್ಮಿಸಲಾದ ಕಂಬಗಳಲ್ಲಿ ಕಲಾತ್ಮಕ ಕೆತ್ತನೆ ಕಾಣಬಹುದಾಗಿದೆ. ಜತೆಗೆ ಗಾಜನ್ನೂ ಅಳವಡಿಸಲಾಗಿದ್ದು, ವಿಶಿಷ್ಟ ಆಕರ್ಷಣೆ ಬಂದಿದೆ.

ದೇವಂಗಿಯ ಮನುದೇವ್‌ ಅವರ ‘ಅತಿಥ್ಯ’ ಮನೆಯಲ್ಲಿ ಪ್ರತಿಯೊಂದು ಮೆಟ್ಟಿಲೂ ಸಹ ಕುಶನ್ ಚೇರ್‌ ಕೂರಿಸಿದ ಹಾಗೆ ಕಾಣಿಸುತ್ತದೆ. ಎರಡೂ ಕಡೆ ತೇಗದ ಮರದ ಅಡ್ಡಪಟ್ಟಿಗಳನ್ನು ಬಳಸಲಾಗಿದೆ. ಸುರತ್ಕಲ್‌ನಿಂದ ಸ್ವಲ್ಪ ಮುಂದೆ ಪಯಣಿಸಿದಾಗ ಕಾಣಿಸುವ ಮನೆಯೊಂದರಲ್ಲಿ ಹಳತು ಮತ್ತು ಹೊಸತನ್ನು ಮೇಳೈಸಿ ಮೆಟ್ಟಿಲುಗಳು ನಿರ್ಮಿಸಲಾಗಿದೆ.

ಕನ್ನಡದ ಗಾದೆಯಂತೆ ಹೊಸ ಚಿಗುರು ಹಳೆ ಬೇರು ಸೇರಿದರೆ ಮನೆ ಸೊಬಗು ಎಂಬಂತೆ ಮೆಟ್ಟಿಲುಗಳು ಸಿಮೆಂಟಿನಿಂದ ನಿರ್ಮಿತವಾಗಿದ್ದು ಒಂದೊಂದು ಮೆಟ್ಟಿಲುಗಳ ಮೇಲೆ 200ರಿಂದ 300 ವರ್ಷಗಳ ಹಿಂದಿನ ವಸ್ತುಗಳನ್ನು ಇರಿಸಿ ಶೃಂಗರಿಸಲಾಗಿದೆ.
ಆಧುನಿಕ ಯುಗದಲ್ಲಿ ಮನೆಗಳಲ್ಲಿರುವ ಮೆಟ್ಟಿಲುಗಳು ಆ ಗೃಹದ ಅಂತರಿಕ ಸೌಂದರ್ಯದಲ್ಲಿ ಗಮನಾರ್ಹ ಸ್ಥಾನವನ್ನು ಪಡೆದುಕೊಂಡಿವೆ ಎಂದರೆ ತಪ್ಪಾಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT