ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿಕೆ: ಸಮಕಾಲೀನ ಮಾದರಿ

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಬೋರಲಿಂಗಯ್ಯ ಸಮಿತಿಯು ವೃತ್ತಿಶಿಕ್ಷಣದಲ್ಲಿ ಕನ್ನಡ ಭಾಷಾ ಬೋಧನೆಯನ್ನು ಕಡ್ಡಾಯ ಮಾಡಲು ಶಿಫಾರಸು ಮಾಡಿದೆ. ಇದು 2001ರಲ್ಲಿ ಬರಗೂರು ರಾಮಚಂದ್ರಪ್ಪ ಅವರು ಮಾಡಿದ್ದ ಶಿಫಾರಸಿನ ಮುಂದುವರಿದ ಭಾಗ ಎಂದು ಹೊಸ ಸಮಿತಿಯು ಹೇಳಿದೆ. ಬರಗೂರು ಸಮಿತಿಯು ತನ್ನ ಶಿಫಾರಸುಗಳನ್ನು ಕಾನೂನು ಕಾಲೇಜುಗಳು ಮತ್ತು ಕೃಷಿ ವಿಶ್ವವಿದ್ಯಾಲಯಗಳಿಗೆ ವಿಸ್ತರಿಸಿರಲಿಲ್ಲ. ಆದರೆ ಈಗ ನೀಡಿರುವ ವರದಿಯು ಕಾನೂನು ಮತ್ತು ಕೃಷಿ ವಿಶ್ವವಿದ್ಯಾಲಯಗಳೂ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಬೇಕು ಎಂದು ಸ್ಪಷ್ಟಪಡಿಸಿದೆ. ಹಾಗೆಯೇ ವೃತ್ತಿಶಿಕ್ಷಣದ ಪ್ರತಿ ಕೋರ್ಸಿಗೂ ಪ್ರತ್ಯೇಕ ಕನ್ನಡ ಪಠ್ಯ ರೂಪಿಸಬೇಕು, ಆಯಾ ಕೋರ್ಸ್ ಓದುವವರಿಗೆ ತಮ್ಮ ವೃತ್ತಿಯಲ್ಲಿ ಕನ್ನಡವನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಕಲಿಸಬೇಕು ಎಂಬುದು ಬೋರಲಿಂಗಯ್ಯ ಸಮಿತಿ ನೀಡಿರುವ ಶಿಫಾರಸು.

ಬರಗೂರು ಸಮಿತಿಯ ಶಿಫಾರಸಿನ ಮೇರೆಗೆ 2004ರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವೈದ್ಯಕೀಯ, ದಂತ ವೈದ್ಯಕೀಯ ಮತ್ತು ನರ್ಸಿಂಗ್ ಕೋರ್ಸ್‌ಗಳಲ್ಲಿ ಕನ್ನಡ ಬೋಧಿಸಬೇಕು ಎಂದು ಸುತ್ತೋಲೆ ಹೊರಡಿಸಿತು. ಆದರೆ ಅದು ಅನುಷ್ಠಾನಕ್ಕೆ ಬಂದಿಲ್ಲದಿರುವುದು ನಮಗೆಲ್ಲ ತಿಳಿದ ವಿಷಯ. ಇದಕ್ಕೆ ವಿಶ್ವವಿದ್ಯಾಲಯಗಳು, ಕನ್ನಡ ಭಾಷೆಯು ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಒಂದು ಕಡ್ಡಾಯ ವಿಷಯವಾದರೆ ಮಾತ್ರ ವಿದ್ಯಾರ್ಥಿಗಳು ಕನ್ನಡವನ್ನು ಗಂಭೀರವಾಗಿ ಕಲಿಯುತ್ತಾರೆ ಎಂದು ಕಾರಣ ಕೊಡುತ್ತವೆ. ಇಂತಹ ಆತಂಕವನ್ನು ಬೋರಲಿಂಗಯ್ಯ ಸಮಿತಿಯ ಎದುರು ಅವು ತೋಡಿಕೊಂಡಿದ್ದಾಗಿ ವರದಿಯಾಗಿದೆ.

ಇದರಿಂದ ನಮ್ಮ ವಿಶ್ವವಿದ್ಯಾಲಯಗಳು  ಇನ್ನೂ ಹಳೆಯ ಕಾಲದ ಸಿದ್ಧ ಬೋಧನಾ ಮಾದರಿಗೇ ಜೋತು ಬಿದ್ದಿರುವುದು ತಿಳಿಯುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾವು ಬಳಸುವ ಮಾನದಂಡ ಈಗಲೂ ಅದೇ ಸಾಂಪ್ರದಾಯಿಕ ಪ್ರಶ್ನೆಪತ್ರಿಕೆಗಳಾಗಿವೆ. ಕನ್ನಡವನ್ನು ಪರಿಣಾಮಕಾರಿಯಾಗಿ ಕಲಿಸಲು ಈ ರೀತಿಯ ಪ್ರಶ್ನೆಪತ್ರಿಕೆಗಳ ಮಾದರಿಯೇ ಆಗಬೇಕಾಗಿಲ್ಲ. ಹಲವು ಹೊಸ ಮಾದರಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಯಾಗಿವೆ. ಈಗಾಗಲೇ ಈ ರೀತಿಯ ವಿಷಯದ ತಿಳಿವಳಿಕೆಯನ್ನು ಪರಿಣಾಮಕಾರಿಯಾಗಿ ಮೌಲ್ಯಮಾಪನ ಮಾಡುವ ಮಾದರಿಗಳನ್ನು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಪ್ರಪಂಚದಾದ್ಯಂತ ಉಪಯೋಗಿಸುತ್ತಿವೆ. ಈಗ ದೊರೆಯುವ ಆನ್‌ಲೈನ್ ಕೋರ್ಸ್‌ಗಳಲ್ಲೂ ಭಾಷಾ ಕಲಿಕೆಯ ಮೌಲ್ಯಮಾಪನವು ಸಾಂಪ್ರದಾಯಿಕ ಮಾದರಿಗಳಿಗಿಂತ ಹೆಚ್ಚು ಪರಿಣಾಮಕಾರಿ.

ಕರ್ನಾಟಕದ ವೃತ್ತಿಶಿಕ್ಷಣ ಕಾಲೇಜುಗಳಲ್ಲಿ ಬೇರೆ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಯಾವುದೇ ವೃತ್ತಿಶಿಕ್ಷಣದ ವಿದ್ಯಾರ್ಥಿಯ ಸಂವಹನ ಕ್ರಿಯೆಗೆ ಕನ್ನಡ ಭಾಷೆಯ ತಿಳಿವಳಿಕೆ ಅನಿವಾರ್ಯವಾಗಿರುತ್ತದೆ. ವೈದ್ಯಕೀಯ ವೃತ್ತಿಶಿಕ್ಷಣವು ಸಾಮಾಜಿಕ ಆರೋಗ್ಯದ ಜವಾಬ್ದಾರಿಯನ್ನು ಹೊಂದಿರುವುದರಿಂದ ನಾಡ ಭಾಷೆಯಾದ ಕನ್ನಡ ಭಾಷೆಯ ಅರಿವು ಬಹಳ ಮುಖ್ಯ. ಈ ನಾಡಿನ ಭಾಷೆಯ ಅರಿವಿಲ್ಲದೆ ಒಬ್ಬ ರೋಗಿಯ ಆರೋಗ್ಯದ ಸಮಸ್ಯೆಗಳನ್ನು ಪೂರ್ಣವಾಗಿ ಅರಿಯಲು ಅಸಾಧ್ಯ. ಉತ್ತಮ ಸಂವಹನ ಕ್ರಿಯೆಗೆ ಭಾಷೆಯ ತೊಡಕು ಇರಬಾರದು. ರೋಗದ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಮೂಲ ಕಾರಣಗಳನ್ನು ಹೆಕ್ಕಿ ತೆಗೆಯಲು ರೋಗಿ ಮತ್ತು ವೈದ್ಯರ ನಡುವೆ ಕನ್ನಡ ಭಾಷೆಯ ತಿಳಿವು ಅತಿ ಮುಖ್ಯ. ಈಗ ಶಿಫಾರಸು ಮಾಡಿರುವ ಹಾಗೆ ಕೃಷಿ ಮತ್ತು ಕಾನೂನು ಕಾಲೇಜುಗಳಲ್ಲೂ ಕನ್ನಡ ಭಾಷೆಯ ತಿಳಿವಳಿಕೆ ಮುಖ್ಯ. ಈ ಎಲ್ಲ ವೃತ್ತಿಶಿಕ್ಷಣದ ಕ್ಷೇತ್ರಗಳಲ್ಲೂ ವೃತ್ತಿಪರರು ನಮ್ಮ ನಾಡಿನ ರೈತರ ಜೊತೆ, ರೋಗಿಗಳ ಜೊತೆ ಮತ್ತು ಕಕ್ಷಿದಾರರ ಜೊತೆ ಸಂವಹನ ಕ್ರಿಯೆಯಲ್ಲಿ ತೊಡಗುವುದು ಅನಿವಾರ್ಯ ಮತ್ತು ಆಯಾ ವೃತ್ತಿಗಳ ಯಶಸ್ಸಿಗೆ ಅಡಿಪಾಯವಾಗಿರುತ್ತದೆ. ಹಾಗಾಗಿ ಬೋಧನೆಯ ಅವಶ್ಯಕತೆ ಬಗ್ಗೆ ನಮಗೆ ಯಾವುದೇ ಸಂಶಯ ಬೇಡ.

ಆದರೆ ಕೇವಲ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಕೊಟ್ಟರಷ್ಟೇ ಸಾಕಾಗದು. ಅದು ಅನುಷ್ಠಾನಗೊಳ್ಳಲು ಇರುವ ತೊಡಕುಗಳನ್ನು ಗುರುತಿಸಿ, ಸಮಸ್ಯೆಗಳಿಗೆ ಸಮಕಾಲೀನ ಪರಿಹಾರಗಳನ್ನು ಸೂಚಿಸಬೇಕಾದ ಕಾರ್ಯ ಕೂಡ ತುರ್ತಾಗಿ ಆಗಬೇಕಾಗಿದೆ. ವಿಶ್ವವಿದ್ಯಾಲಯಗಳು,  ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಿ, ವೃತ್ತಿಶಿಕ್ಷಣದ ಪಠ್ಯಕ್ರಮದಲ್ಲಿ ನಾಡ ಭಾಷೆ ಬೋಧನೆಯ ಅವಕಾಶಗಳ ಬಗ್ಗೆ ವಸ್ತುನಿಷ್ಠ ಚಿಂತನೆ ನಡೆಯಬೇಕಿದೆ. ಶಿಕ್ಷಣ ತಜ್ಞರು ಮತ್ತು ಸಂಶೋಧಕರ ಜೊತೆ ಪರಿಣಾಮಕಾರಿಯಾದ ಸಂವಾದವನ್ನು ಏರ್ಪಡಿಸಿ ನಮ್ಮಲ್ಲಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ.

ಅತಿ ಮುಖ್ಯವಾಗಿ, ಕನ್ನಡ ಕಲಿಕೆಯನ್ನು ಕಡ್ಡಾಯವಾಗಿ ಉತ್ತೀರ್ಣವಾಗಬೇಕಾದ ಒಂದು ವಿಷಯವಾಗಿ ಪರಿಗಣಿಸಿದರೆ ಮಾತ್ರ ಕನ್ನಡ ಕಲಿಸುವ ಕ್ರಿಯೆ ಪರಿಣಾಮಕಾರಿಯಾಗಿರುತ್ತದೆ ಎಂಬ ನಮ್ಮೆಲ್ಲರ ಅರಿವಿನಲ್ಲಿ ಕೆಲವು ಬದಲಾವಣೆಗಳನ್ನು ತಂದುಕೊಳ್ಳಬೇಕಾಗುತ್ತದೆ. ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿದರೂ ಪರೀಕ್ಷೆಯ ಸ್ವರೂಪದಲ್ಲಿ ಬದಲಾವಣೆ ತರಬೇಕಾದ ಅಗತ್ಯವನ್ನು ನಾವು ಅರಿಯಬೇಕು. ವೃತ್ತಿಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಒಂದು ಭಾಷಾ ಜ್ಞಾನದ ಕಲಿಕೆಗಿಂತ ಈ ನಾಡಿನ ಜನರೊಡನೆ ಸಂವಹಿಸುವ ಒಂದು ಮಾಧ್ಯಮವನ್ನಾಗಿ ಉಪಯೋಗಿಸುವುದನ್ನು ಕಲಿಸುವುದರ ಮೂಲಕ ಹೆಚ್ಚು ಸಂವೇದನಾಶೀಲರಾದ ವೃತ್ತಿಪರರನ್ನು ಸೃಷ್ಟಿಸುವ ಗುರಿಯಿದೆ ಎಂಬುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ವೃತ್ತಿಶಿಕ್ಷಣದಲ್ಲಿ ಯಾವ ಸ್ವರೂಪದಲ್ಲಿ ಕಲಿಸಬೇಕು ಮತ್ತು ಕಲಿಸುವ ಮಾದರಿಯು ಹೇಗಿರಬೇಕು ಎಂಬುದನ್ನು ರೂಪಿಸಬೇಕಾಗಿದೆ.

ಈಗಾಗಲೇ ಭಾಷೆಯನ್ನು ಒಂದು ಸಂವಹನ ಮಾಧ್ಯಮವನ್ನಾಗಿ ಕಲಿಸಲು ಹಲವು ಪರಿಣಾಮಕಾರಿ ಮಾದರಿಗಳು ಸಂಶೋಧನೆಗಳ ಮೂಲಕ ಹೊರಬಂದಿವೆ. ಈ ಮಾದರಿಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಲು ಬೇಕಾದ ಅಗತ್ಯ ಬದಲಾವಣೆಗಳನ್ನು ತರಲು ನಮ್ಮ ವಿಶ್ವವಿದ್ಯಾಲಯಗಳು ಮುಂದೆ ಬರಬೇಕು. ಶಿಕ್ಷಣದ ಜವಾಬ್ದಾರಿಯನ್ನು ಹೊತ್ತಿರುವ ವಿಶ್ವವಿದ್ಯಾಲಯಗಳು ತಮ್ಮ ಬದ್ಧತೆಯನ್ನು ಈಗಲಾದರೂ ತೋರಬೇಕು.

ಈ ನಾಡಿನ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮದ ಏರಿಳಿತಗಳ ಅರಿವು ಯಾವುದೇ ಕ್ಷೇತ್ರದ ವೃತ್ತಿಪರರಿಗೆ ನಾಡ ಭಾಷೆಯ ಅರಿವಿನ ಮೂಲಕವಷ್ಟೇ ಸಂಪೂರ್ಣವಾಗಿ ತಿಳಿಯಲು ಸಾಧ್ಯ. ಈ ತಿಳಿವಳಿಕೆಯಿಂದ ಬೆಳೆದು ಬಂದ ವಿದ್ಯಾರ್ಥಿ ಸಮೂಹ ಒಂದು ಆರೋಗ್ಯವಂತ ನಾಗರಿಕ ಸಮಾಜದ ಬೆಳವಣಿಗೆಗೆ ಪೂರಕವಾಗಿ ನಿಲ್ಲಲು ಸಾಧ್ಯವಾಗುತ್ತದೆ. ಕೇವಲ ಲೆಕ್ಕಾಚಾರದ ಶುಷ್ಕ ಮನಸ್ಸಿನ ಯುವ ಸಮೂಹವನ್ನಷ್ಟೇ ಸೃಷ್ಟಿ ಮಾಡುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಮಾಜಿಕ ಕಾಳಜಿ ಬೆಳೆಸುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ಮತ್ತು ಸಾಂಸ್ಕೃತಿಕ ವಲಯ ತೆಗೆದುಕೊಳ್ಳಬೇಕಾಗಿದೆ. ಇದಕ್ಕೆ ನಾಡ ಭಾಷೆಯಾದ ಕನ್ನಡವನ್ನು ಕಲಿಸುವ ಕ್ರಮವೂ ಪೂರಕವಾಗಿ ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT