ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಕರಗಿದಾಗ ಮತ್ತೆ ಬದುಕಿ

ಸ್ವಸ್ಥ ಬದುಕು
Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಸೊಳ್ಳೆಯೊಂದು ನಿಮ್ಮ ಸುತ್ತ ಗುಂಯ್‌ಗುಡುತ್ತಾ ಹಾರುತ್ತಿದ್ದರೆ ಏನು ಮಾಡುತ್ತೀರಿ? ಕಚ್ಚುವುದಕ್ಕಿಂತಾ ಮೊದಲೇ ಹೊಸಕಿ ಹಾಕುವಿರಿ. ಸಮಸ್ಯೆಗಳು ಹಾಗೆಯೇ. ಆದರೆ ಎಲ್ಲ ಸಮಸ್ಯೆಗಳನ್ನೂ ಒಮ್ಮೆಲೇ ಬಗೆಹರಿಸಲು ಸಾಧ್ಯವಿಲ್ಲ. ಅದೇ ಸಮಯದಲ್ಲಿ ಹತಾಶರಾಗುವುದೂ ಸಲ್ಲ. ಸಿಟ್ಟಿಗೇಳುವುದು, ನಿರಾಶರಾಗುವುದು, ಬದುಕಿನಲ್ಲಿ ಭರವಸೆ ಕಳೆದುಕೊಳ್ಳುವುದೂ ಸರಿಯಲ್ಲ.

ಒಂದು ವಿಷಯವನ್ನು ಸದಾ ನೆನಪಿಡಿ. ನೀವು ಈ ವಿಶ್ವದ ಮಗು. ಜಗತ್ತು ನಿಮಗೆ ಆಟಿಕೆಯಿದ್ದಂತೆ, ಅದು ಒಮ್ಮೊಮ್ಮೆ ಬಿರುಕು ಬಿಡುತ್ತದೆ. ಇಂತಹ ಅಶಾಶ್ವತ, ನಶ್ವರ ವಾದದ್ದು ನಿಮ್ಮೊಳಗೆ ಹತಾಶೆ, ಖಿನ್ನತೆಯನ್ನು ಹುಟ್ಟುಹಾಕಲು ಬಿಡಬೇಡಿ. ನೀವು ಅಮರ. ಬದುಕು ವಿರೋಧಾಭಾಸಗಳಿಂದ ಕೂಡಿದೆ. ಉದಾರ ಮತ್ತು ಕೃಪಣ ವ್ಯಕ್ತಿಗಳು ಜತೆಜತೆಯಾಗಿಯೇ ಬದುಕುತ್ತಾರೆ.

ವಿಶ್ವದಲ್ಲಿ ಎರಡು ಬಗೆಯ ಶಕ್ತಿಗಳು ಕೆಲಸ ಮಾಡುತ್ತವೆ. ದೈವಿಕ ಶಕ್ತಿ ಎಲ್ಲವನ್ನೂ ಬಿಚ್ಚುಗೈಯಲ್ಲಿ ಹಂಚುತ್ತದೆ.  ಅದು ಔದಾರ್ಯ. ಮತ್ತೊಂದು ಎಲ್ಲವನ್ನೂ ಕೂಡಿಡುವ ಹಪಾಹಪಿ ಹೊಂದಿರುತ್ತದೆ. ಅದನ್ನೇ ನಾವು ದುರಾಸೆ ಎಂದು ಕರೆಯುತ್ತೇವೆ. ವಿಸ್ತೃತವಾದ ದೈವಿಕ ಯೋಜನೆಗೆ ಎರಡೂ ಶಕ್ತಿಗಳು ಬೇಕಾಗುತ್ತವೆ. ದೈವಿಕ ಶಕ್ತಿಗೆ ಇವೆರಡರಲ್ಲೂ ಯಾವುದೇ ಭಿನ್ನತೆ ಕಾಣುವುದಿಲ್ಲ. ಇವೆರಡಕ್ಕೂ ಅಹಂಕಾರದ ಸೋಂಕು ಬಡಿದಾಗ ದೈವಿಕ ಶಕ್ತಿಯ ಕೈಯಲ್ಲಿ ಆಟಿಕೆಯಾಗುತ್ತವೆ.

ದಯವಿಟ್ಟು ನಿಮ್ಮ ನಂಬಿಕೆಗಳನ್ನು ಬದಲಿಸಿಕೊಳ್ಳಿ. ನೀವು ಅಮರರು ಎಂಬುದನ್ನು ನಂಬಿ. ಶಾಶ್ವತವಾದ ಆತ್ಮ ನಶ್ವರ ದೇಹದ ಮೂಲಕ ಭೂತ, ಭವಿಷ್ಯ ವರ್ತಮಾನದಲ್ಲಿ ಆಟವಾಡುತ್ತಿರುತ್ತದೆ. ಶಾಶ್ವತವಾದ ನಿಮ್ಮೊಳಗೆ ಎಂದೂ ಬತ್ತದ ಸಂತೋಷ, ಪ್ರೀತಿಗಳು ಉಕ್ಕಿ ಹರಿಯುತ್ತಿರುತ್ತವೆ. ನೀವು ದೇಹದೊಂದಿಗೆ ಅಥವಾ ಅದಿಲ್ಲದೆಯೂ ಇರುತ್ತೀರಿ. ಹಾಗಾಗಿ ಆಡುತ್ತಾ ಪಾಡುತ್ತಾ, ನಗುತ್ತಾ ಕಲೆಯುತ್ತಾ ಖುಷಿಯಾಗಿರಿ.

ಹತಾಶೆಯೆಂಬುದು ನಿಮ್ಮ ಆತ್ಮದ ಗುಣವೇ ಅಲ್ಲ. ಅಹಂಕಾರವೆಂಬುದು ನಿಮ್ಮಲ್ಲಿನ ಹತಾಶೆಗೆ ಕಾರಣ. ಎಲ್ಲವೂ ತನ್ನ ಮೂಗಿನ ನೇರಕ್ಕೇ ನಡೆಯಬೇಕೆಂಬುದು ಅದರ ಬಯಕೆ. ಹಾಗೆ ನಡೆಯದೇ ಹೋದಾಗ ಅದು ಕುಸಿಯುತ್ತದೆ. ಈ ಹತಾಶೆ ನಮ್ಮನ್ನು ದುರ್ಬಲಗೊಳಿಸುತ್ತದೆ. ಕ್ಷುಲ್ಲಕ ವಿಷಯಗಳಿಗೂ ಮನಸ್ಸು ಕೆಡಿಸಿಕೊಳ್ಳುತ್ತದೆ.

ಬದುಕಿನಲ್ಲಿ ಘಟಿಸುವ ಒಳಿತು, ಕೆಡಕುಗಳನ್ನು ಶಾಶ್ವತತೆಯ ದೃಷ್ಟಿಕೋನದಿಂದ ಅವಲೋಕಿಸಿದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ. ಕೊಟ್ಟ ಹಣವನ್ನು ವಾಪಸು ಮಾಡದೆ ಕೈಕೊಟ್ಟವರು, ಮತ್ಯಾರೋ ಹಿಂತಿರುಗಿಸದ ಪುಸ್ತಕ, ಇನ್ಯಾರೋ ಮಾಡಿದ ಮೋಸಗಳು ನಮ್ಮನ್ನು ಕಾಡುವುದು ಬೇಡ.

ಕ್ಲುಪ್ತವಾಗಿ ಹೇಳಬೇಕೆಂದರೆ ನಿನ್ನೆ ಅಥವಾ ನಾಳೆಗಳಲ್ಲಿ ಬದುಕಬೇಡಿ. ಈ ಕ್ಷಣದಲ್ಲಿ ಬದುಕಿ. ಅದುವೇ ಶಾಶ್ವತ. ನಿಮ್ಮ ಆತ್ಮದಲ್ಲಿ ನಿಮ್ಮ ಮನಸ್ಸು, ದೇಹಗಳು ನೆಲೆಗೊಳ್ಳಲಿ.

ಆರಾಮದಾಯಕವೆನ್ನಿಸುವ ಭಂಗಿಯಲ್ಲಿ ಕುಳಿತುಕೊಳ್ಳಿ. ಕಣ್ಣುಮುಚ್ಚಿಕೊಳ್ಳಿ. ನಿಮ್ಮ ಬೆರಳ ತುದಿಯಲ್ಲಿ ವಿದ್ಯುತ್‌ಕಾಂತೀಯ ಶಕ್ತಿಯಿದೆ. ಅದನ್ನು ನಾವೀಗ ಬಳಸೋಣ.

ಹಣೆ, ಕಣತಲೆ (ಟೆಂಪಲ್), ದವಡೆ, ಗಂಟಲು (ಥೈರಾಯಿಡ್ ಗ್ರಂಥಿಯಿರುವ ಜಾಗ)ಗಳಿಂದ ಒಂದು ಇಂಚು ದೂರದಲ್ಲಿ ನಿಮ್ಮ ಎಂಟೂ ಬೆರಳುಗಳಿರಲಿ. ಬೆರಳ ತುದಿಗಳು ಇವುಗಳತ್ತ ಗುರಿಯಾಗಿರಲಿ. ದೇವರು, ಶಾಂತಿ, ಬೆಳಕು, ಆರೋಗ್ಯ, ಸಂತಸ ಎನ್ನುತ್ತಾ ಈ ಜಾಗಗಳ ಮೇಲೆ 30 ಸೆಕೆಂಡುಗಳ ಕಾಲ ನಿಮ್ಮ ಬೆರಳುಗಳನ್ನು ಹಿಡಿದಿರಿ. ಇದನ್ನು ನಾಲ್ಕುಬಾರಿ ಪುನರಾವರ್ತಿಸಿ. ಇದು ಎಲ್ಲ ಬಗೆಯ ರೋಗಗಳನ್ನು ದೂರ ಮಾಡುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಕುಂದಿಸಿರುವ ಜೀವಕೋಶಗಳಲ್ಲಿನ ನಕಾರಾತ್ಮಕ ನೆನಪನ್ನು ಇದು ತೊಡೆದುಹಾಕುತ್ತದೆ.

ನನ್ನ ಸ್ನೇಹಿತೆಯೊಬ್ಬರು ಈ ವಿಧಾನದ ಮೂಲಕ ಮಧುಮೇಹ, ರಕ್ತದೊತ್ತಡ, ಹೈಪರ್‌ಥೈರಾಯಿಡ್ ಕಾಯಿಲೆಗಳಿಂದ ಮುಕ್ತರಾಗಿದ್ದಾರೆ. 70 ವರ್ಷದ ಆಕೆಗೆ ಎಲ್ಲ ಔಷಧಗಳ ಬಳಕೆಯನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ! ಕಳೆದ 3 ತಿಂಗಳಿನಿಂದ ಆಕೆ ಯಾವುದೇ ಔಷಧ ಸೇವಿಸುತ್ತಿಲ್ಲ.

ಸಂತಸ, ಸಂಭ್ರಮದಿಂದ ಬದುಕಿ. ಪೂರ್ವಗ್ರಹ, ವಾದವಿವಾದ, ಸಿಟ್ಟುಸೆಡವುಗಳನ್ನು ಬಿಟ್ಟುಬಿಡಿ. ಮೇಲ್‌ಸ್ಥರದಲ್ಲಿ ಬದುಕಿ. ಯಾವುದೇ ಸನ್ನಿವೇಶದಲ್ಲೂ ನಿಮ್ಮ ಬದುಕಿನ ಚುಕ್ಕಾಣಿ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯಬೇಡಿ. ಜೀವನ್ಮುಖಿಯಾಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT