ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ನಿರ್ಮಾಪಕರು ಜುಗ್ಗರು!

Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ಕನ್ನಡ ಚಿತ್ರರಂಗದಿಂದಲೇ ನಾನು ಅಭಿನಯ ಶುರು ಮಾಡಿದೆ. ಇಲ್ಲಿ ನಟಿಸಲು ಹೆಚ್ಚು ಖುಷಿಯಾಗುತ್ತದೆ. ಆದರೆ ಇಲ್ಲಿನ ನಿರ್ಮಾಪಕರು ಸಂಭಾವನೆ ವಿಷಯದಲ್ಲಿ ಉದಾರತೆ ತೋರಿಸುವುದೇ ಇಲ್ಲ. ಹೀಗಾಗಿ ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿಲ್ಲ’.

ಕನ್ನಡ ಚಿತ್ರರಂಗದಿಂದ ಸಾಕಷ್ಟು ದಿನಗಳ ಕಾಲ ದೂರವುಳಿದಿದ್ದಕ್ಕೆ ಪಂಜಾಬಿ ಬೆಡಗಿ ರಮಣಿತೊ ಚೌಧರಿ ಒಂದಷ್ಟು ಖಡಕ್ಕಾಗಿಯೇ ಈ ಸ್ಪಷ್ಟನೆ ಕೊಡುತ್ತಾರೆ. ಒಂದರ್ಥದಲ್ಲಿ ಅದು ಅವರ ತಕರಾರು ಕೂಡ!

ಸಿನಿಮಾವೊಂದು ಸೆಟ್ಟೇರುವ ಮುನ್ನ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕ... ಹೀಗೆ ಹಲವು ವಿಭಾಗಗಳಿಗೆ ಇಂತಿಷ್ಟೆಂದು ಬಜೆಟ್ ತೆಗೆದಿಡುತ್ತಾರೆ. ಆದರೆ ನಾಯಕಿ ವಿಷಯಕ್ಕೆ ಬಂದಾಗ ಮಾತ್ರ ಜಿಗುಟುತನ ತೋರಿಸುತ್ತಾರೆ ಎಂಬುದು ರಮಣಿಯ ದೂರು. ಹೀಗಾಗಿಯೇ ಹಲವು ಸಿನಿಮಾಗಳಿಗೂ ಅವರು ‘ಒಲ್ಲೆ’ ಅಂದಿದ್ದಾರಂತೆ.

‘ಪಲ್ಲಕ್ಕಿ’, ‘ಬೆಳದಿಂಗಳಾಗಿ ಬಾ’, ‘ಪ್ರೀತಿಯಿಂದ ರಮೇಶ್’, ‘ಧನುಷ್’ ಇನ್ನಿತರ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ರಮಣಿತೊ, ಬಳಿಕ ಹಿಂದಿ ಚಿತ್ರರಂಗದತ್ತ ಪಯಣ ಬೆಳೆಸಿ ‘ಕಸಂ ಸೇ ಕಸಂ ಸೇ’ ಸಿನಿಮಾದಲ್ಲಿ ಪಾತ್ರ ಗಿಟ್ಟಿಸಿಕೊಂಡಿದ್ದರು. ಈ ಮಧ್ಯೆ ತೆಲುಗು ಚಿತ್ರಗಳಿಗೆ ಅವಕಾಶ ಹುಡುಕಿಕೊಂಡು ಬಂದವು. ಹಲವು ಕಾರಣಗಳಿಂದಾಗಿ ಇವರೇ ಅಲ್ಲಿಗೆ ಹೋಗಲಿಲ್ಲ. ಅದಕ್ಕೆ ಕಾರಣ, ‘ರಣವೀರ್ ದಿ ಮಾರ್ಷಲ್’ ಚಿತ್ರದಲ್ಲಿ ತಾವು ತೊಡಗಿಕೊಂಡಿದ್ದು ಎಂಬ ಕಾರಣ ಕೊಡುತ್ತಾರೆ. ಮಿಲಿಂದ್ ನಿರ್ದೇಶನದ ಈ ಚಿತ್ರದಲ್ಲಿ ಸಮರ ಕಲೆಯನ್ನು ಅದ್ಭುತವಾಗಿ ತೋರಿಸಲಾಗಿದೆಯಂತೆ. ಲಂಡನ್‌ ಮೂಲದ ಭಾರತೀಯ ಯುವಕ ರಿಶಿಬ್ ರಿಷಿ ಶರ್ಮಾ ಅದರಲ್ಲಿ ನಾಯಕ. ಚಿತ್ರೀಕರಣ ಮುಗಿದಿರುವ ‘ರಣವೀರ್’ ಸಿನಿಮಾದ ಉಳಿದ ತಾಂತ್ರಿಕ ಕೆಲಸಗಳು ನಡೆದಿವೆಯಂತೆ. ಇನ್ನೊಂದು ತಿಂಗಳಲ್ಲಿ ತೆರೆಗೆ ಬರುವ ಈ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ತಾವೊಂದು ಗಟ್ಟಿ ಸ್ಥಾನ ಪಡೆಯುವ ವಿಶ್ವಾಸ ಅವರಲ್ಲಿದೆ.

ಈಗಾಗಲೇ ರೊಮ್ಯಾಂಟಿಕ್‌ ಪಾತ್ರಗಳಲ್ಲಿ ಸಾಕಷ್ಟು ಸಲ ಕಾಣಿಸಿಕೊಂಡಿರುವುದರಿಂದ ಹೊಸ ಬಗೆಯ ಪಾತ್ರಗಳ ನಿರೀಕ್ಷೆಯಲ್ಲಿ ಅವರಿದ್ದಾರೆ. ‘ಅದಕ್ಕಾಗಿಯೇ ನಾನು ಒಂದು ಸಿನಿಮಾದಲ್ಲಿ ಐಟಂ ಸಾಂಗ್, ಮತ್ತೊಂದರಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಒಂದೇ ತರಹದ ಪಾತ್ರ ಮಾಡುವುದಕ್ಕಿಂತ ಸವಾಲು ಹಾಕುವ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಆಸೆ’ ಎಂಬ ಮನದ ಮಾತು ಅವರದು.

ಒಮ್ಮೆಲೇ ಮೂರ್ನಾಲ್ಕು ಚಿತ್ರಗಳಲ್ಲಿ ಪಾಲ್ಗೊಳ್ಳುವುದು ಅವರಿಗೆ ಇಷ್ಟವಿಲ್ಲ. ಒಂದು ಸಿನಿಮಾ ಶುರುವಾದರೆ, ಅದರಲ್ಲೇ ಸಂಪೂರ್ಣವಾಗಿ ಮುಳುಗಿದರೆ ಮಾತ್ರ ಆ ಸಿನಿಮಾಕ್ಕೆ ನ್ಯಾಯ ಕೊಡಲು ಸಾಧ್ಯ ಎಂಬ ಅಭಿಪ್ರಾಯ ಅವರದು.

ರೊಮ್ಯಾಂಟಿಕ್ ಕಥೆಗಳ ಚಿತ್ರಗಳು ಈಗ ಯಶಸ್ಸು ಕಾಣುತ್ತಿವೆ. ಆ ಪಟ್ಟಿಗೆ ತಮ್ಮ ಅಭಿನಯದ ‘ಮುತ್ತಿನ ಮಳೆಯಲಿ’ ಸೇರಲಿದೆ ಎಂಬ ವಿಶ್ವಾಸ ರಮಣಿತೊ ಅವರಲ್ಲಿದೆ. ಇಂದು (ಮಾರ್ಚ್ 27) ಬಿಡುಗಡೆಯಾಗಿರುವ ಈ ಸಿನಿಮಾದ ಚಿತ್ರೀಕರಣ ಅವರಿಗೆ ಸಾಕಷ್ಟು ಖುಷಿ ಕೊಟ್ಟಿದೆ. ಮಲೆನಾಡಿನ ವಿವಿಧ ರಮ್ಯ ತಾಣಗಳಲ್ಲಿ ಶೂಟಿಂಗ್‌ ನಡೆಸಲಾದ ಈ ಸಿನಿಮಾದ ಚಿತ್ರಕಥೆ ಪ್ರೇಕ್ಷಕರನ್ನು ಖಂಡಿತವಾಗಿಯೂ ಸೆಳೆಯಲಿದೆ ಎನ್ನುತ್ತಾರೆ. ನಾಯಕನೊಂದಿಗೆ ಪ್ರೇಮಪಾಶದಲ್ಲಿ ಸಿಲುಕುವ ಕಾಲೇಜು ಹುಡುಗಿ ಪಾತ್ರ ತಮ್ಮದು ಎಂದು ಹೇಳಿಕೊಳ್ಳುತ್ತಾರೆ.

ಚಿತ್ರವೊಂದರ ಸೌಂದರ್ಯ ಹೆಚ್ಚಬೇಕೆಂದರೆ, ನಾಯಕಿ ಗ್ಲಾಮರ್ ಆಗಿರಲೇಬೇಕು ಎಂದು ಹೇಳುವ ರಮಣಿತೊ, ಗ್ಲಾಮರ್ ಹಾಗೂ ಎಕ್ಸ್‌ಪೋಸ್ ಮಧ್ಯೆ ತೆಳು ಅಂತರವಿದೆ ಅಷ್ಟೇ ಎನ್ನುತ್ತಾರೆ. ‘ಇಷ್ಟಪಡುವವರಿಗೆ ಗ್ಲಾಮರ್ ಇಷ್ಟವಾಗುತ್ತದೆ; ಇಷ್ಟಪಡದವರಿಗೆ ಇಷ್ಟವಾಗುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿಯುತ್ತಾರೆ.

ಈವರೆಗಿನ ತಮ್ಮ ವೃತ್ತಿಜೀವನದಲ್ಲಿ ಯಾವುದೇ ಏರುಪೇರು ಎದುರಾಗಿಲ್ಲ. ‘ಬಂದಿದ್ದನ್ನು ಖುಷಿಯಿಂದ ಸ್ವೀಕರಿಸಿದ್ದೇನೆ. ಸಿಕ್ಕದೇ ಇರುವುದಕ್ಕೆ ನನ್ನಲ್ಲಿ ವಿಷಾದವಿಲ್ಲ’ ಎನ್ನುವ ರಮಣಿತೊ, ಓಶೋ ರಜನೀಶ್ ಅವರ ಅನುಯಾಯಿ. ‘ನಿನ್ನ ಕಣ್ಣುಗಳ ಮೂಲಕ ಪ್ರಪಂಚವನ್ನು ನೋಡಬೇಕೇ ಹೊರತೂ, ಬೇರೆಯವರ ಕಣ್ಣುಗಳ ಮೂಲಕ ಅಲ್ಲ ಎಂದು ಗುರು ಹೇಳುತ್ತಾರೆ. ಅದನ್ನು ನಾನು ಅನುಸರಿಸುತ್ತಿದ್ದೇನೆ. ನೋಡಿ... ಹಾಗಿರುವುದರಿಂದಲೇ ನಾನಿಷ್ಟು ಖುಷಿಯಾಗಿದ್ದೇನೆ’ ಎಂದು ಮುಗುಳ್ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT