ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡನಾಡಿನ ಮೊದಲ ಈಜು ತಾರೆ ಬೈರಮ್ಮ

Last Updated 8 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಶತಮಾನದ ಹಿಂದೆ ಬೆಂಗಳೂರಿನಲ್ಲಿ ಕೆರೆಗಳ ಸಂಖ್ಯೆ ದೊಡ್ಡದಿತ್ತು. ಅಕ್ಕಿತಿಮ್ಮನ ಹಳ್ಳಿ ಕೆರೆ ಹಾಕಿ ಕ್ರೀಡಾಂಗಣವಾದರೆ, ಅಶೋಕ ನಗರದ ಶೂಲೆ ಕೆರೆ ಫುಟ್‌ಬಾಲ್‌ ಕ್ರೀಡಾಂಗಣವಾಯಿತು. ಸಂಪಂಗಿ ಕೆರೆಯ ಒಡಲಿನಲ್ಲೇ ಕಂಠೀರವ ಕ್ರೀಡಾಂಗಣ ಎದ್ದು ನಿಂತಿತು. ಮಿಲ್ಲರ್ಸ್‌ ಕೆರೆಯ ಜಾಗದಲ್ಲೇ ಬ್ಯಾಡ್ಮಿಂಟನ್‌ ಕ್ರೀಡಾಂಗಣ ಮತ್ತು ಗುರುನಾನಕ್‌ ಭವನ ರೂಪುಗೊಂಡವು. ಹೀಗೆ ನೂರಾರು ಕೆರೆಗಳು ಕಣ್ಮರೆಯಾಗಿ ಕಾಂಕ್ರಿಟ್‌ ಕಾಡು ಎದ್ದು ನಿಂತಿತು. ಹಳೆಯ ಕೆರೆಗಳು ಸ್ಮತಿಪಠಲದಿಂದ ಅಳಿಸಿ ಹೋಗಿವೆ.

ಅದೇ ರೀತಿ ಆರೇಳು ದಶಕಗಳ ಹಿಂದೆ ಬೆಂಗಳೂರಿನ ಕೆರೆಗಳಲ್ಲಿ ಈಜು ಸಾಹಸ ಪ್ರದರ್ಶಿಸುತ್ತಾ ಜನಮನ ಗೆದ್ದ ನೂರಾರು ಮಂದಿ ಇದ್ದರು. ಕಣ್ಮರೆಯಾದ ಕೆರೆಗಳಂತೆ ಅಂತಹ ಸಾಹಸಿಗಳ ಹೆಸರುಗಳೂ ಮರೆತು ಹೋಗಿವೆ. ಆದರೂ ಬೈರಮ್ಮ ಎಂಬ ಈಜುಗಾರ್ತಿಯ ಸಾಹಸಗಾಥೆ ಈ ಮಹಾನಗರದ ಹಳಬರ ನೆನಪುಗಳಲ್ಲಿ ಇನ್ನೂ ಹಸಿರಾಗಿದೆ. ಬೆಂಗಳೂರಿನ ಗವಿಪುರಮ್‌ನಲ್ಲಿರುವ ಕೆಂಪಾಂಬುದಿ ಕೆರೆಯಲ್ಲಿ ಸುಮಾರು ಒಂಬತ್ತು ದಶಕಗಳ ಹಿಂದೆ ಡಾಲ್ಫಿನ್‌ ಸ್ವಿಮ್ಮಿಂಗ್ ಕ್ಲಬ್‌ನವರು ಈಜು ತರಬೇತಿ ನೀಡುತ್ತಿದ್ದರು.

1934ರ ಏಪ್ರಿಲ್‌ 22ರಂದು ಭಾನುವಾರ ಬೈರಮ್ಮ ಎಂಬ ಹತ್ತು ವರ್ಷ ವಯಸ್ಸಿನ ಬಾಲಕಿ ಕೆಂಪಾಂಬುದಿ ಕೆರೆಯಲ್ಲಿ ನಿರಂತರವಾಗಿ 12 ಗಂಟೆಗಳ ಕಾಲ ಈಜುತ್ತಾಳೆ ಎಂದು ಡಾಲ್ಫಿನ್‌ ಕ್ಲಬ್‌ನವರು ಊರು ತುಂಬಾ  ಪ್ರಚಾರ ಮಾಡಿದ್ದರು. ಆಗಿನ ಪತ್ರಿಕೆಗಳಲ್ಲೂ ಸುದ್ದಿಗಳು ಪ್ರಕಟಗೊಂಡಿದ್ದವು. ಹೀಗಾಗಿ ಸ್ಪರ್ಧೆಯ ದಿನ ಮುಂಜಾನೆಯೇ ನೂರಾರು ಮಂದಿ ಕೆಂಪಾಂಬುದಿ ಕೆರೆಯ ಸುತ್ತಲೂ ಕಿಕ್ಕಿರಿದಿದ್ದರು. ಬೆಳಿಗ್ಗೆ 6ಗಂಟೆ 5ನಿಮಿಷಕ್ಕೆ ಬೈರಮ್ಮ ನೀರಿಗಿಳಿದರು.

ಮಧ್ಯಾಹ್ನದ ವೇಳೆಗೆ ಕೆರೆಯ ಆಸುಪಾಸಿನ ಪ್ರದೇಶವೆಲ್ಲಾ ಜಾತ್ರೆಯ ಕಳೆ ಪಡೆದುಕೊಂಡಿತ್ತು. ನಗರದ ಗಣ್ಯರಾದ  ಕೆ.ಎಸ್‌.ಕೃಷ್ಣಯ್ಯರ್‌, ವಿ.ವೆಂಕಟೇಶಯ್ಯ, ಪಾಮಡಿ ಸುಬ್ಬರಾಮ ಶೆಟ್ಟಿ ಸೇರಿದಂತೆ ಅನೇಕ ಮಂದಿ ಕೆರೆಯ ದಂಡೆಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಕುಳಿತ್ತಿದ್ದರು. ಅಮೆರಿಕನ್‌ ಮಹಿಳೆ ರತ್‌ ಇ ರಾಬಿನ್ಸನ್‌ ಆಗ ಬೆಂಗಳೂರಿನ ಮೆಥಡಿಸ್ಟ್‌ ಸ್ಕೂಲ್‌ನ ಮುಖ್ಯೋಪಾಧ್ಯಾಯಿನಿಯಾಗಿದ್ದರು. ಜತೆಗೆ ಪತ್ರಕರ್ತೆಯಾಗಿಯೂ ಕೆಲಸ ಮಾಡುತ್ತಿದ್ದರು.

ಈ ಅಮೆರಿಕನ್‌ ಮಹಿಳೆ ಬೈರಮ್ಮನ ಸಾಹಸಗಳ ಬಗ್ಗೆ ಹೊರ ಜಗತ್ತಿಗೆ ತಿಳಿಸಿದರು.  ಅಂದು ಕೆಂಪಾಂಬುದಿ ಕೆರೆಯ ಬಳಿ ರತ್‌ ರಾಬಿನ್ಸನ್‌ ಕೂಡಾ ಇದ್ದರು. ಬೈರಮ್ಮ ನೀರಲ್ಲಿ ಈಜುತ್ತಾ, ತೇಲುತ್ತಾ  ಇರುವುದನ್ನು ಸಾವಿರಾರು ಮಂದಿ ವೀಕ್ಷಿಸಿದ್ದರು. ಡಾಲ್ಫಿನ್‌ ಕ್ಲಬ್‌ನ ನುರಿತ ಈಜುಗಾರರು ಎರಡು ಗಂಟೆಗಳಿಗೆ ಒಮ್ಮೆ ದೋಣಿಯಲ್ಲಿ ಬೈರಮ್ಮನ ಬಳಿ ಹೋಗಿ ಕೋಲಿಗೆ ಲೋಟವೊಂದನ್ನು ಸಿಕ್ಕಿಸಿ ಅದರಲ್ಲಿ ಬಾದಾಮಿ ಹಾಲು ಮತ್ತು ಹಣ್ಣಿನ ರಸವನ್ನು ಕೊಡುತ್ತಿದ್ದರು.

ಹನ್ನೆರಡು ಗಂಟೆಗಳ ಕಾಲ ನೀರಲ್ಲಿದ್ದ ಬೈರಮ್ಮ ದಡಕ್ಕೆ ಬಂದ ಮೇಲೆ ಸಾವಿರಾರು ಮಂದಿ ಹಲವು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದ್ದರು. ಆಗ ಸಚಿವರಾಗಿದ್ದ ಎಸ್‌.ಪಿ.ರಾಜಗೋಪಾಲಾಚಾರ್ಯ ಮತ್ತು ಬೆಂಗಳೂರು ನಗರಸಭೆಯ ಅಧ್ಯಕ್ಷರಾಗಿದ್ದ ಬಿ.ಕೆ.ಗರುಡಾಚಾರ್‌ ಅವರು ಕೆರೆಯ ಬಳಿ ಹೋಗಿ ಬೈರಮ್ಮ ಅವರನ್ನು ಸನ್ಮಾನಿಸಿದರು.

ಆ ನಂತರ ಅಂತಹದೇ ಇನ್ನೊಂದು ಸಾಹಸ ಮಾಡಬೇಕೆಂದು ಅಭಿಮಾನಿಗಳು ಬೈರಮ್ಮ ಅವರ ಮೇಲೆ ಒತ್ತಡ ಹೇರತೊಡಗಿದರು. ಹೀಗಾಗಿ 1934ರ ಮೇ 19ರ ಶನಿವಾರ ಮಧ್ಯರಾತ್ರಿ 12 ಗಂಟೆಯಿಂದ ಮರುದಿನ ಸಂಜೆ 6 ಗಂಟೆಯವರೆಗೆ ಕೆರೆಯಲ್ಲಿ ಈಜುತ್ತಾ, ತೇಲುತ್ತಾ ಕಳೆಯುವ ಸಾಹಸ ಮಾಡುವುದಕ್ಕೆ ಬೈರಮ್ಮ ನಿರ್ಧರಿಸಿದರು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಜವಾಬ್ದಾರಿಯನ್ನು ಚಾಮರಾಜಪೇಟೆ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ವಹಿಸಿಕೊಂಡಿದ್ದರು.  ಕೆರೆಯ ಆಸುಪಾಸಿನ ನಿವಾಸಿಗಳೇ ಅಂದು ರಾತ್ರಿ ಬೆಳಕು ನೀಡುವ ನೂರಾರು ಪೆಟ್ರೊಮ್ಯಾಕ್ಸ್‌ಗಳನ್ನು ವ್ಯವಸ್ಥೆ ಮಾಡಿದ್ದರು.

ನಿಗದಿತ ವೇಳೆಗೆ ಬೈರಮ್ಮ ನೀರಿಗಿಳಿದರು. ಕೆರೆಯ ಸುತ್ತಲೂ ಸಾವಿರಾರು ಮಂದಿ ಸೇರಿದ್ದರು. ತೀರ್ಪುಗಾರರು ಎಚ್ಚರಗಣ್ಣಿನಿಂದ ಬೈರಮ್ಮ ಅವರನ್ನು ನೋಡುತ್ತಿದ್ದರು. ಭಾನುವಾರ ಮೈಸೂರು ರಸ್ತೆಯಲ್ಲಿರುವ ಗಾಳಿ ಹನುಮಂತರಾಯ ಸ್ವಾಮಿ ದೇವರ ಜಾತ್ರೆ ಇತ್ತು. ಅಲ್ಲಿಗೆ ಹೋಗಿದ್ದ ಸಾವಿರಾರು ಮಂದಿ ಕೆಂಪಾಂಬುದಿ ಕೆರೆಯಲ್ಲಿ ಬೈರಮ್ಮನ ಸಾಹಸ ನೋಡಲು ಸೇರಿದ್ದರು. ಹೀಗಾಗಿ ವಿಪರೀತ ಜನಜಂಗುಳಿ ಉಂಟಾಗಿತ್ತು.

ಕೆರೆಯ ಬಳಿಯೇ ಇದ್ದ ದೋಬಿ ಘಾಟ್‌ನ ಅಗಸರೆಲ್ಲರೂ ಅಂದು ಸ್ವಯಂ ಸೇವಕರಾಗಿ ನಿಂತು ಜನರನ್ನು ನಿಯಂತ್ರಿಸಿದ್ದರು. ಆಗಿನ ಮೈಸೂರು ಪ್ರಾಂತ್ಯದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ ಅವರು ಖುದ್ದಾಗಿ ಕೆಂಪಾಂಬುದಿ ಕೆರೆಯ ಬಳಿ ಹೋಗಿ ಬೈರಮ್ಮ ಅವರ ಸಾಹಸವನ್ನು ವೀಕ್ಷಿಸಿದ್ದೊಂದು ವಿಶೇಷ. ಸಂಜೆ 6ಗಂಟೆ 13ನೇ ನಿಮಿಷಕ್ಕೆ ಬೈರಮ್ಮ ದಡ ಸೇರಿದರು. ಕೇವಲ ಒಂಬತ್ತು ವರ್ಷ ವಯಸ್ಸಿನ ಬಾಲಕಿಯ ಈ ಸಾಧನೆ ಭಾರತದ ಮತ್ತು ಇಂಗ್ಲೆಂಡ್‌ನ ಪತ್ರಿಕೆಗಳಲ್ಲೂ ಸುದ್ದಿಯಾಯಿತು. ಕೆಲವು ಪತ್ರಿಕೆಗಳು ಇದೊಂದು ವಿಶ್ವದಾಖಲೆ ಎಂದೇ ಬರೆದಿದ್ದವು.

ಈ ಘಟನೆ ನಡೆದು 20 ದಿನಗಳ ನಂತರ ಅಂದರೆ 1934ರ ಜೂನ್‌ 11ರಂದು ನಗರಸಭಾಧ್ಯಕ್ಷ ಕೆ.ಪಿ.ಪುಟ್ಟಣ್ಣ ಚೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೈರಮ್ಮ ಅವರಿಗೆ ನಾಗರಿಕ ಸನ್ಮಾನ ನೀಡಲಾಯಿತು. ಈ ಪ್ರದರ್ಶನ ನಡೆದ ಕೆಲವು ದಿನಗಳ ನಂತರ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿಯೂ ಬೈರಮ್ಮ ಎರಡೂ ಕೈಗಳನ್ನು ಹಗ್ಗದಿಂದ ಕಟ್ಟಿಕೊಂಡು ನೀರಲ್ಲಿ ತೇಲುವ ಪ್ರದರ್ಶನ ನೀಡಿದ್ದರು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಅರಮನೆಯಿಂದಲೇ ವಿಶೇಷ ಉಡುಪುಗಳನ್ನು ಬೈರಮ್ಮ ಅವರಿಗೆ ಕಳುಹಿಸಿಕೊಟ್ಟು ಗೌರವಿಸಿದ್ದರು.

ಬೈರಮ್ಮ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾಹಿತಿಗಳು ಬಹಳ ಕಡಿಮೆ. ಚಾಮರಾಜಪೇಟೆಯಲ್ಲಿ ಪಿಟೀಲು ವಾದಕರಾಗಿದ್ದ ಪಿ.ಶಿವಲಿಂಗಪ್ಪ ಅವರ ಪುತ್ರಿ ಬೈರಮ್ಮ1926ರ ಮೇ ತಿಂಗಳಲ್ಲಿ ಹುಟ್ಟಿದ್ದು. 1930ರಲ್ಲಿ ಅವರು ಡಾಲ್ಫಿನ್‌ ಕ್ಲಬ್‌ ಸೇರಿ ಈಜು ಕಲಿತರು. 1941ರಲ್ಲಿ ಬೈರಮ್ಮ ಅವರ ಸೊಂಟದಭಾಗವು ಚೇತನ ಕಳೆದುಕೊಂಡಿತು. ಎದ್ದು ನಿಲ್ಲಲಾಗದ, ನಡೆಯಲಾಗದಂತಹ ಪರಿಸ್ಥಿತಿ ಉಂಟಾಯಿತು.

ಆ ಕಾಲದಲ್ಲಿ ಬೆಂಗಳೂರಿನ ಹತ್ತು ಹಲವು ವೈದ್ಯರು ಅವರಿಗೆ ಚಿಕಿತ್ಸೆ ನೀಡದರಾದರೂ ಗುಣಮುಖರಾಗಲಿಲ್ಲ. ಆಗ ಮಹಾತ್ಮಾ ಗಾಂಧೀಜಿಯವರಿಗೆ ಬೈರಮ್ಮನವರ ವಿಷಯ ಗೊತ್ತಾಯಿತು. ಅದು 1942ರ ವರ್ಷ. ಗಾಂಧೀಜಿಯವರು ಪಿ.ಶಿವಲಿಂಗಪ್ಪ ಅವರನ್ನು ತಮ್ಮ ಬಳಿಗೆ ಕರೆಸಿಕೊಂಡರು. ‘ನಿಮ್ಮ ಮಗಳು ಬೈರಮ್ಮನನ್ನು ಪ್ರಕೃತಿ ಚಿಕಿತ್ಸೆಗಾಗಿ ವಾರ್ಧಾ ಆಶ್ರಮಕ್ಕೆ ಕಳುಹಿಸಿಕೊಡಿ’ ಎಂದು ಶಿವಲಿಂಗಪ್ಪ ಅವರಲ್ಲಿ ಕೇಳಿಕೊಂಡ ಗಾಂಧೀಜಿ ಒಂದು ಚರಕವನ್ನು ಶಿವಲಿಂಗಪ್ಪನವರಿಗೆ ಉಡುಗೋರೆ ನೀಡಿ ಕಳುಹಿಸಿಕೊಟ್ಟರು.

ಆದರೆ ಬೈರಮ್ಮ ಅವರು ವಾರ್ಧಾ ಆಶ್ರಮಕ್ಕೆ ಹೋಗಲಾಗಲಿಲ್ಲ. 1943ರ ವೇಳೆಗೆ ಸಂಪೂರ್ಣವಾಗಿ ಅಂಗವಿಕಲೆಯಾಗಿದ್ದ ಬೈರಮ್ಮ ಅವರನ್ನು ಕನಕಪುರದ ಲಕ್ಷ್ಮೀನಾರಾಯಣ ರಾವ್‌ ಎಂಬುವವರು ಮದುವೆಯಾದರು. ಈ ದಂಪತಿಗೆ ಮಕ್ಕಳಿರಲಿಲ್ಲ. 1980ರಲ್ಲಿ ಬೈರಮ್ಮ ನಿಧನರಾದರು. ಇವತ್ತು ಬೆಂಗಳೂರಿನಲ್ಲಿ ಹತ್ತಾರು ಅತ್ಯಾಧುನಿಕ ಈಜುಕೊಳಗಳಿವೆ. ನಿಶಾ ಮಿಲೆಟ್‌ ಸೇರಿದಂತೆ ಅನೇಕ ಮಂದಿ ಈಜುಪಟುಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಆದರೆ ಕಳೆದ ಶತಮಾನದ ಮೂವತ್ತರ ದಶಕದಲ್ಲಿ ಬೈರಮ್ಮ ಅವರು ಬೆಂಗಳೂರಿನ ಕೆರೆಗಳಲ್ಲಿ ಮಾಡಿದ ಸಾಹಸ ಚರಿತ್ರಾರ್ಹ.

‘ಡಾಲ್ಫಿನ್‌’ ಮೈಲುಗಲ್ಲು
ಬೆಂಗಳೂರು ಮಹಾನಗರದಲ್ಲಿ ಪ್ರಸಕ್ತ ಅಸಂಖ್ಯ ಈಜುಕ್ಲಬ್‌ಗಳಿವೆ. ನೂರಾರು ಮಂದಿ ಇಂತಹ ಕ್ಲಬ್‌ಗಳಲ್ಲಿ ತರಬೇತು ಪಡೆಯುತ್ತಿದ್ದಾರೆ. ಆದರೆ ಡಾಲ್ಫಿನ್‌ ಕ್ಲಬ್‌ನ ಹೆಜ್ಜೆ ಗುರುತುಗಳು ಮಾತ್ರ ಮರೆಯುವಂತಹದ್ದಲ್ಲ. ಬೆಂಗಳೂರು ನಗರದಲ್ಲಿರುವ ಟಿಪ್ಪು ಸುಲ್ತಾನ್‌ ಅರಮನೆಯಲ್ಲಿ 1921ರಲ್ಲಿ ಸ್ಕೌಟ್‌ ಸಂಸ್ಥೆಯು ಆರಂಭಗೊಂಡಿತು. ಅದರ ಜತೆಗೇ ಈಜು ತರಬೇತಿ ನೀಡಲಿಕ್ಕಾಗಿ ಡಾಲ್ಫಿನ್‌ ಕ್ಲಬ್‌ ಕೂಡಾ ಆರಂಭಗೊಂಡಿತು.

ಈ ಕ್ಲಬ್‌ನವರು ಆಸಕ್ತರಿಗೆ ಈಜು ಕಲಿಸಲು ಕೆಂಪಾಂಬುದಿ ಕೆರೆಯನ್ನು ಆಯ್ದು ಕೊಂಡಿದ್ದರು. ಈ ಕೆರೆಯ ನೀರು ಸಿಹಿಯಾಗಿಯೂ, ಶುಚಿಯಾಗಿಯೂ ಇದ್ದುದರಿಂದ ಸಮೀಪದಲ್ಲಿದ್ದ ಮನೆಯವರೆಲ್ಲಾ ಇದೇ ನೀರನ್ನು ಬಳಸುತ್ತಿದ್ದರು. ಆರಂಭದಲ್ಲಿ ಟಿ.ಶಾಮರಾಯ ಎಂಬುವವರು ಆಸಕ್ತರಿಗೆ ಈಜು ಕಲಿಸುತ್ತಿದ್ದರು.

ನಂತರ ಬಿ.ಆರ್‌. ಶ್ರೀನಿವಾಸರಾಯರು, ಎಂ.ಮುನಿ ವೆಂಕಟಪ್ಪ, ಡಿ.ಲಕ್ಷ್ಮಿನಾರಾಯಣರಾಯರು ಈಜು ಕಲಿಸತೊಡಗಿದರು. ಬೆಳಿಗ್ಗೆ ಆರರಿಂದ ಎಂಟು ಗಂಟೆಯವರೆಗೆ ಮತ್ತು ಸಂಜೆ ನಾಲ್ಕರಿಂದ ಐದು ಗಂಟೆಯವರೆಗೆ ಈಜು ಕಲಿಸಲಾಗಲಿಲ್ಲ. ಈಜು ಕಲಿಯುವವರು ವರ್ಷಕ್ಕೆ ಎರಡು ರೂಪಾಯಿ ಶುಲ್ಕ ಕೊಡಬೇಕಾಗುತ್ತಿತ್ತು. ಮಹಿಳೆಯರಿಗೆ ಕೇವಲ ಎಂಟಾಣೆ ಶುಲ್ಕವಿತ್ತು.

1926ರ ಜುಲೈ 24 ಮತ್ತು 25ರಂದು ಮೊದಲ ಬಾರಿಗೆ ಈಜು ಸ್ಪರ್ಧೆಯೊಂದನ್ನು ಡಾಲ್ಫಿನ್‌ ಕ್ಲಬ್‌ ಸಂಘಟಿಸಿತ್ತು. ಮೊದಲ ದಿನ ಮಹಿಳೆಯರಿಗೂ ಎರಡನೇ ದಿನ ಪುರುಷರಿಗೂ ಸ್ಪರ್ಧೆಗಳು ನಡೆದವು. ಕನ್ನಡದ  ಮೂಕಿ ಚಲನಚಿತ್ರವಾದ ವಸಂತಸೇನಾ 1929ರಲ್ಲಿ ಚಿತ್ರೀಕರಣಗೊಂಡಿತು. ಆಗ ರಂಗಭೂಮಿಯ ಪ್ರಸಿದ್ಧ ಕಲಾವಿದೆಯಾಗಿದ್ದ ಏಣಾಕ್ಷಿ ರಾಮರಾವ್‌ ಆ ಚಿತ್ರದಲ್ಲಿ ನಾಯಕಿಯ ಪಾತ್ರ ವಹಿಸಿದ್ದರು.

ಆ ಚಿತ್ರದಲ್ಲಿ ನಾಯಕಿಯು ಈಜುವ ದೃಶ್ಯ ಇದ್ದುದರಿಂದ ಏಣಾಕ್ಷಿ ಅವರು ಇದೇ ಡಾಲ್ಫಿನ್‌ ಕ್ಲಬ್‌ ವತಿಯಿಂದ ಈಜು ತರಬೇತಿ ಪಡೆದರು. 1930ರ ವೇಳೆಗೆ ಜನಪ್ರಿಯತೆ ಪಡೆದುಕೊಂಡಿದ್ದ ಈ ಕ್ಲಬ್‌ನಲ್ಲಿ ಸುಮಾರು 2ಸಾವಿರ ಪುರುಷರು ಮತ್ತು 180 ಮಂದಿ ಮಹಿಳೆಯರು ಈಜು ಕಲಿತ್ತಿದ್ದರು. 1931ರ ವೇಳೆಗೆ ಕೆಂಪಾಂಬುದಿ ಕೆರೆ ಏರಿಯ ಮೇಲಿಂದ ನೀರಿಗೆ ಜಿಗಿಯಲು ಡೈವಿಂಗ್‌ ಫ್ಲಾಟ್‌ಫಾರ್ಮ್‌ ಅನ್ನು ನಿರ್ಮಿಸಲಾಗಿತ್ತು. ಬೈರಮ್ಮ ಅವರೂ ಇದೇ ಕ್ಲಬ್‌ನ ತರಬೇತುದಾರರಿಂದ ಈಜು ಕಲಿತು ಶ್ರೇಷ್ಠ ಸಾಮರ್ಥ್ಯ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT