ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಮನೆ ನನಸಾಗಿಸಿಕೊಳ್ಳಿ...

Last Updated 4 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಮನೆ ಕಟ್ಟಿಸುವ ಆಲೋಚನೆಯಲ್ಲಿದ್ದೀರಾ? ಸರಿ, ಯಾವ ಯಾವ ಸಾಮಗ್ರಿ ಬೇಕು? ಯಾವುದಕ್ಕೆ ಎಷ್ಟು ಹಣ ಬೇಕಾಗುತ್ತದೆ? ಎಷ್ಟು ದಿನದಲ್ಲಿ ಮನೆ ಕಟ್ಟಿ ಮುಗಿಸಬಹುದು? ಎಲ್ಲೆಲ್ಲಿ ಸಮಸ್ಯೆ, ಸವಾಲು ಎದುರಾಗಬಹುದು? ಈ ಬಗ್ಗೆ ಏನಾದರೂ ತಿಳಿದುಕೊಂಡಿದ್ದೀರಾ?

ನಿಮ್ಮ ಉತ್ತರ ‘ಇಲ್ಲ’ ಎಂದಾಗಿದ್ದರೆ ಮನೆ ಕಟ್ಟುವ ವಿಚಾರವನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ, ಈ ಮೇಲಿನ ವಿಚಾರಗಳೂ ಸೇರಿದಂತೆ ಮನೆ ನಿರ್ಮಾಣದ ವಿವಿಧ ಹಂತಗಳ ಕುರಿತು ಸರಿಯಾದ ಮಾಹಿತಿ ಸಂಗ್ರಹಿಸಿಕೊಳ್ಳಿರಿ. ನಿಮ್ಮ ಪರಿಚಯದವರಲ್ಲಿ ಇತ್ತೀಚೆಗೆ ಯಾರಾದರೂ ಮನೆ ಕಟ್ಟಿ ‘ಪೂರ್ಣಗೊಳಿಸಿದ್ದರೆ’ ಅಂತಹವರನ್ನು ತುಸು ವಿರಾಮದಲ್ಲಿ ಭೇಟಿ ಮಾಡಿರಿ. ಹಾಗೂ ‘ಮನೆ ಕಟ್ಟುವ ಅನುಭವದ ಕಥೆ’ಯನ್ನು ಅವರಿಂದ ಕೇಳಿ ತಿಳಿದುಕೊಳ್ಳಿರಿ.

ಇಲ್ಲವಾದರೆ ನಿಮ್ಮ ಬಹು ದಿನದ ‘ಕನಸಿನ ಮನೆ’ಯನ್ನು ಕಟ್ಟಿ ಮುಗಿಸುವ ವೇಳೆಗೆ ನಿಮಗೆ ‘ಸಾಕಪ್ಪಾ ಸಾಕು’ ಎನಿಸಿಬಿಡಬಹುದು ಅಥವಾ ನೀವು ವಿವಿಧ ಹಂತಗಳಲ್ಲಿ ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕಿಕೊಳ್ಳಬಹುದು.

ಅಂದಾಜು ವೆಚ್ಚ
ಮೈಸೂರಿನಲ್ಲಿ ಸದ್ಯ ಮನೆ ಕಟ್ಟುವ ವೆಚ್ಚ 1 ಚದರಕ್ಕೆ (10 ಅಡಿ ಉದ್ದ x10 ಅಡಿ ಅಗಲ) ಅಂದಾಜು ₨1.45 ಲಕ್ಷ ವೆಚ್ಚವಾಗುತ್ತಿದೆ ಎನ್ನುತ್ತಾರೆ ಮನೆ ನಿರ್ಮಾಣದ ಗುತ್ತಿಗೆ ಕೆಲಸ ವಹಿಸಿಕೊಳ್ಳುವ ಹೊನ್ನೇಗೌಡ.

ಭೂಮಿ ಅಗೆಯುವುದು, 5ರಿಂದ 6 ಕೋರ್ಸ್‌ (ಸೈಜುಗಲ್ಲಿನ ಸಾಲು)  ಅಡಿಪಾಯ ಹಾಕುವುದು, ಅದರ ಮೇಲೆ ಸಾಧಾರಣ ಗುಣಮಟ್ಟದ

(₨4.50 ಬೆಲೆಯ) ಇಟ್ಟಿಗೆ ಬಳಸಿ ಗೋಡೆ ಕಟ್ಟುವುದು, ಜುವಾರಿ ಸಿಮೆಂಟ್‌, ಗುಣಮಟ್ಟದ ಉಕ್ಕಿನ ಸರಳುಗಳ ಬಳಕೆ ಹಾಗೂ ಒಳಗಿನ ಬಾಗಿಲುಗಳಿಗೆ ಬೇವಿನ ಮರದ ಚೌಕಟ್ಟು ಮತ್ತು ಹೊನ್ನೆ ಮರದ ಹಲಗೆ ಬಳಕೆ, ಮುಂಬಾಗಿಲು ಮತ್ತು ದೇವರ ಕೋಣೆ ಬಾಗಿಲಿಗೆ ಮಾತ್ರ ತೇಗದ ಮರ, ಇಡೀ ಮನೆಯ ನೆಲಕ್ಕೆ ಸಾಮಾನ್ಯ ದರ್ಜೆಯ ವೆಟ್ರಿಫೈಡ್‌ ಟೈಲ್ಸ್ (ನೆಲಹಾಸು) ಬಳಸಿದರೆ ಕಡಿಮೆ ಎಂದರೂ ತಾರಸಿ ಮನೆಯ ತಲಾ ಒಂದು ಚದರ ನಿರ್ಮಾಣಕ್ಕೆ ₨1.45 ಲಕ್ಷ ವೆಚ್ಚವಾಗುತ್ತದೆ ಎನ್ನುವುದು ಅನುಭವಿ ಹೊನ್ನೇಗೌಡ ಅವರ ಲೆಕ್ಕಚಾರದ ಮಾತು.

ಮಲಗುವ ಎರಡು  ಕೊಠಡಿಗಳಿಗೂ ಸಾಮಾನ್ಯ ಸ್ವರೂಪದ ವಾರ್ಡ್‌ರೋಬ್‌ಗಳು, ಅಡುಗೆ ಮನೆಗೂ ಒಂದು ಪ್ಲೈವುಡ್‌ ಷೆಲ್ಫ್‌ ಎಂದರೆ ಅದಕ್ಕೆ ₨75,000ದಿಂದ ₨85,000ದವರೆಗೂ ಹೆಚ್ಚುವರಿ ವೆಚ್ಚ ಮಾಡಬೇಕು.

ಮೈಸೂರಿನಲ್ಲಿ 20 ಅಡಿ ಉದ್ದ, 30 ಅಡಿ ಅಗಲದ ನಿವೇಶನದಲ್ಲಿ ಗರಿಷ್ಠ ಐದು ಚದರದ ಮನೆ ಕಟ್ಟಬಹುದು.  ಇದರೊಟ್ಟಿಗೆ ತಾರಸಿಗೆ ಮೆಟ್ಟಿಲು, ಸಂಪ್‌ ಮತ್ತು ಕಾಂಪೌಂಡ್‌ ಸಹ ಸೇರಿದರೆ ಒಟ್ಟು ಆರು ಚದರ ಕಟ್ಟಡ ನಿರ್ಮಿಸಿದ ಲೆಕ್ಕವೇ ಬರುತ್ತದೆ. ಚದರಕ್ಕೆ ₨1.45 ಲಕ್ಷದಂತಾದರೆ ಇಡೀ ಮನೆ ಕಟ್ಟಿ ಪೂರ್ಣಗೊಳಿಸಲು ಕನಿಷ್ಠ ₨8 ಲಕ್ಷದಿಂದ ಗರಿಷ್ಠ ₨9 ಲಕ್ಷದವರೆಗೂ ವೆಚ್ಚವಾಗುತ್ತದೆ ಎನ್ನುತ್ತಾರೆ ಹೊನ್ನೇಗೌಡ.

ಆರು ಚದರದ ಕಟ್ಟಡಕ್ಕೆ ಸುಮಾರು 10 ಸಾವಿರ ಸುಟ್ಟ ಇಟ್ಟಿಗೆಗಳು ಬೇಕಾಗುತ್ತವೆ.  ಒಂದು ಇಟ್ಟಿಗೆಗೆ ₨4.50 ಲೆಕ್ಕದಲ್ಲಿ ₨45,000 ವೆಚ್ಚವಾಗುತ್ತದೆ.

ಒಟ್ಟು 250 ಚೀಲ ಸಿಮೆಂಟ್‌ ಅಗತ್ಯ ಬೀಳುತ್ತದೆ. ಒಂದು ಚೀಲಕ್ಕೆ ₨340ರ ದರದಂತೆ ಖರೀದಿಸಿದರೂ ಒಟ್ಟು ₨85,000 ನೀಡಬೇಕಾಗುತ್ತದೆ.

ಗೋಡೆ, ಪ್ಲಾಸ್ಟರಿಂಗ್‌, ತಾರಸಿ, ಕಾಂಪೌಂಡ್‌, ತಾರಸಿಗೆ ಮೆಟ್ಟಿಲು ಎಲ್ಲದಕ್ಕೂ ಮೂರು ಟಿಪ್ಪರ್‌ಗಳಷ್ಟಾದರೂ ಮರಳು ಬೇಕೇಬೇಕು. ಇದರ ಬೆಲೆಯಲ್ಲಿ ಸ್ವಲ್ಪವಾದರೂ ಏರುಪೇರು ಇದ್ದೇ ಇರುತ್ತದೆ. ಮರಳಿಗೆಂದೇ ಕನಿಷ್ಠ ₨50 ಸಾವಿರದಿಂದ ಗರಿಷ್ಠ ₨75 ಸಾವಿರದವರೆಗೂ ಮೀಸಲಿಡಬೇಕು.

ಜತೆಗೆ ಒಂದೂಕಾಲು ಟನ್‌ ಉಕ್ಕಿನ ಸರಳುಗಳ ಅಗತ್ಯ ಬೀಳುತ್ತದೆ. ಟನ್‌ಗೆ ₨50 ಸಾವಿರದಂತೆ ಇದಕ್ಕೆ ಒಟ್ಟು ₨62,500 ವೆಚ್ಚವಾಗುತ್ತದೆ.

ನೆಲಕ್ಕೆ ಹಾಕುವ ಟೈಲ್ಸ್‌ ವಿಚಾರಕ್ಕೆ ಬಂದರೆ, ಸದ್ಯ ಎಲ್ಲೆಡೆ ಹೆಚ್ಚು ಬಳಕೆಯಾಗುತ್ತಿರುವ ಸಾಮಾನ್ಯವಾದ ವೆಟ್ರಿಫೈಡ್‌ ಟೈಲ್ಸ್‌ ಕಡಿಮೆ ವೆಚ್ಚದ್ದು. ಗ್ರಾನೈಟ್‌ ಸ್ಲ್ಯಾಬ್‌ ಆದರೆ ಸ್ವಲ್ಪ ಹೆಚ್ಚು ವೆಚ್ಚವಾಗುತ್ತದೆ. ಅಂದರೆ, ಐದು ಚದರದ ಈ ಪುಟ್ಟ ಮನೆಗೆ ವೆಟ್ರಿಫೈಡ್‌ ಟೈಲ್ಸ್‌ಗೆ ₨1.25 ಲಕ್ಷ ವೆಚ್ಚವಾದರೆ, ಗ್ರಾನೈಟ್‌ ಖರೀದಿಸಲು ₨1.50 ಲಕ್ಷ ಬೇಕಾಗುತ್ತದೆ. ಜತೆಗೆ ಎರಡರಲ್ಲಿ ಯಾವುದೇ ಟೈಲ್ಸ್‌ ಅಳವಡಿಸುವುದಾದರೂ ಕಾರ್ಮಿಕರ ಕೂಲಿ, ವೈಟ್‌ ಸಿಮೆಂಟ್‌ ವೆಚ್ಚ ಬಹುತೇಕ ಒಂದೇ ಆಗಿರುತ್ತದೆ ಎಂದು ಮನೆ ನಿರ್ಮಾಣದ ವೆಚ್ಚಗಳನ್ನು ಬಿಡಿಬಿಡಿಯಾಗಿ ತೆರೆದಿಡುತ್ತಾರೆ ಕಂಟ್ರಾಕ್ಟರ್‌ ಹೊನ್ನೇಗೌಡ.

ಮರದ ಬಳಕೆ ವಿಚಾರದಲ್ಲಂತೂ ಜಾಣತನದ ತೀರ್ಮಾನ ಮುಖ್ಯ. ಮನೆಯ ಎಲ್ಲ ಬಾಗಿಲು, ಕಿಟಕಿಗಳಿಗೂ ತೇಗದ ಮರವನ್ನೇ ಬಳಸಬೇಕೆಂದೇನಿಲ್ಲ. ಮನೆಯ ಅಂದಕ್ಕಾಗಿ ಹಾಗೂ ನೋಡುವವರನ್ನು ಮೆಚ್ಚಿಸುವ ಸಲುವಾಗಿಯಾದರೂ ಮುಂದಿನ ಬಾಗಿಲಿಗೆ ಹಾಗೂ ದೇವರ ಕೋಣೆಗೆ ತೇಗದ ಮರದ ಚೌಕಟ್ಟು, ಬಾಗಿಲು ಮಾಡಿಸಿ ಪಾಲಿಷ್‌ ಹಾಕಿಸುವುದು ಉತ್ತಮ. ಉಳಿದಂತೆ, ಎರಡು ಕೊಠಡಿ, ಯುಟಿಲಿಟಿ (ಹಿಂಬದಿ) ಬಾಗಿಲಿಗೆ ಹಾಗೂ ಕಿಟಕಿಗಳಿಗೆ ಬೇವಿನ ಮರದ ಚೌಕಟ್ಟು ಮತ್ತು ಹೊನ್ನೆ ಮರದ ಚಟ್ರಾಸ್‌ ಮತ್ತು ಹಲಗೆ ಬಳಸುವುದೇ ಸರಿ. ಬೇವಿನ ಮರ ಬಳಸುವುದರಿಂದ ಹೆಚ್ಚುವರಿ ಲಾಭವೂ ಇದೆ. ಇದು ಕಡಿಮೆ ಬೆಲೆಯದ್ದು, ಜತೆಗೆ ಕಹಿ ಗುಣ ಹೊಂದಿರುವುದರಿಂದ ಸುಲಭಕ್ಕೆ ಗೆದ್ದಲು ಹಿಡಿಯುವುದಿಲ್ಲ.ಇಲ್ಲಿ ಮರಮುಟ್ಟಿಗೆಂದೇ ಒಟ್ಟು ₨1 ಲಕ್ಷದವರೆಗೂ ವೆಚ್ಚ ಮಾಡಬೇಕು.

ಇನ್ನು ಮನೆ ನಿರ್ಮಿಸುವುದಕ್ಕೆ ಕಟ್ಟಡ ಕಾರ್ಮಿಕರ ಕೂಲಿ. ಇದು ಸದ್ಯ ಚದರ ಲೆಕ್ಕದಲ್ಲಿಯೇ ಇದೆ. ಒಂದು ಚದರ ವಿಸ್ತಾರಕ್ಕೆ ಕಟ್ಟಡ ನಿರ್ಮಾಣ ಕೂಲಿ ₨20,000ದಿಂದ ₨25,000ದವರೆಗೂ ಇದೆ. ಚೌಕಾಸಿ ಮಾಡಿದರೆ ವೆಚ್ಚ ಸ್ವಲ್ಪ ಕಡಿಮೆಯೂ ಆಗಬಹುದು.
ಇನ್ನು ಉಳಿದದ್ದು, ನಲ್ಲಿ, ಪೈಪ್‌ಗಳ ಖರೀದಿ ಹಾಗೂ ಜೋಡಣೆ ಕೆಲಸ. ಅಡುಗೆ ಕೋಣೆ, ಸ್ನಾನದ ಮನೆ ಹಾಗೂ ಹಿಂಬದಿ ಬಟ್ಟೆ ಒಗೆವ ಜಾಗದಲ್ಲಿ ಅದರ ಜೋಡಣೆಗೆ ಪ್ಲಂಬರ್‌ಗಳ ಕೂಲಿಗೆಂದು ಒಟ್ಟಾರೆಯಾಗಿ ₨70 ಸಾವಿರದಿಂದ ₨80 ಸಾವಿರದವರೆಗೂ ವೆಚ್ಚವಾಗುತ್ತದೆ.

ಬಾಗಿಲು, ಕಿಟಕಿಗಳ ಜೋಡಣೆಗೆ ಮೊಳೆ, ಸ್ಕ್ರೂ, ಹಿಂಜಸ್‌, ಫೆವಿಕಾಲ್‌, ಬಾಗಿಲು ಹಿಡಿಗಳು, ಬೋಲ್ಟ್‌ಗಳು, ಬೀಗ ಖರೀದಿಸಬೇಕು ಹಾಗೂ ಗ್ರಿಲ್‌ಗಳನ್ನೂ ಸಿದ್ಧಪಡಿಸಿಕೊಳ್ಳಬೇಕು. ಜತೆಗೆ ಮರಗೆಲಸದವರಿಗೆ ಕೂಲಿ. ಇದೆಲ್ಲದಕ್ಕೂ ಒಟ್ಟು ₨50,000ವಾದರೂ ಬೇಕು.
ಎಲೆಕ್ಟ್ರಿಕಲ್‌ ವಿಭಾಗವೂ ದೊಡ್ಡ ಖರ್ಚಿನದೇ ಆಗಿದೆ. ಗೋಡೆಯೊಳಕ್ಕೆ ವೈರಿಂಗ್‌ ಪೈಪ್‌ ಅಳವಡಿಸುವುದು, ಸ್ವಿಚ್‌ ಬಾಕ್ಸ್‌, ಲೈಟಿಂಗ್‌ ಜೋಡಣೆ, ಉಪಕರಣಗಳ ಖರೀದಿ ಎಂದು ಕನಿಷ್ಠ ₨80,000ದಿಂದ ಗರಿಷ್ಠ ₨1 ಲಕ್ಷದವರೆಗೂ ವೆಚ್ಚವಾಗುತ್ತದೆ.

ಕೊನೆಗೆ ಉಳಿಯುವುದು ‘ಕನಸಿನ ಮನೆ’ಯನ್ನು ಸುಂದರವಾಗಿ ಕಾಣುವಂತೆ ಮಾಡುವ ಕೆಲಸ. ಇದಕ್ಕಾಗಿ ಗೋಡೆಗಳಿಗೆ ಪಟ್ಟಿ ಮಾಡುವುದು, ಬಣ್ಣ ಬಳಿಯುವುದಕ್ಕೆ ಕೂಲಿ ಮತ್ತು ಸಾಮಗ್ರಿ ಸೇರಿ ₨25,000ರಿಂದ 30,000ದವರೆಗೂ ಖರ್ಚು ಮಾಡಬೇಕಾಗುತ್ತದೆ.
ಉದಾಹರಣೆಗೆ ಮೈಸೂರಿನಲ್ಲಿ ವಿಜಯ ನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ 20 ಅಡಿ ಅಗಲ, 30 ಅಡಿ ಉದ್ದದ ನಿವೇಶನದ ಬೆಲೆ ಸುಮಾರು ₨12ರಿಂದ ₨15 ಲಕ್ಷದವರೆಗೂ ಇದೆ. ನಿವೇಶನ ನೋಂದಣಿ ವೆಚ್ಚ ಹಾಗೂ ಮನೆ ನಿರ್ಮಾಣದ ಕನಿಷ್ಠ ವೆಚ್ಚ ₨8 ಲಕ್ಷ ಸೇರಿಸಿಕೊಂಡರೆ ಕನಿಷ್ಠ ₨21 ಲಕ್ಷದಿಂದ ಗರಿಷ್ಠ ₨24 ಲಕ್ಷ ಮೊತ್ತಕ್ಕೆ ಸುಭದ್ರ ಹಾಗೂ ಸುಂದರವಾದ ಮನೆಯನ್ನು ಸ್ವತಃ ಮುಂದೆ ನಿಂತು ಕಟ್ಟಿಸಿಕೊಳ್ಳಬಹುದು.

ಕೆಳ ಮಧ್ಯಮ ವರ್ಗದವರು, ಮಧ್ಯಮ ವರ್ಗದವರು ಬ್ಯಾಂಕ್‌ಗಳಲ್ಲಿ ಗೃಹಸಾಲ ಪಡೆದು, ಸ್ವಂತ ಉಳಿತಾಯದ ಹಣವನ್ನೂ ಸೇರಿಸಿದರೆ ಪುಟ್ಟದಾದ, ಸ್ವಂತ ಮನೆ ಕಟ್ಟಿಕೊಂಡು ‘ಕನಸಿನ ಮನೆ’ಯನ್ನು ನನಸಾಗಿಸಿಕೊಳ್ಳಬಹುದು. ಪ್ರತಿ ತಿಂಗಳೂ 1ನೇ ತಾರೀಕು ಆಗುತ್ತಿದ್ದಂತೇ ಮನೆ ಬಾಡಿಗೆ ಕೊಡಬೇಕಾದ ಹೊರೆಯಿಂದಲೂ ತಪ್ಪಿಸಿಕೊಳ್ಳಬಹುದು. ಐದು ಚದರದ ಮನೆಗೆ ಸುಮಾರು ₨3000ರಿಂದ ₨4000ದವರೆಗೂ ಮನೆ ಬಾಡಿಗೆ ಇದೆ. ಈ ಮೊತ್ತಕ್ಕೆ ಇನ್ನು ಸ್ವಲ್ಪ ಹಣ ಸೇರಿಸಿ ಬ್ಯಾಂಕಿನ ಗೃಹಸಾಲದ ಕಂತು ಕಟ್ಟುವ ವ್ಯವಸ್ಥೆ ಮಾಡಿಕೊಂಡರೆ ‘ಸ್ವಂತ ಮನೆ’ಯ ಕನಸನ್ನು ಖಂಡಿತಾ ನನಸು ಮಾಡಿಕೊಳ್ಳಬಹುದು ಎಂದು ಭರವಸೆ ಮೂಡಿಸುವ ಮಾತನಾಡುತ್ತಾರೆ ಹೊನ್ನೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT