ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿಕೆಯ ‘ಪ್ರಾಯೋಗಿಕ ಕೀಲಿ’

ಹಳತು ಹೊನ್ನು
Last Updated 29 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ರೆವರೆಂಡ್ ಫ್ರೆಡ್ರಿಕ್ ಜೀಗ್ಲರ್ ಅವರ ‘ಎ ಪ್ರ್ಯಾಕ್ಟಿಕಲ್ ಕೀ ಟು ದ ಕ್ಯಾನರೀಸ್ ಲ್ಯಾಂಗ್ವೇಜ್’ ಎನ್ನುವ ಈ ವಿಶಿಷ್ಟ ಕೃತಿಯು ಬಾಸೆಲ್ ಮಿಷನ್ ಪ್ರೆಸ್‌ನಿಂದ 1872ರಲ್ಲಿ ಪ್ರಕಟವಾಯಿತು. 106 ಪುಟಗಳ ಅಷ್ಟಮ ಡೆಮಿ ಆಕಾರದ ಈ ಕೃತಿಯು ಯೂರೋಪಿಯನ್ನರಿಗೆ ಕನ್ನಡವನ್ನು ಕಲಿಸಿಕೊಡಲು ಜೀಗ್ಲರ್ ಬರೆದ ಪುಸ್ತಕ. ಇದರ ವಿಧಾನ ಶಾಸ್ತ್ರವು ಅನನ್ಯವಾಗಿದೆ. ವ್ಯಾಕರಣ, ನಿಘಂಟು, ಭಾಷಾಂತರ– ಈ ವಿವಿಧ ಅಧ್ಯಯನದ ಶಿಸ್ತುಗಳನ್ನು ಬಳಸಿ ಉಚ್ಛಾರಣೆ ಹಾಗೂ ಲಿಪಿಯ ಮೂಲಕ ಆಡುಮಾತು ಹಾಗೂ ಗ್ರಾಂಥಿಕ ಕನ್ನಡವನ್ನು ನಿರಂತರ ತರಬೇತಿ ಹಾಗೂ ಅಭ್ಯಾಸಗಳ ಮುಖೇನ ವಿಧವಿಧಾನವಾಗಿ ನಿಧನಿಧಾನವಾಗಿ ಈ ಪುಸ್ತಕದ ನೆರವಿನಿಂದ ತಕ್ಕಮಟ್ಟಿಗೆ ಕಲಿಯಲು ಅನುಕೂಲವಾಗುತ್ತದೆ. ಇವನ ಹೆಸರು ಕನ್ನಡದಲ್ಲಿ ಜೀಗ್ಲರ್, ಝೀಗ್ಲರ್ ಹಾಗೂ ತ್ಸೀಗ್ಲರ್ ಎನ್ನುವ ರೂಪಗಳಲ್ಲಿ ಬಳಕೆಯಲ್ಲಿದೆ.

1820ರಿಂದ 1906ರವರೆಗೆ ಜೀವಿಸಿದ್ದ ಜೀಗ್ಲರ್ ೧೮೬೨ರಲ್ಲಿ ಜರ್ಮನಿಯಿಂದ ಮಂಗಳೂರಿಗೆ ಬಂದ ಬಾಸೆಲ್ ಮಿಷನ್ನಿನ ಪಾದ್ರಿ. ನಿವೃತ್ತಿಯ ನಂತರ 1897ರಲ್ಲಿ ವಾಪಸ್ ಜರ್ಮನಿಗೆ ಮರಳಿದರು. ಕರ್ನಾಟಕಕ್ಕೆ ಬರುವುದಕ್ಕೆ ಮೊದಲು, ಬಂದ ಮೇಲೆ ಹಾಗು ಕರ್ನಾಟಕದಿಂದ ವಾಪಸ್ ಜರ್ಮನಿಗೆ ಹಿಂದಿರುಗಿದ ಮೇಲೆ– ಈ ಮೂರೂ ಕಾಲಘಟ್ಟಗಳಲ್ಲಿ ಅವರು ಶಿಕ್ಷಕರಾಗಿ ದುಡಿದರು.

ಮಂಗಳೂರು, ಹುಬಳ್ಳಿ, ಧಾರವಾಡ ಅವರ ಕಾರ್ಯಕ್ಷೇತ್ರಗಳಾಗಿದ್ದವು. 1862ರಲ್ಲಿ ಮಂಗಳೂರಿನಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಬೋಧಕರಾಗಿದ್ದ ಜೀಗ್ಲರ್ ತಾಯ್ನಾಡಿಗೆ ವಾಪಸಾದ ನಂತರ 1904ರಲ್ಲಿ ಜರ್ಮನಿಯ ಶಿಕ್ಷಕಿಯರ ಕಿಂಡರ್‌ಗಾರ್ಟನ್ ಟ್ರೈನಿಂಗ್ ಶಾಲೆಯ ಮುಖ್ಯೋಪಾಧ್ಯಾಯನಾಗಿದ್ದರು. ಭಾರತೀಯ ಬಾಸೆಲ್ ಮಿಷನ್‌ನ ಜನರಲ್ ಸೆಕ್ರೆಟರಿಯಾಗಿದ್ದ ಜೀಗ್ಲರ್ ವೃತ್ತಿಯಿಂದ ಕ್ರಿಶ್ಚಿಯನ್ ಧರ್ಮಾಧಿಕಾರಿಯಾಗಿದ್ದರೂ ಪ್ರವೃತ್ತಿಯಿಂದ ಶಿಕ್ಷಣ ಪ್ರಚಾರದ ವೃತ್ತಿಯಲ್ಲಿ ತೊಡಗಿದ್ದರು. ಕರ್ನಾಟಕದಲ್ಲಿ ಕನ್ನಡ ಬೈಬಲ್ ರಿವಿಷನ್ ಸಮಿತಿಯಲ್ಲಿದ್ದ ಅವರು, ಕಿಟ್ಟೆಲ್ ಸಿದ್ಧಪಡಿಸುತ್ತಿದ್ದ ಕನ್ನಡ- ಇಂಗ್ಲಿಷ್ ನಿಘಂಟಿಗೆ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಕನ್ನಡದ ಆಡುಮಾತಿನ ಶಬ್ದಗಳ ಪಟ್ಟಿಯನ್ನು ಪೂರೈಸಿದ್ದರು.

ಜೀಗ್ಲರ್ ಧಾರವಾಡದಲ್ಲಿ ಹೈಸ್ಕೂಲ್ ಸ್ಥಾಪನೆ ಮಾಡಿ ಮುಖ್ಯೋಪಾಧ್ಯಾಯನಾಗಿ ಕೆಲಸ ಮಾಡಿದರು. ಕನ್ನಡವನ್ನು ಕುರಿತ ಅವರ ಆಪ್ತತೆ ಆತ್ಮೀಯತೆಗಳು ಅಮರವಾದದ್ದು. ಕ್ರಿಶ್ಚಿಯನ್ ಮಿಷನ್ ಶಾಲೆಗಳನ್ನು ಕ್ರೈಸ್ತೇತರ ಸ್ಥಳೀಯ ಜನರಿಗೂ ಮುಕ್ತವಾಗಿ ಸೇರುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಅವರ ಸಾಧನೆಗಳಲ್ಲೊಂದು. ಮೂವತ್ತೈದು ವರ್ಷಗಳಷ್ಟು ದೀರ್ಘ ಕಾಲ ಕನ್ನಡ ನಾಡಿನಲ್ಲಿ ಮುದ್ರಣಾಲ ಯ ಸ್ಥಾಪನೆ, ಪುಸ್ತಕಗಳ ರಚನೆ ಹಾಗೂ ಪ್ರಕಟಣೆ ಮತ್ತು ವಿದ್ಯಾಪ್ರಚಾರದಲ್ಲಿ ತೊಡಗಿಕೊಂಡಿದ್ದದ್ದು ಅವರ ಅಗ್ಗಳಿಕೆ.

ಜೀಗ್ಲರ್ ಗಣಿತ ಶಾಸ್ತ್ರ, ನಿಘಂಟು, ವ್ಯಾಕರಣ, ಭಾಷಾಬೋಧನೆ, ಕ್ರಿಶ್ಚಿಯನ್ ಧರ್ಮಬೋಧೆಗಳಿಗೆ ಸಂಬಂಧಿಸಿದಂತೆ ಒಟ್ಟು ಹದಿಮೂರು ಪುಸ್ತಕಗಳನ್ನು ರಚಿಸಿರುತ್ತಾರೆ. ‘ಶಾಲಾ ವ್ಯಾಕರಣ’ (1866), ‘ಗೀತಗಳು’ (1867), ‘ಪೂರ್ಣಾಂಕ ಗಣಿತಾಭ್ಯಾಸ’ (1869), ‘ಮಾರ್ಕನು ಬರೆದ ಸುವಾರ್ತೆ ಅಂದರೆ ಮುಕ್ತಿದಾಯಕನ ಚರಿತ್ರೆ’ (1869), ‘ಗಣಿತ ನ್ಯಾಯ’ (1870), ‘ಎ ಪ್ರ್ಯಾಕ್ಟಿಕಲ್ ಕೀ ಟು ದ ಕ್ಯಾನರೀಸ್ ಲ್ಯಾಂಗ್ವೇಜ್’ (1872), ‘ಹಿಮ್ ಬುಕ್ ಇನ ಕ್ಯಾನರೀಸ್’ (1875), ‘ಇಂಗ್ಲಿಷ್ - ಕನ್ನಡ ಶಾಲಾ ನಿಘಂಟು’ (1876), ‘ಗಣಿತಾಭ್ಯಾಸದ ಉದಾಹರಣೆಗಳು’ (1877), ‘ಲೂಕನು ಬರೆದ ಸುವಾರ್ತೆ ಅಂದರೆ ಜಗದ್ರಕ್ಷಕನ ಚರಿತ್ರೆ’ (1900), ‘ಕಾವ್ಯ ಮಾಲಿಕೆ’, ‘ಯೇಸುವಿನ ಚರಿತ್ರೆ’ (ಸವರ್ಣ ಚಿತ್ರ) ಹಾಗೂ ‘ಆಚಾರಶೀಲರು’ ಅವರ ಕೃತಿಗಳು.

ಪ್ರಸ್ತುತ ಕೃತಿಯು ಒಂದು ಸಂಕೀರ್ಣ ರೀತಿಯ ಕೃತಿ. ಭಾಷಾ ಬೋಧನೆ ಹಾಗೂ ಭಾಷಾ ಕಲಿಕೆ ಎರಡೂ ಸಾಧ್ಯವಾಗುವಂತೆ ಬರೆದಿರುವುದು ಈ ಕೃತಿಯ ವಿಶೇಷ. ಆಡು ಮಾತು ಮತ್ತು ಗ್ರಾಂಥಿಕ ಭಾಷೆ, ಭಾಷೆ ಹಾಗೂ ಸಾಹಿತ್ಯಗಳನ್ನು ಹೇಳಿಕೆ ಹಾಗೂ ಕೇಳಿಕೆ ಮತ್ತು ನಿಘಂಟು, ವ್ಯಾಕರಣ, ಅನುವಾದ, ಲಿಪ್ಯಂತರ, ಬಹುಭಾಷಿಕತೆಯ ನೆಲೆಗಳಲ್ಲಿ ಸರಳವಾಗಿ ಬೋಧಿಸುವ ವಿಶಿಷ್ಟ ಸಂಕೀರ್ಣತೆಯನ್ನು ಒಳಗೊಂಡಿರುವ ನವೀನ ರೀತಿಯ ಅಪರೂಪದ ಜಟಿಲ ಕೃತಿ ಇದು. ಆಡುಮಾತಿನ ಗ್ರಹಿಕೆ ಮೊದಲು, ನಂತರ ಬರಹದ ಭಾಷೆಯ ಕಲಿಕೆ ಎನ್ನುವ ಸೂತ್ರವನ್ನು ಜೀಗ್ಲರ್ ಇಲ್ಲಿ ಅನುಸರಿಸಿದ್ದಾರೆ.

ಅಪರಿಚಿತ ಭಾಷೆಯೊಂದನ್ನು ಅನ್ಯಭಾಷಿಕ ವ್ಯಕ್ತಿ ಅರಿತುಕೊಳ್ಳಲು ಸಾಧ್ಯವಾಗುವಂತೆ ರಚನೆಗೊಂಡ ಈ ಪುಸ್ತಕದ ಮೂಲಕ ಹೊಸಭಾಷೆಯೊಂದರ ಕಲಿಕಾ ವಿಧಾನಶಾಸ್ತ್ರವನ್ನು ರೂಪಿಸಲು ಸಾಧ್ಯವಿದೆ. ಅಕ್ಷರ, ಪದ, ಪದವೃಂದ, ಅಪೂರ್ಣ ವಾಕ್ಯ, ವಾಕ್ಯ ಹಾಗೂ ವಾಕ್ಯಗುಚ್ಛಗಳ ನೆಲೆಯಲ್ಲಿ ಆಡುಮಾತು ಹಾಗೂ ಗ್ರಾಂಥಿಕ ಭಾಷೆಯಾಗಿ ಕನ್ನಡವನ್ನು ಯೂರೋಪಿಯ ನ್ನರಿಗೆ ಕಲಿಸಿಕೊಡುವುದೇ ಈ ಪುಸ್ತಕದ ಉದ್ದೇಶ. 

The Kannada Alphabet, A Vocabulary of 162 Familiar Words in their simplest Form, One Thousand Phrases and Sentences composed of the Words of the Vocabulary ಎನ್ನುವ ನಾಲ್ಕು ಅಧ್ಯಾಯಗಳನ್ನು ಈ ಕೃತಿ ಒಳಗೊಂಡಿದೆ. ಪ್ರಸ್ತಾವನೆಯ ಭಾಗದಲ್ಲಿ ಈ ಕೃತಿಯ ಉದ್ದೇಶವನ್ನು ಕುರಿತ ಹೇಳಲಾಗಿದೆ. ಪ್ರಸ್ತಾವನೆಯನ್ನು ಓದದೆ ಮುಂದೆ ಹೋಗಬೇಡಿ ಎನ್ನುವ ಸೂಚನೆ ಮುಖ್ಯವಾದದ್ದು. ಒಬ್ಬ ಸ್ಥಳೀಯ ಮುನ್ಷಿಯ ಮೂಲಕ ಕನ್ನಡದ ಅಕ್ಷರಗಳ ಬಗ್ಗೆ ಹಾಗೂ ಪದಗಳ ಬಗ್ಗೆ ಮೊದಲು ತಿಳಿದುಕೊಂಡು ನಂತರ ಕನ್ನಡ ಕಲಿಕೆಯ ಪ್ರಯತ್ನ ಮಾಡಬೇಕೆಂದು ಯೂರೋಪಿಯನ್ನರಿಗೆ ಇಲ್ಲಿ ಸೂಚಿಸಿದ್ದಾನೆ.

ಕಲಿಯಬೇಕಾದ್ದು ಮುಖ್ಯವಾದರೂ ತನಗೆ ತಾನೇ ಬೋಧಿಸಿಕೊಳ್ಳಬಾರದು, ಒಮ್ಮೆಗೇ ಧ್ವನಿ, ಅಕ್ಷರ, ಪದ, ಉಚ್ಛಾರಣೆ, ಅರ್ಥ ಹಾಗೂ ವ್ಯಾಕರಣವನ್ನು ಕಲಿಯಲು ಹೋಗಬಾರದು, ಒಮ್ಮೆಗೆ ಒಂದರ ಪ್ರಯತ್ನ ಮಾಡಬೇಕು. ನಿಜವಾಗಿಯೂ ಭಾಷೆಯ ಯಾವ ಅಂಶವನ್ನು ಕಲಿಯಬೇಕೋ ಅದರ ಕಡೆಗೆ ಮಾತ್ರ ಗಮನ ಕೊಡಬೇಕು, ಕೊನೆಯದಾದರೂ ಅಮುಖ್ಯವಲ್ಲದ ಇನ್ನೊಂದು ಸಂಗತಿ ಎಂದರೆ ಭಾಷೆಯನ್ನು ಕಣ್ಣಿನ ಮೂಲಕಕ್ಕಿಂತ ಕಿವಿಯ ಮೂಲಕ ಕಲಿಯಲು ಪ್ರಯತ್ನಿಸಬೇಕು– ಇವು ಜೀಗ್ಲರ್ ಪ್ರಸ್ತಾವನೆಯಲ್ಲಿ ಕೊಡುವ ಸೂಚನೆಗಳು. ಹಾಗೆಯೇ ಗ್ರಹಿಸಿದ ಪದಗಳನ್ನು ಅಭ್ಯಾಸಗಳ ಮೂಲಕ ಪುನಹ ಪುನಹ ಪುನರಾವರ್ತಿಸುತ್ತಿರಬೇಕು. ವರ್ಣಮಾಲೆಯನ್ನು ವಿವರಿಸುವಾಗ ಸ್ವರಗಳು ಮತ್ತು ವ್ಯಂಜನಗಳು ಎಂಬ ವರ್ಗೀಕರಣ ಮಾತ್ರವಿದೆ. ಒಂದೊಂದು ಅಕ್ಷರದ ಕನ್ನಡದ ಲಿಪಿ ರೂಪ, ಇಂಗ್ಲಿಷ್‌ನಲ್ಲಿ ಅದರ ಧ್ವನಿ ಹಾಗೂ ಲಿಪ್ಯಂತರಗಳನ್ನು ನೀಡಲಾಗಿದೆ.

ಎರಡನೆಯ ಅಧ್ಯಾಯದಲಲಿ ಕನ್ನಡ ಭಾಷೆಯ 162 ಮೂಲ ಪದಗಳ ಸರಳ ರೂಪಗಳಿವೆ. ಅವು 41 ನಾಮಗಳು, 11 ಸರ್ವನಾಮಗಳು, 20 ವಿಶೇಷಣಗಳು, 33 ಕ್ರಿಯಾಪದಗಳು, 7 ಊನಕ್ರಿಯಾಪದಗಳು, 18 ಕ್ರಿಯಾವಿಶೇಷಣಗಳು 9 ಉಪಸರ್ಗಗಳು, 5 ನಿಪಾತಗಳು ಹಾಗೂ 18 ಸಂಖ್ಯಾವಾಚಕಗಳನ್ನು ಒಳಗೊಂಡಿವೆ. ಈ ಮೂಲ ಪದಗಳು ಒಂದು ಭಾಷೆಯ ನಿತ್ಯೋಪಯೋಗಿ ಶಬ್ದಕೋಶದಲ್ಲಿ ಬರುತ್ತವೆ. ಇದನ್ನು ‘ಆಪ್ತಕೋಶ’ ಎಂದೂ ಕರೆಯುತ್ತಾರೆ. ಇವು ದೇಶೀಮೂಲದ ಶಬ್ದಕೋಶವಾಗಿದ್ದು ಸಾಂಸ್ಕೃತಿಕ ಶಬ್ದಕೋಶವು ಅನ್ಯದೇಶ್ಯದಿಂದ ಸ್ವೀಕೃತಿಯಾಗಿರುತ್ತದೆ.  ಒಂದು ಭಾಷಾಕಲಿಕೆಯಲ್ಲಿ ಮೂಲಶಬ್ದಕೋಶ ಕಲಿಯಬೇಕಾದ್ದು ಮುಖ್ಯ ಎಂಬುದರ ಅರಿವು ಜೀಗ್ಲರ್ ಅವರಿಗೆ ಇತ್ತು.

ಮೂರನೆಯ ಅಧ್ಯಾಯವಾದ ಒಂದು ಸಾವಿರದ ಪದವೃಂದ ಹಾಗೂ ವಾಕ್ಯಗಳನ್ನು ಕುರಿತು ತಿಳಿಸಿಕೊಡುವಾಗ ಜೀಗ್ಲರ್ ನೂರು ಮೂಲ ಪದಗಳನ್ನು ಆಯ್ಕೆ ಮಾಡಿಕೊಂಡು ಆ ಪದವನ್ನು ವಿವಿಧ ರೀತಿಯ ಪದವೃಂದ ಹಾಗೂ ವಾಕ್ಯಗಳಲ್ಲಿ ಬಳಸಿ ಆ ನಿರ್ದಿಷ್ಟ ಪದದ ಎಲ್ಲ ರೀತಿಯ ವ್ಯಾಕರಣೀಯ ರೂಪಗಳನ್ನು ನೀಡಿದ್ದಾರೆ. ಪ್ರತಿ ಪದದ ಬಗ್ಗೆ ಆಳವಾಗಿ ತಿಳಿಸಲು ಆ ಪದ ಪ್ರಯೋಗಗೊಂಡಿರುವ ಹತ್ತು ಪದವೃಂದ/ವಾಕ್ಯಗಳಲ್ಲಿ ಅದನ್ನು ಪ್ರಯೋಗಿಸಿ ತೋರಿಸಿದ್ದಾರೆ. ಹೀಗಾಗಿ ಆ ನೂರು ಪದಗಳು ಪ್ರಯೋಗಗೊಂಡ ಒಂದು ಸಾವಿರ ಪದವೃಂದ ಮತ್ತು ವಾಕ್ಯಗಳು ಈ ಕೃತಿಯಲ್ಲಿ ಇವೆ.

ಪದ ಪ್ರಯೋಗವಾಗಿರುವ ಒಂದು ಕನ್ನಡ ವಾಕ್ಯವೃಂದವನ್ನು ಮೊದಲು ಕನ್ನಡ ಲಿಪಿಯಲ್ಲಿ ನೀಡಿ ನಂತರ ಅದರ ಇಂಗ್ಲಿಷ್ ಲಿಪ್ಯಂತರವನ್ನು ನೀಡಲಾಗಿದೆ. ಮುಂದೆ ಕನ್ನಡದ ಮಾದರಿಯ ರಚನೆಗೆ ಇಂಗ್ಲಿಷ್ ಭಾಷೆಯ ಅನುವಾದಿತ ರೂಪವಿರುತ್ತದೆ. ನಂತರ ಇಂಗ್ಲಿಷ್ ಲಿಪ್ಯಂತರದ ಉದಾಹರಣೆಯ ಕೆಳಗೆ ಕನ್ನಡ ವಾಕ್ಯದಲ್ಲಿರುವ ಪದಗಳ ಕ್ರಮದಲ್ಲಿಯೇ ಇಂಗ್ಲಿಷ್‌ನ ಪದಗಳನ್ನು ಸೂಚಿಸುತ್ತಾನೆ. ಇದರ ಅನುಕೂಲವೆಂದರೆ ಕನ್ನಡ ವಾಕ್ಯಕ್ಕೆ ಇಂಗ್ಲಿಷ್ ವಾಕ್ಯಕ್ಕೆ ಆಯಾ ಭಾಷಾ ಜಾಯಮಾನಗಳ ವ್ಯತ್ಯಾಸವು ತಿಳಿದು ಬರುತ್ತದೆ. 19ನೇ ಶತಮಾನದಲ್ಲಿ ಕನ್ನಡದಲ್ಲಿ ಬಂದ ಕನ್ನಡ ಭಾಷಾ ಕಲಿಕಾ ಪುಸ್ತಕಗಳಲ್ಲಿ ಜೀಗ್ಲರ್‌ ಅವರ ಈ ಕೃತಿಯು ಅತ್ಯಂತ ಮಹತ್ವದ್ದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT