ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಮೊತ್ತ ಇಡದ ಖಾತೆಗೆ ದಂಡ ಬೇಡ

ಬ್ಯಾಂಕ್‌ಗಳಿಗೆ ‘ಆರ್‌ಬಿಐ’ ನಿರ್ದೇಶನ
Last Updated 1 ಏಪ್ರಿಲ್ 2014, 20:11 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಉಳಿತಾಯ ಖಾತೆ­ಯಲ್ಲಿ ಕನಿಷ್ಠ ಮೊತ್ತ ಕಾಯ್ದು­ಕೊಳ್ಳದ ಗ್ರಾಹ­ಕರಿಗೆ ಯಾವುದೇ ದಂಡ ವಿಧಿಸ­ಬಾರದು ಎಂದು ಬ್ಯಾಂಕುಗಳಿಗೆ ಭಾರ­ತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟ ಸೂಚನೆ ನೀಡಿದೆ.

ಅರಿವಿಗೆ ಬಾರದೆಯೋ, ನಿರ್ಲಕ್ಷ್ಯ­ದಿಂದಲೋ ಉಳಿ­ತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳ­ಲಾಗದೆ  ದಂಡ ಪಾವತಿಸುತ್ತಿದ್ದ ಬ್ಯಾಂಕ್‌ ಗ್ರಾಹಕರಿಗೆ ‘ಆರ್‌ಬಿಐ’ನ ಈ ನಿರ್ದೇಶನ ನೆಮ್ಮದಿಯ ನಿಟ್ಟುಸಿರು  ಬಿಡುವಂತೆ ಮಾಡಿದೆ.

‘ಕೆಲವು ಗ್ರಾಹಕರಿಗೆ ತಮ್ಮ ಖಾತೆ­ಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊ­ಳ್ಳುವುದು ಕೆಲವೊಮ್ಮೆ ಕಷ್ಟವಾ­ಗುತ್ತದೆ. ಇನ್ನು ಕೆಲವರು ಈ ವಿಚಾರದತ್ತ ಹೆಚ್ಚು ಲಕ್ಷ್ಯ ವಹಿಸಿ­ರುವುದಿಲ್ಲ. ಗ್ರಾಹಕರ ಈ ಪ್ರವೃತ್ತಿಯನ್ನೇ ಬ್ಯಾಂಕುಗಳು ‘ಅವ­ಕಾಶ’ವಾಗಿ ಬಳಸಿಕೊಳ್ಳಬಾರದು. ಇದಕ್ಕಾಗಿ ಯಾವುದೇ ದಂಡವನ್ನೂ ವಿಧಿಸಬಾರದು’ ಎಂದು ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌ ಮಂಗಳವಾರ ಇಲ್ಲಿ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಣೆ ವೇಳೆ ಹೇಳಿದರು.

‘ಬ್ಯಾಂಕುಗಳು ಬೇಕಿದ್ದರೆ ಇಂತಹ ಖಾತೆಗಳಿಗೆ ಲಭ್ಯ­ವಿರುವ ಸೇವೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯ­ಬಹುದೇ ಹೊರತು ದಂಡ ವಿಧಿಸುವಂತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

3ತಿಂಗಳಿಗೆ ₨ 750 ದಂಡ!: ಸದ್ಯ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕನಿಷ್ಠ ಮೊತ್ತ ಕಾಯ್ದು­ಕೊಳ್ಳದ ಉಳಿತಾಯ ಖಾತೆಗಳಿಗೆ ಯಾವುದೇ ದಂಡ ವಿಧಿಸು­ತ್ತಿಲ್ಲ. ಆದರೆ, ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌­ಡಿಎಫ್‌ಸಿ ಬ್ಯಾಂಕ್‌, ನಗರ ಪ್ರದೇಶದ ಗ್ರಾಹ­ಕರು ₨10 ಸಾವಿರ ಕನಿಷ್ಠ ಮೊತ್ತ ಕಾಯ್ದು­ಕೊಳ್ಳದಿದ್ದರೆ ಮೂರು ತಿಂಗಳಿಗೊಮ್ಮೆ ₨750 ದಂಡ ವಿಧಿಸುತ್ತವೆ.  ಸಣ್ಣ ನಗರ ಪ್ರದೇಶಗಳ ಗ್ರಾಹಕರು ಖಾತೆ­ಯಲ್ಲಿ ₨5 ಸಾವಿರ ಕನಿಷ್ಠ ಮೊತ್ತ ಕಾಯ್ದು­ಕೊಳ್ಳ­ದಿದ್ದರೆ ಬ್ಯಾಂಕ್‌ ಸೇವೆಗಳನ್ನು ತಡೆ ಹಿಡಿಯ­ಲಾಗುತ್ತದೆ.

ಹೊಸ ಬ್ಯಾಂಕ್‌ ಶೀಘ್ರ: ನೀತಿ ಸಂಹಿತೆ ಜಾರಿ­ಯ­ಲ್ಲಿರು­ವು­ದರಿಂದ  ಚುನಾ­ವಣಾ ಆಯೋಗದ ಸಮ್ಮತಿ ಪಡೆದು ಶೀಘ್ರದಲ್ಲೇ ಹೊಸ ಬ್ಯಾಂಕ್‌ ಸ್ಥಾಪನೆಗೆ ಪರವಾನಗಿ ನೀಡ­­­ಲಾಗು­ವುದು ಎಂದು ರಾಜನ್‌ ಹೇಳಿದರು.

ರಾಜ­ಕೀಯ ವಿವಾದ ಉಂಟಾ­ಗ­ಬಾ­ರದು ಎಂಬ ಕಾರಣಕ್ಕೆ  ಚುನಾವಣಾ ಆಯೋ­ಗದ ಪರ­ವಾನಗಿ ಪಡೆದೇ ಪಟ್ಟಿ ಪ್ರಕಟಿ­ಸಲಾ­­ಗುವುದು. ಹೀಗಾಗಿ ಸ್ವಲ್ಪ ವಿಳಂಬವಾ­ಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಸಂದರ್ಭದಲ್ಲಿ ‘ಆರ್‌ಬಿಐ’ ಹೊಸ ಬ್ಯಾಂಕುಗಳಿಗೆ ಪರವಾನಗಿ ನೀಡುತ್ತಿದೆ ಎಂಬ ‘ಬಿಜೆಪಿ’ ಟೀಕೆಗೆ ಉತ್ತರಿಸಿದ ಅವರು, ಹೊಸ ಬ್ಯಾಂಕುಗಳ ಸ್ಥಾಪ­ನೆಗೆ ಪರವಾನಗಿ ನೀಡುವುದು ರಾಜ­ಕೀಯ  ಪ್ರಕ್ರಿಯೆ ಅಲ್ಲ. ಇದು ಆರ್ಥಿಕ ಪ್ರಕ್ರಿಯೆ. ಇಲ್ಲಿ ಕೆಲವು ನಿಯಂತ್ರಣಗಳಿರುತ್ತವೆ. ಹಾಗಾಗಿ ಆಯೋಗದ ಪರವಾನಗಿ ಪಡೆದುಕೊಳ್ಳ­ಲಾಗುವುದು ಎಂದರು.

‘ಹೊಸ ಬ್ಯಾಂಕ್‌ ಸ್ಥಾಪನೆಗೆ ಪರವಾನಗಿ ನೀಡುವ ಪ್ರಕ್ರಿಯೆ ಆರಂಭಗೊಂಡು ಆಗಲೇ ಎರಡು ವರ್ಷ­ಗಳಾಗಿವೆ. ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ. ಇದು ಸಂಪೂರ್ಣವಾಗಿ ‘ಆರ್‌­ಬಿಐ’ಗೆ ಬಿಟ್ಟ ವಿಚಾರ. ಇದರಲ್ಲಿ ರಾಜಕೀಯ ಹಸ್ತ­ಕ್ಷೇಪ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ  ಅವರೂ ಹೇಳಿದ್ದಾರೆ.

ಬಡ್ಡಿದರ ಯಥಾಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT