ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ‘ಮುನಿ’ಗಳ ಮನವಿ!

ಅಕ್ಷರ ಗಾತ್ರ

ಕನ್ನಡವನ್ನು ಕಟ್ಟುವುದು ಅಂದರೆ ಏನು? ಅದು ಎಲ್ಲಿ ಹಾರಾಡುತ್ತಿದೆ?

ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರವು ಬೆಂಗಳೂರಿನಲ್ಲಿ ಸ್ಥಾಪಿತವಾಗಬೇಕೆಂದು ಕೆಲವು ಕನ್ನಡ ಕಣ್‌ಮುನಿಗಳು ಅಂದರೆ ಕನ್ನಡದ ಮುನಿಗಳು (ಕನ್ನಡ ಗೌಡ, ಕನ್ನಡ ನಾಯ್ಕ ಎಂಬಂತೆ ಹೆಸರುಳ್ಳವರು) ದೆಹಲಿಯವರೆಗೆ ಹೋಗಿ ವಿಶೇಷ ಸ್ಮೃತಿ ಉಳ್ಳ ಭಾರತ ದೇಶದ ಸಚಿವೆ ಅವರಿಗೆ ಅಂಗಲಾಚಿ ಮನವಿಯೊಂದನ್ನು ಸಲ್ಲಿಸಿರುವುದು ಸರಿಯೇ ಸರಿ.

ಅದಕ್ಕೆ ಪೂರಕವಾಗಿ ಕನ್ನಡದ ತಲಸ್ಪರ್ಶಿ ಸಂಶೋಧಕರೂ ನನ್ನ ಗುರುಗಳೂ ಆದ ಡಾ.ಎಂ. ಚಿದಾನಂದಮೂರ್ತಿ ಅವರು ಬೆಂಬಲವಿತ್ತಿರುವುದು ನೋವಿನ ಮತ್ತು ಆಶ್ಚರ್ಯದ ಸಂಗತಿಯೇ ಸರಿ.

ಬೆಂಗಳೂರಿಗೆ ಶಾಸ್ತ್ರೀಯ ಭಾಷಾ ಕೇಂದ್ರ ಸ್ಥಳಾಂತರಿಸುವುದಕ್ಕೆ ಕಾರಣವೊಂದನ್ನು ನೀಡುತ್ತ ಅವರು ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದೆ ಅಂತ ತಿಳಿಸಿದ್ದಾರೆ.

ಕನ್ನಡದ ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ ಕಾರಣ. ಬೆಂಗಳೂರಿಗರ (ಬಹುಪಾಲು) ಕಾಗುಣಿತ ದೋಷ, ಅಕ್ಷರ ಸ್ಖಾಲಿತ್ಯ, ಅಪಭ್ರಂಶ ಉಚ್ಚಾರ, ಅ–ಕಾರ ಹ–ಕಾರಗಳ ಸ್ವೇಚ್ಛಾಚಾರ, ಅಲ್ಪಪ್ರಾಣ– ಮಹಾಪ್ರಾಣಗಳ ವೈಭವ, ತರಾವರಿ ಭಾಷೆಗಳ ಯದ್ವಾತದ್ವಾ ಮಿಶ್ರಣ ಇಂಥವುಗಳನ್ನು ತಾಳಲಾರದೆ ನಮ್ಮ ಕಸ್ತೂರಿ ಕನ್ನಡವು ಬೇಸತ್ತು– ಸತ್ತು ಅಂತಿಮವಾಗಿ ಅಂತರರಾಷ್ಟ್ರೀಯವಾದ ಯಾವುದಾದರೊಂದು ವಿಮಾನವನ್ನೇರಿ ಪೆಸಿಫಿಕ್‌ ಸಾಗರಕ್ಕೋ,

ಅಟ್ಲಾಂಟಿಕ್‌ ಸಾಗರಕ್ಕೋ, ಸಹರಾ ಮರುಭೂಮಿಗೋ, ಗೋಬಿ ಮರುಭೂಮಿಗೋ ಹೋಗಿ ಅಲ್ಲಿ ಪ್ರತಿಷ್ಠಾಪನೆಗೊಳ್ಳಬಹುದು. ಆಮೇಲೆ ನಾವು ಇದ್ದಬದ್ದದನ್ನೆಲ್ಲಾ ಬಡಿದುಕೊಂಡು ಅತ್ತಾಡಿದರೆ ಏನು ಬಂತು?

ಬೆಂಗಳೂರು ನಗರದಲ್ಲಿ– ನಿರ್ದಿಷ್ಟವಾಗಿ ಹೇಳುವುದಾದರೆ ಕಲಾಗ್ರಾಮದ ಪರಿಸರದಲ್ಲಿ (ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ) ಶಾಸ್ತ್ರೀಯ ಕೇಂದ್ರ ಕಟ್ಟಡ ಕಟ್ಟಲು ಎರಡು ಎಕರೆ ಲಭ್ಯವಿದೆ ಅನ್ನುವುದಾದರೆ ಆ ಸುಂದರ ಹಸಿರು ಪರಿಸರವನ್ನು ವಿನಾಶಗೊಳಿಸಿ, ಹಕ್ಕಿಪಕ್ಷಿಗಳ ಕಲರವವನ್ನು ಮರ್ದನ ಮಾಡುವುದಾದರೂ ಏಕೆ?

ಅದರ ಬದಲು ಮೈಸೂರು ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ (ಕೆ.ಎಸ್‌.ಒ.ಯು) ಈಗಾಗಲೇ ಹಸಿರು ವಲಯವನ್ನು ನಾಶ ಮಾಡಿ, ಬೃಹತ್‌ ಭೂತ ಬಂಗಲೆಗಳನ್ನು ಕಟ್ಟಿದ್ದು, ಅಲ್ಲಿ ಯಾವ ‘ಭೂತ’ವೂ ಇಲ್ಲದೆ ಪಾಳು ಸುರಿಯುತ್ತಿರುವುದರಿಂದ ಅದರಲ್ಲೇ ಒಂದೆರಡು ಬಂಗಲೆಗಳನ್ನು ಬಿಡಿಸಿಕೊಂಡರೆ ಆಗದೇ?

ಬೆಂಗಳೂರಿನಲ್ಲೇ ಶಾಸ್ತ್ರೀಯ ಕೇಂದ್ರ ಆಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌. ಹನುಮಂತಯ್ಯಅವರು ಎಲ್ಲೆಲ್‌ ಏನೇನೊ ಹೇಳಿದರೆ ಏನು ಬಂತು? ‘ಬೆಂಗಳೂರೇ’ ಅಂದರೆ ಅದು ಬಂಡವಾಳಶಾಹಿ ಮನೋಧರ್ಮವಲ್ಲವೇ? ಬಂಡಾಯದ ಅವರು ಬಂಡವಾಳಶಾಹಿಗೆ ‘ಗಿಂಡಾಯ ನಮಃ’ ಅನ್ನುವುದೇ?

ಅಲ್ಲದೆ, ಶಾಸ್ತ್ರೀಯ ಕೇಂದ್ರದ ಮುಖ್ಯಸ್ಥರಾದ ಪಿ.ಕೆ. ಖಂಡೋಬಾ ಅವರು ಮೈಸೂರಿರಲಿ, ತಾವು ಬೆಳೆದು ಬಂದ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕಾದರೂ (ಕಲ್ಯಾಣ ಕರ್ನಾಟಕಕ್ಕೆ) ಕೇಳದೆ ಅವರೂ ಬೆಂಗಳೂರಿಗೆ ದುಂಬಾಲು ಬಿದ್ದಿದ್ದಾರೆಂದರೆ ಕನಿಷ್ಠ ಅವರಿಗೆ ತಮ್ಮ  ಪ್ರದೇಶದ ಪ್ರೀತಿಯಾದರೂ ಯಾಕೆ ಇಲ್ಲ ಅಂತ ನಾವು ಅರ್ಥೈಸಬಹುದಲ್ಲವೇ? ಅವರದೂ ಬಂಡವಾಳಶಾಹಿ ಮನೋಧರ್ಮವೇ? ಶಾಸ್ತ್ರೀಯ ಕೇಂದ್ರ
ಕಲಬುರ್ಗಿ, ಧಾರವಾಡ ಅಥವಾ ರಾಯಚೂರು ಆಗಲಿ ಅಂತ ಅವರಿಗೆ ಯಾಕೆ ಹೊಳೆಯಲಿಲ್ಲ?

ಇನ್ನು ಕನ್ನಡ ಕಟ್ಟಲು ಬೆಂಗಳೂರೇ ವಾಸಿ ಅನ್ನುವವರ ಮುಖಕ್ಕೆ ಇಲ್ಲೊಂದೆರಡು ಪ್ರಶ್ನೆಗಳು: ಕನ್ನಡವನ್ನು ಕಟ್ಟುವುದು ಅಂದರೆ ಏನು? ಅದು ಎಲ್ಲಿ ಹಾರಾಡುತ್ತಿದೆ? ಅಥವಾ ಓಡಾಡುತ್ತಿದೆ? ಕನ್ನಡ ಕಟ್ಟಡ ಅಂತ ಕಟ್ಟಿದರೆ ಸಾಕೇ?

ಕಲ್ಲು, ಮಣ್ಣು, ಇಟ್ಟಿಗೆ, ಗಾರೆ, ಕಬ್ಬಿಣಗಳಲ್ಲಿ ಕನ್ನಡ ಇರುವುದೇ? ಕನ್ನಡಿಗರನ್ನು ಹೊರತುಪಡಿಸಿ ಕನ್ನಡ ಇರಲು ಸಾಧ್ಯವೇ? ಇಷ್ಟು ಕನಿಷ್ಠ ತಿಳಿವಳಿಕೆ ಬೆಂಗಳೂರುವಾದಿಗಳಿಗೆ ಇರಬಾರದೇ? ಕನ್ನಡ ಅಂದರೆ ಅದು ಆ ಭಾಷೆ ಮಾತನ್ನಾಡುವವರ ಜೀವನ ಪರಿಸ್ಥಿತಿಯನ್ನು ಅವಲಂಬಿಸಿ ತಾನೆ ಇರುವುದು?

ಕೇಂದ್ರ ಸರ್ಕಾರದಿಂದ ಬರುವ ಹಣದಿಂದ ಕನ್ನಡ ಕಟ್ಟುತ್ತೇವೆ ಅಂದರೆ ಯಥಾಪ್ರಕಾರ ಕಟ್ಟಡಗಳ ಸರಮಾಲೆಯೇ ಸರಿ. ಆದುದರಿಂದ ಕನ್ನಡ ಶಾಸ್ತ್ರೀಯ ಕೇಂದ್ರ ಬೆಂಗಳೂರಿನ ಆಚೆಗಿರುವ ಯಾದಗಿರಿ, ವಿಜಯಪುರ, ಮಂಗಳೂರು, ಮೈಸೂರು, ದಾವಣಗೆರೆ, ಕೊನೆಗೆ ಮರಟಿ ಕ್ಯಾತನಹಳ್ಳಿ, ಶಿವಮೊಗ್ಗ, ಯಾಂಡಳ್ಳಿ, ಎಮ್ಮೆಕೊಪ್ಪಲು– ಈ ರೀತಿ ಕರ್ನಾಟಕದ ಯಾವುದಾದರೊಂದು ಕೇಂದ್ರದಲ್ಲಿ ಇದ್ದರೆ ಆದೀತು ಅಲ್ಲವೇ?

ನಾನು ಚೆನ್ನೈಗೆ ಆಗಿಂದಾಗ್ಗೆ ಹೋಗುತ್ತಿರುತ್ತೇನೆ. ಸುತ್ತುವುದು ನನಗೆ ಪ್ರಿಯವಾದ ಹವ್ಯಾಸವಾದ್ದರಿಂದ ಊರು ತುಂಬ ಸುತ್ತುತ್ತೇನೆ, ಲಘುಪ್ರಬಂಧದಂತೆ ಎಲ್ಲೆಂದರಲ್ಲಿ. ಹಾಗಾಗಿ, ಬಹುವಿಜೃಂಭಣೆಯ ‘Tamil classical language’  ಕಟ್ಟಡವನ್ನೂ ಎಡತಾಕಿದ್ದೇನೆ. ಶಾಸ್ತ್ರೀಯ ಭಾಷೆ ಆದ್ದರಿಂದ ತಮಿಳು ಭಾಷೆ, ಸಾಹಿತ್ಯ ಝಗಮಗಿಸುತ್ತಿದೆಯೇ ಅನ್ನುವುದು ನನ್ನ ಕುತೂಹಲವಾಗಿರುತ್ತದೆ.

ಬಹುಭಾಷಾ ಭಾವಜೀವಿಗಳಾದ ತಮಿಳರಿಗೆ ಶಾಸ್ತ್ರೀಯ ಭಾಷೆ ಅನ್ನುವುದು ಕೇವಲ a feather on the cap (ಟೊಪ್ಪಿಯ ಮೇಲೊಂದು ಬಣ್ಣದ ಗರಿ ಅಷ್ಟೆ). ಕಟ್ಟಡದ ಒಳಹೊಕ್ಕು ಈಗ ಅಲ್ಲೇನು ಸಂಶೋಧನೆ ಅಂತ ನೋಡಹೊರಟರೆ ನೆನಪಿಗೆ ಬರುವುದು ‘ಶುದ್ಧ ಪಿಟಿಪಿಟಿ ಭೂಪ ಕೇಳಂದ’. ಮುಂದೆ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT